ಬೆಂಗಳೂರು: ಆನ್-ಡಿಮ್ಯಾಂಡ್ ಮನೆ ಸೇವೆಗಳನ್ನು ಒದಗಿಸುವ ಸ್ಟಾರ್ಟ್‌ಅಪ್ ‘ಪ್ರಾಂಟೋ’ ಸಂಸ್ಥೆ, ಕೆಲಸಕ್ಕೆ ಬರುವ ಕಾರ್ಮಿಕರು ತಲೆಯ ಮೇಲೆ ಕ್ಯಾಮೆರಾ ಧರಿಸಿ ಸೇವೆ ನೀಡುವ ಪೈಲಟ್ ಯೋಜನೆಯನ್ನು ಜಾರಿಗೆ ತಂದಿರುವುದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಗ್ರಾಹಕರು ಆಪ್ ಮೂಲಕ ಸೇವೆ ಬುಕ್ ಮಾಡಿದಾಗ, ಕೆಲ ಪ್ರಕರಣಗಳಲ್ಲಿ ಕಾರ್ಮಿಕರು ಹೆಡ್-ಮೌಂಟೆಡ್ ಕ್ಯಾಮೆರಾ ಧರಿಸಿ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಆಯ್ಕೆ ಮಾಡಬಹುದಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ವಿಷಯಕ್ಕೆ ಹೆಚ್ಚಿನ ಗಮನ ಸೆಳೆದಿದ್ದು, ಕಂಪನಿಯ ವರ್ಕ್‌ಫ್ಲೋಗಳನ್ನು “ಫಿಸಿಕಲ್ ಎಐ” ಮತ್ತು ರೋಬೋಟಿಕ್ಸ್ ತರಬೇತಿ ಡೇಟಾಗೆ ಸಂಬಂಧಿಸಿದೆ ಎಂದು ಹೂಡಿಕೆದಾರರ ಮೆಮೊದಲ್ಲಿ ಉಲ್ಲೇಖವಾಗಿದೆ ಎಂಬ ವರದಿ ಹೊರಬಂದ ಬಳಿಕ.
ಇದನ್ನೂ ಓದಿ: ರಾಜ್ಯದಲ್ಲಿ ಕನಿಷ್ಠ ವೇತನ 60% ಹೆಚ್ಚಳ: ಲಕ್ಷಾಂತರ ಕಾರ್ಮಿಕರಿಗೆ ಲಾಭ
ಪ್ರಾಂಟೋ ಸಹ ಸಂಸ್ಥಾಪಕಿ ಮತ್ತು ಸಿಇಒ ಅಂಜಲಿ ಸರ್ದಾನಾ ಅವರ ಪ್ರಕಾರ, ಈ ಯೋಜನೆ ಕೇವಲ 0.1% ಬಳಕೆದಾರರನ್ನು ಮಾತ್ರ ಒಳಗೊಂಡಿದ್ದು, ಮನೆಯಲ್ಲಿಲ್ಲದ ಸಂದರ್ಭಗಳಲ್ಲಿ ಅಪರಿಚಿತ ಕಾರ್ಮಿಕರನ್ನು ಒಳಗೆ ಬಿಡುವ ಬಗ್ಗೆ ಆತಂಕ ಹೊಂದಿರುವ ಗ್ರಾಹಕರಿಗಾಗಿ ಇದನ್ನು ರೂಪಿಸಲಾಗಿದೆ.
“ಮನೆ ಒಳಗೆ ಏನಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಅನುಮಾನ ಇರುತ್ತದೆ. ವಸ್ತುಗಳು ಕಳವಾಗುವ ಅಥವಾ ಹಾನಿಯಾಗುವ ಸಾಧ್ಯತೆ, ಕೆಲಸ ಸರಿಯಾಗಿ ನಡೆಯದಿರುವ ಬಗ್ಗೆ ಆತಂಕ ಇರುತ್ತದೆ,” ಎಂದು ಅವರು ಹೇಳಿದ್ದಾರೆ.

ಸಂಸ್ಥೆಯ ಪ್ರಕಾರ, ವಿಡಿಯೋಗಳನ್ನು ಅನಾಮಧೇಯಗೊಳಿಸಲಾಗುತ್ತದೆ, ಆಡಿಯೋ ದಾಖಲಿಸುವುದಿಲ್ಲ ಹಾಗೂ 48 ಗಂಟೆಗಳ ಒಳಗೆ ಅಳಿಸಲಾಗುತ್ತದೆ. ಆದರೆ, “ಡೆರೈವ್ಡ್ ಡೇಟಾಸೆಟ್‌ಗಳು” — ದೇಹದ ಚಲನಗಳು ಮತ್ತು ಕೈ ಚಲನೆಗಳ ‘ಕೀ ಪಾಯಿಂಟ್ ಮ್ಯಾಪಿಂಗ್’ ಮಾಹಿತಿಯನ್ನು — ಉಳಿಸಿಕೊಳ್ಳಲಾಗುತ್ತದೆ ಎಂದು ಕಂಪನಿ ದೃಢಪಡಿಸಿದೆ.
ಈ ಡೇಟಾವನ್ನು ಭವಿಷ್ಯದಲ್ಲಿ ಹಣಾರ್ಜನೆಗಾಗಿ ಅಥವಾ ತೃತೀಯ ಪಕ್ಷದ ಎಐ/ರೋಬೋಟಿಕ್ಸ್ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಸಂಸ್ಥೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಈ ಆಯ್ಕೆಯನ್ನು ಬಳಸುವ ಗ್ರಾಹಕರು ಪ್ರತಿ ಬುಕ್ಕಿಂಗ್‌ಗೆ ಹೆಚ್ಚುವರಿ ₹29 ಪಾವತಿಸಬೇಕಾಗಿದ್ದು, ಕಾರ್ಮಿಕರಿಗೂ ಹೆಚ್ಚುವರಿ ಪಾವತಿ ನೀಡಲಾಗುತ್ತದೆ.
ಸಂಸ್ಥೆಯ ಸ್ಪಷ್ಟೀಕರಣಗಳಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಮನೆಗಳ ಒಳಾಂಗಣವನ್ನು ಸಂಪೂರ್ಣ ಅನಾಮಧೇಯಗೊಳಿಸುವುದು ಕಷ್ಟ ಎಂದು ಕೆಲ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಇದರ ಮಧ್ಯೆ, ಸ್ಪರ್ಧಿ ಸಂಸ್ಥೆಗಳು ಈ ಕ್ರಮದಿಂದ ದೂರವಿರುವುದಾಗಿ ಸ್ಪಷ್ಟಪಡಿಸಿವೆ. ಗ್ರಾಹಕರ ವಿಶ್ವಾಸ ಮತ್ತು ಗೌಪ್ಯತೆ ಅತ್ಯಂತ ಮುಖ್ಯ ಎಂದು ಅವು ಹೇಳಿವೆ.
ಈ ವಿವಾದದ ಹಿಂದೆ “ಎಗೋಸೆಂಟ್ರಿಕ್” ಅಥವಾ ಫಸ್ಟ್-ಪರ್ಸನ್ ಡೇಟಾದ ಬೇಡಿಕೆ ಹೆಚ್ಚುತ್ತಿರುವುದು ಪ್ರಮುಖ ಕಾರಣವಾಗಿದೆ. ರೋಬೋಟಿಕ್ಸ್ ಮತ್ತು ಫಿಸಿಕಲ್ ಎಐ ತರಬೇತಿಗೆ ನೈಜ ಪರಿಸರದ ಡೇಟಾ ಅಗತ್ಯವಿರುವುದರಿಂದ, ಈ ರೀತಿಯ ಡೇಟಾ ಸಂಗ್ರಹಣೆ ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಕಾನೂನು ದೃಷ್ಟಿಯಿಂದ, ಈ ವಿಷಯ ಇನ್ನೂ ಸ್ಪಷ್ಟತೆ ಪಡೆಯಬೇಕಿದೆ. ಅನಾಮಧೇಯ ಡೇಟಾ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಯ ವ್ಯಾಪ್ತಿಗೆ ಬಾರದಿರಬಹುದು ಎಂದು ಕಾನೂನು ತಜ್ಞರು ಸೂಚಿಸಿದ್ದಾರೆ.
ಇದನ್ನೂ ನೋಡಿ: ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media
