ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಸುನೀಲ್ ಲಮಾಣಿ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಶಾಸಕರ ವಿರುದ್ಧವೇ ಮೃತರ ಕುಟುಂಬಸ್ಥರು ಜೀವಬೆದರಿಕೆ ಆರೋಪ ಮಾಡಿದ್ದಾರೆ.
ಪ್ರಕರಣವನ್ನು ಮುಂದುವರಿಸಿ ತನಿಖೆ ಮಾಡಿದರೆ ಕುಟುಂಬದ ಹಿರಿಯ ಸದಸ್ಯರಿಗೂ ಹಾನಿ ಮಾಡುವುದಾಗಿ ಶಾಸಕ ಚಂದ್ರು ಲಮಾಣಿ ಬೆದರಿಕೆ ಹಾಕಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐನಿಂದಲೂ ಜೀವಬೆದರಿಕೆ ಇದೆ ಎಂದು ಅವರು ದೂರಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಪಡೆಯಲು ಒಂದು ವರ್ಷದಿಂದ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಅಲೆದಾಡಬೇಕಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ಕುರಿತು ನ್ಯಾಯಯುತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ದುರ್ಬಳಕೆ: ಶೌಚಾಲಯವೇ ಹಣದ ಅಡಗುತಾಣ!
ಸುನೀಲ್ ಲಮಾಣಿ ಶಾಸಕ ಚಂದ್ರು ಲಮಾಣಿ ಅವರ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ. ಆದರೆ ಘಟನೆ ಬಳಿಕ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆಯಲ್ಲದೆ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
“ಸುನೀಲ್ ಕತ್ತಿನಲ್ಲಿ ರಕ್ತದ ಗುರುತು ಕಂಡುಬಂದಿದೆ. ಹಗ್ಗದ ಗುರುತು ಸ್ಪಷ್ಟವಾಗಿ ಇಲ್ಲ. ಪೊಲೀಸರು ಶವವನ್ನು ತುರ್ತುವಾಗಿ ತೆರವುಗೊಳಿಸಿದ್ದಾರೆ” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾವಿನ ಸಂದರ್ಭದಲ್ಲಿನ ಕ್ರಮಗಳ ಬಗ್ಗೆ ಸಹ ಅವರು ಪ್ರಶ್ನೆ ಎತ್ತಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ತನಿಖೆ ನಡೆಸಬೇಕು ಮತ್ತು ನ್ಯಾಯ ದೊರಕಿಸಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media
