ಭಾರತ ವರಮಾನ ಸಮಾನತೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂಬ ವಿಶ್ವಬ್ಯಾಂಕ್ ಸುಳ್ಳು | ಟಿ. ಎಸ್. ವೇಣುಗೋಪಾಲ

ಜಾಗತಿಕ ಬ್ಯಾಂಕಿನ ವರದಿಯ ಪ್ರಕಾರ “ಭಾರತದ ಬಳಕೆ ವೆಚ್ಚ ಆಧಾರಿತ ಜಿನಿ ಸೂಚಿ 2011-12ರಲ್ಲಿ 28.8 ಇದ್ದುದು 2022-23ರಲ್ಲಿ 25.5ಕ್ಕೆ ಇಳಿದಿದೆ.” ಜಾಗತಿಕ ಬ್ಯಾಂಕ್ ಈ ಬಾರಿ ಜಿನಿ ಸೂಚಿ ಲೆಕ್ಕ ಹಾಕುವಲ್ಲಿ ಹಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದೆ. ಅದರಲ್ಲೂ ಈ ಮಾರ್ಪಾಡೆಲ್ಲಾ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಆ ಬದಲಾವಣೆಗಳೆಲ್ಲವೂ ಅಸಮಾನತೆಯ ಗುಣಾಂಕವನ್ನು ಕಡಿಮೆ ಮಾಡುತ್ತವೆ. ಸರ್ಕಾರ ಕೊಡುವ ಉಚಿತ ಸೌಲಭ್ಯಗಳನ್ನು ಅಂದರೆ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಧಾನ್ಯಗಳು ಇತ್ಯಾದಿಗಳನ್ನು, ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರಗಳು, ಶೂ ಇವುಗಳೂ ಈ ಬಾರಿ ಸೇರ್ಪಡೆಯಾಗಿವೆ. ಆಸ್ಪತ್ರೆ ವೆಚ್ಚ, ಬಾಡಿಗೆ ಇವೆಲ್ಲವನ್ನು ಬಿಡಲಾಗಿದೆ. ಇವೆಲ್ಲಾ ಜನರ ಯೋಗಕ್ಷೇಮವನ್ನು ಹೆಚ್ಚಿಸುವುದಿಲ್ಲ ಅನ್ನುವ ವಿಚಿತ್ರ ತರ್ಕವನ್ನು ಮುಂದಿಟ್ಟಿದೆ. ಜಾಗತಿಕ ಬ್ಯಾಂಕ್ ಇಂಡಿಯಾದ ಅಸಮಾನತೆಯನ್ನು ಅಳತೆ ಮಾಡುವ ಕ್ರಮದಲ್ಲಿ ಮಾಡಿಕೊಂಡಿರುವ ಬದಲಾವಣೆ ಈ ಇಳಿಕೆಗೆ ಕಾರಣ. ಎರಡು ದೇಶಗಳನ್ನು ಹೋಲಿಸಬೇಕಾದರೆ ಒಂದೇ ಬಗೆಯ ಸೂಚಿಗಳನ್ನು ಹೋಲಿಸಬೇಕು ಅನ್ನುವ ಸರಳ ಸತ್ಯವನ್ನು ನಿರ್ಲಕ್ಷಿಸಿದೆ. ಸಹಜವಾಗಿಯೇ ಜಾಗತಿಕ ಬ್ಯಾಂಕಿನ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಸೃಷ್ಟಿಯಾಗಿದೆ.

-ಟಿ. ಎಸ್. ವೇಣುಗೋಪಾಲ

“ಭಾರತ ಆರ್ಥಿಕ ಸಮಾನತೆಯಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷಗಳಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ. 2011-12ರಲ್ಲಿ ಕಡುಬಡವರು ನಮ್ಮಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 6.3ರಷ್ಟು ಇದ್ದರು. ಈಗ ಅವರ ಸಂಖ್ಯೆ. ಶೇಕಡ 2.3ಕ್ಕೆ ಇಳಿದಿದೆ. 17.10 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ.” ಇದು ಜಾಗತಿಕ ಬ್ಯಾಂಕ್ ಪ್ರಕಟಿಸಿರುವ ವರದಿ. ಜಾಗತಿಕ ಬ್ಯಾಂಕ್ ಕಳೆದ ಕೆಲವು ವರ್ಷಗಳಿಂದ ಅಸಮಾನತೆಯನ್ನು ಕುರಿತಂತೆ ವರದಿಯನ್ನು ಪ್ರಕಟಿಸುತ್ತಿದೆ. ಈ ವರ್ಷ ಜೂನ್ ತಿಂಗಳಿನಲ್ಲಿ ಅದರ ಇತ್ತೀಚಿನ ವರದಿ ಪ್ರಕಟವಾಗಿದೆ.

ನಮ್ಮ ಪತ್ರಿಕಾ ಮಾಹಿತಿ ಬ್ಯೂರೊ ಇದಕ್ಕೆ ವ್ಯಾಪಕ ಪ್ರಚಾರ ನೀಡಿದೆ. ನಮ್ಮ ಮುಖ್ಯವಾಹಿನಿಯ ಸುದ್ದಿಮಾಧ್ಯಮಗಳು ದೊಡ್ಡದಾಗಿಯೇ ಈ ಬಗ್ಗೆ ಮಾತನಾಡುತ್ತಿವೆ. ಸಹಜವಾಗಿಯೇ ನಮ್ಮ ಸರ್ಕಾರ ಕೂಡ ಸಂಭ್ರಮಿಸುತ್ತಿದೆ. ವಿದೇಶಿ ವರದಿಗಳ ಉದ್ದೇಶವನ್ನೇ ಸಾಮಾನ್ಯವಾಗಿ ಅನುಮಾನಿಸುವ, ಕೊನೆಗೆ ವರದಿಯನ್ನು ಅಲ್ಲಗೆಳೆಯುವ ನಮ್ಮ ಸರ್ಕಾರ ಇದನ್ನು ಮಾತ್ರ ತಲೆಯ ಮೇಲೆ ಹೊತ್ತು ತನ್ನ ಸಾಧನೆಗೆ ಸಾಕ್ಷಿಯಾಗಿ ಪ್ರದರ್ಶಿಸುತ್ತಿದೆ.

ಜಾಗತಿಕ ಬ್ಯಾಂಕ್ ವರಮಾನದ ಅಸಮಾನತೆಯನ್ನು ಅಂದಾಜು ಮಾಡಲು ಜಿನಿ ಗುಣಾಂಕವನ್ನು ಬಳಸಿಕೊಳ್ಳುತ್ತದೆ. ಜಿನಿ ಸೂಚಿ ಅನ್ನುವುದು ವರಮಾನದ ಅಸಮಾನತೆಯನ್ನು ಅಳೆಯುವುದಕ್ಕೆ ಬಳಸುವ ಒಂದು ಸಾಂಖ್ಯಿಕ ಸೂಚಿ. ಇದರ ಮೌಲ್ಯ ಹೆಚ್ಚಾದಷ್ಟೂ ಆ ದೇಶದಲ್ಲಿ ವರಮಾನದ ಅಸಮಾನತೆ ಹೆಚ್ಚಿದೆ ಎಂದು ಅರ್ಥ. ಭಾರತಕ್ಕೆ ಸಂಬಂಧಿಸಿದಂತೆ ಜಿನಿ ಸೂಚಿಯನ್ನು ಲೆಕ್ಕ ಹಾಕುವುದಕ್ಕೆ ಜಾಗತಿಕ ಬ್ಯಾಂಕ್ ರಾಷ್ಟ್ರೀಯ ಸಂಖ್ಯಾ ಸಮೀಕ್ಷೆ ಸಂಘಟನೆ (ಎನ್‌.ಎಸ್‌.ಎಸ್‌.ಒ) ಪ್ರಕಟಿಸಿರುವ 2022-23ರ ಬಳಕೆ ವೆಚ್ಚದ ಸಮೀಕ್ಷೆಯನ್ನು ಬಳಸಿಕೊಂಡಿದೆ. ಅದು 61 ದೇಶಗಳ ಜಿನಿ ಗುಣಾಂಕವನ್ನು ಲೆಕ್ಕ ಹಾಕಿದೆ. ಅದನ್ನು ಆಧರಿಸಿ ಭಾರತ ಜಗತ್ತಿನಲ್ಲೇ ನಾಲ್ಕನೇ ಅತಿ ಸಮಾನ ರಾಷ್ಟç ಎಂದು ವರದಿ ಮಾಡಿದೆ. ಅದರ ವಿಶ್ಲೇಷಣೆಯ ಎಲ್ಲಾ ಸಮಸ್ಯೆಗಳನ್ನು ಬದಿಗಿಟ್ಟು ನೋಡಿದರೂ ಅದು ಲೆಕ್ಕ ಹಾಕಿರುವುದು 61 ರಾಷ್ಟ್ರಗಳಿಗೆ ಮಾತ್ರ. ಜಗತ್ತು ಅಂದರೆ 61 ರಾಷ್ಟ್ರಗಳಷ್ಟೇ ಅಲ್ಲ.

ಇದನ್ನೂ ಓದಿ: ವ್ಯಾಪಾರಿಗಳಿಗೆ ಮತ್ತೊಂದು ಶಾಕ್: ಯುಪಿಐ ಬಿಟ್ಟು ಕ್ಯಾಶ್ ಪಡೆದರೂ ತೆರಿಗೆ ಅನ್ವಯ

ಸಾಮಾನ್ಯವಾಗಿ ಆದಾಯವನ್ನು ಬಳಸಿ ಜಿನಿ ಗುಣಾಂಕವನ್ನು ಲೆಕ್ಕ ಹಾಕಲಾಗುತ್ತದೆ. ಇಲ್ಲವೇ ಜನರ ಗೃಹಬಳಕೆಯ ಖರ್ಚನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಆದಾಯವನ್ನು ಕುರಿತ ಸಮೀಕ್ಷೆ ನಡೆಯುತ್ತದೆ. ಇನ್ನು ಕೆಲವು ರಾಷ್ಟ್ರಗಳು ಬಳಕೆಯ ಖರ್ಚನ್ನು ಕುರಿತಂತೆ ಸಮೀಕ್ಷೆ ನಡೆಸುತ್ತವೆ. ನಮ್ಮ ದೇಶವೂ ಸೇರಿದಂತೆ, ಬಹುತೇಕ ಹಿಂದುಳಿದ ದೇಶಗಳಲ್ಲಿ ಗೃಹಬಳಕೆ ವೆಚ್ಚದ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಸಬ್‌ ಸಹರನ್ ಆಫ್ರಿಕಾ, ದಕ್ಷಿಣ ಏಷ್ಯಾ, ಉತ್ತರ ಆಫ್ರಿಕಾ ಇತ್ಯಾದಿ ಕಡೆಗಳಲ್ಲಿ ಗೃಹಬಳಕೆಯ ಖರ್ಚಿನ ಸಮೀಕ್ಷೆಯನ್ನೇ ನಡೆಸಲಾಗುತ್ತದೆ. ಶ್ರೀಮಂತ ದೇಶಗಳಲ್ಲಿ ಹಾಗೂ ಲ್ಯಾಟಿನ್ ಅಮೇರಿಕೆಯ ದೇಶಗಳಲ್ಲಿ ವರಮಾನದ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಅಲ್ಲಿ ವರಮಾನದ ಸಮೀಕ್ಷೆಯನ್ನು ನಡೆಸುವುದಕ್ಕೆ ಒಂದು ಕಾರಣವೆಂದರೆ, ಅಲ್ಲಿ ಆರ್ಥಿಕತೆ ಹೆಚ್ಚು ಔಪಚಾರಿಕವಾಗಿದ. ಹಾಗಾಗಿ ಅಲ್ಲಿ ವರಮಾನಕ್ಕೆ ಸಂಬಂಧಿಸಿದಂತೆ ಹೆಚ್ಚು ವಿಶ್ವಾಸಾರ್ಹವಾದ ಮಾಹಿತಿ ಸಿಗುತ್ತದೆ. ಲ್ಯಾಟಿನ್ ಅಮೇರಿಕೆಯಲ್ಲೂ ಆರ್ಥಿಕತೆ ಹೆಚ್ಚು ಔಪಚಾರಿಕವಾಗಿದೆ. ಬಡರಾಷ್ಟ್ರಗಳಲ್ಲಿ ಖರ್ಚಿನ ಸಮೀಕ್ಷೆ ನಡೆಸುವುದಕ್ಕೆ ಮುಖ್ಯ ಕಾರಣವೇನೆಂದರೆ, ಅಲ್ಲಿ ಅರ್ಥಿಕತೆ ಹೆಚ್ಚಾಗಿ ಅನೌಪಚಾರಿಕವಾಗಿರುತ್ತದೆ. ಇನ್ನೊಂದು ಕಾರಣವೆಂದರೆ ಬಡರಾಷ್ಟ್ರಗಳಲ್ಲಿ ಬಡತನ ಮುಖ್ಯವಾದ ಸಮಸ್ಯೆ. ವರಮಾನಕ್ಕಿಂತ, ಬಳಕೆಯ ಖರ್ಚನ್ನು ನೋಡಿದರೆ ಬಡತನದ ಹೆಚ್ಚು ಸ್ಪಷ್ಟವಾದ ಚಿತ್ರ ಸಿಗುತ್ತದೆ.

ಚಿತ್ರ-1 ಭಾರತದ ವರಮಾನ ಅಸಮಾನತೆಯ ಜಿನಿ ಸೂಚಕ 1951-2003

ಭಾರತದಲ್ಲಿ ಗೃಹಬಳಕೆ ವೆಚ್ಚದ ಸಮೀಕ್ಷೆಯನ್ನು 1977ರಿಂದ ನಡೆಸಲಾಗುತ್ತಿದೆ. ನಮ್ಮ ಈಗಿನ ಸರ್ಕಾರಕ್ಕೆ ಸಮೀಕ್ಷೆಗಳ ಬಗ್ಗೆಯೇ ಅಂತಹ ಉತ್ಸಾಹವಿಲ್ಲ. ಸಮೀಕ್ಷೆಯ ವರದಿಗಳು ತಮಗೆ ಹಿತಕರವಾಗಿಲ್ಲದೇ ಹೋದರೆ ಅವನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಕಳೆದ ಬಾರಿಯ ಬಳಕೆ ಖರ್ಚಿನ ಸಮೀಕ್ಷೆಯನ್ನು ಸರ್ಕಾರ ಪ್ರಕಟಿಸಲೇ ಇಲ್ಲ. ಆದರೆ ಹಿಂದಿನ ಸರ್ಕಾರಗಳು ಒಪ್ಪಿಗೆಯಾಗದಿದ್ದರೂ ವರದಿಗಳನ್ನು ಪ್ರಕಟಿಸುತ್ತಿದ್ದವು. ವಾಜಪೇಯಿ ಸರ್ಕಾರ ಕೂಡ ತನಗೆ ಒಪ್ಪಿಗೆ ಇಲ್ಲದ ವರದಿಯನ್ನು ಪ್ರಕಟಿಸಿದ್ದ ಉದಾಹರಣೆ ಇದೆ. ಆದರೆ ಈ ಸರ್ಕಾರ ತನಗೆ ಹಿತವಿಲ್ಲದ ವರದಿಗಳನ್ನು ಪ್ರಕಟಿಸುವುದೇ ಇಲ್ಲ. ಹಲವು ಬಾರಿ ಸಮೀಕ್ಷೆಯನ್ನೂ ನಡೆಸುವುದಿಲ್ಲ. ಈಗ ಜನರ ಗೃಹಬಳಕೆಯ ಖರ್ಚಿಗೆ ಸಂಬಂಧಿಸಿದ 2022-23ರ ಸಮೀಕ್ಷೆ ವರದಿ ಲಭ್ಯವಿದೆ. ಜಾಗತಿಕ ಬ್ಯಾಂಕ್ ತನ್ನ ಲೆಕ್ಕಾಚಾರಕ್ಕೆ ಆ ಮಾಹಿತಿಯನ್ನು ಬಳಸಿಕೊಂಡಿದೆ.

ನಮ್ಮಲ್ಲಿ ವರಮಾನದ ಸಮೀಕ್ಷೆಯನ್ನು ನಡೆಸುವುದಿಲ್ಲ. ಹಾಗಾಗಿ ಬಳಕೆಯ ಖರ್ಚನ್ನು ಆಧರಿಸಿ ಜಿನಿ ಗುಣಾಂಕವನ್ನು ಲೆಕ್ಕ ಹಾಕಲಾಗುತ್ತದೆ. ಮುಂದುವರಿದ ದೇಶಗಳಲ್ಲಿ ವರಮಾನವನ್ನು ಆಧರಿಸಿ ಅಸಮಾನತೆಯ ಗುಣಾಂಕವನ್ನು ಲೆಕ್ಕ ಹಾಕಲಾಗುತ್ತದೆ. ವರಮಾನವನ್ನು ಆಧರಿಸಿ ಲೆಕ್ಕ ಹಾಕಿದ ಜಿನಿ ಗುಣಾಂಕವು, ಗೃಹಬಳಕೆಯ ಖರ್ಚನ್ನು ಆಧರಿಸಿ ಲೆಕ್ಕ ಹಾಕಿದ ಜಿನಿ ಗುಣಾಂಕಕ್ಕಿಂತ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಶೇಕಡ 7ರಿಂದ 14ರಷ್ಟು ಹೆಚ್ಚಿರುತ್ತದೆ. ಉದಾಹರಣೆಗೆ ಒಂದು ದೇಶದ ಬಳಕೆಯನ್ನು ಆಧರಿಸಿದ ಜಿನಿ ಸೂಚಿ 50% ಇದ್ದರೆ ವರಮಾನವನ್ನು ಆಧರಿಸಿರುವ ಅಸಮಾನತೆಯ ಸೂಚಿ 57% ಇಂದ 64% ಇರುತ್ತದೆ. ಇದಕ್ಕೆ ಕಾರಣವೂ ಸರಳ. ವರಮಾನದಲ್ಲಿ ಕೇವಲ ಖರ್ಚಷ್ಟೇ ಅಲ್ಲ, ಉಳಿತಾಯ ಇತ್ಯಾದಿ ಹಲವು ಅಂಶಗಳು ಸೇರಿರುತ್ತವೆ. ಖರ್ಚು ವರಮಾನದ ಕೇವಲ ಒಂದು ಭಾಗ. ಆದರೆ ಬಳಕೆಯ ಖರ್ಚನ್ನು ಗಮನಿಸುವಾಗ ಅದರಲ್ಲಿ ಉಳಿತಾಯ, ಇತ್ಯಾದಿ ಅಂಶಗಳು ಸೇರಿರುವುದಿಲ್ಲ. ವರಮಾನ ಹೆಚ್ಚುತ್ತಾ ಹೋದಂತೆ ಉಳಿತಾಯದ ಪಾಲು ಹೆಚ್ಚುತ್ತದೆ ಹಾಗೂ ಖರ್ಚಿನ ಪಾಲು ಕಡಿಮೆಯಾಗುತ್ತಾ ಹೋಗುತ್ತದೆ. ಶ್ರೀಮಂತರ ಉಳಿತಾಯ ಸಹಜವಾಗಿಯೇ ಹೆಚ್ಚಿರುತ್ತದೆ. ಬಡವರು ಉಳಿತಾಯ ಮಾಡುವುದಕ್ಕೆ ಸಾಧ್ಯವೇ ಇರುವುದಿಲ್ಲ. ಹಾಗಾಗಿ ವರಮಾನವನ್ನು ಆಧರಿಸಿದ ಅಸಮಾನತೆಯ ಸೂಚಿ ಹೆಚ್ಚಿಗೆ ಇರುತ್ತದೆ. ಅದರಿಂದಾಗಿ ಈ ಎರಡು ಸೂಚಿಗಳನ್ನು ಹೋಲಿಸುವುದು ಸರಿಯಲ್ಲ ಅನ್ನುವುದು ಎಲ್ಲರೂ ಒಪ್ಪಿಕೊಂಡಿರುವ ಸರಳ ಸತ್ಯ.

ಜೊತೆಗೆ ಇಂತಹ ಸಮೀಕ್ಷೆಯಲ್ಲಿ ಅತಿ ಶ್ರೀಮಂತರ ಪ್ರಾತಿನಿಧ್ಯ ಕಡಿಮೆ ಇರುತ್ತದೆ. ಯಾಕೆಂದರೆ ಅತಿ ಶ್ರೀಮಂತರ ಸಂಖ್ಯೆ ಕಡಿಮೆ ಇರುತ್ತದೆ. ಸ್ಯಾಂಪಲ್ ತೆಗೆದುಕೊಂಡಾಗ ಕೆಲವರಷ್ಟೇ ಸಮೀಕ್ಷೆಯಲ್ಲಿ ಸೇರಿಕೊಳ್ಳುತ್ತಾರೆ. ಈ ನ್ಯೂನತೆಯನ್ನು ಸರಿಪಡಿಸುವುದಕ್ಕೆ ಸಂಶೋಧಕರು ಹಲವು ಕ್ರಮಗಳನ್ನು ಬಳಸುತ್ತಾರೆ. ಇಲ್ಲಿ ಅಂತಹ ಯಾವುದೇ ಕ್ರಮವನ್ನು ಬಳಸಿಲ್ಲ.  ಜಿನಿ ಗುಣಾಂಕ ಕಮ್ಮಿಯಿರುವುದಕ್ಕೆ ಅದೂ ಒಂದು ಕಾರಣ.

ಅಸಮಾನತೆಯ ಅಳತೆಗೋಲಾಗಿ ಜಿನಿ ಗುಣಾಂಕದಲ್ಲೇ ಕೆಲವು ಸಮಸ್ಯೆಗಳಿವೆ. ಅಸಮಾನತೆ ಕಡಿಮೆಯಾಗುತ್ತಿರುವಾಗಲೇ ಹಸಿವಿನ ಸೂಚ್ಯಾಂಕ ಹೆಚ್ಚುತ್ತಿರುವುದನ್ನು ವಿವರಿಸುವುದು ಕಷ್ಟ. ಬಡವರ ಸ್ಥಿತಿ ಸುಧಾರಿಸುತ್ತಿದೆ ಅಂದರೆ ಹೆಚ್ಚಿನ ಆಹಾರ ಕೊಳ್ಳುವುದಕ್ಕೆ ಸಾಧ್ಯವಾಗಬೇಕಿತ್ತು. ಹಸಿವು ಕಮ್ಮಿಯಾಗಬೇಕಿತ್ತು. ಆದರೆ ಹಸಿವಿನ ಸೂಚಿಯಲ್ಲಿ ಭಾರತ 125 ದೇಶಗಳ ಪೈಕಿ 107ನೇ ಸ್ಥಾನದಲ್ಲಿದೆ. ಇದನ್ನೆಲ್ಲಾ ಜಿನಿ ಗುಣಾಂಕ ಬಳಸಿ ವಿವರಿಸುವುದಕ್ಕೆ ಸಾಧ್ಯವಿಲ್ಲ. ಥಾಮಸ್ ಪಿಕೆಟ್ಟಿಯವರ ಜಾಗತಿಕ ಅಸಮಾನತೆಯ ಡೇಟಾಬೇಸ್ ಹೇಳುವಂತೆ ಮೇಲಿನ 1% ಶ್ರೀಮಂತರಿಗೆ ದೇಶದ ವರಮಾನದ ಶೇಕಡ 23ರಷ್ಟು ಹೋಗುತ್ತಿದೆ. ಕಳೆದ 100 ವರ್ಷದಲ್ಲಿ ಎಂದೂ ಈ ಪ್ರಮಾಣದ ಆದಾಯವನ್ನು ಅವರು ಗಳಿಸಿರಲಿಲ್ಲ.

ಜಾಗತಿಕ ಬ್ಯಾಂಕ್ ಇದನ್ನು ತನ್ನ ವರದಿಯಲ್ಲಿ ಗಮನಿಸಿದೆ. ಜೊತೆಗೆ ಅಂಕಿ ಅಂಶದಲ್ಲಿ ಸಮಸ್ಯೆಯಿರುವ ಸಾಧ್ಯತೆಯ ಅರಿವು ಅದಕ್ಕಿದೆ. ಜಾಗತಿಕ ಅಸಮಾನತೆ ದತ್ತಾಂಶ (ವರ್ಡ್ಲ್ ಇನಿಕ್ವಾಲಿಟಿ ಡೇಟಾಬೇಸ್) ವರದಿಯನ್ನು ಉಲ್ಲೇಖಿಸುತ್ತಾ “2004ರಲ್ಲಿ ಗಿನಿ ಸೂಚ್ಯಂಕ 52 ಇದ್ದುದು 2023ರಲ್ಲಿ 62 ಆಗಿದೆ. ಹಾಗೆಯೇ, ಮೇಲಿನ ಶೇಕಡ 10ರಷ್ಟು ಶ್ರೀಮಂತರ ಮಧ್ಯಮ ವರಮಾನ ಕೆಳಗಿನ 10% ಜನರ ವರಮಾನಕ್ಕಿಂದ 13 ಪಟ್ಟು ಹೆಚ್ಚಿದೆ.” ಎಂಬ ಅಂಶವನ್ನೂ ವರದಿ ಹೇಳುತ್ತದೆ. ನಮ್ಮ ಮಾಧ್ಯಮಗಳು ಕನಿಷ್ಠ ಇದನ್ನೂ ಗಮನಿಸಬೇಕಿತ್ತು. ಆದರೆ ಅದು ಕೇವಲ “ಭಾರತದ ಬಳಕೆವೆಚ್ಚ ಆಧಾರಿತ ಜಿನಿ ಸೂಚಿ 2011-12ರಲ್ಲಿ 28.8 ಇದ್ದುದು 2022-23ರಲ್ಲಿ 25.5ಕ್ಕೆ ಇಳಿದಿದೆ.” ಅನ್ನುವ ಹೇಳಿಕೆಯನ್ನಷ್ಟೇ ಹೆಕ್ಕಿಕೊಂಡಿದೆ.

ಒಂದಂಶ ಸ್ಪಷ್ಟ ನಾವು ಎರಡು ದೇಶಗಳ ನಡುವೆ ಹೋಲಿಸುವಾಗ ಒಂದೇ ಅಳತೆಗೋಲನ್ನು ಬಳಸಬೇಕು. ವರಮಾನವನ್ನು ಆಧಾರವಾಗಿಟ್ಟುಕೊಳ್ಳಬೇಕು. ಅಥವಾ ಬಳಕೆಯ ಖರ್ಚನ್ನು ಆಧಾರವಾಗಿಟ್ಟುಕೊಳ್ಳಬೇಕು. ವರಮಾನಕ್ಕೆ ಸಂಬಂಧಿಸಿದಂತೆ ವರ್ಡ್ಲ್ ಇನಿಕ್ವಾಲಿಟಿ ಡೇಟಾಬೇಸ್ ಮಾಹಿತಿಯನ್ನು ನಿರಂತರವಾಗಿ ಪ್ರಕಟಿಸುತ್ತಿದೆ. ಅದರ ಪ್ರಕಾರ ನಮ್ಮಲ್ಲಿ ಅಸಮಾನತೆ 1990ರಿಂದ ನಿರಂತರವಾಗಿ ಹೆಚ್ಚುತ್ತಾ ಬಂದಿದೆ. ವರಮಾನದ ಜಿನಿ ಸೂಚಿಯನ್ನು ಗಮನಿಸಿದರೆ ಭಾರತ 2009ರಲ್ಲಿ 216 ದೇಶಗಳ ಪೈಕಿ 115 ಸ್ಥಾನದಲ್ಲಿತ್ತು. 2019ರಲ್ಲಿ ಅದು 176ನೇ ಸ್ಥಾನದಲ್ಲಿದೆ. ಅಂದರೆ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತ ಕ್ರಮೇಣ ಹೆಚ್ಚೆಚ್ಚು ಅಸಮಾನ ದೇಶವಾಗುತ್ತಿದೆ. ಸಂಪತ್ತಿನ ಅಸಮಾನತೆಯನ್ನು ನೋಡಿದರೆ ಭಾರತ ಇನ್ನೂ ಕೆಳಗೆ ಇದೆ.

ಜನ ಬಳಸುವ ಆಹಾರ ಧಾನ್ಯಗಳ ಪ್ರಮಾಣವನ್ನು ಕುರಿತ ಮಾಹಿತಿಯೂ ಇದೇ ಸಂಗತಿಯನ್ನು ಹೇಳುತ್ತದೆ. ಆಹಾರಕ್ಕಾಗಿ ಮಾಡುತ್ತಿರುವ ತಲಾ ಖರ್ಚಿನಲ್ಲಿ ಭಾರತ 2019ರಲ್ಲಿ 185 ದೇಶಗಳ ಪೈಕಿ 102ನೇ ಸ್ಥಾನದಲ್ಲಿತ್ತು. 2009ರಲ್ಲಿ 82ನೇ ಸ್ಥಾನದಲ್ಲಿತ್ತು. ಹಾಗೆಯೇ ನಮ್ಮ ಜನರ ಕ್ಯಾಲೊರಿ ಬಳಕೆ ಕಡಿಮೆಯಾಗುತ್ತಿರುವುದನ್ನು ನೋಡಿದರೂ ಭಾರತೀಯರ ಕೊಳ್ಳುವ ಶಕ್ತಿ ಕ್ರಮೇಣ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಜಾಗತಿಕ ಬ್ಯಾಂಕ್ ವರದಿಯ ಬಗ್ಗೆ ಇರುವ ಇನ್ನೊಂದು ದೊಡ್ಡ ಟೀಕೆಯೆಂದರೆ ಅದು ಈ ಬಾರಿ ಹಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದೆ. ಆದರೆ, ಈ ಮಾರ್ಪಾಡುಗಳೆಲ್ಲಾ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಹಿಮಾಂಶು ಅವರು ಗುರುತಿಸಿರುವಂತೆ ಈ ಬದಲಾವಣೆಗಳು ಬಹುತೇಕ ಅಸಮಾನತೆಯ ಗುಣಾಂಕದ ಮೌಲ್ಯ ತಗ್ಗುವುದಕ್ಕೆ ಕಾರಣವಾಗಿದೆ. ಹಿಮಾಂಶು ಅವರು ಹೇಳಿರುವಂತೆ ಎನ್‌.ಎಸ್‌.ಎಸ್‌.ಒ ಗೃಹಬಳಕೆಯ ಖರ್ಚನ್ನು ಲೆಕ್ಕ ಹಾಕುವುದಕ್ಕೆ ಸರ್ಕಾರ ನೀಡುವ ನೆರವನ್ನು ಸೇರಿಸುವುದಿಲ್ಲ. ಆದರೆ ಜಾಗತಿಕ ಬ್ಯಾಂಕ್ ಈ ಬಾರಿ ಸರ್ಕಾರ ಕೊಡುವ ಉಚಿತ ಸೌಲಭ್ಯಗಳನ್ನು ಅಂದರೆ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಧಾನ್ಯಗಳು ಇತ್ಯಾದಿಗಳನ್ನು ಸೇರಿಸಿಕೊಂಡಿದೆ. ಹಾಗೆಯೇ ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರಗಳು, ಶೂ ಇವುಗಳೂ ಈ ಬಾರಿ ಸೇರ್ಪಡೆಯಾಗಿವೆ. ಇವೆಲ್ಲವನ್ನು ವೈಯಕ್ತಿಕ ಖರ್ಚಿನ ಪಟ್ಟಿಯಲ್ಲಿ ಸೇರಿಸಿರುವುದರಿಂದ ಬಡವರ ಖರ್ಚಿನ ಲೆಕ್ಕ ಹೆಚ್ಚುತ್ತದೆ. ಜೊತೆಗೆ ಶ್ರೀಮಂತರು ಬಳಸುವ ವಸ್ತುಗಳಾದ ಚಿನ್ನದ ಆಭರಣಗಳು, ವಾಚುಗಳು ಇವೆಲ್ಲವನ್ನು ಬಾಳಿಕೆಯ ವಸ್ತುಗಳು ಅನ್ನುವ ಕಾರಣಕ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗೆಯೇ ಆಸ್ಪತ್ರೆ ವೆಚ್ಚ, ಬಾಡಿಗೆ ಇವೆಲ್ಲವನ್ನು ಕೈ ಬಿಡಲಾಗಿದೆ. ಇವೆಲ್ಲಾ ಜನರ ಯೋಗಕ್ಷೇಮವನ್ನು ಹೆಚ್ಚಿಸುವುದಿಲ್ಲ ಅನ್ನುವ ವಿಚಿತ್ರ ತರ್ಕವನ್ನು ಮುಂದಿಟ್ಟಿದೆ. ಇಂತಹ ಕೆಲವು ಖರ್ಚುಗಳನ್ನು ಕೈಬಿಟ್ಟಿರುವುದರಿಂದÀ ಶ್ರೀಮಂತರ ಖರ್ಚು ಕಡಿಮೆಯಾಗಿ ಕಾಣುತ್ತದೆ. ಒಂದೆಡೆ ಬಡವರ ಖರ್ಚು ಹೆಚ್ಚಾಗಿ ದಾಖಲಾಗಿದೆ. ಇನ್ನೊಂದೆಡೆ ಶ್ರೀಮಂತರ ಖರ್ಚು ಕಡಿಮೆಯಾಗಿ ಬಿಂಬವಾಗುತ್ತಿದೆ. ಅಂತಿಮವಾಗಿ ಅಸಮಾನತೆ ಕಡಿಮೆ ಇರುವಂತೆ ತೋರುತ್ತದೆ.

ಎನ್‌.ಎಸ್‌.ಎಸ್‌.ಒ ಮಾಹಿತಿಯನ್ನು ಆಧರಿಸಿ ಲೆಕ್ಕ ಹಾಕಿದರೆ ಜಿನಿ ಸೂಚಿ 29.5 ಅಗುತ್ತದೆ. ಆದರೆ ಜಾಗತಿಕ ಬ್ಯಾಂಕ್ ಮಾಡಿಕೊಂಡಿರುವ ಬದಲಾವಣೆಗಳಿಂದಾಗಿ ಅವರ ಲೆಕ್ಕಾಚಾರದ ಪ್ರಕಾರ 25.5 ಆಗಿದೆ ಅಂದರೆ ಶೇಕಡ 4ರಷ್ಟು ಕಡಿಮೆಯಾಗಿದೆ. 29.5ನ್ನು ಅಸಮಾನತೆಯ ಸೂಚಿಯಾಗಿ ತೆಗೆದುಕೊಂಡರೆ ನಾವು ಪಾಕಿಸ್ತಾನ, ಚೀನಾ, ನೇಪಾಳ ಇತ್ಯಾದಿ ದೇಶಗಳ ಸಮದಲ್ಲೇ ಇದ್ದೇವೆ. ಭೂತಾನ್ ನಮಗಿಂತ ಉತ್ತಮ ಸ್ಥಿತಿಯಲ್ಲಿದೆ.

ಜಾಗತಿಕ ಬ್ಯಾಂಕ್ ಭಾರತದ ವಿಷಯದಲ್ಲಿ ಯಾಕೆ ಈ ರಿಯಾಯಿತಿ ತೋರಿದೆ ಅನ್ನುವುದು ತಿಳಿಯುವುದಿಲ್ಲ. ಜೊತೆಗೆ ಇದು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಯಾವ ವಸ್ತುಗಳನ್ನು ಸೇರಿಸಬೇಕು, ಯಾವುದನ್ನು ಬಿಡಬೇಕು ಅನ್ನುವುದನ್ನು ನಿರ್ಧರಿಸುವುದು ಹೇಗೆ ಅನ್ನುವ ಪ್ರಶ್ನೆ ಬರುತ್ತದೆ. ಅಂದರೆ ಸಮವಸ್ತ್ರ, ಶೂ ಇದನ್ನು ಸೇರಿಸಲಾಗಿದೆ. ಲ್ಯಾಪ್‌ಟಾಪ್, ಸೈಕಲ್ ಇವನ್ನೆಲ್ಲಾ ಸೇರಿಸಿಲ್ಲ. ಒಂದು ವಸ್ತುವನ್ನು ಸೇರಿಸುವುದಕ್ಕೆ ಇನ್ನೊಂದು ಬಿಡುವುದಕ್ಕೆ ಆಧಾರವೇನು ಅನ್ನುವ ಪ್ರಶ್ನೆ ಬರುತ್ತದೆ. ಹಾಗೆಯೇ ಸರ್ಕಾರದ ಖರ್ಚನ್ನು ವೈಯಕ್ತಿಕ ಖರ್ಚಿನಲ್ಲಿ ಸೇರಿಸುವುದು ಎಷ್ಟು ಸರಿ ಅನ್ನುವ ಪ್ರಶ್ನೆಯೂ ಬರುತ್ತದೆ. ಜೊತೆಗೆ ನಮ್ಮದೆ ಸಂಸ್ಥೆ ಇಷ್ಟು ಕಾಲದಿಂದ ಅನುಸರಿಸಿಕೊಂಡು ಬಂದಿರುವ ಕ್ರಮವನ್ನು ತಿರಸ್ಕರಿಸಿ, ಇನ್ನೊಂದು ಸಂಸ್ಥೆಯ ವಿವಾದಾತ್ಮಕವಾದ ಕ್ರಮವನ್ನು ಆತುಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ.

ಒಟ್ಟಾರೆಯಾಗಿ ಈ ಪ್ರಕ್ರಿಯೆಯಲ್ಲಿ ಜಾಗತಿಕ ಬ್ಯಾಂಕ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅದನ್ನು ಮೆಚ್ಚಿಕೊಳ್ಳುವ ಮೂಲಕ ಸರ್ಕಾರ ನಮ್ಮ ಸಾಂಖ್ಯಿಕ ಸಂಸ್ಥೆಯ ಮೌಲ್ಯವನ್ನು ಕಡೆಗಣಿಸಿದೆ. ಇಂತಹ ಮಾಹಿತಿಯನ್ನು ನಮ್ಮ ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳು ಪರಿಶೀಲಿಸುವ ಗೋಜಿಗೂ ಹೋಗದೆ ನಮ್ಮ ಜನರಲ್ಲಿ ಭ್ರಮೆಯನ್ನು ಸೃಷ್ಟಿಸುತ್ತಿವೆ. ಇಂತಹ ಸುದ್ದಿಗಳಿಂದ ಬಡವರ ಬಾಳು ಹಸನಾಗುವುದಿಲ್ಲ. ಸಂಪತ್ತು ಹಾಗೂ ವರಮಾನದ ಮರುಹಂಚಿಕೆಗೆ ಬೇಕಾದ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು.

ಇದನ್ನೂ ನೋಡಿ: ಛಲ ಬಿಡದೆ ಹೋರಾಡಿ ಗೆದ್ದ ರೈತರು | ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಸಿಎಂ ಘೊಷಣೆ

Donate Janashakthi Media

Leave a Reply

Your email address will not be published. Required fields are marked *