ಮಂಡ್ಯ: ‘ಜಿಲ್ಲಾ ಕಸಾಪ ಪದಾಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಹಾಗೂ ಜಿಲ್ಲೆಯ ಜನರನ್ನು ಅಪಮಾನಿಸಿರುವ ಕಸಾಪ ಅಧ್ಯಕ್ಷ ಮಹೇಶ ಜೋಶಿ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡಿ ಮಹದೇವು ಮತ್ತು ಕೀಲಾರ ಕೃಷ್ಣೇಗೌಡ, ಎಚ್ಚರಿಕೆ ನೀಡಿದರು. ಮಂಡ್ಯ
’87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನʼ ದ ಯಶಸ್ಸಿಗೆ ಹಗಲಿರುಳು ದುಡಿದ ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಏಕಾಏಕಿ ವಿಸರ್ಜಿಸಿದರು. ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಒಂದು ಕೃತಜ್ಞತೆ ಸಲ್ಲಿಸಲಿಲ್ಲ. ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರಿಗೆ ಪ್ರತಿ ಹಂತದಲ್ಲೂ ತೊಂದರೆ ನೀಡಿ, ಅವಮಾನಿಸಿದ್ದಾರೆ. ನಿರಂಕುಶ ಪ್ರಭುತ್ವದಂತೆ ವರ್ತಿಸಿ ಮಂಡ್ಯ ಜಿಲ್ಲೆಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.
ಸಮ್ಮೇಳನದ ಆರಂಭದಿಂದಲೂ ಒಂದಲ್ಲ ಒಂದು ವಿವಾದಗಳನ್ನು ಜೋಶಿಯವರು ತೆಗೆದರು. ಸಮ್ಮೇಳನಾಧ್ಯಕ್ಷರಾಗಿ ಸಾಹಿತ್ಯೇತರರನ್ನು ಆಯ್ಕೆ ಮಾಡುವಂತೆ ಗಣ್ಯರು ಶಿಫಾರಸು ಪತ್ರ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಪರಿಷತ್ತಿನ ಪಾವಿತ್ರ್ಯತೆಗೆ ಕಳಂಕ ತಂದರು. ಸಮ್ಮೇಳನದ ಸ್ಥಳ ವಿವಾದಕ್ಕೆ ಜಿಲ್ಲಾಡಳಿತ ಕಾರಣ ಅಂತ ಹೇಳಿ ಗೊಂದಲ ಸೃಷ್ಟಿಸಿದರು. ಮದ್ಯಪಾನ- ಧೂಮಪಾನದ ಜೊತೆಗೆ ಮಾಂಸಾಹಾರವನ್ನು ಹೋಲಿಕೆ ಮಾಡಿ ನಿಷೇಧ ಹೇರುವ ಮೂಲಕ ಅವಾಂತರ ಸೃಷ್ಟಿಸಿದರು ಎಂದು ದೂರಿದರು.
ಇದನ್ನೂ ಓದಿ: ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯವೇ? ಜನಸಾಮಾನ್ಯರಿಗೆ ಹೊರೆಯಾಗದಂತೆ ದರ ನಿಗದಿಮಾಡಲು ಬೇರೆ ಮಾರ್ಗ ಇಲ್ಲವೇ?
ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಸಾಹಿತಿಗಳನ್ನು, ಕಸಾಪ ಮಾಜಿ ಅಧ್ಯಕ್ಷರು, ಸಂಘಟಕರು, ಹೋರಾಟಗಾರರು ಮತ್ತು ಕನ್ನಡಪರ ಸಂಘಟನೆಗಳನ್ನು ನಿರ್ಲಕ್ಷಿಸಿದ ಜೋಶಿ ಅವರು ಹಿಟ್ಲರ್ನಂತೆ ವರ್ತಿಸಿದರು.
ತಮ್ಮ ಸ್ವಾರ್ಥ ಅಧಿಕಾರಕ್ಕಾಗಿ ಕಸಾಪ ಬೈಲಾವನ್ನು ತಿರುಚಿ, ತಮ್ಮನ್ನು ಪ್ರಶ್ನಿಸಿದವರನ್ನು ಕಸಾಪ ಸದಸ್ಯತ್ವದಿಂದ ತೆಗೆದುಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಜೆ.ಸುರೇಶ್, ಪ್ರೊ.ಎಸ್.ಮಂಜು, ಕೆ.ಎಸ್.ಜವರೇಗೌಡ ಇದ್ದರು.
ಇದನ್ನೂ ನೋಡಿ: ಹಾಸನ | ಅಂಬೇಡ್ಕರ್ಗೆ ಅವಮಾನ : ಅಮಿತ್ ಶಾ ವಿರುದ್ಧ ರಸ್ತೆ ತಡೆ – ಬಂಧನ ಬಿಡುಗಡೆJanashakthi Media