ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಪರಿಣಾಮ ಇದೀಗ ಸಾರ್ವಜನಿಕ ಸಾರಿಗೆ ಕ್ಷೇತ್ರಕ್ಕೂ ತಟ್ಟಲಾರಂಭಿಸಿದ್ದು, ಕರ್ನಾಟಕದಲ್ಲಿ ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ ಸಾಧ್ಯತೆ ಎದುರಾಗಿದೆ. ಇಂಧನ ವೆಚ್ಚದಲ್ಲಿ ಏರಿಕೆಯಿಂದ ಕಾರ್ಯಾಚರಣೆ ನಡೆಸುವುದು ಕಷ್ಟವಾಗುತ್ತಿದೆ ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.
ಡೀಸೆಲ್ ದರ ನಿರಂತರ ಏರಿಕೆಯಿಂದ ಬಸ್ ನಿರ್ವಹಣಾ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗಾಗಲೇ ವಾಹನ ವಿಮೆ, ರಸ್ತೆ ತೆರಿಗೆ, ಸಿಬ್ಬಂದಿ ವೇತನ ಹಾಗೂ ಬಿಡಿಭಾಗಗಳ ವೆಚ್ಚ ಏರಿಕೆಯ ಒತ್ತಡ ಎದುರಿಸುತ್ತಿರುವ ಖಾಸಗಿ ಸಾರಿಗೆ ಸಂಸ್ಥೆಗಳು, ಇಂಧನ ದರ ಹೆಚ್ಚಳದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿವೆ ಎಂದು ಸಂಘಟನೆಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆ ಕುರಿತು ಚರ್ಚೆ ಆರಂಭವಾಗಿದ್ದು, ಶೀಘ್ರದಲ್ಲೇ ದರ ಹೆಚ್ಚಳ ಅನಿವಾರ್ಯವಾಗಬಹುದು ಎಂದು ಖಾಸಗಿ ಬಸ್ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ. ಬಸ್ ಮಾಲೀಕರು ತಮ್ಮ ಟಿಕೆಟ್ ದರದಲ್ಲಿ ಶೇ. 20ರಷ್ಟು ಹೆಚ್ಚಳ ಮಾಡಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ ಎಂದು ಕರ್ನಾಟಕ ಖಾಸಗಿ ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಇಂಧನ ದರ ಏರಿಕೆ : ಜನರ ಜೇಬಿಗೆ ಮತ್ತೊಂದು ಹೊರೆ?
ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳ ಮಾಲೀಕರು, “ಡೀಸೆಲ್ ದರ ಏರಿಕೆಯಿಂದ ಪ್ರತಿ ಟ್ರಿಪ್‌ನಲ್ಲೂ ಹೆಚ್ಚುವರಿ ವೆಚ್ಚ ಬರುತ್ತಿದೆ. ಹಳೆಯ ದರದಲ್ಲೇ ಸೇವೆ ಮುಂದುವರಿಸುವುದು ಕಷ್ಟಕರವಾಗಿದೆ” ಪ್ರತ್ಯೇಕ ಖಾಸಗಿ ಬಸ್‌ಗಳಿಗೆ ದಿನವೊಂದಕ್ಕೆ ಸುಮಾರು 150 ಲೀಟರ್ ಡೀಸೆಲ್ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗ ಡೀಸೆಲ್ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವುದರಿಂದ ದಿನಕ್ಕೆ ಸುಮಾರು 450 ರೂ. ಹೆಚ್ಚುವರಿ ಖರ್ಚು ಖಾಸಗಿ ಬಸ್ ಮಾಲೀಕರ ಮೇಲೆ ಬೀಳಲಿದೆ. ಇದನ್ನು ಸರಿದೂಗಿಸಲು ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ ಎಂಬುದು ಇವರ ವಾದವಾಗಿದೆ.
ಇನ್ನೊಂದೆಡೆ, ಬಸ್ ದರ ಏರಿಕೆಯು ಸಾಮಾನ್ಯ ಜನರ ಮೇಲೆ ಮತ್ತಷ್ಟು ಹೊರೆ ಬೀರುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಮಧ್ಯಮ ವರ್ಗ, ವಿದ್ಯಾರ್ಥಿಗಳು ಮತ್ತು ದಿನಗೂಲಿ ಕಾರ್ಮಿಕರಿಗೆ ಸಾರಿಗೆ ವೆಚ್ಚ ಹೆಚ್ಚಳ ಹೊಸ ಸಮಸ್ಯೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಇಂಧನ ದರ ಏರಿಕೆಯ ಪರಿಣಾಮ ಕೇವಲ ವಾಹನ ಬಳಕೆದಾರರಿಗೆ ಮಾತ್ರ ಸೀಮಿತವಾಗದೆ, ಸಾರಿಗೆ, ಆಹಾರ ವಿತರಣೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ನೋಡಿ : ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media
