ಬೆಂಗಳೂರ: ಕಳೆದ 24 ಗಂಟೆಗಳಲ್ಲಿ ರಾಜ್ಯದ ಹವಾಮಾನದಲ್ಲಿ ಭಾರಿ ಏರುಪೇರಾಗಿದ್ದು, ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಗಣನೀಯವಾಗಿ ಕುಸಿದಿದೆ. ತಾಪಮಾನ ಕುಸಿತದ ಬೆನ್ನಲ್ಲೇ ರಾಜ್ಯದ 19 ಜಿಲ್ಲೆಗಳಲ್ಲಿ ಮೇ24ರಿಂದ ಮುಂದಿನ ಐದು ದಿನಗಳವರೆಗೆ ಭಾರಿ ಬಿರುಗಾಳಿ ಹಾಗೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಶೇಷವಾಗಿ ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಪ್ರತಿ ಗಂಟೆಗೆ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಇದರೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಎಲ್ಲೆಲ್ಲಿ ಮಳೆ?
ಬಾಗಲಕೋಟೆ, ಯಾದಗಿರಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆಯಿದೆ. ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 30ರಿಂದ 40 ಕಿಲೋಮೀಟರ್ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಇದನ್ನೂ ಓದಿ: ಆರ್ಥಿಕ ಅಭಿವೃದ್ಧಿ ಎಂದರೆ ಬರಿಯ ಜಿಡಿಪಿ ಬೆಳವಣಿಗೆಯಲ್ಲ
ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಯೂ ಸಾಧಾರಣ ಮಳೆಯಾಗಲಿದ್ದು, ಈ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ ಎಂದು ಇಲಾಖೆ ವರದಿ ಮಾಡಿದೆ.
ಸದ್ಯ ರಾಜ್ಯದಾದ್ಯಂತ ಗರಿಷ್ಠ ಉಷ್ಣಾಂಶವು 28.3 ಡಿಗ್ರಿ ಸೆಲ್ಸಿಯಸ್ನಿಂದ 40.4 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗಿದೆ. ಆದರೆ, ಉತ್ತರ ಒಳನಾಡಿನ ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಾಪಮಾನವು ವಾಡಿಕೆಗಿಂತ ತೀವ್ರವಾಗಿ ಇಳಿಕೆಯಾಗಿದೆ. ಇದರೊಂದಿಗೆ ಗದಗ, ಕಲಬುರಗಿ, ಕೊಪ್ಪಳ, ಶಿವಮೊಗ್ಗ, ಬೀದರ್ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಚ್.ಎ.ಎಲ್ ಪ್ರದೇಶಗಳಲ್ಲೂ ಉಷ್ಣಾಂಶದಲ್ಲಿ ಕುಸಿತ ಕಂಡುಬಂದಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ ಹಾಗೂ ಮಂಡ್ಯ ಜಿಲ್ಲೆಗಳಲ್ಲಿಯೂ ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿದ್ದು, ಉಳಿದ ಭಾಗಗಳಲ್ಲಿ ಸಾಮಾನ್ಯ ಹವಾಮಾನ ಮುಂದುವರಿದಿದೆ.
ರಾಜ್ಯದ ಕರಾವಳಿ ತೀರ ಪ್ರದೇಶಗಳಲ್ಲಿ ಇಂದಿನಿಂದ ಮೇ 27ರವರೆಗೆ ಸಮುದ್ರದಲ್ಲಿ ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮೇ 25ರ ಸೋಮವಾರ ಬೆಳಗ್ಗಿನವರೆಗಿನ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ಥಳೀಯ ಮುನ್ಸೂಚನೆಯ ಪ್ರಕಾರ, ಮುಂದಿನ 24 ಗಂಟೆಗಳ ಕಾಲ ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಕಾರಣದಿಂದಾಗಿ ನಗರದ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುವ ನಿರೀಕ್ಷೆಯಿದೆ.
ರಾಜ್ಯಕ್ಕೆ ಮುಂಗಾರು ಪ್ರವೇಶದ ಮುನ್ಸೂಚನೆ
ದೇಶದ ರೈತಾಪಿ ವರ್ಗ ಕಾತರದಿಂದ ಕಾಯುತ್ತಿದ್ದ ನೈಋತ್ಯ ಮುಂಗಾರು ಅಬ್ಬರದಿಂದ ಮುನ್ನಡೆದಿದೆ. ಮುಂಗಾರು ಮಾರುತಗಳು ನೈಋತ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಆಗ್ನೇಯ ಅರಬ್ಬಿ ಸಮುದ್ರದ ಮತ್ತಷ್ಟು ಪ್ರದೇಶಗಳು, ಕೊಮೊರಿನ್ ಭಾಗ, ಬಂಗಾಳ ಕೊಲ್ಲಿಯ ನೈಋತ್ಯ, ಆಗ್ನೇಯ ಹಾಗೂ ಮಧ್ಯ-ಪೂರ್ವ ಭಾಗಗಳು ಸೇರಿದಂತೆ ಅಂಡಮಾನ್ ಸಮುದ್ರದ ಬಹುತೇಕ ಭಾಗಗಳನ್ನು ಈಗಾಗಲೇ ಆರಿಸಿಕೊಂಡಿವೆ. ಮುಂದಿನ 3ರಿಂದ 4 ದಿನಗಳಲ್ಲಿ ಮುಂಗಾರು ಮಾರುತಗಳು ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಇನ್ನುಳಿದ ಭಾಗಗಳಿಗೆ ಮತ್ತು ಇಡೀ ಅಂಡಮಾನ್ ಸಮುದ್ರಕ್ಕೆ ಮತ್ತಷ್ಟು ವಿಸ್ತರಿಸಲು ಪರಿಸ್ಥಿತಿ ಅತ್ಯಂತ ಅನುಕೂಲಕರವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮುಂಗಾರು ವೇಗವಾಗಿ ಮುನ್ನಡೆಯಲು ಪ್ರಮುಖ ಕಾರಣವಾಗಿವೆ. ಸದ್ಯ ಆಗ್ನೇಯ ಬಂಗಾಳ ಕೊಲ್ಲಿಯಿಂದ ಮಧ್ಯ ಬಂಗಾಳ ಕೊಲ್ಲಿಯವರೆಗಿನ ವಾತಾವರಣದಲ್ಲಿ ಸಮುದ್ರ ಮಟ್ಟದಿಂದ ಸುಮಾರು 3.1 ರಿಂದ 5.8 ಕಿಲೋಮೀಟರ್ ಎತ್ತರದಲ್ಲಿ ಸುಳಿಗಾಳಿ ತೀವ್ರಗೊಂಡಿದೆ. ಇದೇ ರೀತಿಯ ಮತ್ತೊಂದು ಸೈಕ್ಲೋನಿಕ್ ಪರಿಚಲನೆಯು ನೈಋತ್ಯ ಅರಬ್ಬಿ ಸಮುದ್ರದ ಮೇಲೆಯೂ ಸಕ್ರಿಯವಾಗಿದೆ.
ಈ ಬದಲಾವಣೆಗಳು ಮುಂಗಾರು ಮಾರುತಗಳು ಯಾವುದೇ ಅಡೆತಡೆಯಿಲ್ಲದೆ ದಕ್ಷಿಣ ಭಾರತದತ್ತ ಮುನ್ನಡೆಯಲು ದಾರಿ ಮಾಡಿಕೊಟ್ಟಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಅಧಿಕೃತವಾಗಿ ಆರಂಭವಾಗುವ ಮುನ್ಸೂಚನೆ ಸಿಕ್ಕಂತಾಗಿದೆ.
ಇದನ್ನೂ ನೋಡಿ: FIR ಎಂದರೆ ಏನು? ಯಾವಾಗ, ಹೇಗೆ ದಾಖಲಿಸಬೇಕು? ವಿಶ್ಲೇಷಣೆ : ಶಶಿಧರ, ವಕೀಲರುJanashakthi Media
