ಬೆಂಗಳೂರು : ಜನಗಳಿಂದಲೇ ವಸೂಲಿ ಮಾಡುವ ಜಿಎಸ್‍ಟಿ ತೆರಿಗೆಯನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ವಸೂಲಿ ಮಾಡಿ ಅದನ್ನು ‘ದೀಪಾವಳಿ’ ಉಡುಗೊರೆ ಎನ್ನುವುದು ಪಾಳೆಯಗಾರೀ ಮನೋಭಾವದ ದ್ಯೋತಕ ಎಂದು ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಈ ಮೊದಲೇ ವರ್ಣಿಸಿದ್ದರು. ಈಗ ಅದನ್ನು ದೀಪಾವಳಿಯ ಮೊದಲೇ, ಸಪ್ಟಂಬರ್ 22ರಿಂದಲೇ ಜಾರಿಗೆ ತರಲಾಗುವುದಂತೆ! ಏಕಿರಬಹುದು?
ಸಪ್ಟಂಬರ್ 3 ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆ ಜಿಎಸ್‌ಟಿ ದರಗಳಲ್ಲಿ ಇದ್ದ 5, 12, 18 ಮತ್ತು 28 ಶೇ. ತೆರಿಗೆಯ ನಾಲ್ಕು ಶ್ರೇಣಿ(ಸ್ಲಾöಬ್)ಗಳನ್ನು 5 ಮತ್ತು 18 ಶೇ. ಎಂಬ ಎರಡು ಶ್ರೇಣಿಗಳಿಗೆ ಇಳಿಸುವ, ಅಲ್ಲದೆ ಕೆಲವು ವಿಲಾಸಿ ಸರಕುಗಳಿಗೆ 40ಶೇ. ತೆರಿಗೆಯ ಇನ್ನೊಂದು ಶ್ರೇಣಿಯನ್ನು ನಿರ್ಮಿಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಂಡಿತು. ವೈಯಕ್ತಿಕ ವಿಮೆ ಮುಂತಾದ ಸರಕುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ತೆಗೆಯಲಾಗಿದೆ. ಅಲ್ಲಿ, ವಾಷಿಂಗ್ಟನ್‌ನಲ್ಲಿ ಭಾರತದ ಮೇಲೆ ವಿಶೇಷವಾಗಿ 50% ಸುಂಕವನ್ನು ಹೇರಿದ ಬೆನ್ನಲ್ಲೇ ಈ ಜಿಎಸ್‌ಟಿ ದರ ಕಡಿತ ಬಂದಿದೆ ಎಂಬುದು ಕೇವಲ ಕಾಕತಾಳೀಯ ಎನ್ನಲಾಗಿದೆ. ಏಕೆಂದರೆ ಆ ಸುಂಕದ ಭಾರ ಇಡೀ ಆರ್ಥವ್ಯವಸ್ಥೆಯ ಮೇಲೆ, ಆಮೂಲಕ ಹೆಚ್ಚಾಗಿ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ ಎಂಬ ಭೀತಿಯನ್ನು ತಗ್ಗಿಸಲು ಈ ಕಡಿತಗಳನ್ನು ಮಾಡಲಾಗಿದೆ ಎಂದೂ ಇದನ್ನು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಅದಕ್ಕೂ ಇದಕ್ಕೂ ಏನೇನೂ ಸಂಬಂಧವಿಲ್ಲ ಎಂದು ಹಣಕಾಸು ಮಂತ್ರಿಗಳು ಹೇಳಿದ್ದಾರೆ. ಇದು ಜನಸಾಮಾನ್ಯರ ಒಳಿತಿಗಾಗಿ ಸರಕಾರ ರೂಪಿಸಿರುವ ಇನ್ನಷ್ಟು ಕ್ರಮಗಳು, ಈ ಬಗ್ಗೆ ಸರಕಾರ ಆಗಲೇ ಯೋಚಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ವಿಡಿಯೋ ಚಿತ್ರೀಕರಣ ನಿಷೇಧ; ಉಲ್ಲಂಘಿಸಿದರೆ ಕಠಿಣ ಕ್ರಮ
ಸ್ವತಃ ಜಿಎಸ್‌ಟಿ ಬಗ್ಗೆಯೇ ಅಲ್ಲದೆ, ಅದರ ದರಶ್ರೇಣಿಗಳ ಬಗ್ಗೆಯೂ ವಿರೋಧ, ಟೀಕೆ-ಟಿಪ್ಪಣಿಗಳು ಈ ತೆರಿಗೆ ವ್ಯವಸ್ಥೆಯ ಆರಂಭದಿಂದಲೇ ಬರುತ್ತಿವೆ, ಉದಾ: ವೈಯಕ್ತಿಕ ವಿಮೆಯ ಮೇಲೆಯೂ ಜಿಎಸ್‌ಟಿ ತೆರಿಗೆಯನ್ನು ಹೇರಿದ್ದಕ್ಕೆ ವಿರೋಧ, ಅದನ್ನು ಸಂಪೂರ್ಣವಾಗಿ ತೆಗೆಯಬೇಕೆಂಬ ಆಗ್ರಹ. ಅಲ್ಲದೆ ಇದುವರೆಗೆ ಇದ್ದ ಜಿಎಸ್‍ಟಿ ದರಗಳು ಜಗತ್ತಿನಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿತ್ತು. ಹೀಗಿರುವಾಗ, ಜಿಎಸ್‌ಟಿ ತೆರಿಗೆಗಳ ಇಳಿಕೆ ಜನಗಳಿಗೆ ಪ್ರಯೋಜನಕರ ಎಂದು ಈಗಷ್ಟೇ ಸರಕಾರದ ಅರಿವಿಗೆ ಬಂದಿದೆಯೇ ಎಂಬ ಪ್ರಶ್ನೆಯನ್ನು ಸಹಜವಾಗಿಯೇ ಕೇಳಲಾಗುತ್ತಿದೆ. ಜಿಎಸ್‌ಟಿ ಎಂಬುದು ಒಂದು ಪರೋಕ್ಷ ತೆರಿಗೆ, ಆದಾಯ ಅಥವ ಸಂಪತ್ತಿನ ಮೇಲಿನ ತೆರಿಗೆಯಂತಲ್ಲದೆ, ಸರಕುಗಳನ್ನು, ಸೇವೆಗಳನ್ನು ಬಳಸಿದ್ದಕ್ಕೆ ಬಡವ-ಶ್ರೀಮಂತರೆನ್ನದೆ ಎಲ್ಲರೂ ಒಂದೇ ಪ್ರಮಾಣದಲ್ಲಿ ತೆರಬೇಕಾದ ತೆರಿಗೆ. ಈ ಪರೋಕ್ಷ ತೆರಿಗೆಗಳನ್ನು ದುಡಿಯುವ ಜನಗಳ ಮೇಲೆಯೇ ದಾಟಿಸಲಾಗುತ್ತದೆ ಎನ್ನುತ್ತಾರೆ ಅರ್ಥಶಾಸ್ತçಜ್ಞರಾದ ಪ್ರೊ. ಸಿ.ಶರತ್ಚಂದ್ರ ಮತ್ತು ಶಿರಿನ್ ಅಖ್ತರ್ (ನ್ಯೂಸ್‌ಕ್ಲಿಕ್, ಸೆ.9).

ಅಂದ ಹಾಗೆ ಒಟ್ಟು ತೆರಿಗೆಗಳಲ್ಲಿ ಪರೋಕ್ಷ ತೆರಿಗೆಗಳ ಪಾಲು ಹೆಚ್ಚುತ್ತಲೇ ಇದೆ, 2013-14ರಲ್ಲಿ ಸುಮಾರು 60% ಇದ್ದದ್ದು, 2021-22ರಲ್ಲಿ 65.8%ಕ್ಕೇರಿದೆ(ಟ್ಯಾಕ್ಸೇಷನ್ ರಿಪೋರ್ಟ್ ಕಾರ್ಡ್,fanindia.net); ಅದೇ ವೇಳೆಯಲ್ಲಿ ಕಾರ್ಪೊರೇಟ್ ತೆರಿಗೆಯ ಪ್ರಮಾಣ 35%ದಿಂದ 27%ಕ್ಕೆ ಇಳಿದಿರುವುದು, 2015ರಲ್ಲಿ ಸಂಪತ್ತು ತೆರಿಗೆಯನ್ನು ರದ್ದು ಮಾಡಿದ್ದು ಯಾರ ಒಳಿತಿಗಾಗಿ ಎಂಬ ಪ್ರಶ್ನೆಯನ್ನು ಬಹಳ ದಿನಗಳಿಂದ ಕೇಳಲಾಗುತ್ತಿದೆ. ಈ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು ‘ತರ್ಕಬದ್ಧ’ಗೊಳಿಸುವ ಪ್ರಸ್ತಾಪಗಳನ್ನು ಏಕಪಕ್ಷೀಯವಾಗಿ ಮಂಡಿಸಿದ್ದರೂ, ಎಲ್ಲ ರಾಜ್ಯಗಳು ಅದರ ಪರವಾಗಿ ನಿಲುವು ತೆಗೆದುಕೊಂಡವು. ಆದಾಗ್ಯೂ, ಇದರಿಂದ ರಾಜ್ಯಗಳಿಗೆ ಉಂಟಾಗುವ ಆದಾಯ ನಷ್ಟಕ್ಕೆ ಪರಿಹಾರವನ್ನು ಖಚಿತಪಡಿಸುವುದು ಸೇರಿದಂತೆ ಕೆಲವು ಬೇಡಿಕೆಗಳನ್ನು ರಾಜ್ಯಗಳು ಇಟ್ಟರೂ, ಅವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಲಾಯಿತು ಎನ್ನುತ್ತಾರೆ ಕೇರಳ ಸರಕಾರದ ಹಣಕಾಸು ಮಂತ್ರಿ ಕೆ.ಎನ್.ಬಾಲಗೋಪಾಲನ್.
ಪ್ರಸ್ತುತ ದರ ಕಡಿತವು ರಾಜ್ಯಗಳ ತೆರಿಗೆ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಆಳ್ವಿಕೆಯ ರಾಜ್ಯಗಳೂ ಸೇರಿದಂತೆ ಎಲ್ಲಾ ರಾಜ್ಯಗಳು ಒಪ್ಪಿಕೊಳ್ಳುತ್ತವೆ. ಕೇರಳಕ್ಕೆ ವಾರ್ಷಿಕವಾಗಿ ಸುಮಾರು 8,000 ಕೋಟಿ ರೂ.ಗಳಿಂದ 10,000 ಕೋಟಿ ರೂ.ಗಳವರೆಗೆ ವಾರ್ಷಿಕ ನಷ್ಟವಾಗುತ್ತದೆ ಎನ್ನುತ್ತಾರೆ ಬಾಲಗೋಪಾಲನ್.
ಜಿಎಸ್‌ಟಿ ಅನುಷ್ಠಾನಕ್ಕೆ ಕೊಟ್ಟಿದ್ದ ಸಮರ್ಥನೆಯೆಂದರೆ ಅದು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಬಳಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಆದಾಯ ಹೆಚ್ಚಾಗುತ್ತದೆ ಎಂದು. ಅದು ನಿಜವಾಗಲಿಲ್ಲ. ಆದರೆ ಒಟ್ಟಾರೆಯಾಗಿ ಜಿಎಸ್‌ಟಿ ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟವಾಗಿದೆ ಎಂಬುದು ಅಂಕಿಅಂಶಗಳಲ್ಲಿ ಸ್ಪಷ್ಟವಾಗಿದೆ. ಹೌದು, ಒಟ್ಟು ತೆರಿಗೆ ಆದಾಯದಲ್ಲಿ ಜಿಎಸ್‍ಟಿಯ ಪಾಲು 2018ರಲ್ಲಿ ಸುಮಾರು 20% ಇದ್ದದ್ದು 2024ರಲ್ಲಿ ಸುಮಾರು 25%ಕ್ಕೇರಿತು. ಆದರೆ 2005-06ರಿಂದ 2015-16 ರ ಅವಧಿಯಲ್ಲಿ, ಅಂದರೆ ಜಿಎಸ್‍ಟಿ ಯನ್ನು ಆರಂಭಿಸುವ ಹಿಂದಿನ ಒಂದು ದಶಕದಲ್ಲಿ ಸರಾಸರಿಯಾಗಿ ಎಲ್ಲ ರಾಜ್ಯಗಳ ಬಜೆಟುಗಳು ಒಟ್ಟಾಗಿ ರೆವಿನ್ಯೂ ಹೆಚ್ಚುವರಿಯನ್ನು ತೋರಿಸಿದ್ದರೆ, ನಂತರ 2017ರಲ್ಲಿ ಜಿಎಸ್‍ಟಿ ಆರಂಭವಾದ ನಂತರದ ಅವಧಿಯಲ್ಲಿ ಎಲ್ಲ ರಾಜ್ಯ ಬಜೆಟ್‍ಗ:ಳ ಸರಾಸರಿ ಜಿಡಿಪಿಯ 0.6%ದಷ್ಟು ರೆವಿನ್ಯೂ ಕೊರತೆಯನ್ನು ತೋರಿಸಿವೆ. (ಟ್ಯಾಕ್ಸೇಷನ್ ರಿಪೋರ್ಟ್ ಕಾರ್ಡ್,fanindia.net)
ಕಳೆದ ವರ್ಷ ಕೇರಳ ಅನುಭವಿಸಿದ ಆದಾಯ ನಷ್ಟ 32,773 ಕೋಟಿ ರೂ. ಈಗ ಅದು ಇನ್ನಷ್ಟು ಹೆಚ್ಚುತ್ತದೆ. ಪ್ರಸ್ತುತ ತೆರಿಗೆ ದರ ಕಡಿತವು ಜಾರಿಗೆ ಬಂದಾಗ, ಎಲ್ಲ ರಾಜ್ಯಗಳ ಆದಾಯವು ಮತ್ತಷ್ಟು ಕುಸಿಯುತ್ತದೆ. 2022 ರವರೆಗೆ ಪರಿಹಾರದ ಮೂಲಕ ಆದಾಯ ನಷ್ಟವನ್ನು ಭರಿಸಲಾಗಿತ್ತು. ಈಗ ಪರಿಹಾರ ವ್ಯವಸ್ಥೆಯ ಅವಧಿ ಮೀರಿರುವುದರಿಂದ ಕೇರಳ ಮತ್ತಷ್ಟು ಆರ್ಥಿಕ ಅಸಮತೋಲನದತ್ತ ಸಾಗುತ್ತಿದೆ. ಅಲ್ಲದೆ ಯಾವ ಪ್ರಯೋಜನಗಳನ್ನು ಒದಗಿಸುವ ಭರವಸೆಯೊಂದಿಗೆ ರಾಜ್ಯಗಳು ಗಮನಾರ್ಹ ತೆರಿಗೆ ಅಧಿಕಾರಗಳನ್ನು ಬಿಟ್ಟುಕೊಟ್ಟು ಜಿಎಸ್‌ಟಿ ಯನ್ನು ಒಪ್ಪಿಕೊಂಡವೋ ಅವುಗಳಲ್ಲಿ ಹಲವು ಎಂಟು ವರ್ಷಗಳ ನಂತರವೂ ಈಡೇರಿಲ್ಲ ಎಂದು ಬಾಲಗೋಪಾಲನ್ ಹೇಳುತ್ತಾರೆ.
ರಾಜ್ಯಗಳು ಮತ್ತು ಕೇಂದ್ರ ಖಜಾನೆಯ ಹಣಕಾಸಿನ ಮೇಲೆ ದರ ಬದಲಾವಣೆಯ ಪರಿಣಾಮದ ಬಗ್ಗೆ ಸ್ಪಷ್ಟತೆಯ ಕೊರತೆಯೂ ಇದೆ, ಇದು ಕೂಡ ಕಳವಳಕಾರಿ ಎಂದು ಅವರು ಹೇಳುತ್ತಾರೆ. ಇದು ಬೇರೆಲ್ಲಾ ರಾಜ್ಯಗಳಿಗೂ ಅನ್ವಯಿಸುವ ಸಂಗತಿ. ಆದ್ದರಿಂದ, ಈ ಜಿಎಸ್‌ಟಿ ‘ಸುಧಾರಣೆಗಳು’ ಕೆಲವು ಸರಕುಗಳ ಬೆಲೆಗಳನ್ನು ಇಳಿಸಬಹುದಾದರೂ, ವಿಶೇಷವಾಗಿ ರಾಜ್ಯ ಸರಕಾರಗಳ ಹಣಕಾಸಿನ ಮೇಲೆ ಪರಿಣಾಮ ಬೀರುತ್ತವೆ. ರಾಜ್ಯಗಳಿಗೆ ನಷ್ಟಗಳನ್ನು ಭರ್ತಿ ಮಾಡುವ ಸ್ಪಷ್ಟ ವ್ಯವಸ್ಥೆಗಳಿಲ್ಲದಿದ್ದರೆ ಇಂತಹ ನೀತಿ ಬದಲಾವಣೆಗಳು ಹೆಚ್ಚುವರಿ ಹಣಕಾಸು ಸೆಳೆತಗಳನ್ನು ಉಂಟು ಮಾಡಬಹುದು ಎಂದು ತಜ್ಞರೂ ಹೇಳುತ್ತಾರೆ(ಅನಿಲ್ ವರ್ಗಿಸ್, ನ್ಯೂಸ್‌ಕ್ಲಿಕ್, ಸ.8). ಇದರ ದುಷ್ಪರಿಣಾಮಗಳನ್ನು ಅನುಭವಿಸಬೇಕಾದವರು ಜನಸಾಮಾನ್ಯರೇ.
ಈ ‘ಸುಧಾರಣೆಗಳು’ ನಿಜವಾಗಿಯೂ ಗ್ರಾಹಕರಿಗೆ ಬೆಲೆ ಇಳಿಕೆಯನ್ನು ತರುತ್ತದೆಯೇ ಎಂಬ ಪ್ರಶ್ನೆಯನ್ನು ಜಿಎಸ್‌ಟಿ ಮಂಡಳಿಯಲ್ಲಿಯೂ ಎತ್ತಲಾಯಿತು ಎಂದು ವರದಿಯಾಗಿದೆ. ಹಿಂದಿನ ಅನುಭವವನ್ನು ನೋಡುವುದಾದರೆ, ಜಿಎಸ್‌ಟಿ ದರಗಳಲ್ಲಿ ಇಳಿಕೆಗೆ ಅನುಗುಣವಾಗಿ ಸರಕುಗಳ ಬೆಲೆಗಳು ಇಳಿಕೆಯಾಗುವುದಿಲ್ಲ.
2018ರಲ್ಲಿ ನಂತರ ಬರಲಿದ್ದ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ತೆರಿಗೆ ಶ್ರೇಣಿಗಳನ್ನು ಬದಲಿಸದಿದ್ದರೂ ಕೆಲವು ಸರಕುಗಳ ಮೇಲೆ ತೆರಿಗೆ ದರಗಳನ್ನು ಇಳಿಸಲಾಯಿತು. ಆದರೆ ಅದರ ಪ್ರಯೋಜನವನ್ನು ಕಂಪನಿಗಳು ತಾವೇ ಇಟ್ಟುಕೊಂಡವು. ಕೇರಳ ಜಿಎಸ್‌ಟಿ ಇಲಾಖೆ ನಡೆಸಿದ 25 ಪ್ರಮುಖ ಕಂಪನಿಗಳ ಒಂದು ಅಧ್ಯಯನದಲ್ಲಿ ಯಾವ ಕಂಪನಿಯೂ ಜಿಎಸ್‌ಟಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ಒದಗಿಸಲಿಲ್ಲ ಎಂದು ಸ್ಪಷ್ಟವಾಗಿ ಕಂಡಿತು ಎಂದು ಆಗ ಕೇರಳದ ಹಣಕಾಸು ಮಂತ್ರಿಗಳಾಗಿದ್ದ ಪ್ರೊ. ಥಾಮಸ್ ಐಸಾಕ್ ಹೇಳುತ್ತಾರೆ.
450 ಕ್ಕೂ ಹೆಚ್ಚು ವಸ್ತುಗಳನ್ನು ಒಳಗೊಂಡ ಪ್ರಸ್ತುತ ದರ ಬದಲಾವಣೆ ಪ್ರಸ್ತಾವನೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಬಲವಾದ ಕ್ರಮಗಳನ್ನು ವಿಧಿಸಬೇಕಾಗಿತ್ತು. ಆದರೆ ಅಂತಹ ಪ್ರಶ್ನೆಗಳನ್ನು ನಿಭಾಯಿಸಲು ಯಾವುದೇ ಕಾರ್ಯವಿಧಾನವಿಲ್ಲ ಎಂದು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಗಮನ ಸೆಳೆಯಲಾಯಿತು. ಇದನ್ನು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಹುತೇಕ ಎಲ್ಲಾ ರಾಜ್ಯಗಳು ಕೇಳಿದ್ದವು. ಆದರೆ ಈ ಕುರಿತ ಯಾವುದೇ ಪ್ರಸ್ತಾಪವನ್ನು ಮಂಡಳಿಯ ಮುಂದೆ ಕೇಂದ್ರ ಸರಕಾರ ಇಡಲಿಲ್ಲ ಎಂದು ಕೇರಳದ ಪ್ರಸಕ್ತ ಹಣಕಾಸು ಮಂತ್ರಿ ಬಾಲಗೋಪಾಲನ್ ಹೇಳುತ್ತಾರೆ.
ಉದಾ: ಸಿಮೆಂಟ್ ಮೇಲಿನ ಪ್ರಸ್ತುತ ಶೇ. 28 ತೆರಿಗೆ 18 ಕ್ಕೆ ಇಳಿದಾಗ, ಒಂದು ಚೀಲ ಸಿಮೆಂಟ್ ಬೆಲೆಯನ್ನು 30 ರೂ.ಗಳಷ್ಟು ಕಡಿಮೆ ಮಾಡಬೇಕು. ಆದರೆ, ಇದನ್ನು ಅರ್ಥಮಾಡಿಕೊಂಡ ಸಿಮೆಂಟ್ ಕಂಪನಿಗಳು ಈಗಾಗಲೇ ಬೆಲೆಯನ್ನು 30 ರಿಂದ 35 ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿವೆ. ವಿಮಾ ಪ್ರೀಮಿಯಂ ಮೇಲಿನ ತೆರಿಗೆ ವಿನಾಯಿತಿಯ ಪ್ರಯೋಜನವು ವಿಮೆದಾರರನ್ನು ತಲುಪುತ್ತದೆಯೇ ಎಂದು ಸ್ವತಃ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಅನುಮಾನ ವ್ಯಕ್ತಪಡಿಸಿದೆ. ವಾಸ್ತವವಾಗಿ, ಸಾಮಾನ್ಯ ಜನರಿಗೆ ತೆರಿಗೆ ಕಡಿತದ ಪ್ರಯೋಜನ ಸಿಗದಿದ್ದರೆ, ಕಂಪನಿಗಳು ಅದರ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳುತ್ತಾರೆ.
ಅರ್ಥಶಾಸ್ತçಜ್ಞರಾದ ಪ್ರೊ. ಸಿ.ಶರತ್ಚಂದ್ರ ಮತ್ತು ಶಿರಿನ್ ಅಖ್ತರ್(ನ್ಯೂಸ್‌ಕ್ಲಿಕ್, ಸೆ.9) ಕೂಡ ವಿಶೇಷವಾಗಿ ದೊಡ್ಡ ಕಂಪನಿಗಳು ಇಂತಹ ತೆರಿಗೆ ಇಳಿಕೆಗಳನ್ನು ತಮ್ಮ ಲಾಭದ ಅಂತರವನ್ನು ಹೆಚ್ಚಿಸಿಕೊಳ್ಳಲು ಬಳಸುವ ಸಾಧ್ಯತೆ ಇದೆ ಎನ್ನುತ್ತಾರೆ. ಭಾರತ ಸರಕಾರಕ್ಕೇ ಗುತ್ತೇದಾರಿ ಬಂಡವಾಳಿಗರ ಬಗ್ಗೆ ಮೃದು ಧೋರಣೆಯಿರುವಾಗ ಅದು ಅವರ ಲಾಭಕೋರತನದ ವಿರುದ್ಧದ ನೀತಿಯನ್ನು ಅನುಷ್ಠಾನಗೊಳಿಸುತ್ತದೆ ಎಂಬ ಮಾತಿಗೆ ಹೆಚ್ಚೇನೂ ಮಹತ್ವವಿರಲಾರದು. ಹೀಗೆ “ಅಗ್ಗದ ಸರಕುಗಳು’ ಎಂಬ ಹಬ್ಬದ ಹಿಗ್ಗು ಪ್ರಸಕ್ತ ಆಳುವ ಪಕ್ಷದ ಈಗ ಚಿರಪರಿಚಿತ ರಾಜಕೀಯ ದೊಂಬರಾಟದ ವಸ್ತುವಾಗಬಹುದು ಎಂದು ಅವರು ಟಿಪ್ಪಣಿ ಮಾಡಿದ್ದಾರೆ.
2023-24ರ ವಿವರವಾದ ಜಿಎಸ್‌ಟಿ ದತ್ತಾಂಶಗಳ ಆಧಾರದಲ್ಲಿ ಹಣಕಾಸು ಸಚಿವಾಲಯದ ರೆವಿನ್ಯೂ ಕಾರ್ಯದರ್ಶಿಗಳು ಜಿಎಸ್‌ಟಿ ಮಂಡಳಿಯ ಈ ನಿರ್ಧಾರದಿಂದ 48,000 ಕೋಟಿ ರೂ.ಗಳ ರೆವಿನ್ಯೂ ಇಳಿಕೆಯಾಗುತ್ತದೆ ಎಂದಿರುವುದಾಗಿ ವರದಿಯಾಗಿದೆ. ಆದರೆ ಈ ಸರಕಾರ ಎಫ್‌ಆರ್‌ಬಿಎಂ ಕಾಯ್ದೆ ಅಂದರೆ ಹಣಕಾಸು ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದೆಯಾದ್ದರಿಂದ ವಿತ್ತೀಯ ಕೊರತೆ ಇದರಿಂದಾಗಿ ಹೆಚ್ಚದಂತೆ ಮಾಡಲು ಸಾರ್ವಜನಿಕ ವೆಚ್ಚಗಳನ್ನು ಕಡಿತ ಮಾಡುವ ಮಾರ್ಗವನ್ನೇ ಅನುಸರಿಸಬೇಕಾಗುತ್ತದೆ. ಇದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಕಡಿಮೆಯಾಗಿಸಿ ಉತ್ಪನ್ನ ಮತ್ತು ಉದ್ಯೋಗ ನಿರ್ಮಾಣ ಎರಡನ್ನೂ ನಿಧಾನಗೊಳಿಸುವ ಕ್ರಮ. ಅಂದರೆ ಈ ದರಕಡಿತದ ಪ್ರಯೋಜನ ಜನಸಾಮಾನ್ಯರಿಗೆ ಲಭ್ಯವಾಗದಂತಾಗುತ್ತದೆ ಎಂದು ಅರ್ಥಶಾಸ್ತçಜ್ಞರು ಹೇಳುತ್ತಾರೆ (ನ್ಯೂಸ್‌ಕ್ಲಿಕ್, ಸೆÀ.9).
ಇನ್ನೊಂದು ಕಡೆ, ಈ ಕ್ರಮ ಟ್ರಂಪ್ ಸುಂಕ ಭಯೋತ್ಪಾದನೆಯನ್ನು ಎದುರಿಸುವ ಸಾಧನವೂ ಆಗಲಾರದು. ಏಕೆಂದರೆ ಟ್ರಂಪ್ ಸುಂಕಗಳಿAದ ರಫ್ತುಮಾರುಕಟ್ಟೆಯಲ್ಲಿ ಆಗಬಹುದಾದ ಇಳಿಕೆ 4.4ಲಕ್ಷ ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. 48,000 ಕೋಟಿ ರೂ.ಗಳಷ್ಟು ಮೊತ್ತದ ಜಿಎಸ್‌ಟಿ ದರಗಳ ಇಳಿಕೆ ಇಷ್ಟೊಂದು ಪ್ರಮಾಣದಲ್ಲಿ ನಮ್ಮ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಹಿರಿಯ ಅರ್ಥಶಾಸ್ತçಜ್ಞ ಪ್ರೊ. ಅರುಣ್ ಕುಮಾರ್ ( ದಿ ವೈರ್, ಸೆ.7).
145 ಕೋಟಿ ಭಾರತೀಯರು ಉಂಟುಮಾಡಬಹುದಾದ ಆಂತರಿಕ ಬೇಡಿಕೆಯ ಹೆಚ್ಚಳಕ್ಕೆ ಉತ್ತೇಜನೆ ನೀಡುವುದು ಒಳ್ಳೆಯ ವಿಚಾರವೇ, ಆದರೆ ಸರಕಾರದ ಕ್ರಮಗಳು ಅದನ್ನು ಸಾಧಿಸುವ ರೀತಿಯಲ್ಲಿ ಇಲ್ಲ ಎನ್ನುತ್ತಾರೆ ಅವರು. ಆರಂಭದಿಂದಲೇ, ಜಿಎಸ್‌ಟಿಯನ್ನು ರಾಜ್ಯಗಳ ಮೇಲೆ ಒಂದು ರಾಜಿ ಸೂತ್ರವಾಗಿ ಹೇರಲಾಗಿತ್ತು. ‘ಸಹಕಾರಿ ಒಕ್ಕೂಟತತ್ವ’ದ ಭರವಸೆ ಬಹುಬೇಗನೇ ಹಣಕಾಸು ಕೇಂದ್ರೀಕರಣವಾಗಿ ಹ್ರಾಸಗೊಂಡಿತು ಎಂದು ಪ್ರೊ. ಥಾಮಸ್ ಐಸಾಕ್ ಹೇಳುತ್ತಾರೆ(ದೇಶಾಭಿಮಾನಿ, ಸ.4) ಪ್ರಸಕ್ತ ಸುತ್ತಿನ ದರ ಕಡಿತಗಳು ರಾಜ್ಯಗಳ ಆದಾಯಗಳನ್ನು ಮತ್ತಷ್ಟು ಕಸಿದುಕೊಳ್ಳುತ್ತವೆ, ಇದು ಶಿಕ್ಷಣ, ಆರೋಗ್ಯಪಾಲನೆ ಮತ್ತು ಕಲ್ಯಾಣ ಕ್ರಮಗಳಂತಹ ಅಗತ್ಯ ಸೇವೆಗಳಿಗೆ ಹಣ ಒದಗಿಸುವ ಕೇರಳದಂತಹ ರಾಜ್ಯಗಳ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದು ಅವರು ಹೇಳುತ್ತಾರೆ.
ಸಾರ್ವಜನಿಕ ಕಲ್ಯಾಣಕ್ಕೆ ಹಣ ವೆಚ್ಚ ಮಾಡದ ಬಿಜೆಪಿ ಆಳ್ವಿಕೆಯ ರಾಜ್ಯಗಳ ಮೇಲೆ ಇದೇನೂ ಪರಿಣಾಮ ಬೀರದಿರಬಹದು. ಆದರೆ ಸಾಮಾಜಿಕ ನ್ಯಾಯದ ಸಂವಿಧಾನಿಕ ಕರ್ತವ್ಯವನ್ನು ಪಾಲಿಸಲು ಬದ್ಧರಾಗಿರುವ ರಾಜ್ಯಗಳಿಗೆ ಇದೊಂದು ಸಾವಿನ ಗಂಟೆ. ಇಷ್ಟೇ ಅಲ್ಲ, ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಇದನ್ನು ಪ್ರಕಟಿಸಿರುವುದು ಇನ್ನಷ್ಟು ಕಳವಳಕಾರಿ. ಏಕೆಂದರೆ ಈ ಮೂಲಕ ಒಂದು ಸಾಂವಿಧಾನಿಕ ವೇದಿಕೆಯಾದ ಜಿಎಸ್‌ಟಿ ಮಂಡಳಿಯನ್ನು ಒಂದು ರಾಜಕೀಯ ಪ್ರದರ್ಶನಕ್ಕಾಗಿ ಬದಿಗೊತ್ತಲಾಗಿದೆ. ಮೋದಿಯವರು ತೆರಿಗೆ ಕಡಿತವನ್ನು ಪ್ರಕಟಿಸಿದ್ದಷ್ಟೇ ಅಲ್ಲ, ಇನ್ನು ಮುಂದೆ ರಾಜ್ಯಗಳು ಇರುವುದಿಲ್ಲ ಎಂದೂ ಘೋಷಿಸಿದಂತಾಗಿದೆ ಎನ್ನುತ್ತಾರೆ ಪ್ರೊ. ಐಸಾಕ್. ಜನಗಳಿಂದ ವಸೂಲಿ ಮಾಡುವ ಹಣವನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ವಸೂಲಿ ಮಾಡಿ ಅದನ್ನು ‘ದೀಪಾವಳಿ’ ಉಡುಗೊರೆ ಎನ್ನುವುದು ಪಾಳೆಯಗಾರೀ ಮನೋಭಾವದ ದ್ಯೋತಕ ಎಂದು ಇನ್ನೊಬ್ಬ ಅರ್ಥಶಾಸ್ತçಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಈ ಮೊದಲೇ ವರ್ಣಿಸಿದ್ದರು(ಜನಶಕ್ತಿ ವಾರಪತ್ರಿಕೆ, ಸಂಚಿಕೆ 36, ಆಗಸ್ಟ್ 31).
ಈಗ ಅದನ್ನು ‘ದೀಪಾವಳಿ’ಯ ಮೊದಲೇ, ಸಪ್ಟಂಬರ್ 22ರಿಂದಲೇ ಜಾರಿಗೆ ತರಲಾಗುವುದಂತೆ! ಏಕಿರಬಹುದು? ರಾಕೇಶ್ ರಂಜನ್ (ಮೊಲಿಟಿಕ್ಸ್.ಇನ್)ರವರ ಈ ವ್ಯಂಗ್ಯಚಿತ್ರ ಒಂದು ಸುಳಿವು ಕೊಡುತ್ತಿದೆಯೇ.
ಇದನ್ನೂ ನೋಡಿ: ಸೌಹಾರ್ದ ವಾತಾವರಣ ನೆಲೆಸುವಲ್ಲಿ ಸಮುದಾಯದ ಕೊಡುಗೆ ಅಪಾರ – ಜಸ್ಟೀಸ್ ನಾಗಮೋಹನ್ ದಾಸ್ Janashakthi Media
