ಟಾಟಾ ಪವರ್ ಅರ್ಜಿ ಹಿಂಪಡೆತ: ಜನಪರ ಸಂಘಟನೆಗಳ ಹೋರಾಟಕ್ಕೆ ಮೊದಲ ಗೆಲುವು

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ಟಾಟಾ ಪವರ್ ಕಂಪನಿ ಸಲ್ಲಿಸಿದ್ದ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದ ‘ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ’ (Parallel Licence) ಅರ್ಜಿಯನ್ನು ಶುಕ್ರವಾರ ಹಿಂಪಡೆದಿದೆ. ಈ ಬೆಳವಣಿಗೆಯನ್ನು ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಕಾರ್ಮಿಕ ಮತ್ತು ಜನಪರ ಸಂಘಟನೆಗಳು ಸ್ವಾಗತಿಸಿದ್ದು, ಒಗ್ಗಟ್ಟಿನ ಹೋರಾಟಕ್ಕೆ ದೊರೆತ ಮಹತ್ವದ ಗೆಲುವು ಎಂದು ಬಣ್ಣಿಸಿವೆ.

ಕೆಇಆರ್‌ಸಿ ಮೂಲಗಳ ಪ್ರಕಾರ, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಲಾಪದಲ್ಲಿ ಟಾಟಾ ಪವರ್ ಕಂಪನಿಯ ಪ್ರತಿನಿಧಿಯು, ಕರ್ನಾಟಕದ ಎಲ್ಲಾ 19 ಕಂದಾಯ ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವ ಮನವಿ ಸಲ್ಲಿಸಿದರು. ವಿಚಾರಣೆ ವೇಳೆ ಅರ್ಜಿಯಲ್ಲಿ ಕೆಲವು ಲೋಪಗಳು (lacunae) ಇರುವುದನ್ನು ಕೆಇಆರ್‌ಸಿ ಅಧ್ಯಕ್ಷರು ಗಮನಿಸಿದ್ದು, ಬಳಿಕ ಅರ್ಜಿ ಹಿಂಪಡೆಯಲು ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿದರು ಎಂದು ತಿಳಿದು ಬಂದಿದೆ.

ಟಾಟಾ ಕಂಪನಿಗೆ ವಿದ್ಯುತ್‌ ವಿತರಣಾ ಪರವಾನಗಿ ನೀಡದಂತೆ ಒತ್ತಾಯಿಸಿ  ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸಿಪಿಐ(ಎಂ) ನೇತೃತ್ವದಲ್ಲಿ ಎಡ ಪಕ್ಷಗಳು ಬೆಂಗಳೂರಿನಲ್ಲಿ ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರಾಜ್ಯ ಮಟ್ಟದ ಸಮಾವೇಶ ನಡೆಸಿದ್ದವು. ರಾಜ್ಯದ ಎಲ್ಲ ಜನರು ಆಕ್ಷೇಪಣೆ ಸಲ್ಲಿಸುವಂತೆ ಸಮಾವೇಶ ಮನವಿ ಮಾಡಿತ್ತು. ಸಾವಾರಾರು ಆಕ್ಷೇಪಣೆಗಳು ಸಲ್ಲಿಕೆಯಾದ ಬಗ್ಗೆ ವರದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್, ಟಾಟಾ ಪವರ್ ಅರ್ಜಿ ಹಿಂಪಡೆಯಲು ರಾಜ್ಯಾದ್ಯಂತ ನಡೆದ ನಿರಂತರ ಹೋರಾಟ, ಸಾರ್ವಜನಿಕ ಪ್ರತಿರೋಧ ಹಾಗೂ ವಿವಿಧ ಸಂಘಟನೆಗಳ ಒಗ್ಗಟ್ಟಿನ ಪ್ರಯತ್ನವೇ ಕಾರಣ ಎಂದು ಹೇಳಿದೆ.

ಇದನ್ನೂ ಓದಿ : ರಾಜಾಜಿನಗರದಲ್ಲಿ ₹300 ಕೋಟಿಗೂ ಅಧಿಕ ಟೆಂಡರ್ ಅಕ್ರಮ ಆರೋಪ; ಶಾಸಕ ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

“ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ಸ್ನೇಹಿತರು, ಸಂಘಟನೆಗಳು ಹಾಗೂ ಸಾರ್ವಜನಿಕರಿಗೆ ಅಭಿನಂದನೆಗಳು. ಎಲ್ಲರ ನಿರಂತರ ಬೆಂಬಲ, ಸಮೂಹ ಪ್ರಯತ್ನ ಮತ್ತು ಐಕ್ಯತೆಯ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ. ಇದು ನಮ್ಮೆಲ್ಲರ ಒಗ್ಗಟ್ಟಿನ ವಿಜಯ” ಎಂದು ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬೆಳವಣಿಗೆಯನ್ನು ನವ ಉದಾರವಾದಿ ನೀತಿಗಳ ವಿರುದ್ಧದ ಮಹತ್ವದ ಜಯ ಎಂದು ಬಣ್ಣಿಸಿರುವ ಹೋರಾಟಗಾರರು, ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಮತ್ತಷ್ಟು ಅವಕಾಶ ಕಲ್ಪಿಸಬಹುದೆಂಬ ಆತಂಕ ವ್ಯಕ್ತಪಡಿಸುತ್ತಿರುವ ವಿದ್ಯುತ್ ತಿದ್ದುಪಡಿ ಮಸೂದೆ–2025 ಅನ್ನು ಕೇಂದ್ರ ಸರ್ಕಾರ ಸಂಸತ್ತಿನಿಂದ ಹಿಂಪಡೆಯಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಈ ಗುರಿ ಈಡೇರುವವರೆಗೆ ಹೋರಾಟವನ್ನು ಇನ್ನಷ್ಟು ಬಲಪಡಿಸುವುದಾಗಿ ಅವರು ಘೋಷಿಸಿದ್ದಾರೆ.

ಆದಾಗ್ಯೂ, ಟಾಟಾ ಪವರ್ ಅರ್ಜಿ ಹಿಂಪಡೆದಿರುವುದರಿಂದ ಈ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆಯೇ ಅಥವಾ ಕಂಪನಿ ಅಗತ್ಯ ತಿದ್ದುಪಡಿಗಳೊಂದಿಗೆ ಹೊಸ ಅರ್ಜಿ ಸಲ್ಲಿಸಲಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.

ಇದನ್ನೂ ನೋಡಿ : ಆರ್‌ಎಸ್‌ಎಸ್‌ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?

Donate Janashakthi Media

Leave a Reply

Your email address will not be published. Required fields are marked *