ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಸಮರ್ಥನೆ ಹಾಸ್ಯಾಸ್ಪದ : ಹರೀಶ್ ಕುಮಾರ್‌ಗೆ ಸಿಪಿಐಎಂ ಬಹಿರಂಗ ಚರ್ಚೆ ಸವಾಲು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿರುವ ಕಾಂಗ್ರೆಸ್ ಜಿಲ್ಲಾಾಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ಸಿಪಿಐಎಂ ತೀವ್ರ ವಾಗ್ದಾಳಿ ನಡೆಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಸರಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ವಿರೋಧಿಸುತ್ತಿರುವವರನ್ನು ಅವಹೇಳನಗೈಯುತ್ತಿರುವುದು ವಿಷಾದನೀಯ ಎಂದು ಹೇಳಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು ಯಾವುದೇ ಲಾಭದ ಉದ್ದೇಶವಿಲ್ಲದೆ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತವೆ ಎಂಬ ನಂಬಿಕೆ ಹರೀಶ್ ಕುಮಾರ್ ಅವರಿಗೆ ಇದ್ದರೆ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದೆ.

ಸರಕಾರಿ ಆಸ್ಪತ್ರೆಗಳನ್ನು ಸಮರ್ಪಕ ಸೌಲಭ್ಯಗಳೊಂದಿಗೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ವೈದ್ಯರು, ಔಷಧಿ ಹಾಗೂ ಯಂತ್ರೋಪಕರಣಗಳನ್ನು ಒದಗಿಸಿ ಆಸ್ಪತ್ರೆಗಳನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎನ್ನುವ ವಾದ ನಂಬಲಾಗದು ಎಂದು ಸಿಪಿಐಎಂ ಹೇಳಿದೆ. “ಇಂದಿನ ಲಕ್ಷಾಂತರ ಕೋಟಿ ರೂಪಾಯಿ ಬಜೆಟ್ ಇರುವ ಕಾಲಘಟ್ಟದಲ್ಲಿ ಸರ್ಕಾರಕ್ಕೆ ಆಸ್ಪತ್ರೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎನ್ನುವುದು ಅಸಂಬದ್ಧ. ಇದು ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಲಾಭದ ಹಿತಾಸಕ್ತಿಗೆ ಸರ್ಕಾರ ಮಣಿದಿರುವುದರ ಸೂಚನೆ” ಎಂದು ಆರೋಪಿಸಿದೆ.

ಇದನ್ನೂ ಓದಿ :ಪಶ್ಚಿಮ ಬಂಗಾಳದಲ್ಲಿ ಬುಲ್ಡೋಜರ್‌ ಆಡಳಿತ? : ಬಡವರ ಬದುಕಿನ ಮೇಲೆ ದಾಳಿ

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಕುರಿತು ಕಾಂಗ್ರೆಸ್ ಪಕ್ಷದೊಳಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಯನ್ನೂ ಸಿಪಿಐಎಂ ಎತ್ತಿದೆ. ರಾಜ್ಯ ಸರ್ಕಾರವು ಈ ನಿರ್ಧಾರ ಕೈಗೊಳ್ಳುವ ಮುನ್ನ ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಕೇಳಿತ್ತೇ, ಜಿಲ್ಲಾ ಘಟಕಕ್ಕೆ ಮಾಹಿತಿ ನೀಡಿತ್ತೇ ಎಂದು ಹರೀಶ್ ಕುಮಾರ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.

ಜಿಲ್ಲೆಯಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಿಂದ ದುಬಾರಿ ಚಿಕಿತ್ಸೆ, ಅನಗತ್ಯ ವೈದ್ಯಕೀಯ ಕ್ರಮಗಳು ಹಾಗೂ ವ್ಯಾಪಾರೀಕರಣ ಹೆಚ್ಚಾಗಿದೆ ಎಂಬ ಸಾರ್ವಜನಿಕ ಅಸಮಾಧಾನವಿದೆ ಎಂದು ಸಿಪಿಐಎಂ ಆರೋಪಿಸಿದೆ. ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರು ಹಾಗೂ ನಾಯಕರು ಖಾಸಗೀಕರಣದ ವಿರುದ್ಧ ಇದ್ದರೂ, ಕೆಲವೇ ಕೆಲವು ಪ್ರಭಾವಿ ನಾಯಕರು ಮಾತ್ರ ಖಾಸಗಿ ಮೆಡಿಕಲ್ ಕಾಲೇಜುಗಳ ಪರವಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ದೂರಿದೆ.

ಖಾಸಗೀಕರಣದ ಹಿಂದೆ ಇರುವ ಒಪ್ಪಂದಗಳು ಹಾಗೂ ರಾಜಕೀಯ ಪಿತೂರಿಗಳನ್ನು ಮುಂದಿನ ದಿನಗಳಲ್ಲಿ ಜನರ ಮುಂದೆ ಬಹಿರಂಗಪಡಿಸಲಾಗುವುದು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ : ನೀಟ್‌ ಹಗರಣ | JPC ಶಿಫಾರಸ್ಸು ಒಪ್ಪಲು ನಿರಾಕರಿಸಿದ ಧರ್ಮೇಂದ್ರ ಪ್ರಧಾನ

Donate Janashakthi Media

Leave a Reply

Your email address will not be published. Required fields are marked *