ಮಂಗಳೂರು: ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅಮಾನತಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕಮೀಷನರ್ ಅಗ್ರವಾಲ್ ಅಮಾನತು ಗೊಳಿಸಬೇಕು, ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದಿನಂತ ಧರಣಿ, ಪ್ರತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳು ಇಂದು ಹಮ್ಮಿಕೊಂಡಿದ್ದ “ಸಾಮೂಹಿಕ ಧರಣಿ” ಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡರು. ಕಮೀಷನರ್ ಅಮಾನತಿಗೆ ಬಲವಾಗಿ ಆಗ್ರಹಿಸಿದರು ಎಂದು ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಕಾಟಿಪಳ್ಳ ತಿಳಿಸಿದರು.
ಸಾಮೂಹಿಕ ಧರಣಿಯನ್ನು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಮಂಗಳೂರು ಪೊಲೀಸ್ ಕಮೀಷನರ್ ಅಮಾನತಿಗಾಗಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದೇವೆ. ರಾಜ್ಯ ಸರಕಾರ ನಮ್ಮ ಬೇಡಿಕೆಗೆ ಇನ್ನೂ ಸ್ಪಂದಿಸದಿರುವುದು ವಿಷಾದನೀಯ. ಇದು ಕಮೀಷನರ್ ಅಗ್ರವಾಲ್ ಜನಪರ ಹೋರಾಟಗಾರರ ಮೇಲೆ ಎಫ್ಐಆರ್ ಹಾಕಿದ್ದಾರೆ ಎಂಬ ತಕಾರಾರು ಅಷ್ಟೆ ಅಲ್ಲ. ಮಂಗಳೂರಿನಲ್ಲಿ ಯಾರ ಆಡಳಿತ ನಡೆಯುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. ಬಿಜೆಪಿ, ಸಂಘ ಪರಿವಾರಗಳು ಹಮ್ಮಿಕೊಳ್ಳುವ ಪ್ರತಿಭಟನೆಗಳಿಗೆ, ದ್ವೇಷ ಭಾಷಣಗಳಿಗೆ ಅವಕಾಶ ಇರುವಾಗ, ಕೆಂದ್ರ ಸರಕಾರ, ಬಿಜೆಪಿಯ ಶಾಸಕ, ಸಂಸದರು, ನಗರ ಪಾಲಿಕೆಯ ವೈಫಲ್ಯಗಳ ವಿರುದ್ಧ ಪ್ರತಿಭಟನೆಗಳಿಗೆ ಯಾಕೆ ಅವಕಾಶ ನೀಡುವುದಿಲ್ಲ, ಅಂತಹ ಪ್ರತಿಭಟನೆಗಳ ಮೇಲೆ ಮಾತ್ರ ಎಫ್ಐಆರ್ ಹಾಕಲಾಗುತ್ತಿದೆ ಎಂಬುದು ನಮ್ಮ ಪ್ರಶ್ನೆ. ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಗಳಿಗೆ ವಿರುದ್ದವಾಗಿ ಕಮೀಷನರ್ ಅಗ್ರವಾಲ್ ನಡೆದುಕೊಳ್ಳುತ್ತಿರುವಾಗ, ಮಸಾಜ್ ಪಾರ್ಲರ್, ಅಕ್ರಮ ಮರಳುಗಾರಿಕೆ, ಗ್ಯಾಂಬ್ಲಿಂಗ್ ಗಳಿಗೆ ಮುಕ್ತ ಅವಕಾಶ ಕೊಟ್ಟು ರಾಜ್ಯ ಸರಕಾರದ ಗೌರವಕ್ಕೆ ಕಮೀಷನರ್ ಅಗ್ರವಾಲ್ ಮಸಿ ಬಳಿಯುತ್ತಿರುವಾಗ ಜಿಲ್ಲೆಯ ಕಾಂಗ್ರೆಸ್ ನಾಯಕರು ಯಾಕೆ ಮೌನ ವಹಿಸಿದ್ದಾರೆ, ಕಮೀಷನರ್ ರ ಈ ನಡೆಯ ವಿರುದ್ದ ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಮುನೀರ್ ಕಾಟಿಪಳ್ಳ ಕಮೀಷನರ್ ಅಗ್ರವಾಲ್ ವಿರುದ್ಧ ಆರೋಪಗಳ ಪಟ್ಟಿಯನ್ನು ಹೊರಿಸಿದರು. ಸಿದ್ದರಾಮಯ್ಯ ಸರಕಾರ ಈಗಲಾದರು ಮಂಗಳೂರು ಕಡೆಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ರಾಜ್ಯ ವಕ್ತಾರ ಎಮ್ ಜಿ ಹೆಗ್ಡೆ ಮಾತನಾಡಿ, ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಜಾತ್ಯಾತೀತ ಚಳವಳಿಗಳು ಒಂದೇ ವೇದಿಕೆಯಡಿ ಜನಪರ ಹೋರಾಟಗಳನ್ನು ಸಂಘಟಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿಗಳು ಮರಣದ ಹೆದ್ದಾರಿಗಳಾಗಿವೆ. ಟೋಲ್ ಕಟ್ಟಿ ಅಪಾಯಕಾರಿಯಾಗಿ ಸಂಚರಿಸುವ ಸ್ಥಿತಿ ಅವಿಭಜಿತ ಜಿಲ್ಲೆಯ ವಾಹನ ಸವಾರರಿಗೆ ಎದುರಾಗಿದೆ. ಇಂತಹ ಅವ್ಯವಸ್ಥೆಯ ವಿರುದ್ದ ಹೋರಾಟ ನಡೆಸಬಾರದು ಎಂದು ನಿರ್ಬಂಧಿಸುವುದು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಇಲ್ಲಿ ಧರಣಿ ಕೂತವರು ಕಾಂಗ್ರೆಸ್ ಪಕ್ಷದ ಜೊತೆಗೆ ಚುನಾವಣೆಯಲ್ಲಿ ಹೆಗಲು ಕೊಟ್ಟವರು, ಅವರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಮಾಜಿ ನ್ಯಾ. ವಿ.ರಾಮಸುಬ್ರಮಣಿಯನ್ ನೇಮಕ
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಮತನಾಡಿ, ಸರ್ವಾಧಿಕಾರಿ ಪ್ರಧಾನಿ ಮೋದಿಯವರನ್ನು ದೆಹಲಿಗೆ ಮುತ್ತಿಗೆ ಹಾಕಿ ಮಣಿಸಿದ್ದೇವೆ, ಮಂಗಳೂರಿನ ಸರ್ವಾಧಿಕಾರಿಯಾಗಲು ಹೊರಟಿರುವ ಅಗ್ರವಾಲ್ ರನ್ನು ಮಣಿಸುವುದು ಜನ ಚಳವಳಿಗಳಿಗೆ ದೊಡ್ಡ ಸವಾಲೇ ಅಲ್ಲ. ಅಗ್ರವಾಲ್ ವರ್ಗಾವಣೆ ಆಗದಿದ್ದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದಲಿತ ನಾಯಕ ಎಂ ದೇವದಾಸ್ ಮಾತನಾಡಿ, ಬಡವರ, ದಮನಿತರ ಹೋರಾಟಗಳನ್ನು ತಿರಸ್ಕಾರದಿಂದ ಕಂಡವರಿಗೆ ಪಾಠ ಕಲಿಸಲು ನಮಗೆ ತಿಳಿದಿದೆ, ಕಾಂಗ್ರೆಸ್ ಸರಕಾರ ಎಚ್ದೆತ್ತುಕೊಳ್ಳಬೇಕು ಎಂದು ಹೇಳಿದರು. ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ಅನುಪಮ್ ಅಗ್ರವಾಲ್ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ. ಜನವರಿ ಎರಡನೇ ವಾರದಲ್ಲಿ ಸಾವಿರಾರು ಜನರು ಸೇರಿ ಕಮೀಷನರ್ ಕಚೇರಿಗೆ ಮಾರ್ಚ್ ನಡೆಸುತ್ತೇವೆ ಎಂದು ಎಚ್ಚರಿಸಿದರು
ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಶೇಖರ ಹೆಜಮಾಡಿ, ಕಾರ್ಮಿಕರ ನಾಯಕರಾದ ವಸಂತ ಆಚಾರಿ, ಸುಕುಮಾರ ತೊಕ್ಕೊಟ್ಟು, ಜನವಾದಿ ಮಹಿಳಾ ಸಂಘಟನೆಯ ರಮಣಿ ಮೂಡಬಿದ್ರೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ರಘು ಎಕ್ಕಾರು, ಕೃಷ್ಣಾನಂದ ಡಿ ಎಸ್, ರಾಜ್ಯ ರೈತ ಸಂಘದ ದಿವಾಕರ ಪೈ ಸುಳ್ಯ, ಪ್ರಾಂತ ರೈತ ಸಂಘದ ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಬೀಡಿ ಮಜೂರರ ಸಂಘದ ರಾಧಾ ಮೂಡಬಿದ್ರೆ, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ದಲಿತ ಹಕ್ಕುಗಳ ಸಮಿತಿಯ ಕೃಷ್ಣಪ್ಪ ಕೊಣಾಜೆ, ಈಶ್ವರಿ ಪದ್ಮುಂಜ, ಕೃಷ್ಣ ತಣ್ಣೀರುಬಾವಿ, ಆದಿವಾಸಿ ಹಕ್ಕುಗಳ ಸಮಿತಿಯ ಕೃಷ್ಣಾ ಇನ್ನಾ, ಕರಿಯ ವಾಮಂಜೂರು, ಕಟ್ಟಡ ಕಾರ್ಮಿಕರ ಸಂಘಟನೆಯ ಯೋಗೀಶ್ ಜಪ್ಪಿನಮೊಗರು, ರವಿಚಂದ್ರ ಕೊಂಚಾಡಿ, ಸಿಐಟಿಯು ಮುಖಂಡರಾದ ಬಿ ಎಮ್ ಭಟ್, ಜಯಂತ ನಾಯ್ಕ್, ಲಕ್ಷ್ಮಿ ಮೂಡಬಿದ್ರೆ, ಡಿವೈಎಫ್ಐ ನ ಬಿ ಕೆ ಇಮ್ತಿಯಾಜ್, ನವೀನ್ ಕೊಂಚಾಡಿ, ರಾಜೇಶ್ ಉರ್ವಸ್ಟೋರ್, ರಿಜ್ವಾನ್ ಹರೇಕಳ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖಂಡರಾದ ಮೂಸಬ್ಬ ಪಕ್ಷಿಕೆರೆ, ಶ್ರೀನಾಥ್ ಕುಲಾಲ್ ಮಾಜಿ ಕಾರ್ಪೊರೇಟರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಜಯಂತಿ ಶೆಟ್ಟಿ, ಅಯಾಝ್ ಕೃಷ್ಣಾಪುರ, ದಯಾನಂದ ಶೆಟ್ಟಿ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷ ಅಲ್ತಾಪ್ ಉಸ್ಮಾನ್, ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷರಾದ ಅಬ್ದುಲ್ ತಯ್ಯೂಬ್, ಜನವಾದಿ ಮಹಿಳಾ ಸಂಘಟನೆಯ ಭಾರತಿ ಬೋಳಾರ, ವಿಲಾಸಿನಿ ತೊಕ್ಕೊಟ್ಟು, ಪ್ರಮೀಳಾ ಶಕ್ತಿನಗರ, ಸಮುದಾಯ ಮಂಗಳೂರು ಇದರ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಬಜಾಲ್ ವಂದಿಸಿದರು.
ಉಸ್ತುವಾರಿ ಸಚಿವರಿಗೆ ಮನವಿ
ಧರಣಿಯ ತರುವಾಯ ಉಸ್ತುವಾರಿ ಸಚಿವರಿಗೆ ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ಅಧ್ಯಕ್ಷರಾದ, ಮಾಜಿ ಸಚಿವ ಬಿ ರಮಾನಾಥ ರೈಗಳ ನೇತೃತ್ವದಲ್ಲಿ ಸಮಿತಿಯ ನಿಯೋಗ ಸಚಿವರ ಕಚೇರಿಯಲ್ಲಿ ಮನವಿ ಸಲ್ಲಿಸಿತು. ಕಮೀಷನರ್ ಅನುಪಮ್ ಅಗ್ರವಾಲ್ ರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿತು ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಇದನ್ನೂ ನೋಡಿ : ಅಮಿತ್ ಶಾ, ಸಿ.ಟಿ.ರವಿ ಅನುಚಿತ ವರ್ತನೆ – ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆ Janashakthi Media