ಬೆಂಗಳೂರು: ಗಿಗ್ ಕಾರ್ಮಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ ದೂರು ನಿವಾರಣಾ ಪೋರ್ಟಲ್ ಆರಂಭಿಸಿದೆ. ಆಹಾರ ವಿತರಣೆ, ಟ್ಯಾಕ್ಸಿ ಸೇವೆ, ಇ-ಕಾಮರ್ಸ್ ವಿತರಣೆಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ತಮ್ಮ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, ವೇತನ ಬಾಕಿ, ಖಾತೆ ಸ್ಥಗಿತ, ಸುರಕ್ಷತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಬೆಂಗಳೂರು
ಕಾರ್ಮಿಕ ಇಲಾಖೆ ಆರಂಭಿಸಿರುವ ಈ ವ್ಯವಸ್ಥೆ ಮೂಲಕ ಕಾರ್ಮಿಕರ ದೂರುಗಳನ್ನು ನೇರವಾಗಿ ಸ್ವೀಕರಿಸಿ ಅವುಗಳ ಪರಿಶೀಲನೆ ಹಾಗೂ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಿಗ್ ಆರ್ಥಿಕತೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿತ್ತು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ
ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರು ತಮ್ಮ ದೂರುಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದಾಗಿದೆ. ಕಂಪನಿಗಳು ಮತ್ತು ಪ್ಲಾಟ್‌ಫಾರ್ಮ್ ಸಂಸ್ಥೆಗಳ ವಿರುದ್ಧ ಬರುವ ದೂರುಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ವ್ಯವಸ್ಥೆಯೂ ಇದರಲ್ಲಿ ಇರಲಿದೆ.
ರಾಜ್ಯ ಸರ್ಕಾರ ಈಗಾಗಲೇ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ, ವಿಮೆ ಮತ್ತು ಕಲ್ಯಾಣ ಯೋಜನೆಗಳ ಕುರಿತು ಚರ್ಚೆ ನಡೆಸುತ್ತಿರುವ ನಡುವೆ ಈ ಪೋರ್ಟಲ್ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಕಾರ್ಮಿಕ ಸಂಘಟನೆಗಳು ಈ ಕ್ರಮವನ್ನು ಸ್ವಾಗತಿಸಿದ್ದು, ಮುಂದಿನ ಹಂತದಲ್ಲಿ ಗಿಗ್ ಕಾರ್ಮಿಕರಿಗೆ ಕಾನೂನುಬದ್ಧ ಭದ್ರತೆ ಮತ್ತು ಕನಿಷ್ಠ ವೇತನ ಖಾತ್ರಿ ಮಾಡುವ ಅಗತ್ಯವಿದೆ ಎಂದು ಒತ್ತಾಯಿಸಿವೆ.
ಇದನ್ನೂ ನೋಡಿ : ಗ್ರಾಮ ಪಂಚಾಯತಿಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ: ಮೇ 30ಕ್ಕೆ ಬೃಹತ್ ಹೋರಾಟ Janashakthi Media
