ಖಾಸಗಿ ಲಾಭಕ್ಕಾಗಿ ಭೂಮಿ ಸ್ವಾಧೀನ ಅಕ್ರಮ: ಹೈಕೋರ್ಟ್ ಕಿಡಿ

 

ಬೆಂಗಳೂರು: ಲಾಭದಾಯಕ ಖಾಸಗಿ ಸಂಸ್ಥೆಯ ವಿಸ್ತರಣೆಗೆ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಪ ಪರಿಹಾರ ನೀಡಿ ಜನರ ಭೂಮಿಯನ್ನು ಕಸಿದುಕೊಳ್ಳುವ ರೀತಿಯಲ್ಲಿ ಅಧಿಕಾರ ದುರುಪಯೋಗ ನಡೆದಿದೆ ಎಂದು ನ್ಯಾಯಪೀಠ ಕಿಡಿಕಾರಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC)ದ ಪಾರ್ಕಿಂಗ್ ಪ್ರದೇಶಕ್ಕಾಗಿ ನಡೆದಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನಡಾಫ್ ಅವರ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಭಾರತೀಯ ಯಂತ್ರೋಪಕರಣ ತಯಾರಕರ ಸಂಘ (IMTMA) ನಿರ್ವಹಿಸುತ್ತಿರುವ BIECಗೆ ಸಂಬಂಧಿಸಿದ ಪಾರ್ಕಿಂಗ್ ವಿಸ್ತರಣೆಗಾಗಿ ಭೂಮಿ ಸ್ವಾಧೀನಪಡಿಸಲಾಗಿತ್ತು.

ಇದನ್ನೂ ಓದಿ: ಪರಿಸರ ಹಾಳುಮಾಡುತ್ತಿದೆ ಕೇಂದ್ರ ಸರ್ಕಾರ: ಮೋದಿ ವಿರುದ್ಧ ಖರ್ಗೆ ಕಿಡಿ

ನ್ಯಾಯಪೀಠದ ಅಭಿಪ್ರಾಯದಲ್ಲಿ, IMTMA ಪರವಾಗಿ ನಡೆದ ಸಂಪೂರ್ಣ ಸ್ವಾಧೀನ ಪ್ರಕ್ರಿಯೆ ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದ್ದು, ಅಧಿಕಾರದ ದುರುಪಯೋಗದ ಉದಾಹರಣೆಯಾಗಿದೆ.

2013ರಲ್ಲಿ ಭೂಮಾಲೀಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಅಂಗೀಕರಿಸಿದ ನ್ಯಾಯಪೀಠ, KIADB ಹಾಗೂ IMTMA ಸಲ್ಲಿಸಿದ್ದ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ಜೊತೆಗೆ ಏಕಸದಸ್ಯ ನ್ಯಾಯಮೂರ್ತಿಗಳ ಹಿಂದಿನ ಆದೇಶವನ್ನು ರದ್ದುಪಡಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನೇ ಅಮಾನ್ಯಗೊಳಿಸಿದೆ.

ಅಂತಿಮ ಅಧಿಸೂಚನೆಯ ನಂತರ 14 ವರ್ಷಗಳಾದರೂ ಪರಿಹಾರ ಮೊತ್ತ ನಿಗದಿಪಡಿಸುವ ಅಂತಿಮ ಆದೇಶ (Award) ಹೊರಬರದಿರುವುದನ್ನು ನ್ಯಾಯಪೀಠ ಗಂಭೀರ ವಿಳಂಬ ಎಂದು ಗುರುತಿಸಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಲಾಭದಾಯಕ ಖಾಸಗಿ ಸಂಸ್ಥೆಗೆ ಭೂಮಿ ನೀಡುವ ಉದ್ದೇಶದಿಂದ ಈ ಸ್ವಾಧೀನ ಪ್ರಕ್ರಿಯೆ ನಡೆದಿರುವುದು ಅಂಗೀಕಾರಾರ್ಹವಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

KIADB ಕಾಯ್ದೆಯ ಉದ್ದೇಶ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಭೂಮಿ ಸ್ವಾಧೀನಪಡಿಸುವುದೇ ಹೊರತು ನಿರ್ದಿಷ್ಟ ಖಾಸಗಿ ಸಂಸ್ಥೆಗೆ ಭೂಮಿ ಒದಗಿಸುವುದಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶದಲ್ಲಿ ನಂತರ ವಿವಿಧ ಕೈಗಾರಿಕೆಗಳಿಗೆ ಹಂಚಿಕೆ ಮಾಡಬಹುದು ಎಂದು ಅದು ವಿವರಿಸಿದೆ.

ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ತನ್ನ ಆಯ್ಕೆಯ ಖಾಸಗಿ ಸಂಸ್ಥೆಗೆ ಭೂಮಿ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ, ರಾಜ್ಯದ ‘ಎಮಿನೆಂಟ್ ಡೊಮೇನ್’ ಅಧಿಕಾರವನ್ನು ಕಾನೂನುಬದ್ಧ ವಂಚನೆ ಅಥವಾ ಖಾಸಗಿ ಹಿತಾಸಕ್ತಿಗೆ ಬಳಸಲಾಗಬಾರದು ಎಂದು ಮಹತ್ವದ ಅಭಿಪ್ರಾಯ ದಾಖಲಿಸಿದೆ.

ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್‌ಟಿಎ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ; ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *