ತಿರುಪತಿ : ತಿರುಪತಿಯಲ್ಲಿ ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತದಲ್ಲಿ ಐವರು ಮಹಿಳಾ ಭಕ್ತರು ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ತಿರುಪತಿ
ಭಕ್ತರು ವಿತರಣಾ ಕೇಂದ್ರಗಳತ್ತ ಸರ್ವದರ್ಶನ ಟಿಕೆಟ್ಗಾಗಿ ಒಮ್ಮೆಲೇ ನುಗ್ಗಿ ಬಂದ ಕಾರಣ, ಕಾಲ್ತುಳಿತ ಉಂಟಾಗಿದೆ. ಇದರಿಂದ ಹಲವು ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮೃತ ಭಕ್ತರಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳೆ ಕೂಡ ಇದ್ದಾರೆ.
ಏನಾಯ್ತು? 10, 11 ಮತ್ತು 12 ರಂದು ವೈಕುಂಠ ಏಕಾದಶಿ ನಿಮಿತ್ತ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠದ್ವಾರ ಸರ್ವದರ್ಶನಕ್ಕೆ ಟಿಕೆಟ್ ನೀಡಲಾಗುವುದು ಎಂದು ಟಿಟಿಡಿ ಪ್ರಕಟಿಸಿತ್ತು. ಸಾಗರೋಪಾದಿಯಲ್ಲಿ ಬಂದಿರುವ ಭಕ್ತರು ಟಿಕೆಟ್ಗಾಗಿ ಕಾದು ಕುಳಿತಿದ್ದರು. ಹೆಚ್ಚಿನ ಭಕ್ತರು ಬಂದ ಹಿನ್ನೆಲೆಯಲ್ಲಿ ಟಿಟಿಡಿ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ ಇಂದೇ ಟಿಕೆಟ್ ನೀಡಲು ಕೌಂಟರ್ ತೆರೆದಿದೆ. ಈ ವೇಳೆ ಭಕ್ತರು ಟಿಕೆಟ್ ಪಡೆದುಕೊಳ್ಳಲು ಕೌಂಟರ್ಗಳತ್ತ ನುಗ್ಗಿ ಬಂದಿದ್ದಾರೆ. ಈ ವೇಳೆ ಭಾರೀ ಕಾಲ್ತುಳಿತ ಉಂಟಾಗಿದೆ.
ಇದನ್ನೂ ಓದಿ : ಅಗ್ನಿ ಅವಘಡ: ನಾಲ್ವರ ಜೀವ ಉಳಿಸಿದ ಸಾಕುನಾಯಿ
ಎಲ್ಲ ಭಕ್ತರನ್ನು ಟಿಕೆಟ್ ಕೌಂಟರ್ನ ಹೊರಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಎಲ್ಲರೂ ಸರತಿ ಸಾಲಿನಲ್ಲಿ ಬರಲು ಸಿಬ್ಬಂದಿ ಸೂಚಿಸಿದ್ದಾರೆ. ಈ ವೇಳೆ ಭಕ್ತರು ಏಕಾಏಕಿ ಧಾವಿಸಿ ಬಂದಿದ್ದಾರೆ. ಇದರಿಂದ ಮಹಿಳೆಯರು, ಹಿರಿಯರು ಜನಸಂದಣಿಯಲ್ಲಿ ಸಿಲುಕಿಕೊಂಡಿದ್ದಾರೆ.
ಕಾಲ್ತುಳಿತದಲ್ಲಿ ಸಿಲುಕಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ. ಆದರೆ, ಅದರಲ್ಲಿ ಚಿಕಿತ್ಸೆ ಫಲಿಸದೆ ಐವರು ಮಹಿಳೆಯರು ಮತ್ತು ಓರ್ವ ಪುರುಷ ಸಾವಿಗೀಡಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ವ್ಯವಸ್ಥೆ ಕೊರತೆ : ಟಿಕೆಟ್ ನೀಡುವ ಮುನ್ನ ಕೌಂಟರ್ಗಳಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಭದ್ರತೆಯನ್ನೂ ನೀಡಿಲ್ಲ. ಹೀಗಾಗಿ ನೂಕುನುಗ್ಗಲು ಉಂಟಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷ್ಣುನಿವಾಸ, ಬೈರಾಗಿಪಟ್ಟೆಡ ರಾಮಾನಾಯ್ಡು ಶಾಲೆ, ಸತ್ಯನಾರಾಯಣಪುರದ ಟಿಕೆಟ್ ವಿತರಣಾ ಕೇಂದ್ರದಲ್ಲೂ ನೂಕುನುಗ್ಗಲು ಉಂಟಾಗಿದೆ. ಇಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಟೋಕನ್ ವಿತರಣೆ ಪ್ರಾರಂಭ : ಗುರುವಾರ ಬೆಳಗ್ಗೆಯಿಂದ ದಿನಕ್ಕೆ 40 ಸಾವಿರದಂತೆ 3 ದಿನಗಳಲ್ಲಿ 1 ಲಕ್ಷದ 20 ಸಾವಿರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಬುಧವಾರ ಸಂಜೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಇದರಿಂದ 9 ಕಡೆಗಳಲ್ಲಿ 90 ಕೌಂಟರ್‌ಗಳ ಮೂಲಕ ಸರ್ವದರ್ಶನ ಟಿಕೆಟ್ ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ.
ಇದನ್ನೂ ನೋಡಿ : ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ: ಮಂಡ್ಯದಲ್ಲಿ ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ