ಅಗ್ನಿ ಅವಘಡ: ನಾಲ್ವರ ಜೀವ ಉಳಿಸಿದ ಸಾಕುನಾಯಿ

ಕೊಪ್ಪಳ: ಅಗ್ನಿ ಅವಘಡ ಸಂಭವಿಸಿದ ಸಮಯದಲ್ಲಿ ನಾಯಿ ಬೊಗಳಿ, ನಾಲ್ವರ ಜೀವ ಉಳಿಸಿರುವ ಅಚ್ಚರಿಯ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮಹಾವೀರ ಸರ್ಕಲ್‌ನಲ್ಲಿ ನಡೆದಿದೆ.

ನಾಯಿ ನಿಯತ್ತಿನ ಪ್ರಾಣಿ ಅಷ್ಟೇ ಅಲ್ಲದೇ, ತನ್ನನ್ನು ಸಾಕಿದವರ ಜೀವ ಕೂಡಾ ಕಾಪಾಡುವಂತಹ ಪ್ರಾಣಿ., ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಜೀವಂತ ದಹನವಾಗುತ್ತಿದ್ದರು. ರಾತ್ರಿ ಸಮಯದಲ್ಲಿ ನಾಯಿ ಬೊಗಳಿ, ನಾಲ್ವರ ಜೀವ ಉಳಿಸಿದೆ.

ಸುಟ್ಟು ಕರಕಲಾಗಿರುವ ವಸ್ತುಗಳ ಮಧ್ಯೆ ಬದುಕು ಮುೂರಾಬಟ್ಟೆಯಾಗಿದ್ದರಿಂದ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದ ಆ ಕುಟುಂಬದವರಿಗೆ, ಅಬ್ಬಾ ಜೀವ ಉಳಿಯಿತಲ್ಲ ಎಂಬ ನಿಟ್ಟುಸಿರು ಕೂಡ ಇತ್ತು. ಅಲ್ಲಿ ಅಗ್ನಿ ಅವಘಡ ಸಂಭವಿಸಿ ದೊಡ್ಡ ಅನಾಹುತವೇ ನಡೆದಿತ್ತು. ಒಂದು ಕ್ಷಣ ಯಾಮಾರಿದ್ದರೆ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿ ಹೋಗುತ್ತಿದ್ದರು.  ನಾಲ್ವರು ಕ್ಷಣಾರ್ಧದಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಹಾಗಂತ ಇವರ ಜೀವ ಉಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಅಲ್ಲ. ಬದಲಾಗಿ ಸಾಕುನಾಯಿ!

ಗಂಗಾವತಿ ನಗರದ ಮಹಾವೀರ ಸರ್ಕಲ್ ಬಳಿ ಮಂಗಳವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್​​​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿಕೊಂಡಿದ್ದ ಬೆಂಕಿ, ಸುತ್ತಮುತ್ತಲಿನ ಅಂಗಡಿ, ಮನೆಗಳಿಗೆ ವ್ಯಾಪಿಸಿಕೊಂಡಿತ್ತು. ಇದೇ ಸಮಯದಲ್ಲಿ ಹೋಟೆಲ್​ನಲ್ಲಿದ್ದ ಸಿಲಿಂಡರ್ ಕೂಡಾ ಸ್ಫೋಟಗೊಂಡಿತ್ತು. ಆದರೂ ಹೋಟೆಲ್ ಪಕ್ಕದಲ್ಲಿದ್ದ ಮನೆಯಲ್ಲಿ ಗಂಡ ಹೆಂಡತಿ ಮತ್ತು ಇಬ್ಬರ ಮಕ್ಕಳು ಮಲಗಿದ್ದರು. ಚಳಿಯಿದ್ದಿದ್ದರಿಂದ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದ ನಾಲ್ವರಿಗೆ, ಹೊರಗೆ ಏನಾಗುತ್ತಿದೆ ಎಂಬುದೇ ಗೊತ್ತಿರಲಿಲ್ಲ.

ಇದನ್ನೂ ಓದಿ : ಮಹಿಳೆಯರ ದೇಹ ರಚನೆಯ ಬಗ್ಗೆ ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ: ಕೇರಳ ಹೈಕೋರ್ಟ್

ಆದರೆ ಅವರ ಮನೆಯಲ್ಲಿದ್ದ ಡೇಜಿ ಎಂಬ ಸಾಕು ನಾಯಿ ಹೊರಗಡೆ ಬಂದು, ಜೋರಾಗಿ ಬೊಗಳಲು ಆರಂಭಿಸಿತ್ತು. ನಾಯಿ ಬೊಗಳುವುದನ್ನು ಕೇಳಿದ ಮನೆ ಯಜಮಾನಿ ಅಲಿವೇಲಿ, ಯಾರಾದರೂ ಕಳ್ಳರು ಬಂದಿದ್ದಾರಾ ಎಂದು ಹೊರಗಡೆ ಬಂದು ನೋಡಿದರೆ, ಸುತ್ತಮುತ್ತ ಬೆಂಕಿ ಆವರಿಸಿಕೊಂಡಿತ್ತು. ಕೂಡಲೇ ಮನೆಯಲ್ಲಿದ್ದವರನ್ನು ಎಬ್ಬಿಸಿದ ಅವರು ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾರೆ.

ಅಷ್ಟೇ ಅಲ್ಲದೆ, ಮನೆಯಲ್ಲಿದ್ದ ಸಿಲಿಂಡರ್​​ವೊಂದನ್ನು ಹೊರತಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ದವಸಧಾನ್ಯಗಳು, ಬಟ್ಟೆ, ಹಣ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಮೈಮೇಲಿನ ಬಟ್ಟೆ ಬಿಟ್ಟರೆ, ಉಳಿದೆಲ್ಲ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದೆ. ಆದರೆ, ಸಾಕು ನಾಯಿಯ ಸಮಯ ಪ್ರಜ್ಞೆಯಿಂದ ಜೀವ ಉಳಿದಿದೆ.

ಹೋಟೆಲ್​​​ನಲ್ಲಿ ಹೊತ್ತಿಕೊಂಡ ಬೆಂಕಿ, ಕೆಲವೇ ನಿಮಿಷಗಳಲ್ಲಿ ಸುತ್ತಮುತ್ತಲಿನ ಅಂಗಡಿಗಳಿಗೆ, ಮನೆಗೆ ವ್ಯಾಪಿಸಲು ಆರಂಭಿಸಿದೆ. ಈ ಸಮಯದಲ್ಲಿ ಮಾಹಿತಿ ತಿಳಿದ ಅಂಗಡಿ ಮುಂದಿನ ಮನೆಯ ಓರ್ವ ಮಹಿಳೆ, ಅಂಗಡಿಯ ಓರ್ವ ಮಾಲೀಕ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಪೈಪ್​ನಿಂದ ನೀರು ಬಿಟ್ಟು ಬೆಂಕಿ ನಂದಿಸಲು ಯತ್ನಿಸಿದ್ದಾರೆ.

ಆದರೆ ಇದೇ ಸಮಯದಲ್ಲಿ ಹೋಟೆಲ್​ನಲ್ಲಿದ್ದ ಸಿಲಿಂಡರ್ ಸ್ಫೋಟವಾಗಿದ್ದರಿಂದ, ಅವರ ಮೈಗೂ  ಬೆಂಕಿ ತಗುಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂರು ಅಂಗಡಿಗಳು, ಒಂದು ಮನೆ ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ನಾಶವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರೂ, ಅಷ್ಟರಲ್ಲಾಗಲೇ ವಸ್ತುಗಳು ಸುಟ್ಟು ಕರಕಲಾಗಿದ್ದವು. ಪರಿಣಾಮವಾಗಿ ಅನೇಕರ ಬದುಕು ಇದೀಗ ಬೀದಿಗೆ ಬಿದ್ದಿದೆ.

ಇದನ್ನೂ ನೋಡಿ : ಬಸ್‌ ‍ಪ್ರಯಾಣ ದರ ಹೆಚ್ಚಳ : ಫ್ರೀಡಂ ಪಾರ್ಕ್‌ ಬಳಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *