ಸರ್ಕಾರಿ ಶಾಲೆಗಳಿಗೆ ಲ್ಯಾಪ್‌ಟಾಪ್ ಪೂರೈಕೆಯಲ್ಲಿ ಅಕ್ರಮ: ಲೋಕಾಯುಕ್ತ ದಾಳಿ ವೇಳೆ ಬಯಲು

ಬೆಂಗಳೂರು: ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಲ್ಯಾಪ್‌ಟಾಪ್, ಸ್ಮಾರ್ಟ್ ಎಲ್ಇಡಿ ಬೋರ್ಡ್‌ಗಳು ಮತ್ತು ಪ್ರೊಜೆಕ್ಟರ್‌ಗಳ ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮಗಳ ಕುರಿತು ಸಾರ್ವಜನಿಕರು ಮತ್ತು ಇಲಾಖಾ ಸಿಬ್ಬಂದಿಯಿಂದ ಬಂದ ದೂರುಗಳ ಆಧಾರದ ಮೇಲೆ ಡಿಸೆಂಬರ್‌ 5ರಂದು ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

‘ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಎಲ್‌ಇಡಿ ಬೋರ್ಡ್‌, ಎಲ್‌ಇಡಿ ಪ್ರೊಜೆಕ್ಟರ್‌ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.

ಸಾರ್ವಜನಿಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಯಿಂದ ಬಂದಿದ್ದ ಹಲವು ದೂರುಗಳ ಆಧಾರದಲ್ಲಿ ಲೋಕಾಯುಕ್ತ ಸಂಸ್ಥೆಯು ಪ್ರಕರಣ ದಾಖಲಿಕೊಂಡಿತ್ತು. ತನಿಖೆಯ ಭಾಗವಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು, ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಇಬ್ಬರು ಉಪ ನಿರ್ದೇಶಕರು ಮತ್ತು 12 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿದ್ದರು.

ಇದನ್ನೂ ಓದಿ: ಸರಕಾರಿ ಶಾಲೆಗಳಿಗೆ ಟೆಲಿಸ್ಕೋಪ್‌ ವಿತರಣೆ ಯೋಜನೆ: ಎನ್.ಎಸ್. ಭೋಸರಾಜು

‘ಮಾದರಿ ಪ್ರಾಥಮಿಕ ಶಾಲೆ ಮತ್ತು ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ (ಕೆಪಿಎಸ್‌) ಲ್ಯಾಪ್‌ಟಾಪ್‌, ಸ್ಮಾರ್ಟ್‌ ಎಲ್‌ಇಡಿ ಬೋರ್ಡ್‌, ಎಲ್‌ಇಡಿ ಪ್ರೊಜೆಕ್ಟರ್‌, ಯುಪಿಎಸ್‌ ಇನ್ವರ್ಟರ್‌ ಮತ್ತು ಬ್ಯಾಟರಿಗಳ ಪೂರೈಕೆಗೆ 2025ರ ಏಪ್ರಿಲ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ಈ ಸಾಮಗ್ರಿಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗಿದೆ. ಆದರೆ ಟೆಂಡರ್‌ ದಾಖಲೆಗಳಲ್ಲಿರುವ ತಾಂತ್ರಿಕ ವಿವರಗಳಿಗೂ, ಶಾಲೆಗಳಿಗೆ ಪೂರೈಸಿರುವ ಸಾಮಗ್ರಿಗಳ ತಾಂತ್ರಿಕ ವಿವರಗಳು ಪರಸ್ಪರ ತಾಳೆಯಾಗುತ್ತಿಲ್ಲ’ ಎಂದು ಲೋಕಾಯುಕ್ತವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಶಾಲೆಗಳಿಗೆ ಪೂರೈಸಲಾಗಿರುವ ಈ ಎಲ್ಲ ಸಾಮಗ್ರಿಗಳಿಗೆ ಪಾವತಿ ಮಾಡಲಾಗಿರುವ ಮೊತ್ತ ಮತ್ತು ಅದೇ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಈಗಿರುವ ಬೆಲೆಯನ್ನು ಪರಿಶೀಲಿಸಲಾಯಿತು. ಪ್ರತಿ ಲ್ಯಾಪ್‌ಟಾಪ್‌ಗೆ ಮಾರುಕಟ್ಟೆ ದರಕ್ಕಿಂತ ₹10,000, ಯುಪಿಎಸ್‌ ಸಿಸ್ಟಂಗೆ ₹30,000–₹40,000, ಎಲ್‌ಇಡಿ ಸ್ಮಾರ್ಟ್‌ ಟಿ.ವಿಗೆ ₹15,000 ಹೆಚ್ಚು ಪಾವತಿ ಮಾಡಲಾಗಿದೆ. ಬೆಂಗಳೂರು ಉತ್ತರ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ 1,438 ಶಾಲೆಗಳಿವೆ’ ಎಂದು ವಿವರಿಸಿದೆ.

ಶಾಲಾ-ಕಾಲೇಜು ಆವರಣದಲ್ಲಿಯೇ ಬಾರ್‌

ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇರುವ ಸ್ಥಳದಲ್ಲಿಯೇ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನರ್ಸರಿಯಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಾಲೆಯೂ ಇದೆ. 50 ಮೀಟರ್‌ ವ್ಯಾಪ್ತಿಯಲ್ಲಿತಂಬಾಕು ಮಾರಾಟ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಸುವಂತಿಲ್ಲ. ಆದರೆ, ಈ ನಿಯಮ ಉಲ್ಲಂಘಿಘಿಸಿ 50 ಮೀಟರ್‌ ಒಳಗಡೆಯೇ ಕಿರಣ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಯುತ್ತಿದೆ. ಇದನ್ನು ತೆರವುಗೊಳಿಸಲು ಬಿಇಒ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ ಲೋಕಾಯುಕ್ತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

 

ಇದನ್ನೂ ನೋಡಿ: ಬೆಂಗಳೂರು | ಟನಲ್‌ ಟ್ರಬಲ್‌ !!? ಕಾತ್ಯಾಯಿನಿ ಚಾಮರಾಜ್ ಜೊತೆ ಕೆ.ಎಸ್. ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *