ಬೆಂಗಳೂರು: ಅರ್ಹ ಫಲಾನುಭವಿಗಳು ಬಗರ್ಹುಕುಂ ಜಮೀನಿನ ಸಕ್ರಮ ಕೋರಿ ಅರ್ಜಿ ಸಲ್ಲಿಸಿ ನಂತರದಲ್ಲಿ ಮೃತಪಟ್ಟರೆ ಅವರ ಕುಟುಂಬದ ಸದಸ್ಯರಿಗೆ ಜಮೀನು ಮಂಜೂರು ಮಾಡಬೇಕು, ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು. ಜಮೀನು
ತಹಶೀಲ್ದಾರ್ ಹಾಗೂ ಭೂ ದಾಖಲೆಯ ಸಹಾಯ ನಿರ್ದೇಶಕರ ಜತೆ ವಿಡಿಯೊ ಕಾನ್ಫರೆನ್ಸ್ನಲ್ಲಿ ಶುಕ್ರವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಕ್ರಮ-ಸಕ್ರಮ, ಬಗರ್ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡುವುದು ಸರ್ಕಾರದ ಕರ್ತವ್ಯ. ಅನುಕೂಲಸ್ಥರಿಗೆ ಎಲ್ಲಾ ಮಾಹಿತಿ ಇರುತ್ತದೆ. ತಮಗೆ ಬೇಕಾದ ಸರ್ಕಾರಿ ಸವಲತ್ತನ್ನು ಪಡೆದುಕೊಳ್ಳುತ್ತಾರೆ. ಆದರೆ, ಬಡವರಿಗೆ, ತಳಸಮುದಾಯದವರಿಗೆ ಮಾಹಿತಿ ಕೊರತೆ ಇರುತ್ತದೆ. ಅಂಥವರ ಮನೆಗೇ ಸವಲತ್ತು ತಲುಪಿಸಬೇಕು’ ಎಂದರು.
‘ಜನವರಿ 15ರ ಒಳಗೆ 15 ಸಾವಿರ ಫಲಾನುಭವಿಗಳಿಗೆ ಬಗರ್ಹುಕುಂ ಸಾಗುವಳಿ ಚೀಟಿ ನೀಡುವ ಗುರಿ ನೀಡಲಾಗಿತ್ತು. ಈ ಅವಧಿಯಲ್ಲಿ ಕನಿಷ್ಠ 5,600 ಫಲಾನುಭವಿಗಳನ್ನು ಗುರುತಿಸಲಾಗಿದೆ. ಶಾಸಕರ ನೇತೃತ್ವದಲ್ಲಿ ಸಮಿತಿ ಸಭೆ ನಡೆಸಿ, ಅವರಿಗೆ ಜಮೀನು ಮಂಜೂರು ಮಾಡಬೇಕು’ ಎಂದು ಹೇಳಿದರು.
ಇದನ್ನೂ ಓದಿ : ಲಿವ್ಇನ್ ಸ್ನೇಹಿತೆಯನ್ನ ಕೊಂದು, ದೇಹವನ್ನು 10 ತಿಂಗಳು ಫ್ರಿಡ್ಜ್ನಲ್ಲಿಟ್ಟಿದ್ದ ವಿವಾಹಿತ
ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು 1-5 ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಹಲವಾರು ತಾಲೂಕುಗಳಲ್ಲಿ 1-5 ನಮೂನೆ ಪೋಡಿ ದುರಸ್ತಿ ಕಾರ್ಯ ಮುಗಿದರೂ, 6-10 ನಮೂನೆ ಸರ್ವೇ ಕೆಲಸಕ್ಕಾಗಿ ಭೂ ದಾಖಲೆಯ ಸಹಾಯ ನಿರ್ದೇಶಕರಿಗೆ ಕಳುಹಿಸಲು ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ತಹಶೀಲ್ದಾರ್ಗಳನ್ನು ತರಾಟೆಗೆ ತೆಗೆದುಕೊಂಡರು.
ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ವರ್ಷಗಳಿಗಿಂತ ಹೆಚ್ಚುಕಾಲ ಬಾಕಿ ಉಳಿದಿರುವ ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡದ ತಹಶೀಲ್ದಾರರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ತಕರಾರು ಅರ್ಜಿಗಳನ್ನು ಉಳಿಸಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ಕುಮಾರ್, ಸರ್ವೆ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ: ಮಂಡ್ಯದಲ್ಲಿ ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ