ದಕ್ಷಿಣ ಕನ್ನಡ: ಕಮೀಷನರ್ ಅನುಪಮ್ ಅಗ್ರವಾಲ್ ವಿರುದ್ದದ ಹೋರಾಟ ತೀವ್ರಗೊಳಿಸಲು ಜಂಟಿ ವೇದಿಕೆ ನಿರ್ಧಾರಿಸಿದೆ. ಜನಪರ ಸಂಘಟನೆಗಳು ಹಮ್ಮಿಕೊಳ್ಳುವ ಧರಣಿ, ಪ್ರತಿಭಟನೆಗಳಿಗೆ ನಿಯಮಗಳನ್ನು ಮೀರಿ ಅನಧಿಕೃತ ನಿರ್ಬಂಧ ಹೇರುವ, ಹೋರಾಟಗಾರರ ಮೇಲೆ ದುರುದ್ದೇಶದಿಂದ ಎಫ್ಐಆರ್ ಹಾಕುತ್ತಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ರನ್ನು ಅಮಾನತುಗೊಳಿಸಬೇಕು, ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ತನಿಖೆ ಕೈಗೊಳ್ಳಬೇಕು, ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದಿನಂತೆ ಧರಣಿ, ಪ್ತತಿಭಟನೆಗಳಿಗೆ ಮುಕ್ತ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 23 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 1:00 ಗಂಟೆ ವರಗೆ ಬೃಹತ್ ಸಾಮೂಹಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಕಮೀಷನರ್ ಅಗ್ರವಾಲ್ ಜನಪರ ಸಂಘಟನೆಗಳು, ಜನ ಸಾಮಾನ್ಯರ ಬೇಡಿಕೆಗಳ ಮೇಲಿನ ಹೋರಾಟಗಳ ಕುರಿತು ಪೂರ್ವಾಗ್ರಹಗಳನ್ನು ಹೊಂದಿದ್ದಾರೆ, ತಿರಸ್ಕಾರ ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ನೆಪಗಳನ್ನು ಮುಂದಿಟ್ಟು ಧರಣಿ, ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಸರಕಾರದ ಯಾವುದೆ ಆದೇಶ ಇಲ್ಲದಿದ್ದರೂ , ಪ್ರತಿಭಟನೆಗಳು ಮಂಗಳೂರು ಮಿನಿ ವಿಧಾನಸೌಧದ ಮುಂಭಾಗ ಮಾತ್ರ ನಡೆಸಬೇಕು ಎಂದು ಸರ್ವಾಧಿಕಾರಿಯಂತೆ ಆದೇಶಿಸುತ್ತಿದ್ದಾರೆ. ಧರಣಿ ನಿರತರ ಮೇಲೆ ಎಫ್ಐಆರ್ ಗಳನ್ನು ಹಾಕುತ್ತಿದ್ದಾರೆ.
ಇದನ್ನೂ ಓದಿ : ದ.ಕ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳು ಸಭೆ ಕರೆಯಬೇಕು: ಹೋರಾಟ ಸಮಿತಿ ಆಗ್ರಹ
ಮತ್ತು, ಇಂತಹ ನಿರ್ಬಂಧಗಳು, ನಿಷೇಧಗಳನ್ನು ಜನಪರ, ಜಾತ್ಯಾತೀತ ಸಂಘಟನೆಗಳಿಗಷ್ಟೆ ಸೀಮೀತಗೊಳಿಸುತ್ತಿದ್ದಾರೆ. ಬಲಪಂಥೀಯ ಸಂಘಟನೆಗಳಿಗೆ ಇಂತಹ ಯಾವುದೇ ನಿರ್ಬಂಧಗಳನ್ನು ವಿಧಿಸದೆ ಬಹಿರಂಗ ತಾರತಮ್ಯ ಅನುಸರಿಸುತ್ತಿದ್ದಾರೆ. ಇದಲ್ಲದೆ, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ಜೂಜು, ಗ್ಯಾಂಬ್ಲಿಂಗ್ ಗಳಿಗೆ ಮುಕ್ತ ಅವಕಾಶ ಒದಗಿಸಿದ್ದಾರೆ.
ಇಂತಹ ಜನ ವಿರೋಧಿ, ಸರ್ವಾಧಿಕಾರಿ ಪೊಲೀಸ್ ಕಮೀಷನರ್ ರನ್ನು ತಕ್ಷಣ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದು ಹಲವು ಹಂತದ ಹೋರಾಟಗಳನ್ನು ನಡೆಸಲಾಗಿದೆ. ಆದರೂ, ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಹೋರಾಟ ತೀವ್ರಗೊಳಿಸಲು ಜಂಟಿ ವೇದಿಕೆ ತೀರ್ಮಾನಿಸಿದೆ. ಅದರ ಭಾಗವಾಗಿ ಡಿಸೆಂಬರ್ 23 ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ದಲಿತ, ರೈತ, ಕಾರ್ಮಿಕ. ಮಹಿಳಾ, ಯುವಜನ ಸಂಘಟನೆಗಳೂ ಒಳಗೊಂಡು ಇಪ್ಪತ್ತೈದಕ್ಕೂ ಹೆಚ್ಚು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ, ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ತಿಳಿಸಿದೆ ಎಂದು ಹೇಳಿದರು.
ಇದನ್ನೂ ನೋಡಿ : ಹಾಡು | ‘ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media