1890 ರಿಂದ ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ದಿನ. 2026 ಮೇ ಒಂದರಂದು 136 ನೇ ದಿನಾಚರಣೆ ಆಚರಿಸುವ ಈ ಸಮಯದಲ್ಲಿ ಜಗತ್ತಿನಾದ್ಯಂತ ಕೋಟ್ಯಾಂತರ ಶ್ರಮಜೀವಿಗಳ ಬದುಕಿನಲ್ಲಿ ಬೆಳಕಮೂಡಿಸಲು ತಮ್ಮ ಅಮೂಲ್ಯ ಜೀವಗಳನ್ನು ಬಲಿನೀಡಿ ಹುತಾತ್ಮರಾದವರ ಮಹಾನ್ ಗಾಥೆ ಇದು
– ಕೆ. ಮಹಾಂತೇಶ್
ಅದು 1886ರ ಮೇ 4 ಮಂಗಳವಾರ, ಸಮಯ ರಾತ್ರಿ ಎಂಟೂವರೆ ಗಂಟೆ. ಅಮೆರಿಕಾದ ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕಿನ ಬಳಿ ಸುಮಾರು 2500 ಜನರು ನೆರೆದಿದ್ದ ಒಂದು ಸಭೆ. ಸಭೆಯನ್ನುದ್ದೇಶಿಸಿ ಕಾರ್ಮಿಕ ಪತ್ರಿಕೆಯೊಂದರ ಸಂಪಾದಕ ಆಗಸ್ಟ್ ಸ್ಟೈಜ್ ಆಗಷ್ಟೇ ತನ್ನ ಪ್ರತಿಭಟನಾ ಭಾಷಣ ಆರಂಭಿಸಿದ್ದರು. ಈ ಸಭೆಯ ಹಿಂದಿನ ದಿನವಷ್ಟೆ ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ಮುಷ್ಕರನಿರತ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಅದನ್ನು ಖಂಡಿಸಿ, ಚಿಕಾಗೋದ ಹೇ ಮಾರ್ಕೆಟ್ ಚೌಕದಲ್ಲಿ ಈ ಸಭೆ ನಡೆಯುತ್ತಿತ್ತು. ಆಗಸ್ಟ್ ಸೈಜ್ ಭಾಷಣದ ಬಳಿಕ ಕಾರ್ಮಿಕ ನಾಯಕ ಅಲ್ಬರ್ಟ್ ಪಾರ್ಸನ್ ಅದಾದ ನಂತರ ಮೆಥಾಡಿಸ್ಟ್ ಚರ್ಚ್ನ ಪಾದ್ರಿಯಾಗಿದ್ದ ಸಾಮ್ಯುಯಲ್ ಮಾತನಾಡಿ ಅಮೆರಿಕ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಯಲು ಮಾಡತೊಡಗಿದರು. ರಾತ್ರಿ ಹತ್ತುವರೆ ಗಂಟೆಯಾದರೂ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನರು ಇದ್ದರು.
ಸಾಮ್ಯುಯಲ್ ಫೀಲ್ಡನ್ ತನ್ನ ಭಾಷಣ ಮುಗಿಸಬೇಕು ಎನ್ನುವಷ್ಟರಲ್ಲೇ, 176 ಜನರನ್ನು ಒಳಗೊಂಡ ಸಶಸ್ತ್ರ ಪೊಲೀಸರ ತುಕಡಿಯೊಂದು ದಿಢೀರನೆ ಸಭೆಯ ಮೇಲೆ ದಾಳಿ ನಡೆಸಿತು. ಅಷ್ಟರಲ್ಲೇ ಪೊಲೀಸರ ಮಧ್ಯೆದಲ್ಲೇ ಒಮ್ಮೆಲೆ ಡೈನಮೇಟ್ ಬಾಂಬ್ ಆಸ್ಪೋಟಿಸಿತು. ಅಮೆರಿಕಾದ ಇತಿಹಾಸದಲ್ಲೇ ಇಂತಹ ಬಾಂಬು ಸ್ಪೋಟಗೊಂಡಿದ್ದು ಇದೇ ಮೊದಲು! ಪರಿಣಾಮ ಒಬ್ಬ ಸತ್ತು ಹತ್ತಾರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇದರಿಂದಾಗಿ ಕೋಪೊದ್ರೇಕಗೊಂಡ ಪೊಲೀಸರು ವಿವೇಕಹೀನರಾಗಿ ಹಲವು ದಿಕ್ಕುಗಳಿಂದ ಯರಾ-ಬಿರಿಯಾಗಿ ಗುಂಡು ಹಾರಿಸಿ ನಾಲ್ಕು ಕಾರ್ಮಿಕರ ದೇಹಗಳನ್ನು ನೆಲಕ್ಕುರುಳಿಸಿದರು. ಮತ್ತೂ ಹತ್ತಾರು ಜನರು ಮಾರಣಾಂತಿಕವಾಗಿ ಗಾಯಗೊಂಡರು. ಈ ಬಾಂಬು ಸ್ಪೋಟವು ಪೊಲೀಸರನ್ನು ಎಷ್ಟು ಭಯ-ಭೀತರನ್ನಾಗಿಸಿತ್ತೆಂದರೆ, ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಅಲ್ಲಿ ನೆರೆದಿದ್ದ ಕಾರ್ಮಿಕರನ್ನು ಕೊಂದಿದ್ದು ಮಾತ್ರವಲ್ಲ, ಅವರ ಆರು ಜನ ಪೊಲೀಸ್ ಸಹೊದ್ಯೋಗಿಗಳನ್ನೇ ಅವರ ಬಂದೂಕಿನಿಂದಲೇ ಗುಂಡು ಹಾರಿಸಿ ಕೊಂದಿದ್ದರು!
ಇದನ್ನೂ ಓದಿ: ಮಂಗಳೂರು | ಉಸ್ತುವಾರಿ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ
ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕದಲ್ಲಿ ಅಂದು ನಡೆದ ಈ ದುರ್ಘಟನೆಯ ಪರಿಣಾಮವು ನಂತರದ ದಿನಗಳಲ್ಲಿ ಇನ್ನೂ ಭೀಕರವಾಗಿತ್ತು. ಚಿಕಾಗೋ ಮಾತ್ರವಲ್ಲ ಅಮೆರಿಕಾದ ಎಲ್ಲಾ ನಗರಗಳಲ್ಲಿ ಸಂಘಟನಾ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳು ಮೊಟಕುಗೊಂಡು ಹೇಳಹೆಸರಿಲ್ಲದಂತೆ ಮಾಯವಾದವು. ಅಮೆರಿಕಾದಾದ್ಯಂತ ನೂರಾರು ಕಾರ್ಮಿಕ ನಾಯಕರುಗಳನ್ನು ದಸ್ತಗಿರಿ ಮಾಡಿ ಹಿಂಸೆ ನೀಡಲಾಯಿತು. ಪೊಲೀಸರ ಉದ್ಧಟತನದಿಂದ ಉಂಟಾದ ಹೇ ಮಾರ್ಕೆಟ್ ದುರ್ಘಟನೆಯ ಹೊಣೆಯನ್ನು ನೈಟ್ಸ್ ಆಫ್ ಲೇಬರ್ (Knights of Labour) ಹೆಗಲಿಗೆರಿಸಿ ಅದರ ಮುಖಂಡರನ್ನು ದೋಷಾರೋಪಿಗಳನ್ನಾಗಿ ಮಾಡಲಾಯಿತು.
ಅಮೆರಿಕಾದ ಪತ್ರಿಕೆಗಳು, ವ್ಯಾಪಾರಸ್ಥರು ಮತ್ತು ಜನಸಾಮಾನ್ಯರು ಹೀಗೆ, ಎಲ್ಲರೂ ಲೇಬರ್ ಯೂನಿಯನ್ ಮುಖಂಡರನ್ನು ದ್ವೇಷಿಸಲಾರಂಭಿಸಿದರು. ಪರಿಣಾಮ ಕಾರ್ಮಿಕರು ಜನಸಾಮಾನ್ಯರ ಸಹಾನೂಭೂತಿ ಕಳೆದುಕೊಂಡರು. ಇದನ್ನೇ ಅಸ್ತವಾಗಿ ಬಳಸಿಕೊಂಡ ಕೈಗಾರಿಕಾ ಮಾಲೀಕರು ಸರ್ಕಾರದ ಮೇಲೆ ಒತ್ತಡ ತಂದು ಕಾರ್ಮಿಕ ನಾಯಕರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಅಂತಿಮವಾಗಿ ಬಂಧಿಸಲಾಗಿದ್ದ 8 ಜನ ಮುಖಂಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅದರಲ್ಲಿ 4 ಜನರನ್ನು, 11 ನವೆಂಬರ್ 1887ರಂದು ಗಲ್ಲಿಗೇರಿಸಲಾಯಿತು. ಉಳಿದ 4 ಜನರ ಪೈಕಿ ಒಬ್ಬ ಲೂಯಿ ಲಿಂಗ್ ಎಂಬಾತನು ಜೈಲಿನಲ್ಲೇ ಡೈನಾಮೇಟ್ ಸಿಡಿತದಿಂದ ಹಿಂದಿನ ದಿನವಷ್ಟೇ ಸತ್ತು ಹೋದರೆ, ಉಳಿದ 3 ಕೈದಿಗಳಿಗೆ 1893 ಜೂನ್ನಲ್ಲಿ ಕ್ಷಮಾದಾನ ನೀಡಿ ಬಿಡುಗಡೆ ಮಾಡಲಾಯಿತು. ‘ಹೇ ಮಾರ್ಕೆಟ್ನ ಪ್ರತಿಭಟನಾ ಸಭೆ, ನಂತರ ನಡೆದ ಪೊಲೀಸ್ ದೌರ್ಜನ್ಯ, ನಂತರದ ವಿಚಾರಣೆ, ಗಲ್ಲು ಶಿಕ್ಷೆ ಹೀಗೆ ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ‘ಹೇ ಮಾರ್ಕೆಟ್ ಹತ್ಯಾಕಾಂಡ’ವೆಂದೇ ಇಂದಿಗೂ ಕರೆಯಲ್ಪಡುತ್ತದೆ.
ಚಿಕಾಗೋದಲ್ಲೇ ಯಾಕೆ…?
1886 ‘ಹೇ ಮಾರ್ಕೆಟ್’ ಘಟನೆ ಚಿಕಾಗೋ ನಗರಲ್ಲೇ ಯಾಕೆ ಸಂಭವಿಸಿತು? ಎಂಬ ಪ್ರಶ್ನೆಗೆ ಚಿಕಾಗೋ ನಗರದ ಲೇಖಕ ನೆಲ್ಸನ್ ಅಲ್ಗ್ರೇನ್ 1950ರಲ್ಲಿ ತನ್ನ ಬರವಣಿಗೆಯಲ್ಲಿ ಹೀಗೆ ಹೇಳುತ್ತಾನೆ.. “ಚಿಕಾಗೋ ಎನ್ನುವುದು ಒಂದು “ಉರ್ಧ್ವಮುಖಿ ನಗರ” ಅಲ್ಲಿನ ಪ್ರತಿಯೊಬ್ಬನು ಅಂತರ್ಮುಖಿಯಾಗಿ ಕೇವಲ ತನ್ನ ಏಳಿಗೆಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ. ಅನ್ಯರ ಬಗ್ಗೆ ಕಿಂಚಿತ್ತು ಕಾಳಜಿ ತೋರದೆ ಸ್ವಾರ್ಥಿಗಳನ್ನೊಳಗೊಂಡ ಸಂತೃಪ್ತ ತಾಣವಾಗಲು ಆ ನಗರ ಸದಾ ಹವಣಿಸುತ್ತಿತ್ತು. ಬಹುಶಃ ಆರಂಭದಿಂದಲೂ ಚಿಕಾಗೋ ಹೀಗೆ ಇತ್ತೆಂದು ಕಾಣುತ್ತದೆ. ಅದು ಯಾವ ಕಾಲದಲ್ಲೂ ಸ್ನೇಹ-ಸೌಹಾರ್ದಯುತ ಮತ್ತು ಸಹಕಾರದ ನಗರವಾಗದೆ ಸದಾ ಪೈಪೋಟಿಯನ್ನೇ ತನ್ನ ಒಡಲಲ್ಲಿ ಆವರಿಸಿಕೊಂಡಿತ್ತು, ಎಂಬುದಾಗಿ ನೆಲ್ಸನ್ ವಿವರಿಸಿದ್ದಾನೆ. ಅಲ್ಲಿಗೆ ಭೇಟಿ ನೀಡಿದ್ದ ವಿದೇಶಿಯರ ಬಾಯಲ್ಲಿ ಕೂಡ ಚಿಕಾಗೋದ ನಗರವಾಸಿಗಳು ಸದಾ ಸಂಪತ್ತನ್ನು ಉಳಿಸಿ-ಗಳಿಸುವ ವಿಷಯದಲ್ಲೇ ಆಸಕ್ತರಾಗಿದ್ದರು. ಒಟ್ಟಿನಲ್ಲಿ ‘ಡಾಲರ್ ಸಾಮ್ರಾಟ’ನಾಗಿ ಮೆರೆಯುತ್ತಿದ್ದ ನಗರ ಎಂಬ ಖ್ಯಾತಿ ಗಳಿಸಿತ್ತು.

1880ರ ಸುಮಾರಿನಲ್ಲಿ ಈ ಚಿಕಾಗೋ ನಗರ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ನಗರವಾಗಿತ್ತು. 1887ರ ಲಂಡನ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ನ್ಯೂಯಾರ್ಕ್ಗಿಂತಲೂ ಹೆಚ್ಚು ದುಂದುಗಾರರನ್ನು ಹೊಂದಿದ, ಸಟ್ಟಾ ವ್ಯಾಪಾರವನ್ನು ಕರಗತ ಮಾಡಿಕೊಂಡ ಚತುರ ಉದ್ದಿಮೆಗಾರರನ್ನು, ಧಾಡ್ಲಿ ಸ್ವಾಭಾವದ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದ ಮತ್ತು ಉದಿಮೆದಾರರ ‘ಸ್ವರ್ಗ’ವಾಗಿ ಚಿಕಾಗೋ ರೂಪಗೊಂಡಿತ್ತು. ನ್ಯೂ ಇಂಗ್ಲೆಂಡ್ ಮತ್ತು ಪೂರ್ವದ ಕಡೆಯಿಂದ ಬಂದಿದ್ದ ಹಲವು ಆಂಗ್ಲ ಸ್ನಾಕ್ಸನ್ ಪ್ರಾಟೆಸ್ಟೆಂಟರೇ ಚಿಕಾಗೋ ನಗರ ಬದುಕಿನ ಪ್ರಭಾವಿ ಪುರುಷರಾಗಿ ಬೆಳೆದಿದ್ದರು. 1830-40ರ ದಶಕಗಳಲ್ಲಿ ಈ ನಗರಕ್ಕೆ ಐರಿಷರು ಹಾಗೂ ಜರ್ಮನರು ಆಗಮಿಸತೊಡಗಿದರು. ಆರಂಭದಲ್ಲಿ ಬಂದು ತಳವೂರಿದವರು, ನಂತರ ಬಂದವರನ್ನು ಸಹಜವಾಗಿಯೇ ‘ಕನಿಷ್ಟರೆಂದು’ ಶೋಷಿಸಲಾರಂಭಿಸಿದರು. ಇದರ ವಿರುದ್ಧ ಕ್ರಮೇಣ ಐರಿಷ್ ಹಾಗೂ ಜರ್ಮನ್ನರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟಕ್ಕಿಳಿದರು.
ಆದರೆ ಚಿಕಾಗೋದ ಶೋಷಕ ಪ್ರಭುಗಳು ಝಕ್, ಬೋಗೀಮಿಯನ್, ಪೊಲೀಶ್ ಮೊದಲಾದ ಇತರೆ ಜನಾಂಗೀಯ ಕಾರ್ಮಿಕರನ್ನು ತಂದು ಹೋರಾಟಗಾರರ ವಿರುದ್ಧ ಭೂ ಬಿಟ್ಟರು. ಪರಿಣಾಮವಾಗಿ ಜನಾಂಗೀಯ ಗಲಭೆಗಳು ಚಿಕಾಗೋ ನಗರದ ದಿನನಿತ್ಯದ ಘಟನೆಗಳಾದವು. 1885ರ ಹೊತ್ತಿಗೆಲ್ಲಾ ಚಿಕಾಗೋ ನಗರವು ಸ್ಥಳೀಯರಿಗಿಂತ ವಿದೇಶಿಯರಿಂದಲೇ ತುಂಬಿಹೋಗಿತ್ತು. ಅಲ್ಲದೆ ತಮ್ಮ ಹಕ್ಕುಗಳಿಗಾಗಿ 12 ಹಾಗೂ ತಮ್ಮ ಮೇಲೆ ನಡೆಯುತ್ತಿದ್ದ ಅಮಾನವೀಯ ಶೋಷಣೆ ವಿರುದ್ಧವೂ ಆ ವಲಸೆ ಜನರು ನಿತ್ಯ ಬಂಡಾಯ ನಡೆಸುತ್ತಿದ್ದರು. ಇದರಿಂದಾಗಿ ಹೆದರಿದ ಚಿಕಾಗೋದ ಬೃಹತ್ ಉದ್ದಿಮೆದಾರರು ಹೊರಗಿನವರನ್ನು ಹತ್ತಿಕ್ಕಲು ಜನಾಂಗೀಯ ವಿರೋಧಿ, ವಿದೇಶಿಯರ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ‘ನೋ-ನಥಿಂಗ್ಸ್’ (Know-Nothings) ಎನ್ನುವ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಿದರು.
ಸರಣಿ ಹೋರಾಟಗಳ ಪರ್ವ
ಈಗಾಗಲೇ ಪ್ರಸ್ತಾಪಿಸದಂತೆ 1886ರ ಮೇ 4ರ ‘ಹೇ ಮಾರ್ಕೆಟ್’ ಘಟನೆಯು ಆಕಸ್ಮಿಕವಾದುದಲ್ಲ. ಅದಕ್ಕಿಂತ ಪೂರ್ವದಲ್ಲಿ ಚಿಕಾಗೋದಲ್ಲಿ ಕಾರ್ಮಿಕರು ಕನಿಷ್ಟ ವೇತನಕ್ಕಾಗಿ, ಎಂಟು ಗಂಟೆ ಕೆಲಸದ ಬೇಡಿಕೆಗಾಗಿ, ಹಲವು ಸರಣಿ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದರು. ಅದರಲ್ಲಿ ಪ್ರಮುಖವಾದವುಗಳೆಂದರೆ, ಚಿಕಾಗೋದಲ್ಲಿ ವಲಸೆ ಕಾರ್ಮಿಕರು ಪ್ರತಿ ಭಾನುವಾರದ ರಜಾ ಸಮಯದಲ್ಲಿ ಒಂದೆಡೆ ಸೇರುತ್ತಿದ್ದ ಮತ್ತು ತಮ್ಮ ಕಷ್ಟ ಸುಖ ಹಾಗೂ ತಮ್ಮ ಸಂಘಟನೆ ಕುರಿತು ಚರ್ಚಿಸುತ್ತಿದ್ದ ಸ್ಥಳಗಳೆಂದರೆ ‘ಮದ್ಯದಂಗಡಿಗಳು’. ಆದರೆ ಬಾರ್ ಲೈಸೆನ್ಸ್ ಶುಲ್ಕಗಳನ್ನು 30 ರಿಂದ 300 ಡಾಲರ್ಗೆ ಹೆಚ್ಚಿಸಿದ ನಗರಾಡಳಿತ ಕ್ರಮದಿಂದ ಅನೇಕ ಮದ್ಯದಂಗಡಿಗಳು ಮುಚ್ಚಿದವು. ಪರಿಣಾಮವಾಗಿ ಕಾರ್ಮಿಕರು ಒಂದಡೆ ಸೇರುವ ಅವಕಾಶದಿಂದ ವಂಚಿತರಾದರು.

ಇದರ ವಿರುದ್ಧ 1885ರ ಏಪ್ರಿಲ್ 21ರಂದು ನಡೆಸಲಾದ ಕಾರ್ಮಿಕರ ಬೃಹತ್ ಮೆರವಣಿಗೆಯನ್ನು ಅಲ್ಲಿಯ ಮೇಯರ್ ಪೊಲೀಸರನ್ನು ಬಳಸಿ ಹತ್ತಿಕ್ಕಿದನು. ಅಂದು ನಡೆದ ಗೋಲಿಬಾರ್ಗೆ ಒಬ್ಬ ಕಾರ್ಮಿಕ ಬಲಿಯಾದ. ಮತ್ತೊಂದೆಡೆ ಚಿಕಾಗೋ ನಗರದಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಸಾವಿರಾರು ಕಾರ್ಮಿಕರು ವಾಸವಿದ್ದ ಮನೆಗಳೆಲ್ಲಾ ಸುಟ್ಟು ಬೂದಿಯಾಗಿ 250 ಜನರು ಸಜೀವ ದಹನಗೊಂಡರು. ನಿರಾಶ್ರಿತರಿಗೆ ಸರಿಯಾದ ಪರಿಹಾರ ಪುನರ್ವಸತಿ ನೀಡುವಲ್ಲಿ ಭಾರೀ ಸಂಚು ರೂಪಿಸಲಾಯಿತು. ಇದಕ್ಕಿಂತ ಮೊದಲೇ 1872ರ ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿದ್ದ ಜನರು ನಡೆಸಿದ ಹೋರಾಟ ‘ರೊಟ್ಟಿ ದಂಗೆ’ ಎಂದೇ ಚಿಕಾಗೋದ ಚರಿತ್ರೆಯಲ್ಲಿ ದಾಖಲಾಯಿತು. ಹಾಗೆ 1877ರಲ್ಲಿ ನಡೆದ ‘ರೈಲ್ ರೋಡ್’ ಮುಷ್ಕರವು ಪ್ರಮುಖವಾದವುಗಳು.
ತದನಂತರದಲ್ಲಿ ಎದ್ದು ಬಂದ 1884ರ ‘ಬಡವರ ಮಾರ್ಚ್’ 1885ರ ‘ಸ್ಪೀಟ್ ಕಾರ್’ ಮುಷ್ಕರ ಸಂದರ್ಭದಲ್ಲಿ ಪೊಲೀಸರು ಕಾರ್ಮಿಕರ ಮೇಲೆ ನಡೆಸಿದ ಪಾಶವೀ ಕೃತ್ಯಗಳ ವಿರುದ್ಧದ ಹೋರಾಟಗಳು ಮುಂದಿನ ಚಳವಳಿಗೆ ಬರೆದ ದಿಕ್ಕೂಚಿಯಾದವು.
‘ಹೇ ಮಾರ್ಕೆಟ್’ ದುರ್ಘಟನೆಗೆ ಪ್ರೇರಣೆ ಏನು..?
ಇದೆಲ್ಲಕ್ಕಿಂತ ಹೆಚ್ಚಾಗಿ ಹೇ ಮಾರ್ಕೆಟ್ ಘಟನೆಗೆ ಕಾರಣವಾದುದು ಚಿಕಾಗೋದ ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ನಡೆದ ಘಟನಾವಳಿಗಳು. ಚಿಕಾಗೋದಲ್ಲಿ ಸೈರನ್ ಮ್ಯಾಕ್ ಕಾರ್ಮಿಕ್ ಸಹೋದರರು ಆರಂಭಿಸಿದ ಈ ಕಂಪನಿ ಪ್ರಾರಂಭದಲ್ಲಿ ಕಾರ್ಮಿಕರ ಮತ್ತು ಮಾಲೀಕರ ನಡುವೆ ಉತ್ತಮ ಸಂಬಂಧ ಹೊಂದಿತ್ತು. 1862ರಲ್ಲಿ ಕಂಪನಿಯಲ್ಲಿ ಕಾರ್ಮಿಕ ಸಂಘವನ್ನು ಮಾನ್ಯ ಮಾಡಲಾಗಿತ್ತು. ಆದರೆ ಮಾಲೀಕ ಸೈರನ್ 1884ರಲ್ಲಿ ತೀರಿಹೋದ ನಂತರ ಮತ್ತೊಬ್ಬ ಮಾಲೀಕ ಸಹೋದರ ಇಯಾಂಡರ್ ಕಂಪನಿ ತೊರೆದ. ನಂತರ ಸೈರನ್ ಮಗನಾದ ಮಾನ್ಯಾಕ್ ಕಾರ್ಮಿಕ್-2 ಕಾರ್ಖಾನೆಯ ಮಾಲೀಕನಾದ. ಅವನು ಕೇವಲ 25 ವಯಸ್ಸಿನ ಅನನುಭವಿ. ಅವನಿಗೆ ಸೂಪರ್ ಲಾಭದ ಬಗ್ಗೆ ಮಾತ್ರವೇ ಗಮನ ಹೊರತು ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕರುಣೆಯೇ ಇರಲಿಲ್ಲ.
ಚಿಕಾಗೋದ ಅಂದಿನ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಎಲ್ಲಾ ಕೈಗಾರಿಕೆಗಳು ಸಿಲುಕಿದ್ದರೂ ಈ ಕಂಪನಿ ಮಾತ್ರ ಕಾರ್ಮಿಕರಿಗೆ ಸರಿಯಾಗಿ ಕೂಲಿ ನೀಡದೆ, ಎಲ್ಲಾ ಸೌಲತ್ತುಗಳನ್ನು ವಂಚಿಸಿ ಶೇ.71ರಷ್ಟು ಲಾಭಗಳಿಸುತ್ತಿತ್ತು. ಅಂದಿನ ಕಾಲದ ಪತ್ರಿಕೆಗಳ ವರದಿಗಳ ಪ್ರಕಾರ ಕಾರ್ಮಿಕರ ಶ್ರಮವನ್ನು ಲೂಟಿ ಮಾಡುತ್ತಿದ್ದ ಮಾಲೀಕ ಪಾಪದ ಹಣವನ್ನೆಲ್ಲಾ ಚಿಕಾಗೋದ ‘ಪ್ರೆಸ್ಬಿಟೇರಿಯನ್’ ಎನ್ನುವ ಧಾರ್ಮಿಕ ಮಠಕ್ಕೆ ಧಾರೆ ಎರೆಯುತ್ತಿದ್ದ. ಹಾಗೆ ನೀಡಿದ ಹಣದ ಮೊತ್ತ 4 ಲಕ್ಷ 50 ಸಾವಿರ ಡಾಲರ್ ಆಗಿತ್ತು. ಈ ಕಂಪನಿಯ ಬಹುಪಾಲು ಕಾರ್ಮಿಕರು ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾಗಿದ್ದರು. ತಮಗೆ ಅತ್ಯಲ್ಪ ಕೂಲಿ ನೀಡಿ ಉಳಿದ ಹಣವನ್ನು ಧಾರ್ಮಿಕ ಮಠಕ್ಕೆ ನೀಡುವುದರ ವಿರುದ್ಧ ಅವರು ತೀವ್ರ ಪ್ರತಿಭಟನೆಗಿಳಿದರು. ಕಂಪನಿಯಲ್ಲಿ 1884 ರಿಂದ 1886ರ ಮೇ ನಡುವಿನ ಅವಧಿಯಲ್ಲಿ ಹಲವು ಮುಷ್ಕರಗಳು ನಡೆದವು. ಅಂತಿಮವಾಗಿ 1886 ಮೇ 3ರಂದು ಮುಷ್ಕರ ಮುರುಕ ಪೊಲೀಸರು, ಮಾಲೀಕರ ಅಣತಿಯಂತೆ ಕಾರ್ಮಿಕ ಚಳವಳಿ ಮೇಲೆ ಗೋಲಿಬಾರ್ ನಡೆಸಿದರು. ಈ ಘಟನೆಯೇ ಮರುದಿನದ ‘ಹೇ ಮಾರ್ಕೆಟ್’ ದುರ್ಘಟನೆಗೆ ಕಾರಣವಾಯಿತು; ಮಾತ್ರವಲ್ಲ ಜಗತ್ತಿನಾದ್ಯಂತ ಪ್ರಬಲ ಕಾರ್ಮಿಕ ಆಂದೋಲನವನ್ನೇ ಹುಟ್ಟುಹಾಕಿತು.
‘ಮೇ ದಿನದ ಉದಯ’
ಚಿಕಾಗೋದ ಹೇ ಮಾರ್ಕೆಟ್ ಘಟನೆ ಮತ್ತು ನಂತರದಲ್ಲಿ ಕಾರ್ಮಿಕ ನಾಯಕರ ವಿಚಾರಣೆ ನಾಟಕ ಮತ್ತು ಅದರಲ್ಲಿ 4 ಜನರನ್ನು ಗಲ್ಲಿಗೇರಿಸಿದ ಪ್ರಕರಣದ ಹಿಂದಿರುವ ಪಿತೂರಿಗಳನ್ನು ಅಮೆರಿಕನ್ ಲೇಬರ್ ಯೂನಿಯನ್ ಮತ್ತು ಲೈಟ್ಸ್ ಆಫ್ ಲೇಬರ್ ಯೂನಿಯನ್ನ ಕಾರ್ಮಿಕ ನಾಯಕರು ಆಳವಾಗಿ ಅರ್ಥೈಸಿಕೊಂಡರು. ಚಿಕಾಗೋದ ಆಳುವ ಪ್ರಭುಗಳು ಇಡೀ ಕಾರ್ಮಿಕ ಚಳವಳಿಯ ಮೂಲ ಪ್ರಕರಣವನ್ನೇ ಹೊಸಕಿ ಹಾಕುವ ಯೋಜನೆ ಹೊಂದಿದ್ದರು. ಹಾಗಾಗಿ ಹೇ ಮಾರ್ಕೆಟ್ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಮಿಕ ನಾಯಕರ ಬಿಡುಗಡೆಗೆ ಅಮೆರಿಕಾದ ಉದ್ದಗಲಕ್ಕೂ ಪ್ರತಿಭಟನೆಗಳನ್ನು ಆಯೋಜಿಸಿ ಅವರ ಪರ ಕಾನೂನು ಹೋರಾಟಕ್ಕೆ ಹಣ ಸಂಗ್ರಹಿಸಲಾಯಿತು.ಬಂಧನಕ್ಕೊಳಗಾದ ಈ ನಾಯಕರ ಬಗ್ಗೆ ದೇಶದೆಲ್ಲೆಡೆ ಅನುಕಂಪದ ಮಹಾಪೂರವೆ ಹರಿದು ಬಂತು. ಅಮೆರಿಕಾದ ಹೆಸರಾಂತ ಕಾದಂಬರಿಕಾರ ವಿಲಿಯಂ ಡೀನ್ ಹೊವೆಲ್ಸ್ ಸೇರಿದಂತೆ ಹಲವು ಮಾಜಿ ಸೆನೆಟರ್ಗಳು, ಮಾಜಿ ನ್ಯಾಯಾಧೀಶರು ಹೀಗೆ ಹಲವರು ಕಾರ್ಮಿಕರ ನ್ಯಾಯಬದ್ಧ ಹಕ್ಕನ್ನು ಬೆಂಬಲಿಸಿದರು.
ಈ ಎಲ್ಲಾ ವಿರೋಧಗಳ ನಡುವೆಯೂ ಬಂಧಿತ ಕಾರ್ಮಿಕ ನಾಯಕರನ್ನು ಗಲ್ಲಿಗೇರಿಸಲು ತಯಾರಿ ನಡೆದಿತ್ತು. ವರನ್ನು ಗಲ್ಲಿಗೇರಿಸುವ 1887ರ ನವೆಂಬರ 11 ಆ ದಿನ ಇಡೀ ಚಿಕಾಗೋ ನಗರವೇ ಕಾರ್ಮಿಕರ ಕ್ರೋಧದಿಂದ ಹೆಪ್ಪುಗಟ್ಟಿದ ಕಾರ್ಮೋಡದಂತಿತ್ತು. ಯಾವಾಗ ಬೇಕಾದರೂ ಮೋಡಗಳು ಒಡೆದು ಅಬ್ಬರದ ಮಳೆ ಸುರಿಯುವ ಎಲ್ಲಾ ಲಕ್ಷಣಗಳು ಕಂಡುಬಂದವು. ಚಿಕಾಗೋದಲ್ಲಿ ಅಂದು ಒಂದುಗೂಡಿದ್ದ ಕಾರ್ಮಿಕರ ಸಂಖ್ಯೆಗೆ ಅಂದು ಅಲ್ಲಿ ಯೋಜಿಸಲಾಗಿದ್ದ ಶಸ್ತ್ರಸಜ್ಜಿತ ಪೊಲೀಸರು ಏನೇನೂ ಅಲ್ಲವಾಗಿತ್ತು. ಒಂದರ್ಥದಲ್ಲಿ ಲ್ಲಿನ ಜೈಲಿನ ಮೇಲೆ ದಾಳಿ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನು ಕಾರ್ಮಿಕರು ಮುನ್ನೆಡೆಸಿದ್ದರು! ಆದರೆ ಈ ವಿಷಯ ಜೈಲಿನೊಳಗಿದ್ದ ಸೈಜ್, ಎಂಗೆಲ್ ಮತ್ತಿತರ ಮನಕ್ಕೆ ಬರುತ್ತಿದ್ದಂತೆ ಮರಣದಂಡನೆಗೆ ಗುರಿಯಾಗಿದ್ದರೂ, ಸಾವಿನ ದಡದಲ್ಲೂ ಅ೦ತಿದ್ದರೂ ಅವರು ವಿವೇಕಶಾಲಿಗಳಾಗಿ ವರ್ತಿಸಿದರು.

ಕಾರ್ಮಿಕರೇನಾದರೂ ಇಂತಹ ಕಾರ್ಯಕ್ಕೆ ಕೈ ಹಾಕಿದರೆ ಮುಂದಾಗುವ ಘಟನೆಗಳು ಕಲ್ಪನಾತೀತವಾಗಿದ್ದವು. ಇಡೀ ಚಿಕಾಗೋದಲ್ಲಿ ಕಾರ್ಮಿಕರ ಮಾರಣಹೋಮವೇ ನಡೆಯುತ್ತಿತ್ತು. ಹೀಗಾಗಿ ಆತ್ಮಾರ್ಪಣೆ ಮಾಡಲು ಸಿದ್ದವಾಗಿದ್ದ ಆ ನಾಲ್ಕು ಬಂಧಿತ ನಾಯಕರು ಇಂತಹ ಕೆಲಸಕ್ಕೆ ತಿಳಿಯದಿರುವಂತೆ ಹೊರಗಿರುವ ಕಾರ್ಮಿಕರಿಂದ ಶಪಥ ಮಾಡಿಸಿದರು. ಇಂತಹ =ಶಾಲ ಮನೋಭಾವದ ಆ ಕಾರ್ಮಿಕರ ನಾಯಕರನ್ನು ಅಂತಿಮವಾಗಿ ಭೇಟಿ ಮಾಡಲು ಅವರ ಕುಟುಂಬದವರಿಗೂ ಅವಕಾಶ ನೀಡದೆ ಆಳುವ ಅರಸರು ತಮ್ಮ -ಮಾನವೀಯತೆಯನ್ನು ಮೆರೆದರು. 1887ರ ನವೆಂಬರ್ 11 ಮಧ್ಯಾನ್ಹದ ಹೊತ್ತಿಗೆಲ್ಲಾ – ನಾಲ್ವರು ನಾಯಕರ ಕುತ್ತಿಗೆಗೆ ಗಲ್ಲಿನ ಹಗ್ಗ ಬಿಗಿದರು! ಜಗತ್ತಿನ ಕಾರ್ಮಿಕ ಹಳವಳಿಯ ಇತಿಹಾಸದಲ್ಲಿ ಆ ಶುಕ್ರವಾರ ‘ಬ್ಲಾಕ್ ಪ್ರೈಡೇ’ ಎಂದೇ ದಾಖಲಾಯಿತು.
ಇದಾದ ನಂತರ ಅಮೆರಿಕಾ ಮಾತ್ರವಲ್ಲ ಜಗತ್ತಿನಾದ್ಯಂತ ಕಾರ್ಮಿಕರ ಬಲಿದಾನ, ನಕ್ಕುಗಳ ರಕ್ಷಣೆ ಕುರಿತು ಬಿಸಿಬಿಸಿ ಚರ್ಚೆಗಳು ನಡೆದವು. ಕಾರ್ಮಿಕ ನಾಯಕರು ಮತಾತ್ಮರಾದರೂ ಕಾರ್ಮಿಕರ ಪರಿಸ್ಥಿತಿಯೇನೂ ಬದಲಾಗಲಿಲ್ಲ. ಅದರ ಬದಲು ತೀವ್ರ ಎಡಿತ, ಶೋಷಣೆಗಳು ಮತ್ತಷ್ಟು ತೀವ್ರಗೊಂಡವು. 1888ರ ಡಿಸೆಂಬರ್ನಲ್ಲಿ ಕಾರ್ಮಿಕ ಚಳವಳಿಯನ್ನು ಪುರುಜ್ಜಿವನಗೊಳಿಸುವ ದೃಷ್ಟಿಯಿಂದ ಅಮೆರಿಕನ್ ಫೆಡರೇಷನ್ ಆಫ್ ಬರ್ಸ್ ಸೆಂಟ್ ಲೂಯಿಯದಲ್ಲಿ ಸಮಾವೇಶವೊಂದನ್ನು ಸಂಘಟಿಸಿತು. ಅದರಲ್ಲಿ ‘8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಖಾಸಗಿ ಇಚ್ಛೆ ಕಾರ್ಯಕ್ಕೆ’ ನ್ನುವ ಬೇಡಿಕೆಯನ್ನು ಅಂಗೀಕರಿಸಿ 1890 ಮೇ 1ರ ದಿನಾಚರಣೆಗೆ ಅಧಿಕೃತವಾಗಿ ನೀಡಿತು.
‘ಚಾರಿತ್ರಿಕ ದಿನ’
ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಮೇ ದಿನವು ವಿಶ್ವದ ಎಲ್ಲಾ ಕಾರ್ಮಿಕ ವರ್ಗವನ್ನು ಏಕತ್ರಗೊಳಿಸಿ ಬಂಡವಾಳಶಾಹಿಗಳು ಹೆಣೆಯುತ್ತಿರುವ ಶೋಷಣೆಗಳ ಚಕ್ರವ್ಯೂಹದ ಅಬೇಧ್ಯ ಕೋಟೆಗಳನ್ನು ಬೇಧಿಸುತ್ತಾ ಹೋರಾಟಕ್ಕಿಳಿಸುವ ಚಾರಿತ್ರಿಕ ದಿನ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುಶಃ ಜಗತ್ತಿನ ಎಲ್ಲಾ ದೇಶಗಳಲ್ಲೂ ಮೇ ದಿನವನ್ನು ತಪ್ಪದೆ ಆಚರಿಸಲಾಗುತ್ತಿದೆ. ‘ವಿಶ್ವದ ಕಾರ್ಮಿಕರೇ ಒಂದಾಗಿ’ ಎನ್ನುವ ಸ್ಪೂರ್ತಿಯನ್ನು ಕಾರ್ಮಿಕ ವರ್ಗಕ್ಕೆ ನೀಡಿ ಆ ವರ್ಗವನ್ನು ಒಂದುಗೂಡಿಸುವ, ಅದರ ಪ್ರಚ್ಛನ್ನ ಶಕ್ತಿ ಅಪಾರ. ಒಂದೇ ಮಾತಿನಲ್ಲಿ ಹೇಳಬೇಕಾದರೆ ‘ಎಲ್ಲ ರಾಷ್ಟ್ರಗಳಲ್ಲಿಯೂ ಧನಿಕ ವರ್ಗವು ಕಾರ್ಮಿಕ ವರ್ಗದ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಗುಲಾಮಗಿರಿಯ ಹೊಸ ರೂಪದ ವಿರುದ್ಧ ಟೊಂಕಕಟ್ಟಿ ನಿಲ್ಲಲು ಪ್ರೇರೇಪಿಸುತ್ತಿದೆ ಮೇ ದಿನ’.
ಆದರೆ, ಇಂತಹ ಚಾರಿತ್ರಿಕ ದಿನವನ್ನು ಇದೀಗ ಎಲ್ಲಾ ಕಡೆಗಳಲ್ಲೂ ಕೇವಲ ಔಪಚಾರಿಕವಾಗಿ ಇತರೆ ದಿನಾಚರಣೆಗಳಂತೆ ಆಚರಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿದೆ. ಇಂತಹ ಅಪಾಯ ಪ್ರವೃತ್ತಿಗಳ ಬಗ್ಗೆ ಭಾರತದ ಕಾರ್ಮಿಕ ಚಳವಳಿಯ ಅಗ್ರಗಣ್ಯ ನಾಯಕರಾಗಿದ್ದ ಡಾ.ಎಂ.ಕೆ. ಪಂಧೆಯವರು, ಅಮೆರಿಕಾದ ಇಲಿನಾಯ್ ಲೇಬರ್ ಹಿಸ್ಟರಿ ಸೊಸೈಟಿ ಪ್ರಕಟಿಸಿರುವ ಡಾ. ವಿಲಿಯಮ್ ಜೆ., ಆ್ಯಡೆಲ್ಮೆನ್ ಅವರು ಹೇ ಮಾರ್ಕೆಟ್ ಪ್ರಕರಣದ ಚರಿತ್ರೆಯನ್ನು ವಿಸ್ತ್ರತವಾಗಿ ವಿವರಿಸಿರುವ ಕೃತಿ ‘ಹೇ ಮಾರ್ಕೆಟ್ ರೀ-ವಿಝಿಟೆಡ್’ ಕೃತಿಯ ಭಾರತೀಯ ಆವೃತ್ತಿಗೆ 2009ರ ಮೇ 4 ರಂದು ಬರೆದ ಮುನ್ನುಡಿಯಲ್ಲಿ ಹೀಗೆ ಗುರುತಿಸಿದ್ದಾರೆ. ‘ಇಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಫೈವ್ ಸ್ಟಾರ್ ಟ್ರೇಡ್ ಯೂನಿಯನ್ ಸಂಸ್ಕೃತಿ ಆವರಿಸುತ್ತಿದೆ, ಇಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ನಾಯಕರು ಹೇ ಮಾರ್ಕೆಟ್ ಹುತಾತ್ಮರನ್ನು ಕೇವಲ ಮೇ 1ರಂದು ವೈಭವೀಕರಿಸಿ, ಮೇ ದಿನದ ಜನಪ್ರಿಯತೆಯನ್ನು ಕೇವಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಆ ಹುತಾತ್ಮರ ಧೀರ ಧಿಮಂತಿಕೆಯಲ್ಲಿ ಹೆಜ್ಜೆ ಹಾಕದೇ ವರ್ಗ ಸಖ್ಯತೆಯ ಧೋರಣೆಗಳನ್ನು ಅನುಸರಿಸುತ್ತಾ ಶೋಷಕರೊಂದಿಗೆ ಶಾಮೀಲಾಗುತ್ತಿದ್ದಾರೆ. ಇಂತಹ ನಾಯಕರುಗಳು ಹೇ ಮಾರ್ಕೆಟ್ ಹುತಾತ್ಮ ಪರಂಪರೆಗಳನ್ನು ಮುಂದೊಯ್ಯಲಾರರು, ಮೇಲಾಗಿ ಅವರಿಗೆ ಆ ಹಕ್ಕೂ ಇರುವುದಿಲ್ಲ’. ಹೇ ಮಾರ್ಕೆಟ್ ಘಟನೆ ನಡೆದು ಇಂದಿಗೆ 129 ವರ್ಷಗಳಾದವು. ಜಗತ್ತಿನಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ನಡೆದು ಬರುತ್ತಿರುವ ಮೇ ದಿನದ ಕ್ರಾಂತಿಕಾರಿ ಪರಂಪರೆ ಈಗಲೂ ಜಗದ ಎಲ್ಲಾ ಕಾರ್ಮಿಕ ಚಳವಳಿಗೆ ಹೊಸ ಸ್ಪೂರ್ತಿ ಹಾಗೂ ಚೈತನ್ಯದ ಕಾವನ್ನು ನೀಡುತ್ತಲೇ ಬಂದಿದೆ. ಹಲವು ಸಮತೆಯ ಹೊಸ ಸಮಾಜದ ಬೀಜಗಳನ್ನು ಬಿತ್ತಿ ಸಮಾನತೆಯ ಹೂಗಳನ್ನು ಅರಳಿಸಿದೆ. ಮುಂದೆಯೂ ಮೇ ದಿನ ಶೋಷಿತರ ಕನಸನ್ನು ನನಸಾಗಿಸುವ ಹೋರಾಟದ ಪುಷ್ಟವಾಗಿ ಎಲ್ಲರ ಮನಗಳಲ್ಲಿ ಅರಳಲಿ.
(2018 ರಲ್ಲಿ ಪ್ರಕಟವಾದ ಕೆ. ಮಹಾಂತೇಶ್ ಅವರ ಒಡಲಾಳದ ಕಥನಗಳು ಕೃತಿಯಿಂದ…)
ಇದನ್ನೂ ನೋಡಿ: ಗ್ರಾಮೀಣ ಕೂಲಿಕಾರರ ಸಂಕಷ್ಟಗಳಿಗೆ ಧ್ವನಿಯಾದ ಕೂಲಿಕಾರರ ಸಮ್ಮೇಳ Janashakthi Media
