ತನಿಖೆಯ ಹಾದಿಯಲ್ಲಿ ಸಾವಿನ ಸರಮಾಲೆಯನ್ನೇ ಸೃಷ್ಟಿಸಿದ ‘ವ್ಯಾಪಂ ಹಗರಣ’

ವೈದ್ಯಕೀಯ ಕೋರ್ಸ್‌ ಗಳ ಪ್ರವೇಶಕ್ಕಾಗಿ 2026ರ ಮೇ 3ರಂದು ನಡೆಸಲಾದ NEET ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಘೋಷಿಸಿದೆ. ಅಪಾರ ಒತ್ತಡ ಭರಿಸಿ, ಹಣ ವ್ಯಯಿಸಿ, ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಗೋಪುರ ಕುಸಿದಿದ್ದು, ಭರವಸೆಗೆ ಭಂಗ ಉಂಟಾಗಿದೆ. ಈ ಸಂದರ್ಭದಲ್ಲಿ, ಮಧ್ಯಪ್ರದೇಶದಲ್ಲಿ 2013ರಲ್ಲಿ ಬೆಳಕಿಗೆ ಬಂದ Vyapam ಹಗರಣವನ್ನು ನೆನಪಿಸಿಕೊಳ್ಳುವುದು ಅಗತ್ಯ ಎನಿಸುತ್ತಿದೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿ ನಡೆದ ತನಿಖೆಯ ಅವಧಿಯ ಉದ್ದಕ್ಕೂ ಅಲ್ಲಿ ಸಾವಿನ ಸರಣಿಗಳೇ ನಡೆದುಹೋದವು. ಅಭ್ಯರ್ಥಿಗಳು ಮಾತ್ರವಲ್ಲದೆ ನಕಲಿ ಆಕಾಂಕ್ಷಿಗಳು ಮತ್ತು ಹಗರಣದ ತನಿಖೆ ನಡೆಸುತ್ತಿದ್ದವರೂ ಸಾವನ್ನಪ್ಪಿದರು. ಪ್ರಕರಣಕ್ಕೆ ಸಂಬಂಧಿಸಿದ 25 ಜನರು ಸಾವನ್ನಪ್ಪಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರವೇ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿತು.

– ಸಿ. ಸಿದ್ದಯ್ಯ

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ 1990ರ ದಶಕದಿಂದ ನಡೆಯುತ್ತಿದ್ದ, 2013ರಲ್ಲಿ ಬೆಳಕಿಗೆ ಬಂದ ವ್ಯಾಪಂ (Vyapam) ಹಗರಣ ನೆನಪಿದೆಯೇ? ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳು ಶಾಮೀಲಾಗಿ ಹಣಕ್ಕಾಗಿ ಅಕ್ರಮ ನೇಮಕಾತಿ ಮತ್ತು ನಕಲಿ ಪರೀಕ್ಷಾರ್ಥಿಗಳನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿತು. ಈ ಪ್ರಕರಣದ ತನಿಖೆ ಏನಾಗಿದೆ? ವ್ಯಾಪಂ ಹಗರಣದ ಪ್ರಮುಖ ಅಪರಾಧಿಗಳಿಗೆ ಶಿಕ್ಷೆಯಾಯಿತೇ? ಇದರಿಂದ ವಂಚಿತರಾದವರಿಗೆ ನ್ಯಾಯ ದೊರಕಿತೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೊರಟರೆ, ಇದರಿಂದ 52ಕ್ಕೂ ಹೆಚ್ಚು ಜನರು ನಿಗೂಢವಾಗಿ ಸಾವನ್ನಪ್ಪಿದ ಅಘಾತಕಾರಿ ಸುದ್ದಿಗಳೇ ಕಣ್ಣಿಗೆ ಕಾಣಿಸಿಕೊಂಡು ಮನಸ್ಸನ್ನು ಘಾಸಿಗೊಳಿಸುತ್ತವೆ.

ಬಿಜೆಪಿ ನಾಯಕರು, ಸಂಘಪರಿವಾರದ ಅಂಗಸಂಸ್ಥೆಗಳು, ಅಧಿಕಾರಿಗಳು, ಮಧ್ಯವರ್ತಿಗಳು ಭಾಗಿಯಾಗಿರುವ ವ್ಯಾಪಂ ಪ್ರಕರಣದ ವಿಚಾರಣೆಗೆ ಅಂತ್ಯವಿಲ್ಲದಂತಾಗಿದೆ. ಹಗರಣದಿಂದ ನೊಂದ ವಿದ್ಯಾರ್ಥಿಗಳು, ಅವರ ಪೋಷಕರು, ಅನುಮಾಸ್ಪದವಾಗಿ ಸಾವನ್ನಪ್ಪಿದ 52 ಜನರ ಕುಟುಂಬಕ್ಕೆ ನ್ಯಾಯ ಎಂಬುದು ಮರೀಚಿಕೆಯಾಗಿದೆ. 2025ರ ಸೆಪ್ಟೆಂಬರ್‌ ನಲ್ಲಿಯೂ ಕೂಡ ಸಿಬಿಐ ಈ ಹಗರಣಕ್ಕೆ ಸಂಬಂಧಿಸಿದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದೆ, ಇದು ತನಿಖೆ ಇನ್ನೂ ಚಾಲ್ತಿಯಲ್ಲಿದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ಮಣಿಪುರದಲ್ಲಿ ಪ್ರತಿಭಟನೆ: ಆರು ನಾಗಾ ನಾಗರಿಕರ ಬಿಡುಗಡೆಗೆ ಆಗ್ರಹ

ಏನಿದು ವ್ಯಾಪಂ (Vyapam) ಹಗರಣ?

ವ್ಯಾಪಮ್ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್- Vyapam -Madhya Pradesh Professional Examination Board) ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (MPPEB), ವೃತ್ತಿಪರ ಕೋರ್ಸ್‌ ಗಳಿಗೆ ಪ್ರವೇಶ ಪರೀಕ್ಷೆಗಳನ್ನು ಮತ್ತು ಮಧ್ಯಪ್ರದೇಶದ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ವ್ಯಾಪಮ್ ನಡೆಸಿದ ವೈದ್ಯಕೀಯ ಪೂರ್ವ ಪರೀಕ್ಷೆಯಲ್ಲಿ (ಪಿಎಂಟಿ) ಅಕ್ರಮಗಳು 2013 ರಲ್ಲಿ ಪತ್ತೆಯಾದಾಗ ವ್ಯಾಪಮ್ ಹಗರಣ ಬೆಳಕಿಗೆ ಬಂತು. ಹಲವು ಪರೀಕ್ಷೆಗಳು ಮತ್ತು ನೇಮಕಾತಿಗಳನ್ನು ಒಳಗೊಂಡಿರುವ ಹಗರಣವು ಹಲವಾರು ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿದು ಬಂತು.

ನಕಲಿ ಪರೀಕ್ಷಾರ್ಥಿಗಳನ್ನು (Impersonators) ಕೂರಿಸಿ ಪರೀಕ್ಷೆ ಬರೆಸುವುದು, ಓಎಂಆರ್ ಶೀಟ್ ಬದಲಾವಣೆ ಮತ್ತು ಅಕ್ರಮವಾಗಿ ಅಂಕಗಳನ್ನು ಹೆಚ್ಚಿಸುವಂತಹ ಅಕ್ರಮಗಳನ್ನು ನಡೆಸಲಾಗಿದೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಪ್ರವೇಶ ಮತ್ತು ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಅಧಿಕಾರಿಗಳು, ಉದ್ಯಮಿಗಳು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ. 2013-14ರಲ್ಲಿ ಮಧ್ಯಪ್ರದೇಶ ರಾಜ್ಯದ ರಾಜಕೀಯವನ್ನು ಅಲ್ಲಾಡಿಸಿದ ಬೃಹತ್ ಪ್ರವೇಶ ಮತ್ತು ನೇಮಕಾತಿ ದಂದೆ ಇದಾಗಿದೆ.

ಬೆಳಕಿಗೆ ಬಂದ ಹಗರಣ

2013 ರಲ್ಲಿ ಇಂದೋರ್ ಪೊಲೀಸರು ವೈದ್ಯಕೀಯ ಪೂರ್ವ ಪರೀಕ್ಷೆಯಲ್ಲಿ (PMT) 2009 ರ ಅಭ್ಯರ್ಥಿಗಳನ್ನು ವಂಚಿಸಲು ಬಂದಿದ್ದ 20 ಜನರನ್ನು ಬಂಧಿಸಿದಾಗ ಹಗರಣದ ಸಂಪೂರ್ಣ ಪ್ರಮಾಣ ಬೆಳಕಿಗೆ ಬಂದಿತು. ಇವರ ವಿಚಾರಣೆಯು ಹಗರಣದಲ್ಲಿ ಭಾಗಿಯಾಗಿರುವ ಸಂಘಟಿತ ದಂಧೆಯ ನಾಯಕ ಜಗದೀಶ್ ಸಾಗರ್ ಬಂಧನಕ್ಕೆ ಕಾರಣವಾಯಿತು. ಇಂದೋರ್ ಮೂಲದ ನಾಗರಿಕ ಹಕ್ಕುಗಳ ಕಾರ್ಯಕರ್ತ ಡಾ.ಆನಂದ್ ರೈ ಅವರ ಮಾಹಿತಿಯ ಮೇಲೆ ಸಲ್ಲಿಸಿದ ವರದಿಯ ಆಧಾರದ ಮೇಲೆ, ಜುಲೈ 7, 2013 ರಂದು ಹಗರಣದ ತನಿಖೆ ಪ್ರಾರಂಭವಾಯಿತು.

ರಾಜ್ಯ ಸರ್ಕಾರವು ಆಗಸ್ಟ್ 26, 2013 ರಂದು ಪೊಲೀಸರ ವಿಶೇಷ ಕಾರ್ಯಪಡೆಯನ್ನು (STF) ರಚಿಸಿತು. ಡಿಸೆಂಬರ್ 2013 ರಲ್ಲಿ, STF ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ 34 ಆರೋಪಿಗಳ ವಿರುದ್ಧ 23,000 ಪುಟಗಳ ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿತು. ಆರೋಪಪಟ್ಟಿ ಸಲ್ಲಿಸಲಾದ ಈ 34 ಆರೋಪಿಗಳಲ್ಲಿ 30 ಮಂದಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು.

ಕೆಲವು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಅಥವಾ ಇತರ ಕಾನೂನು ಕಾರಣಗಳಿಂದ ಖುಲಾಸೆಗೊಳಿಸಲಾಯಿತು. ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ಸಿಬಿಐ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್, ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನವೆಂಬರ್ 5, 2014 ರಂದು ರಚಿಸಿತು.

ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ್ ಶರ್ಮಾ ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ರಾಜಕಾರಣಿಗಳು, ಹಲವಾರು ಎಂಪಿಪಿಇಬಿ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಮಧ್ಯವರ್ತಿಗಳು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸೇರಿದಂತೆ 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. 2015ರಲ್ಲಿ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು.

ಮೂವರು ವ್ಯಾಪಂ ಅಧಿಕಾರಿಗಳು ಮತ್ತು ಫಲಾನುಭವಿ ಅಭ್ಯರ್ಥಿಗಳ 170 ಪಾಲಕರು ಸೇರಿದಂತೆ 490 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತು. 30 ಸೆಪ್ಟೆಂಬರ್ 2022ರ ಪಿಟಿಐ ಸುದ್ದಿ ಸಂಸ್ಥೆ ಮಾಡಿರುವ ವರದಿಯಂತೆ, ವ್ಯಾಪಂ ನಡೆಸಿದ 2013 ರ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕಮಲ್ ಕಿಶೋರ್, ಅಮರ್ ಸಿಂಗ್, ನಾಗೇಂದ್ರ ಸಿಂಗ್ ಮತ್ತು ರವಿಕುಮಾರ್ ರಜಪೂತ್ ಅವರನ್ನು ದೋಷಿ ಎಂದು ಸಿಬಿಐನ ವಿಶೇಷ ನ್ಯಾಯಾಲಯವು ಐವರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ರಾಜಕಾರಣಿಗಳು, ಅಧಿಕಾರಿಗಳು ಭಾಗಿ

ಈ ಪ್ರಕರಣದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನೂ ಆರೋಪಿಗಳಾಗಿ ಹೆಸರಿಸಲಾಗಿತ್ತು. ಈ ಜಾಲವು, ಪರೀಕ್ಷೆಯ ಫಲಿತಾಂಶಗಳನ್ನು ಕುಶಲತೆಯಿಂದ ನಿರ್ವಹಿಸಲು, ಅಭ್ಯರ್ಥಿಗಳ ಉತ್ತೀರ್ಣಕ್ಕೆ ಅನುಕೂಲವಾಗುವಂತೆ ಮತ್ತು ಅವರು ಅನ್ಯಾಯದ ವಿಧಾನಗಳ ಮೂಲಕ ಪ್ರವೇಶ ಮತ್ತು ಉದ್ಯೋಗಗಳನ್ನು ಪಡೆದುಕೊಳ್ಳಲು ಸಹಕರಿಸಿದೆ.

ಗ್ವಾಲಿಯರ್ ಮೂಲದ ಸಾಮಾಜಿಕ ಕಾರ್ಯಕರ್ತ ಆಶಿಶ್ ಚತುರ್ವೇದಿ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಬಂಧಿಕರು ಮತ್ತು ಇತರ ಏಳು ಮಂದಿ ಹಗರಣದಲ್ಲಿ ಭಾಗಿಯಾಗಿದ್ದಾರೆ, ಎಲ್ಲಾ ಮಾಹಿತಿದಾರರು ತಮಗೆ ಜೀವಭಯವಿದೆ ಎಂದು ಹೇಳಿಕೊಳ್ಳುತ್ತಾರೆ ಎಂದು ಹೇಳಿದರು. 2014 ರಲ್ಲಿ ಎಫ್‌ಐಆರ್ ಒಂದರಲ್ಲಿ, ಹಗರಣದಲ್ಲಿ ಹಿರಿಯ ಬಿಜೆಪಿ ನಾಯಕರ ಹೆಸರಿಸದ “ನೇರ ಮತ್ತು ಪರೋಕ್ಷ” ಒಳಗೊಳ್ಳುವಿಕೆಯನ್ನು ಉಲ್ಲೇಖಿಸಿದೆ.

“ನಿರ್ದೇಶಕರು ಮತ್ತು ನಿಯಂತ್ರಕರ ನೇಮಕಾತಿಗಳನ್ನು ನಿಯಮಗಳ ವ್ಯವಸ್ಥಿತವಾದ ವಿಧ್ವಂಸಕತೆಯ ಮೂಲಕ ಮಾಡಲಾಗಿದೆ, ಇದು ಕೆಲವು ವ್ಯಕ್ತಿಗಳಿಗೆ ಅನಗತ್ಯವಾದ ಅನುಕೂಲಗಳನ್ನು ಉಂಟುಮಾಡುತ್ತದೆ” ಎಂದು 2017ರ ಮಾರ್ಚ್ ತಿಂಗಳಿನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ 2016 ರ ಸಿಎಜಿ ವರದಿಯಲ್ಲಿ ಹೇಳಲಾಗಿದೆ.

2022ರಲ್ಲಿ 8 ಆರೋಪಿಗಳ ವಿರುದ್ದ ಹೊಸ ಎಫ್‌ಐಆರ್ :

ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಜನವರಿ 02, 2023 ವರದಿಯ ಪ್ರಕಾರ, ರಾಜ್ಯಸಭೆಯ ಸಂಸದ ಮತ್ತು ಕಾಂಗ್ರೆಸ್ ಪಕ್ಷದ ದಿಗ್ವಿಜಯ ಸಿಂಗ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ʻವ್ಯಾಪಮ್ ಹಗರಣʼ ಅಡಿಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ರಿಗ್ಗಿಂಗ್ ಮಾಡಿದ ಆರೋಪದ ಮೇಲೆ ಡಿಸೆಂಬರ್ 6, 2022 ರಂದು ಎಂಟು ಆರೋಪಿಗಳ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿತು.

“ಮಧ್ಯಮ ವ್ಯಕ್ತಿ” ಯಂತೆ ಕೆಲಸ ಮಾಡಿದ್ದ ಎಬಿವಿಪಿ ಮುಖಂಡ

ವ್ಯಾಪಂ ಹಗರಣದ ಮೂಲಕ ನಕಲಿ ಅಭ್ಯರ್ಥಿಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಸೇರಿಸುವಲ್ಲಿ ಎಬಿವಿಪಿ ನಾಯಕರ ಪಾತ್ರವಿದೆ ಎಂಬ ಆರೋಪವಿದೆ. 2014 ರಲ್ಲಿ ಮಧ್ಯಪ್ರದೇಶದ ರಾಜ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರಧಾನ ಕಾರ್ಯದರ್ಶಿಯಾಗಿದ್ದ, ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಷ್ಣು ದತ್ ಶರ್ಮಾ ಅವರು ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು, ಇದರಲ್ಲಿ ಸಿಂಗ್ ಅವರು ಆರ್‌ಎಸ್‌ಎಸ್ ಮತ್ತು ವ್ಯಾಪಂ ಅಧಿಕಾರಿಗಳ ನಡುವೆ “ಮಧ್ಯಮ ವ್ಯಕ್ತಿ” ಯಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಸಿಂಗ್ ಮಾಡಿರುವ ಆರೋಪಗಳ ಬಗ್ಗೆ ತನಿಖೆ ಆರಂಭಿಸುವುದಾಗಿ ಎಸ್‌ಟಿಎಫ್ ಹೇಳಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ಅಂದು ವರದಿ ಮಾಡಿದೆ.

ಯಥಾಪ್ರಕಾರ ಬಿಜೆಪಿ ನಾಯಕರು ಈ ಆರೋಪವನ್ನು ನಿರಾಕರಿಸಿದರು. ಈ ಎಫ್‌ಐಆರ್‌ ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ವಕ್ತಾರ ಹಿತೇಶ್ ಬಾಜ್‌ಪೇಯ್ ಹೇಳಿದರು. ‘ದಿಗ್ವಿಜಯ ಸಿಂಗ್ ಅವರು ವಿ.ಡಿ. ಶರ್ಮಾ ವಿರುದ್ಧ ಆಧಾರರಹಿತ ಹೇಳಿಕೆಯ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ. ಈ ಹೇಳಿಕೆಗೆ ಎಫ್‌ಐಆರ್‌ ನಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹಿತೇಶ್ ಬಾಜ್‌ಪೇಯ್ ಹೇಳಿದರು ಎಂದು ಪತ್ರಿಕೆ ವರದಿ ಮಾಡಿದೆ.

ಬಿಜೆಪಿ ನಾಯಕರು, ಸಂಘಪರಿವಾರದ ಅಂಗಸಂಸ್ಥೆಗಳು, ಅಧಿಕಾರಿಗಳು, ಮಧ್ಯವರ್ತಿಗಳು ಭಾಗಿಯಾಗಿರುವ ವ್ಯಾಪಂ ಪ್ರಕರಣದ ವಿಚಾರಣೆಗೆ ಅಂತ್ಯವಿಲ್ಲದಂತಾಗಿದೆ. ಹಗರಣದಿಂದ ನೊಂದ ವಿದ್ಯಾರ್ಥಿಗಳು, ಅವರ ಪೋಷಕರು, ಅನುಮಾನಾಸ್ಪದವಾಗಿ ಸಾವನ್ನಪ್ಪಿದ 52 ಜನರ ಕುಟುಂಬಕ್ಕೆ ನ್ಯಾಯ ಎಂಬುದು ಮರೀಚಿಕೆಯಾಗಿದೆ.

ವ್ಯಾಪಂ ಹಗರಣ ಬಯಲಿಗೆಳೆದಿದ್ದ ಮೂವರಲ್ಲಿ ಒಬ್ಬರಾದ ಮತ್ತು ಮಧ್ಯಪ್ರದೇಶ ಸರ್ಕಾರದಿಂದ ಅಮಾನತುಗೊಂಡಿದ್ದ ವೈದ್ಯಾಧಿಕಾರಿ ಡಾ.ಆನಂದ್ ರೈ ಅವರನ್ನು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮಾರ್ಚ್‌ 2023ರಲ್ಲಿ ಸರ್ಕಾರಿ ಅಧಿಸೂಚನೆ ಹೊರಡಿಸಲಾಯಿತು.

ನಿಗೂಢ ಸಾವುಗಳು:

ವ್ಯಾಪಂ ಹಗರಣದೊಂದಿಗೆ ವಿವಿಧ ರೀತಿಯ ಸಂಬಂಧ ಹೊಂದಿರುವವರು ಒಬ್ಬರ ನಂತರ ಒಬ್ಬರು ಸಾವನ್ನಪ್ಪುತ್ತಾರೆ. ಆ ಸಾವುಗಳ ಕಾರಣಗಳನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ಹೆಣಗಾಡುತ್ತಿರುವ ಸಮಯದಲ್ಲಿಯೂ ಹೊಸ ಸಾವಿನ ವರದಿಯೊಂದಿಗೆ ನಿಗೂಢತೆಯು ಮತ್ತಷ್ಟು ಗಾಢವಾಗುತ್ತಾ ಹೋಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ 25 ಜನರು ಸಾವನ್ನಪ್ಪಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರವೇ 2015ರ ಜೂನ್ 25 ರಂದು ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ.

ಅದಾಗಲೇ 46 ಜನರು ಸಾವನ್ನಪ್ಪಿದ್ದಾರೆ ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿತ್ತು. ಅಭ್ಯರ್ಥಿಗಳು ಮಾತ್ರವಲ್ಲದೆ ನಕಲಿ ಆಕಾಂಕ್ಷಿಗಳು ಮತ್ತು ಹಗರಣದ ತನಿಖೆ ನಡೆಸುತ್ತಿರುವವರೂ ಸಹ ಸಾವನ್ನಪ್ಪಿದ್ದಾರೆ. ವ್ಯಾಪಮ್ ಹಗರಣದ ತನಿಖೆಯಲ್ಲಿ ಭಾಗಿಯಾಗಿದ್ದ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಅಜಯ್ ಕುಮಾರ್ ಖರೆ ಅವರು 2018ರ ಜೂನ್ ನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಸಾವುಗಳು ನಡೆದ ರೀತಿಯೇ ವಿಚಿತ್ರವಾಗಿವೆ

ವ್ಯಾಪಂ ಹಗರಣಕ್ಕೆ ಸಂಬಂಧಿಸಿದವರ ಸಾವುಗಳು ನಡೆದ ರೀತಿಯೇ ವಿಚಿತ್ರವಾಗಿವೆ. ಅವುಗಳಲ್ಲಿ ಬಹಳಷ್ಟು ಇಂದಿಗೂ ನಿಗೂಢವಾಗಿಯೇ ಇವೆ. ಅಪಘಾತದಿಂದ ಸಾವು, ಬಸ್‌ ನಿಂದ ತಳ್ಳಲ್ಪಟ್ಟು ಸಾವು, ನೇಣು ಬಿಗಿದುಕೊಂಡು ಸಾವು, ಈಜುಕೊಳದಲ್ಲಿ ಮುಳುಗಿ ಸಾವು, ನಿಗೂಢ ಖಾಯಿಲೆಗಳಿಂದ ಸಾವು… ಹೀಗೆ ನಿಗೂಢವಾಗಿ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಿಬಿಐ ತನಿಖೆಯ ಪ್ರಾರಂಭದಲ್ಲಿ ಅದರ ಅಧಿಕಾರಿಯೊಬ್ಬರು ಈ ಸಾವುಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತ, “ಹಲವು ಸಂದರ್ಭಗಳಲ್ಲಿ, ವಿವಿಧ ಪ್ರದೇಶಗಳಲ್ಲಿನ ಸ್ಥಳೀಯ ಪೊಲೀಸರು ದೀರ್ಘಕಾಲದವರೆಗೆ ಎಫ್‌ಐಆರ್‌ ಗಳನ್ನು ದಾಖಲಿಸಲಿಲ್ಲ ಅಥವಾ ಅನೇಕ ಆತ್ಮಹತ್ಯಾ ತನಿಖೆಗಳು ದೀರ್ಘಕಾಲದವರೆಗೆ ಇವೆ”ಎಂದು ಹೇಳಿದ್ದರು.

ಹಲವಾರು ಆರೋಪಿಗಳು, ಸಾಕ್ಷಿಗಳು ಮತ್ತು ಮಾಹಿತಿದಾರರು, ಅಭ್ಯರ್ಥಿಗಳು ಮತ್ತು ತನಿಖಾಧಿಕಾರಿಗಳ ನಿಗೂಢ ಸಾವಿನಿಂದಾಗಿ ವ್ಯಾಪಮ್ ಹಗರಣವು ಸಾರ್ವಜನಿಕರ ಗಮನ ಸೆಳೆಯಿತು. ಈ ಸಾವುಗಳ ಸುತ್ತಲಿನ ಸಂದರ್ಭಗಳು ಆತಂಕ ಹುಟ್ಟುಹಾಕಿದವು ಮತ್ತು ಪ್ರಕರಣದ ಸುತ್ತಲಿನ ವಿವಾದಗಳಿಗೆ ಕಾರಣವಾಯಿತು. ನಿಗೂಢ ಸಾವುಗಳ ಕೆಲವು ಘಟನೆಗಳು ಇಲ್ಲಿವೆ;

ಅಕ್ಷಯ್ ಸಿಂಗ್: ವ್ಯಾಪಂ ಹಗರಣದಲ್ಲಿ ಅಸಹಜ ಸಾವುಗಳ ತನಿಖೆ ನಡೆಸುತ್ತಿದ್ದ ಆಜ್ ತಕ್ ವಾಹಿನಿಯ ವರದಿಗಾರನ ಶವ 2012ರಲ್ಲಿ ಉಜ್ಜಯಿನಿ ಜಿಲ್ಲೆಯ ರೈಲ್ವೆ ಹಳಿ ಬಳಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ನಮ್ರತಾ ದಾಮೋರ್: ಹಗರಣದಲ್ಲಿ ಆರೋಪಿಯಾಗಿದ್ದ 19 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಉಜ್ಜಯಿನಿಯ ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಕರೆದರು, ಆದರೂ ವರದಿಗಳ ಪ್ರಕಾರ, ಆಕೆಯ ಶವಪರೀಕ್ಷೆಯು “ಹಿಂಸಾತ್ಮಕ ಉಸಿರುಕಟ್ಟುವಿಕೆ” ಯಿಂದ ಸಾವನ್ನಪ್ಪಿದ್ದಾಳೆ ಎಂದು ಬಹಿರಂಗಪಡಿಸಿತು.

ನರೇಂದ್ರ ಸಿಂಗ್ ತೋಮರ್: ಹಗರಣದ ಆರೋಪಿಯಾದ ತೋಮರ್ 2015 ರಲ್ಲಿ ಇಂದೋರ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದರು. 29 ವರ್ಷದ ಯುವಕ ಎದೆ ನೋವು ಎಂದು ದೂರು ನೀಡಿದ್ದ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಶೈಲೇಶ್ ಯಾದವ್: ಹಗರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ. ಮಾರ್ಚ್ 25, 2015 ರಂದು ಅವರ ತಂದೆಯ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು, ಆದರೆ ಸಾವಿಗೆ ಕಾರಣ ತಿಳಿಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. “ವ್ಯಾಪಮ್ ಹಗರಣದಲ್ಲಿ ಅವರ ಹೆಸರು ಕಾಣಿಸಿಕೊಂಡ ನಂತರ ಅವರು ಒತ್ತಡಕ್ಕೆ ಒಳಗಾಗಿದ್ದರು. ನಾವು ಯೋಚಿಸುವಂತೆ ಇದು ಅವರ ಸಾವಿಗೆ ಕಾರಣವಾಗಿರಬಹುದು” ಎಂದು ಕುಟುಂಬದ ಸ್ನೇಹಿತ ಮತ್ತು ಕಾಂಗ್ರೆಸ್ ಮುಖಂಡ ಸತ್ಯದೇವ್ ತ್ರಿಪಾಠಿ ಹೇಳಿದ್ದಾರೆ ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ.

ಅರುಣ್ ಶರ್ಮಾ: ವ್ಯಾಪಂ ಹಗರಣದ ಸಂಬಂಧವಿರುವ ಮಧ್ಯಪ್ರದೇಶದ ಜಬಲ್‌ಪುರದ ವೈದ್ಯಕೀಯ ಕಾಲೇಜಿನ ಡೀನ್ ಅರುಣ್ ಶರ್ಮಾ 2015 ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಡಿಕೆ ಸಕ್ಕಳೆ: ಎನ್‌ಎಸ್ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ. ಡಿಕೆ ಸಕ್ಕಳೆ ಅವರು 2014 ರಲ್ಲಿ ತಮ್ಮ ಮನೆಯಲ್ಲಿ ಸುಟ್ಟು ಸಾವನ್ನಪ್ಪಿದರು.

ರಾಜೇಂದ್ರ ಆರ್ಯ: ಇಬ್ಬರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪೂರ್ವ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸಹಾಯ ಮಾಡಿದ ಡಾ. ರಾಜೇಂದ್ರ ಆರ್ಯ (40) ಅವರು ಕೆಲವು ನಿಗೂಢ ಲಿವರ್ ಸೋಂಕಿಗೆ ಬಲಿಯಾದ ನಂತರ ಗ್ವಾಲಿಯರ್‌ನ ಬಿರ್ಲಾ ಆಸ್ಪತ್ರೆಯಲ್ಲಿ ನಿಧನರಾದರು.

ಆನಂದ್ ಸಿಂಗ್ ಯಾದವ್: ಫತೇಪುರ್ (ಯುಪಿ) ನಿವಾಸಿ ಮತ್ತು ಅಲಹಾಬಾದ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ. ಈತ 2013 ರಲ್ಲಿ ಯುಪಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ.

ಅನುಜ್ ಉಯ್ಕೆ: ಈ ಹಗರಣದಲ್ಲಿ ಅನುಜ್ ಉಯ್ಕೆ ಮಧ್ಯವರ್ತಿ ಎಂದು ಆರೋಪಿಸಲಾಗಿತ್ತು. ರೈಸೇನ್‌ನ ಬೆಟ್ವಾ ಧಾಬಾ ಬಳಿಯ ಹೋಶಂಗಾಬಾದ್ ರಸ್ತೆಯ ವಕ್ರರೇಖೆಯಲ್ಲಿ ಸಾಗರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಆತನ ಜೊತೆಗಿದ್ದ ಇನ್ನಿಬ್ಬರು ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ.

ಬ್ರಿಜೇಶ್ ರಜಪೂತ್: ಮಧ್ಯಪ್ರದೇಶದ ಜಬಲ್‌ಪುರದ ರಜಪೂತ ಪಶುವೈದ್ಯಕೀಯ ಕಾಲೇಜಿನಲ್ಲಿ ವಾಸಿಸುತ್ತಿದ್ದ 25 ವರ್ಷದ ಈತನದು ಅಸಹಜ ಸಾವು.

ಜ್ಞಾನ್ ಸಿಂಗ್: ಭಿಂಡ್ ಜಿಲ್ಲೆಯ ಲಾಹರ್ ಬಳಿಯ ರೂರಿ ಗ್ರಾಮದವನಾದ ವೈದ್ಯಕೀಯ ವಿದ್ಯಾರ್ಥಿ, ಜ್ಞಾನ್ ಸಿಂಗ್ ಜಾತವ್, ಅಕ್ಟೋಬರ್ 26, 2010 ರಂದು ಯಕೃತ್ತು ಮತ್ತು ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು.

ಮನೀಶ್ ಕುಮಾರ್ ಸಮಾಧಿಯಾ: ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇವರು ಇದುವರೆಗೆ ಅಪರಿಚಿತ ಕಾರಣಗಳಿಂದ ಸಾವನ್ನಪ್ಪಿದ್ದಾರೆ.

ಲಲಿತ್ ಕುಮಾರ್ ಪಶುಪತಿನಾಥ್ ಜೈಸ್ವಾಲ್: 28 ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಲಲಿತ್ ಕುಮಾರ್ 2015 ರಲ್ಲಿ ಮೊರೆನಾ ಜಿಲ್ಲೆಯ ಸೇತುವೆಯ ಕೆಳಗೆ ಶವವಾಗಿ ಪತ್ತೆಯಾಗಿದ್ದರು.

ದೇವೇಂದ್ರ ನಾಗರ್: ಅವರ ಕುಟುಂಬಕ್ಕೆ ಆದಾಯ ತರುತ್ತಿದ್ದ ಏಕೈಕ ಸದಸ್ಯ, 29 ವರ್ಷದ ನಾಗರ್ 2013 ರಲ್ಲಿ ಮೋಟಾರ್ ಸೈಕಲ್ ಅಪಘಾತದ ನಂತರ ನಿಧನರಾದರು.

ಬಂಟಿ ಸಿಕರ್ವಾರ್: ಗ್ವಾಲಿಯರ್‌ನ ಸೈನಿಕ್ ಕಾಲೋನಿಯಲ್ಲಿರುವ ತನ್ನ ಪೂರ್ವಜರ ಮನೆಯಲ್ಲಿ 32 ವರ್ಷದ ಇವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವರು ವ್ಯಾಪಮ್ ಹಗರಣದಲ್ಲಿ ಮಧ್ಯವರ್ತಿ ಎಂದು ಹೇಳಲಾಗಿದೆ.

ದಿನೇಶ್ ಜಾತವ್: 2014 ರಲ್ಲಿ ಮೊರೆನಾ ಜಿಲ್ಲೆಯ ಜೌರಾ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು, ಅವರಿಗೆ ಕೇವಲ 28 ವರ್ಷ.

ದೀಪಕ್ ವರ್ಮಾ: ಹಗರಣದ ಮಧ್ಯವರ್ತಿ ಎಂದು ಹೇಳಲಾದ ದೀಪಕ್ ವರ್ಮಾ ರಸ್ತೆ ಅಪಘಾತದ ನಂತರ ಸಾವನ್ನಪ್ಪಿದ್ದಾರೆ. ಆದರೆ, ತನಿಖೆ ಏನನ್ನೂ ಬಹಿರಂಗಪಡಿಸಿಲ್ಲ.

ಶ್ಯಾಮವೀರ್ ಯಾದವ್: ಇವರೂ, ಅಪಘಾತದ ನಂತರ ಸಾವನ್ನಪ್ಪಿದರು ಮತ್ತು ತನಿಖೆಗಳು ನಿಷ್ಫಲವಾಗಿವೆ.

ಅಂಶುಲ್ ಸಚನ್: ಆಪಾದಿತ ಮಧ್ಯವರ್ತಿ ಹೋಶಂಗಾಬಾದ್ ಜಿಲ್ಲೆಯ ಅಂಶುಲ್ ಸಚನ್ 2010 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು.

ವಿಕಾಸ್ ಪಾಂಡೆ: ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನಿರ್ದಿಷ್ಟಪಡಿಸದ ವಿಕಾಸ್ ಪಾಂಡೆ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದರು.

ಪ್ರೇಮ್ ಲತಾ ಪಾಂಡೆ: 2013 ರಲ್ಲಿ, ನಿಗೂಢ ಸಂದರ್ಭಗಳಲ್ಲಿ ಯಕೃತ್ತಿನ ಕ್ಯಾನ್ಸರ್ ನಿಂದ ನಿಧನರಾದರು.

ಅನಾಮಿಕಾ ಕುಶ್ವಾಹಾ: ಇವರು ಟ್ರೈನಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್. ತಮ್ಮ ನೇಮಕಾತಿ ಪರೀಕ್ಷೆಯನ್ನು ನಿಗದಿಪಡಿಸಿದ ಆರೋಪ ಎದುರಿಸುತ್ತಿದ್ದರು. ಈಕೆ ನಿಗೂಢ ರೀತಿಯಲ್ಲಿ ಕೊಳದಲ್ಲಿ ಮುಳುಗಿದಳು.

ರವೀಂದ್ರ ಪ್ರತಾಪ್ ಸಿಂಗ್: ಆರೋಪಿ ವಿದ್ಯಾರ್ಥಿ ರವೀಂದ್ರ ಪ್ರತಾಪ್ ಸಿಂಗ್ 2015 ರಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ.

ಅಮಿತ್ ಸಾಗರ್: ಪಶುವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಅಮಿತ್ ಸಾಗರ್, ಅನಾಮಿಕಾಳಂತೆ 2015 ರಲ್ಲಿ ಶಿಯೋಪುರ್ ಜಿಲ್ಲೆಯ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದರು..

ರಾಜೇಂದ್ರ ಆರ್ಯ: ಒಂದು ವರ್ಷದಿಂದ ಜಾಮೀನಿನ ಮೇಲೆ ಇದ್ದ ರಾಜೇಂದ್ರ ಆರ್ಯ (40) ಗ್ವಾಲಿಯರ್‌ನ ಆಸ್ಪತ್ರೆಯಲ್ಲಿ ನಿಧನರಾದರು.

ವಿಜಯ್ ಸಿಂಗ್: ಮಧ್ಯವರ್ತಿ ಎಂದು ಹೇಳಲಾದ ಇವರು ಅಪರಿಚಿತ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಛತ್ತೀಸ್‌ಗಢದ ಲಾಡ್ಜ್‌ನಲ್ಲಿ ಆತನ ಶವ ಪತ್ತೆಯಾಯಿತು.

ಆದಿತ್ಯ ಚೌಧರಿ: ಹಗರಣದಲ್ಲಿ ಮಧ್ಯವರ್ತಿಯಾಗಿ ಗುರುತಿಸಿಕೊಂಡಿದ್ದ ಇವರು 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಅರವಿಂದ ಶಾಕ್ಯ: ಮತ್ತೊಬ್ಬ ಮಧ್ಯವರ್ತಿ ಅರವಿಂದ್ ಶಾಕ್ಯಾ ಅವರನ್ನು 2012 ರಲ್ಲಿ ಬಸ್‌ನಿಂದ ತಳ್ಳಲಾಗಿತ್ತು.

ಕುಲದೀಪ್ ಮರಾವಿ: ಇವರು ಕೂಡ ಮೇ 2013 ರಲ್ಲಿ ರಸ್ತೆ ಅಪಘಾತದಲ್ಲಿ ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.

ದೀಪಕ್ ಜೈನ್: ಹಗರಣದ ಮಧ್ಯವರ್ತಿ ದೀಪಕ್ ಜೈನ್ 2014 ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ
ಸಾವನ್ನಪ್ಪಿದ.

ನರೇಂದ್ರ ರಜಪೂತ: ವರದಿಗಳನ್ನು ನಂಬುವುದಾದರೆ, ನರೇಂದ್ರ ರಜಪೂತ್ ತೀವ್ರವಾದ ಎದೆನೋವಿಗೆ ಬಲಿಯಾದರು. ಆದಾಗ್ಯೂ, ಸಂದರ್ಭಗಳು ಸ್ಪಷ್ಟವಾಗಿಲ್ಲ.

ವಿಕಾಸ್ ಸಿಂಗ್: 2009 ರಲ್ಲಿ, ವಿಕಾಸ್ ಸಿಂಗ್ ಕೆಲವು ಔಷಧಿಗಳಿಂದ ಮಾರಣಾಂತಿಕ ಪ್ರತಿಕ್ರಿಯೆಯಿಂದ ನಿಧನರಾದರು. ಹಗರಣದಲ್ಲಿ ಮಧ್ಯವರ್ತಿಯೂ ಆಗಿದ್ದ.

ಆದಿತ್ಯ ಚೌಧರಿ: ಮತ್ತೊಬ್ಬ ಮಧ್ಯವರ್ತಿ ಚೌಧರಿ 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಬಂಟಿ ಸಿಕರ್ವಾರ್: ಚೌಧರಿ ಅವರಂತೆಯೇ ಬಂಟಿ ಸಿಕರ್ವಾರ್ ಗ್ವಾಲಿಯರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಲಲಿತ್ ಗೋಲಾರಿಯಾ: ಮಧ್ಯಪ್ರದೇಶದ ಮೊರೆನಾದಲ್ಲಿ ಗೊಲಾರಿಯಾ ಎಂಬ ವಿದ್ಯಾರ್ಥಿಯು 2015 ರಲ್ಲಿ ಸೇತುವೆಯ ಕೆಳಗೆ ಶವವಾಗಿ ಪತ್ತೆಯಾಗಿದ್ದಳು.

ಸಂಜಯ್ ಸಿಂಗ್ ಯಾದವ್: 35 ವಯಸ್ಸಿನ ಇವರು 2015 ರಲ್ಲಿ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ತಿನ ಕಾಯಿಲೆಯಿಂದ ನಿಧನರಾದರು.

ರಮಾಕಾಂತ್ ಪಾಂಡೆ: ಹಗರಣದ ಶಂಕಿತ ಪಾಂಡೆ ಮಧ್ಯಪ್ರದೇಶದ ಟಿಕಮ್‌ಗಢದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ರಾಮೇಂದ್ರ ಸಿಂಗ್ ಭಡೋರಿಯಾ: 30 ವರ್ಷದ ವಿದ್ಯಾರ್ಥಿಯಾಗಿದ್ದ ರಾಮೇಂದ್ರ, ಗ್ವಾಲಿಯರ್‌ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ. ದಂಧೆಯಲ್ಲಿ ತೊಡಗಿರುವವರು ಬಾಯಿ ಮುಚ್ಚಿಸಲು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ದಿನೇಶ್ ಯಾದವ್: ನಿಗೂಢ ಪರಿಸ್ಥಿತಿಯಲ್ಲಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ.

ರವೇಂದ್ರ ಪ್ರಕಾಶ್ ಸಿಂಗ್: ಸಿಂಗ್ರೌಲಿಯ ಎಂಬಿಬಿಎಸ್ ವಿದ್ಯಾರ್ಥಿ. 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಇದನ್ನೂ ನೋಡಿ: ಭಾರತದ ಪ್ರಜಾಪ್ರಭುತ್ವ ಮತ್ತು ನಾರ್ವೆ ಪತ್ರಕರ್ತರು:ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *