ಮೃತ ಪಟ್ಟ ರೈತ ಸಂಘದ ಟಿ.ಎಂ ವೆಂಕಟೇಶ್ ಕುಟುಂಬಕ್ಕೆ 50 ಲಕ್ಷ ಪರಿಹಾರಕ್ಕೆ ಒತ್ತಾಯ
ಕೋಲಾರ: ಕೋಲಾರ – ಶ್ರೀನಿವಾಸಪುರ ನಡುವೆಯ ಮುದುವಾಡಿ ಕೆರೆಯ ಕಟ್ಟೆಯ ಮೇಲೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ರಸ್ತೆಯನ್ನು ಜೋಡಿ ರಸ್ತೆಯಾಗಿ ಅಭಿವೃದ್ದಿಪಡಿಸಬೇಕು ಕೂಡಲೇ ತಡೆಗೋಡೆ ಕಟ್ಟಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮುದುವಾಡಿ ಕೆರೆ ಬಳಿ ಗುರುವಾರ ರಸ್ತೆತಡೆ ನಡೆಸಿದರು. ಮುದುವಾಡಿ
ಬೆಂಗಳೂರಿನಿಂದ ಹರಿಯುತ್ತಿರುವ ಕೆ.ಸಿ. ವ್ಯಾಲಿ ನೀರನ್ನು ಮುದುವಾಡಿ ಕೆರೆಯಲ್ಲಿ ಸಂಗ್ರಹಿಸಿ, ಇಲ್ಲಿಂದ ಹಲವಾರು ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಮುದುವಾಡಿ ಕೆರೆಯಲ್ಲಿ ವರ್ಷ ಪೂರ್ತಿ ನೀರು ಭರ್ತಿಯಾಗಿರುತ್ತದೆ. ಮುದುವಾಡಿ ಕೆರೆ ಕಟ್ಟೆಯ ಮೇಲಿರುವ ರಸ್ತೆಯ ಎರಡು ಕಡೆ ತಡೆಗೋಡೆ ಇಲ್ಲದೇ ಇರುವುದರಿಂದ ವಾಹನ ಓಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗಿ ಕೆರೆಯಲ್ಲಿ ಬೀಳುವ ಅವಕಾಶಗಳು ಹೆಚ್ಚಾಗಿ ಇದೆ. ಈ ರಸ್ತೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಅಭಿವೃದ್ಧಿ ಮಾಡಲಾಗಿದ್ದು, ಕೆರೆಯ ಕೆಲವು ಭಾಗದಲ್ಲಿ ಕಬ್ಬಿಣದ ತಡೆಗೋಡೆ, ಕೆಲವು ಕಡೆ ಕಳಪೆ ಗುಣಮಟ್ಟದ ಸಿಮೆಂಟ್ ಪಿಲ್ಲರ್ಗಳನ್ನು ಅಳವಡಿಸಲಾಗಿದೆ. ಈ ಭಾಗದಲ್ಲಿ ಆಗಿಂದಾಗ್ಗೆ ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳ ಮುದುವಾಡಿ ಕೆರೆ ಕಟ್ಟೆಯ ಮೇಲೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಷ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೋಲಾರದಿಂದ ತುರಾಂಡಹಳ್ಳಿ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಮುದುವಾಡಿ ಕೆರೆಯಲ್ಲಿ ಬಿದ್ದು ಮೃತಪಟ್ಟ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್ ಸೇರಿದಂತೆ ಕಳೆದ ಒಂದು ವರ್ಷದಲ್ಲಿ ನಾಲ್ಕೈದು ಮಂದಿ ಸಾವಿಗೀಡಾಗಿದ್ದಾರೆ, ಇವರ ಸಾವಿರ ಸರ್ಕಾರ ಮತ್ತು ಪಿಡಬ್ಯೂಡಿ ಇಲಾಖೆಯ ನಿರ್ಲಕ್ಷ್ಯ ಮತ್ತು ತಾತ್ಸರವೇ ಕಾರಣವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಪಶ್ಚಿಮ ಬಂಗಾಳ| 60 ಲಕ್ಷ ಮತದಾರರ ಹೆಸರು ಅಳಿಸುವ ಯತ್ನ: ಚುನಾವಣಾ ಆಯೋಗದ ವಿರುದ್ಧ ಸಲೀಂ ಕಿಡಿ ಮುದುವಾಡಿ

ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಮಂಗಳ ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಮುದುವಾಡಿ ಕೆರೆ ಕಟ್ಟೆಯ ಮೇಲೆ ರಸ್ತೆಯ ಎರಡು ಕಡೆ ಸುಭದ್ರವಾದ ಕಬ್ಬಿಣದ ತಡೆಗೋಡೆಯನ್ನು ಪೂರ್ಣವಾಗಿ ನಿರ್ಮಿಸಬೇಕು, ಮುದುವಾಡಿ ಕೆರೆ ಕಟ್ಟೆಯ ಮೇಲಿನ ರಸ್ತೆಯನ್ನು ಅಗಲೀಕರಣ ಮಾಡಬೇಕು ಮತ್ತು ಎರಡು ಕಡೆ ಬೀದಿ ದೀಪಗಳನ್ನು ಅಳವಡಿಸಬೇಕು, ಮುದುವಾಡಿ ಕೆರೆ ಕಟ್ಟೆಯ ಮೇಲೆ ವಾಹನ ಸವಾರರಿಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು, ಮುದುವಾಡಿ ಕೆರೆ ಕೋಡಿ ಮೇಲೆ ಸೇತುವೆಯನ್ನು ನಿರ್ಮಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು.
ಸಿಮೆಂಟ್ ಪಿಲ್ಲರ್ಗಳನ್ನು ಕೇವಲ ಒಂದು ಅಡಿ ಅಳ ತೋಡಿ ನಿರ್ಮಿಸಲಾಗಿದೆ. ಕೆಲವು ಕಡೆ ಕಬ್ಬಿಣ ತಡೆ ಗೋಡೆ, ಕೆಲವು ಕಡೆ ಸಿಮೆಂಟ್ ಪಿಲ್ಲರ್ ಅಳವಡಿಸಲಾಗಿದೆ. ಅಲ್ಲದೇ ರಸ್ತೆಯ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ರಸ್ತೆಯ ತಿರುವುಗಳಲ್ಲಿ ರಸ್ತೆ ಉಬ್ಬರಗಳನ್ನು ನಿರ್ಮಿಸಬೇಕು, ಸರ್ಕಾರ ಮತ್ತು ಪಿಡಬ್ಲೂ ಇಲಾಖೆಯ ನಿರ್ಲಕ್ಷ್ಯ ಮತ್ತು ತಾತ್ಸರದಿಂದ ಮೃತಪಟ್ಟ ರೈತ ಮುಖಂಡ ಟಿ.ಎಂ.ವೆಂಕಟೇಶ್ರವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು, ರಾತ್ರಿ ವೇಳೆ ಹೈ ಭೀಮ್ ಬಳಸುವ ವಾಹನಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸರ್ಯನಾರಾಯಣ, ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಪಾತಕೋಟೆ ನವೀನ್ಕುಮಾರ್, ಮುಖಂಡರಾದ ಗಂಗಮ್ಮ, ವೆಂಕಟಪ್ಪ, ನಾರಾಯಣರೆಡ್ಡಿ, ಎನ್.ಎನ್.ಶ್ರೀರಾಮ್, ಸಿಐಟಿಯು ಮುಖಂಡರಾದ ಪಿ.ಶ್ರೀನಿವಾಸ್, ಎಂ.ವಿಜಯಕೃಷ್ಣ, ಹೆಚ್.ಬಿ.ಕೃಷ್ಣಪ್ಪ, ಎಂ.ಭೀಮರಾಜ್, ಅಪ್ಪಯ್ಯಣ್ಣ, ರಾಜ್ಯ ರೈತ ಸಂಘದ ಮುಖಂಡರಾದ ನಾರಾಯಣಗೌಡ, ಬೈಚೌಗೌಡ, ತುರಾಂಡಹಳ್ಳಿ ಗ್ರಾಮ ಮುಖಂಡರಾದ ಟಿ.ಎನ್.ರವಿ, ಟಿ.ಎಂ.ರಮೇಶ್, ನುಕ್ಕನಹಳ್ಳಿ ಶ್ರೀನಿವಾಸ್, ವಕೀಲ ವರದರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ : ಮಹಿಳಾ ದೌರ್ಜನ್ಯ – ಸವಾಲುಗಳು, ಬಿಡುಗಡೆಯ ಸಾಧ್ಯತೆಗಳು Janashakthi Media ಮುದುವಾಡಿ
