ಗುರುರಾಜ ದೇಸಾಯಿ
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದ ಒಂದು ವೈರಲ್ ವಿಡಿಯೊ ಕುರಿತು ಫ್ಯಾಕ್ಟ್ ಚೆಕ್ ಸಂಸ್ಥೆಗಳು ಮಹತ್ವದ ಸ್ಪಷ್ಟನೆ ನೀಡಿವೆ. “ಬಿಜೆಪಿ ಗೆಲುವಿನ ಬಳಿಕ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಪಶ್ಚಿಮ ಬಂಗಾಳ ತೊರೆದು ಹೋಗುತ್ತಿದ್ದಾರೆ” ಎಂಬ ಹೇಳಿಕೆಯಿಂದ ಹರಡಲಾಗಿದ್ದ ಈ ವಿಡಿಯೊ ಹಳೆಯದ್ದು ಹಾಗೂ ದಾರಿತಪ್ಪಿಸುವ ರೀತಿಯಲ್ಲಿ ಬಳಸಲಾಗಿದೆ ಎಂದು ಫ್ಯಾಕ್ಟ್‌ಚೆಕ್ ಮೂಲಕ ಬೆಳಕಿಗೆ ಬಂದಿದೆ. ವೈರಲ್
ವೈರಲ್ ಆಗಿದ್ದ ವಿಡಿಯೊದಲ್ಲಿ ನದಿ ಮಾರ್ಗದಲ್ಲಿ ಸಾವಿರಾರು ಜನರು ದೋಣಿಗಳಲ್ಲಿ ಸಾಗುತ್ತಿರುವ ದೃಶ್ಯ ಕಾಣಿಸುತ್ತದೆ. ಕೆಲ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ರಾಜಕೀಯ ಬೆಂಬಲಿಗರು ಈ ದೃಶ್ಯವನ್ನು ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶಕ್ಕೆ ಜೋಡಿಸಿ ಹಂಚಿಕೊಂಡಿದ್ದರು. “ಚುನಾವಣಾ ಫಲಿತಾಂಶ ಹೊರಬಿದ್ದ ತಕ್ಷಣ ನುಸುಳುಕೋರರು ಹಿಂದಿರುಗಲು ಆರಂಭಿಸಿದ್ದಾರೆ” ಎಂಬ ರೀತಿಯ ಶೀರ್ಷಿಕೆಗಳೊಂದಿಗೆ ವಿಡಿಯೊ ವೈರಲ್ ಮಾಡಲಾಗಿತ್ತು.
ಆದರೆ, ಈ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಿದ ಫ್ಯಾಕ್ಟ್ ಚೆಕ್ ಸಂಸ್ಥೆಗಳಾದ Vishvas News, Newschecker ಹಾಗೂ DFRAC, ವಿಡಿಯೊಗೆ ಪಶ್ಚಿಮ ಬಂಗಾಳ ಚುನಾವಣೆ ಅಥವಾ ಇತ್ತೀಚಿನ ರಾಜಕೀಯ ಬೆಳವಣಿಗೆಗಳೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿವೆ.
ಇದನ್ನೂ ಓದಿ : ಉತ್ತಮ್ ನಗರ | ‘ಗೋಲಿ ಮಾರೋ’ ಘೋಷಣೆ: ಬಿಜೆಪಿ ಕಾರ್ಯಕರ್ತನ ಗುರುತು ಬಯಲು
ಪರಿಶೀಲನೆಯಲ್ಲಿ ಈ ವಿಡಿಯೊ 2025ರಲ್ಲೇ ಇಂಟರ್‌ನೆಟ್‌ನಲ್ಲಿ ಲಭ್ಯವಿದ್ದುದಾಗಿ ಪತ್ತೆಯಾಗಿದೆ. ರಿವರ್ಸ್ ಇಮೇಜ್ ಸರ್ಚ್, ಹಳೆಯ ಫೇಸ್‌ಬುಕ್ ಪೋಸ್ಟ್‌ಗಳು ಮತ್ತು ಯೂಟ್ಯೂಬ್ ಅಪ್ಲೋಡ್‌ಗಳ ಆಧಾರದ ಮೇಲೆ, ಈ ದೃಶ್ಯವು ಬಾಂಗ್ಲಾದೇಶದಲ್ಲಿ ನಡೆದ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.
ಕೆಲ ವರದಿಗಳ ಪ್ರಕಾರ ಇದು ಬಾಂಗ್ಲಾದೇಶದ ಬಾರಿಶಾಲ್ ಪ್ರದೇಶದಲ್ಲಿ ನಡೆದ “ಚಾರ್ಮೊನಾಯಿ ಮಹ್ಫಿಲ್” ಧಾರ್ಮಿಕ ಕಾರ್ಯಕ್ರಮದ ವೇಳೆ ತೆಗೆದ ದೃಶ್ಯ. ಇನ್ನೂ ಕೆಲವು ಫ್ಯಾಕ್ಟ್ ಚೆಕ್ ವರದಿಗಳು ಇದನ್ನು “ಬಿಸ್ವಾ ಇಜ್ತೆಮಾ” ಸಮಾವೇಶದ ಸಂದರ್ಭದ ವಿಡಿಯೊ ಎಂದು ಉಲ್ಲೇಖಿಸಿವೆ. ಎರಡೂ ಸಂದರ್ಭಗಳಲ್ಲಿಯೂ ವಿಡಿಯೊ ಧಾರ್ಮಿಕ ಸಮಾರಂಭದ ಭಾಗವಾಗಿದ್ದು, ರಾಜಕೀಯ ಅಥವಾ ಚುನಾವಣಾ ಬೆಳವಣಿಗೆಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಫ್ಯಾಕ್ಟ್ ಚೆಕ್ ಸಂಸ್ಥೆಗಳು, ಚುನಾವಣಾ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೊಗಳು ಮತ್ತು ಫೋಟೊಗಳನ್ನು ಹೊಸ ರಾಜಕೀಯ ಹಿನ್ನೆಲೆಯೊಂದಿಗೆ ಹಂಚಿ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರವೃತ್ತಿ ಹೆಚ್ಚಾಗಿದೆ. ವಿಶೇಷವಾಗಿ ಧರ್ಮ, ಗಡಿ, ನುಸುಳುಕೋರರು ಮತ್ತು ರಾಷ್ಟ್ರೀಯತೆ ಕುರಿತ ವಿಷಯಗಳಲ್ಲಿ ತಪ್ಪು ಮಾಹಿತಿ ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಯಾವುದೇ ವೈರಲ್ ವಿಷಯವನ್ನು ಪರಿಶೀಲಿಸದೇ ನಂಬಬಾರದು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೊಗಳು ಅಥವಾ ಪೋಸ್ಟ್‌ಗಳನ್ನು ಹಂಚುವ ಮೊದಲು ಅವುಗಳ ಮೂಲ, ದಿನಾಂಕ ಮತ್ತು ನೈಜ ಹಿನ್ನೆಲೆಯನ್ನು ಪರಿಶೀಲಿಸುವುದು ಅತ್ಯಗತ್ಯ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ಇದನ್ನೂ ನೋಡಿ : ಕತ್ತೆ ಕಿರುಬ: ಕಾಡಿನ ಮೌನ ರಕ್ಷಕ, ಪ್ರಕೃತಿಯ ಸ್ವಚ್ಛತಾ ಕಾರ್ಮಿಕ Janashakthi Media
