ಕವನ – ಹುರುಕಡ್ಲಿ ಶಿವಕುಮಾರ
ಸಂಪುಟ 9 ಸಂಚಿಕೆ 22 – 31 ಮೇ 2015
ಅವ್ವಾ . . . ತಾಯೀ . . .
ಭಾರತ ಮಾತೇ . . .
ಎಂಥ ದುರ್ದೈವವೇ ತಾಯೀ
ನಿನ್ನದೆಂಥ ದುರ್ದೈವ ?!
ನದಿವನಗಳ ನಾಡೇ . . .
ರಸಋಷಿಗಳ ಬೀಡೇ . . .
ಎಂದೇ ಹಾಡುತ್ತಾ ಬಂದೆವು ತಾಯೀ
ನಾವು ಹಾಡುತ್ತಲೇ ಬಂದೆವು.
ಇಂದು ನದಿಯೂ ಇಲ್ಲ
ವನಾಂತರವೂ ಇಲ್ಲ
ಬರೀ ತೋಳಗಳೇ ತಾಯೀ
ಬರೀ ತೋಳಗಳೇ ಎಲ್ಲೆಲ್ಲಾ !
ಧರ್ಮಾಚಾರಿಗಳೆಲ್ಲ ಕೇಕೆ ಹಾಕಿ
ಯಕ್ಷಗಾನದ ರಕ್ಕಸರಂತೆ
ಕುಣಿಯುತ್ತಿದ್ದಾರಲ್ಲಾ ತಾಯೀ
ಕುಣಿಯುತ್ತಲೇ ಇದ್ದಾರೆ !
ಎಂಥ ಮತಿಯೇ? ತಾಯೀ
ಇದೆಂಥ ಮತಿಯೇ ?
ಕುಡಿಯಲು ನೀರಿಲ್ಲ
ಓದಲು ಶಾಲೆಯೂ ಇಲ್ಲ
ಅಪಾಪೋಲಿಗಳೆಲ್ಲ ಗದ್ದುಗೆ ಏರಿ
ನೀನ್ಯಾರವನು ? ನೀನೆಲ್ಲಿಯವನು ?
ತಗೀ . . . ಪೈಸಾ . . . !
ಎಂದೇ ಕೇಳುತ್ತರಲ್ಲಾ ತಾಯೀ
ಕೈಹಿಡಿದು ಕೇಳುತ್ತಲೇ ಇದ್ದಾರೆ !
ಎಂಥ ಗತಿಯೇ ತಾಯೀ
ಇದೆಂಥ ಗತಿಯೇ ?
ಇತ್ತ ರೈತನನ್ನೂ ನೇಣಿಗೆಹಾಕಿ
ಅತ್ತ ಕಾರ್ಮಿಕನನ್ನೂ ಹೊರಹಾಕಿ
ಬರೀ ಹೇಕರಿಸುತ್ತಾರಲ್ಲ ತಾಯೀ
ಬರೀ ಹೇಕರಿಸುತ್ತಾರಲ್ಲ !
ಅವ್ವಾ . . . ತಾಯೀ . . .
ಭಾರತ ಮಾತೇ . . .
ಏನೆಂದು ಹಾಡಲೇ . . . ನಿನ್ನ ಹಾಡ ? !
ಹೇಗೆಂದು ಹಾಡಲೇ . . . ನನ್ನ ಹಾಡ ? !