ರಾಜಾಜಿನಗರದಲ್ಲಿ ₹300 ಕೋಟಿಗೂ ಅಧಿಕ ಟೆಂಡರ್ ಅಕ್ರಮ ಆರೋಪ; ಶಾಸಕ ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ವಿವಿಧ ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ₹300 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿ ಶಾಸಕ ಎಸ್. ಸುರೇಶ್ ಕುಮಾರ್ ಹಾಗೂ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವಕೀಲ ಸೂರ್ಯ ಮುಕುಂದರಾಜ್ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ದೂರುದಾರರ ಪ್ರಕಾರ, ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ಮೂಲಕ ಸರ್ಕಾರಿ ಖಜಾನೆಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಲಾಗಿದೆ. ಜಿಎಸ್‌ಟಿ ಹಾಗೂ ಇಲಾಖೆಯ ಇತರೆ ವೆಚ್ಚಗಳನ್ನು ಸೇರಿಸಿದರೆ ಈ ಅಕ್ರಮದ ಮೊತ್ತ ₹300 ಕೋಟಿಗೂ ಅಧಿಕವಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿರುವ ಆರೋಪಗಳ ಪ್ರಕಾರ, 2020ರಲ್ಲಿ ₹72.25 ಕೋಟಿ ಮೊತ್ತದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಅತಿ ಕಡಿಮೆ ದರ (ಎಲ್-1) ನೀಡಿದ್ದ ಅರ್ಹ ಗುತ್ತಿಗೆದಾರರನ್ನು ಕೈಬಿಡಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ. ಬಳಿಕ ಕಾಮಗಾರಿಯ ಮೌಲ್ಯವನ್ನು ₹53 ಕೋಟಿಯಿಂದ ₹67 ಕೋಟಿಗೆ ಹೆಚ್ಚಿಸುವ ಮೂಲಕ ಸರ್ಕಾರಕ್ಕೆ ಸುಮಾರು ₹14 ಕೋಟಿ ನಷ್ಟ ಉಂಟುಮಾಡಲಾಗಿದೆ ಎಂದು ಆರೋಪಿಸಲಾಗಿದೆ.

2021-22ನೇ ಸಾಲಿನ ಭಾಷಾನಗರದ ₹60 ಲಕ್ಷ ರಸ್ತೆ ಡಾಂಬರೀಕರಣ ಕಾಮಗಾರಿಯ ಹಣಕಾಸು ಬಿಡ್ ಅನ್ನು ನಾಲ್ಕು ವರ್ಷಗಳಿಂದ ತೆರೆಯದೆ ವಿಳಂಬ ಮಾಡಲಾಗಿದೆ. ರಸ್ತೆ ಅಭಿವೃದ್ಧಿಗೆ ಮೀಸಲಿದ್ದ ಅನುದಾನವನ್ನು ನಿಯಮಬಾಹಿರವಾಗಿ ಬೇರೆ ಕಾಮಗಾರಿಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ.

2026-27ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನದಡಿ ಸುಮಾರು ₹33.97 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ನಲ್ಲಿ ನಿರ್ದಿಷ್ಟ ಗುತ್ತಿಗೆದಾರರಿಗೆ ಮಾತ್ರ ಅನುಕೂಲವಾಗುವಂತೆ ವಿಶೇಷ ತಾಂತ್ರಿಕ ಷರತ್ತುಗಳನ್ನು ಸೇರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಅಲ್ಲದೆ, 2022-23ನೇ ಸಾಲಿನ ₹150 ಕೋಟಿ ಹಾಗೂ 2025-26ನೇ ಸಾಲಿನ ₹10 ಕೋಟಿ ಮತ್ತು ₹9 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಟೆಂಡರ್‌ಗಳಲ್ಲೂ ಮುಕ್ತ ಸ್ಪರ್ಧೆಗೆ ಅವಕಾಶ ನೀಡದೆ ಏಕೈಕ ಬಿಡ್‌ದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಟೆಂಡರ್‌ನಲ್ಲಿ ಭಾಗವಹಿಸುವ ಮುನ್ನ ಕಡ್ಡಾಯ ಸೈಟ್ ವಿಸಿಟ್ ಹಾಗೂ ರಿಜಿಸ್ಟರ್‌ನಲ್ಲಿ ಸಹಿ ಮಾಡುವ ನಿಯಮ ಜಾರಿಗೊಳಿಸಿ ಸ್ಪರ್ಧೆಯನ್ನು ನಿರ್ಬಂಧಿಸಲಾಗಿದೆ. ಒಂದು ಕೋಟಿಗೂ ಅಧಿಕ ಮೊತ್ತದ ಟೆಂಡರ್‌ಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳ ಷರತ್ತುಗಳನ್ನು ಕೈಬಿಡಲಾಗಿದೆ ಹಾಗೂ ಟೆಂಡರ್ ಗೌಪ್ಯತೆಯನ್ನೂ ಉಲ್ಲಂಘಿಸಲಾಗಿದೆ ಎಂಬ ಆರೋಪಗಳನ್ನೂ ದೂರು ಒಳಗೊಂಡಿದೆ.

ಈ ಎಲ್ಲ ಕ್ರಮಗಳು ಕರ್ನಾಟಕ ಪಾರದರ್ಶಕ ಸಾರ್ವಜನಿಕ ಖರೀದಿ ಕಾಯ್ದೆ (KTTP Act), 1999, KTTP Rules, 2000, ಸರ್ಕಾರದ ಟೆಂಡರ್ ಮಾರ್ಗಸೂಚಿಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ವಿವಿಧ ವಿಧಿಗಳನ್ನು ಉಲ್ಲಂಘಿಸಿವೆ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಸುರೇಶ್ ಕುಮಾರ್ ಹಾಗೂ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ವಕೀಲ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.

ಇವು ದೂರುದಾರರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿನ ಆರೋಪಗಳಾಗಿದ್ದು, ಈ ಆರೋಪಗಳಿಗೆ ಶಾಸಕ ಎಸ್. ಸುರೇಶ್ ಕುಮಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *