ಒಳ ಮೀಸಲಾತಿ ಜಾರಿ ವಿರೋಧಿಸಿ ಹಂದಿ ಮರಿ, ತಲೆಯ ಮೇಲೆ ಚಪ್ಪಲಿ ಹೊತ್ತು ಪ್ರತಿಭಟನೆ

ವಿಜಯಪುರ: ಒಳಮೀಸಲಾತಿ ಹೆಸರಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳ ಜೊತೆಗೆ ಇನ್ನೂ 63 ಜಾತಿಗಳನ್ನು ಸೇರಿಸಿ, ಶೇ. 5 ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಲಂಬಾಣಿ, ಬೋವಿ, ಕೊರಚ, ಕೊರಮ, ಸಮುದಾಯಗಳು ಹಂದಿ ಮರಿ, ತಲೆಯ ಮೇಲೆ ಚಪ್ಪಲಿ ಹೊತ್ತು ಪ್ರತಿಭಟಿಸಿದರು.

ಬೃಹತ್ ಪ್ರತಿಭಟನೆ:

ಪ್ರತಿಭಟನೆ ವೇಳೆ ಹಂದಿ‌ ಮರಿಗಳನ್ನು ಹಾಗೂ ತಲೆಯ ಮೇಲೆ ಚಪ್ಪಲಿಗಳನ್ನು ಹೊತ್ತು ಸರ್ಕಾರದ ವಿರುದ್ಧ ಕಿಡಿಕಾರಿದರು. ಅಲ್ಲದೇ ಡಾ. ನಾಗಮೋಹನ ದಾಸ್ ವರದಿ ಮರುಪರಿಶೀಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.‌

ಇದನ್ನೂ ಓದಿ: ಮಳೆಗಾಲ ಮುಗಿದ ತಕ್ಷಣ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ: ಸಿಎಂ ಸಿದ್ದರಾಮಯ್ಯ

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ರ ಭಾವಚಿತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಹಂದಿಗಳನ್ನು ಹಿಡಿಯುವ ಬಲೆಯಲ್ಲಿ ಡಿಸಿಎಂ ಹಾಗೂ ಸಿಎಂ ಭಾವಚಿತ್ರಗಳನ್ನು ಹಾಕಿ ಪ್ರತಿಭಟಿಸಿದರು.

ಬಂಜಾರ ಸಮುದಾಯದ ಮುಖಂಡ ಮಹೇಂದ್ರಕುಮಾರ ನಾಯಕ ಮಾತನಾಡಿ, ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್‌ ಆಯೋಗ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ಸಮುದಾಯ ತೀವ್ರವಾಗಿ ಕಂಡಿಸುತ್ತೇವೆ ಎಂದರು.

ಡಾ. ಬಾಬು ರಾಜೇಂದ್ರ ನಾಯಕ ಮಾತನಾಡಿ, ಆಯೋಗವು ಒಳ ಮೀಸಲಾತಿ ಹಂಚಿರುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿದೆ. ಯಾವ ನ್ಯಾಯಾಲಯಕ್ಕೂ ಅಥವಾ ರಾಜ್ಯ ಸರ್ಕಾರಕ್ಕೂ ಜಾತಿಗಳನ್ನು ವಿಂಗಡಿಸುವುದು, ಸೇರಿಸುವುದು ಮತ್ತು ಗುಂಪುಗಳನ್ನು ಮಾಡುವ ಅಧಿಕಾರ ಇರುವುದಿಲ್ಲ ಎಂದು ಹೇಳಿದರು.

ಭೋವಿ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಭೋವಿ ಮಾತನಾಡಿ, ಜಾತಿ ಗಣತಿಯಲ್ಲಿ ನಮ್ಮ ಸಮುದಾಯವನ್ನು ಪರಿಗಣಿಸದೆ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಈ ಸರ್ಕಾರಕ್ಕೆ ಮುಂದಿನ ದಿನಮಾನದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಸಿದ್ದರಾಮಯ್ಯ ಸರ್ಕಾರವು ಆರ್ಥಿಕವಾಗಿ ಸುಧಾರಣೆಯಾಗಿರುವ ಸಮುದಾಯಗಳಿಗೆ ಶೇ 6 ರಷ್ಟು ಒಳಮೀಸಲಾತಿ ನೀಡಿ, ತೀವ್ರವಾಗಿ ಹಿಂದುಳಿದ 63 ಸಮುದಾಯಕ್ಕೆ ಶೇ 5ರಷ್ಟು ಮೀಸಲಾತಿ ನೀಡಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಭಜಂತ್ರಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಜಾಧವ, ಬಂಜಾರ ಮುಖಂಡ ರಾಜು ಜಾಧವ, ಡಾ. ಅರವಿಂದ ಜಾಧವ, ಸಿದ್ದಲಿಂಗ ಸ್ವಾಮೀಜಿ, ಕೆಸರಹಟ್ಟಿ ಸೋಮಲಿಂಗ ಸ್ವಾಮೀಜಿ, ಸಂಜು ಮಹಾರಾಜ,ಗೋಪಾಲ ಮಹಾರಾಜ, ಪ್ರಕಾಶ ಮಹಾರಾಜ, ಭೀಮು ಮಹಾರಾಜ, ಮಾಜಿ ಶಾಸಕ ಮನೋಹರ ಐನಾಪುರ, ರಾಜಪಾಲ ಚವ್ಹಾಣ, ರಾಜು ಎಲ್. ಜಾಧವ, ರಾಜು ಚವ್ಹಾಣ, ಭಜಂತ್ರಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಜಾಧವ, ಸಂತೋಷ ಚವ್ಹಾಣ, ಕುಂಚಿಕೊರವ ಸಮಾಜದ ಅಬ್ದುಲ್ ಕುಂಚಿಕೊರವ, ಈರಪ್ಪ ಕುಂಚಿಕೊರವ, ಕೆಂಚಪ್ಪ ಕುಂಚಿಕೊರವ, ಭೋವಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಭೋವಿ, ಮಲ್ಲಿಕಾರ್ಜುನ ನಾಯಕ, ಚಂದ್ರು ರಾಠೋಡ ಮತ್ತಿತರರು ‍ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ಗೌರಿ ನೆನಪು : ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *