ಭೂದೇವಿ
ಎಷ್ಟೇ ಕ್ರಾಂತಿಗಳು ನಡೆದರೂ
ಮಹಿಳೆ ಎಂಬವಳು.
ಗಂಡು ವಾರಸನ್ನು ಪಡೆಯಲು ವಿಫಲವಾದರೆ
ಒಂದರ ಹಿಂದೆ ಒಂದ
“ಹೆಣ್ಣು ಹೆರುವವಳು”.
ಅಲ್ಪಾಯಸಲ್ಲಿ ಗಂಡ ಸತ್ತರೆ
ಮಂಗಳ ಕಾರ್ಯದ ವೇದಿಕೆಯ ಮೇಲೆ ನಿಲ್ಲಲಗಾದ
“ವಿಧವೆಯವಳು”.
ತನ್ನೊಡಲ ಹಸಿವ ಹಿಂಗಿಸಲು
ಪುರುಷರ ಕಾಮೋತ್ತೇಜಕಕ್ಕೆ ಆಹಾರವಾದರೆ
“ವೇಶ್ಯೆ” ಅವಳು.
ಪುರುಷತ್ವವಿರದ ವ್ಯಕ್ತಿಯನ್ನು ಮದುವೆಯಾಗಿ
ಮಕ್ಕಳ ಹೆರಲು ಹರಕೆಯ ತೊಟ್ಟಿಲ ಕಟ್ಟಿದರೆ
“ಬಂಜೆ” ಅವಳು
ಸಂತಾನ ಶಕ್ತಿಹರಣದ ಶಸ್ತ್ರಚಿಕಿತ್ಸೆಗೆ
ಪತಿಯನ್ನು ದೂರವಿರಿಸಿ ತಾನು ಕರುಳೊಡ್ಡಿದರೆ
“ವಂಶೋ ಧರ್ಮ ರಕ್ಷಕಿ” ಅವಳು
ವರದಕ್ಷಿಣೆ ಕೇಳುವ ಗಂಡನ ಮನೆಗೂ,
ಕೊಡಲಾಗದ ತವರು ಮನೆಗೂ ನಡುವೆ
ತ್ರಿಶಂಕು ನರಕಕ್ಕೆ ಬಿದ್ದರೆ “ಬಾಳ ಬಿಟ್ಟವಳು” ಅವಳು
ಕುಡುಕ ಗಂಡನಿಂದ ಹೊಡತ- ತುಳಿತ ಸಹಿಸುತ್ತಾ
ಹಾಳುಬಾಳು ನಡೆಸಿದರೆ
“ಶೀಲವತಿ” ಅವಳು.
ಓದಿನಲಿ ಚಿನ್ನ ಗೆದ್ದರು
ಮನೆಯ ಅಗ್ನಿಮೂಲೆಯಲಿ
ಬೆಂದು ಸಾಗಿದರೆ “ಗೃಹಿಣಿ” ಅವಳು.
ಗಂಡನ ವಂಚನೆ ಸಹಿಸಲಾಗದೆ
ಮತ್ತೋರ್ವನಿಗೆ ಸಂಗಾತಿಯಾದರೆ
“ನಡೆತೆಗೆಟ್ಟವಳು” ಅವಳು.
ಅಡೆತಡೆಗಳನು ದಾಟಿ
ತನ್ನಿಷ್ಟದ ಪರ ಜಾತಿಯ ಪ್ರೇಮಿಯನು ಮದುವೆಯಾದರೆ
“ಓಡೋದವಳು” ಅವಳು.
ಎಷ್ಟೇ ಕ್ರಾಂತಿಗಳು ನಡೆದರೂ…
ಹೆಣ್ಣನ್ನು ಜೀವಂತವಾಗಿ ನುಂಗಲು ಭೂಮಿ ಗರ್ಜಿಸುತ್ತದೆ…
ಮಹಿಳೆಯೆಂಬವಳು ” ಭೂದೇವಿ”.