ಬೆಂಗಳೂರು: ರಾಜ್ಯದ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳ ಸಂರಕ್ಷಣೆ, ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ 3,222 ಶಾಲೆಗಳ ಉಳಿವು ಮತ್ತು ಬಲವರ್ಧನೆಗಾಗಿ 31 ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ.
ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು 206 ಪುಟಗಳ ವರದಿಯನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಹಸ್ತಾಂತರಿಸಿದರು. ಕೆ.ಪಿ. ಸುರೇಶ್ ಅವರು ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಿದ್ದಾರೆ. ಶತಮಾನ ಕಂಡ ಶಾಲೆಗಳನ್ನು ರಾಜ್ಯ ಸರ್ಕಾರ “ಪಾರಂಪರಿಕ ಶಾಲೆಗಳು” ಎಂದು ಅಧಿಕೃತವಾಗಿ ಘೋಷಿಸಬೇಕು ಎಂಬುದು ವರದಿಯ ಪ್ರಮುಖ ಬೇಡಿಕೆಯಾಗಿದೆ.
ಈ ಶಾಲೆಗಳಲ್ಲಿ ಅನೇಕ ಮಹನೀಯರು ವಿದ್ಯಾಭ್ಯಾಸ ಮಾಡಿರುವ ಹಿನ್ನೆಲೆ ಅವುಗಳಿಗೆ ವಿಶೇಷ ಐತಿಹಾಸಿಕ ಮೌಲ್ಯವಿದೆ ಎಂದು ವರದಿ ಉಲ್ಲೇಖಿಸಿದೆ. ಕನಿಷ್ಠ ಪ್ರತಿ ಜಿಲ್ಲೆಯಲ್ಲಿ ಒಂದು ಶಾಲೆಯನ್ನು ಮಾದರಿ ಪಾರಂಪರಿಕ ಶಾಲೆಯಾಗಿ ರೂಪಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಆ ಮಹನೀಯರ ಸಾಧನೆಗಳನ್ನು ಪರಿಚಯಿಸುವ ವ್ಯವಸ್ಥೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಸಣ್ಣ ವಸ್ತುಸಂಗ್ರಹಾಲಯ, ಶಾಲೆಯ ಇತಿಹಾಸದ ದಾಖಲೆ ಹಾಗೂ ಪರಂಪರೆಯ ಪ್ರದರ್ಶನಗಳನ್ನೂ ಅಲ್ಲಿ ನಿರ್ಮಿಸಬೇಕು ಎಂದು ಸಲಹೆ ನೀಡಲಾಗಿದೆ.
ಇದನ್ನೂ ಓದಿ : ನ್ಯಾಯಾಧೀಶರನ್ನು ಬದಲಿಸಲು ಅಲ್ಲ, ನೆರವಾಗಲು ಎಐ ಬಳಕೆ: ಸಿಜೆಐ ಸೂರ್ಯಕಾಂತ್
ಶತಮಾನ ಶಾಲೆಗಳ ನಿರ್ವಹಣೆಗಾಗಿ ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಕೋಶ ಸ್ಥಾಪನೆ, ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಗಳ ನೇಮಕ, ಸಮಗ್ರ ಅಧ್ಯಯನ ಹಾಗೂ ಶಾಲಾ ಪರಂಪರೆ ಕುರಿತ ಪ್ರಕಟಣೆಗಳನ್ನು ಹೊರತರುವುದು ಸೇರಿದಂತೆ ಆಡಳಿತಾತ್ಮಕ ಕ್ರಮಗಳನ್ನೂ ವರದಿ ಸೂಚಿಸಿದೆ. ಪ್ರತಿ ಶಾಲೆಯ ಇತಿಹಾಸವನ್ನು ಪುಸ್ತಕ ಅಥವಾ ವಿಡಿಯೊ ರೂಪದಲ್ಲಿ ದಾಖಲಿಸಿ, ಜಾಲತಾಣದ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದೂ ಹೇಳಲಾಗಿದೆ.
ಉನ್ನತ ಪ್ರಾಥಮಿಕ ಶಾಲೆಗಳಿಗೆ ವಿಜ್ಞಾನ ಪ್ರಯೋಗಾಲಯ, ಇತಿಹಾಸ ಹಾಗೂ ಪರಿಸರ ವಸ್ತುಸಂಗ್ರಹಾಲಯಗಳನ್ನು ಒದಗಿಸಿ, ಅವುಗಳನ್ನು ವಿಶೇಷ ಆದ್ಯತಾ ಶಾಲೆಗಳೆಂದು ಪರಿಗಣಿಸಿ ಶಿಕ್ಷಕರ ಕಾಯಂ ನೇಮಕಾತಿಗೆ ಕ್ರಮವಹಿಸಬೇಕು ಎಂದು ವರದಿ ಒತ್ತಾಯಿಸಿದೆ. ಜೊತೆಗೆ, ಈ ಶಾಲೆಗಳ ವ್ಯಾಪ್ತಿಯಲ್ಲಿ ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ವಿಷಯದಲ್ಲೂ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಹಿಂದೆ ಸರ್ಕಾರ ಸುಮಾರು ₹25 ಕೋಟಿ ಬಿಡುಗಡೆ ಮಾಡಿದ ಪರಿಣಾಮ 240 ಶತಮಾನ ಶಾಲೆಗಳು ಅಭಿವೃದ್ಧಿಯಾಗಿದ್ದರೂ, ಆ ಯೋಜನೆ ಮುಂದುವರಿಯಲಿಲ್ಲ ಎಂದು ವರದಿ ಹೇಳಿದೆ. ಕಳೆದ ಹತ್ತು ವರ್ಷಗಳಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳ ಕುರಿತು ಸಮಗ್ರ ಅಧ್ಯಯನವೇ ನಡೆದಿಲ್ಲ, ಸಾವಿರಾರು ಶಾಲೆಗಳಲ್ಲಿ ದಾಖಲಾತಿ ಕುಸಿತ ಕಂಡಿದ್ದರೂ ಕಾರಣಗಳ ಆಳವಾದ ಪರಿಶೀಲನೆ ಇಲ್ಲ ಎಂದು ಪ್ರಾಧಿಕಾರ ಆತಂಕ ವ್ಯಕ್ತಪಡಿಸಿದೆ.
ಜಾಗತೀಕರಣದ ವೇಗದಲ್ಲಿ ಇಂತಹ ಶಾಲೆಗಳು ಅಪ್ರಸ್ತುತವಾಗದಂತೆ ಉಳಿಸಿ ಬೆಳೆಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಈ ಶಾಲೆಗಳ ಪುನಶ್ಚೇತನವು ಕೇವಲ ಶಿಕ್ಷಣದ ಪ್ರಶ್ನೆಯಲ್ಲ, ರಾಜ್ಯದ ಇತಿಹಾಸ ಮತ್ತು ಸಾಮಾಜಿಕ ಪರಂಪರೆಯನ್ನು ಉಳಿಸುವ ಕಾರ್ಯವೂ ಆಗಿದೆ ಎಂದು ವರದಿ ಒತ್ತಿಹೇಳಿದೆ.
ಇದನ್ನೂ ನೋಡಿ : ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media
