ಬೆಂಗಳೂರು : ಸರ್ಕಾರಿ ಇಲಾಖೆಗಳ ಕಛೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡದಂತೆ ನಿಷೇಧಿಸಿದ ಆದೇಶವನ್ನು ಕರ್ನಾಟಕ ಸರ್ಕಾರ ವಾಪಸ್ ಪಡೆದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯ ಹಿನ್ನಲೆಯಲ್ಲಿ ಈ ನಿಷೇಧವನ್ನು ವಿಧಿಸಲಾಗಿತ್ತು. ಈಗ ತತ್ಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ವಾಪಸ್ ಪಡೆಯಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನಸಾರ ಮತ್ತು ಅವರ ಹೆಸರಿನಲ್ಲಿ ಆನಂದ ಕೆ ಸರ್ಕಾರದ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿದ ಸುಧಾರಣೆ ಇಲಾಖೆ (ಸೇವೆಗಳು) ಆದೇಶವನ್ನು ಹೊರಡಿಸಿದ್ದಾರೆ. 15/7/2022ರ ಸರ್ಕಾರದ ಆದೇಶವನ್ನು ಓದಿ, ಉಲ್ಲೇಖಿಸಿ ಈ ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶ ರಾಜ್ಯ ಸರ್ಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡದಂತೆ ನಿಷೇಧಿಸಿರುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಓದಲಾಗಿದೆ, ಸರ್ಕಾರದ ಆದೇಶ ದಿನಾಂಕ 15/7/2022 ಉಲ್ಲೇಖಿಸಲಾಗಿದೆ.
ಪ್ರಸ್ತಾವನೆ ಮೇಲೆ ಓದಲಾದ ಸರ್ಕಾರದ ಆದೇಶವನ್ನು ಪುನಃ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಮಾಡಲಾಗಿದೆ. ಸರ್ಕಾರದ ಆದೇಶ ದಿನಾಂಕ 15/7/2022 ಅನ್ನು ತಕ್ಷಣದಿಂದ ಹಿಂಪಡೆಯಲಾಗಿದೆ ಎಂದು ತಿಳಿಸಿದೆ.
ಹಿಂದಿನ ಆದೇಶ ಏನಾಗಿತ್ತು? ಈ ಹಿಂದೆ 15/7/2022 ರಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ ತಪಾಸಣೆ) ಆದೇಶವನ್ನು ಹೊರಡಿಸಿದ್ದರು.
ಇದನ್ನೂ ಓದಿ : ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ : ಬೇಳೆಯ ಜೊತೆ ಮೂಳೆ… ಹಪ್ಪಳದ ಜೊತೆ ಕಬಾಬ್ ಇರಲಿ!
ಈ ಆದೇಶ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಛೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ವಿಡಿಯೋ ಮಾಡದಂತೆ ನಿಷೇಧಿಸಿರುವ ಕುರಿತು ಎಂಬ ವಿಷಯ ಒಳಗೊಂಡಿತ್ತು. ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ನೌಕರರ ಸಂಘ, ಕಬ್ಬನ್ ಉದ್ಯಾನವನ ಬೆಂಗಳೂರು ಇವರ ಮನವಿ ದಿನಾಂಕ 25-02-2022 ಉಲ್ಲೇಖಿಸಲಾಗಿತ್ತು.
ಆದೇಶದಲ್ಲಿ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು ಇವರು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಕಛೇರಿಗಳಿಗೆ ಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವುದು ಸರ್ವೇಸಾಮಾನ್ಯವಾಗಿದೆ.
ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಛೇರಿಗಳಿಗೆ ಕಛೇರಿ ವೇಳೆಯಲ್ಲಿ ಬಂದು ಕಛೇರಿಯ ಫೋಟೋ/ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಹಾಗೂ ಇಂತಹ ಫೋಟೋ/ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆ ಸರ್ಕಾರದ ಘನತೆಗೆ ಕುಂದುಂಟಾಗುತ್ತಿರುವುದು ಹಾಗೂ ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಛೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ವಿಡಿಯೋ ಮಾಡದಂತೆ ನಿಷೇಧಿಸುವ ನಿರ್ಬಂಧಿಸುವ ಕುರಿತು ಮನವಿ ಮಾಡಿರುತ್ತಾರೆ.
ಈ ಕುರಿತು ಸರ್ಕಾರವು ಕೂಲಂಕುಷವಾಗಿ ಗಮನಹರಿಸಿದ್ದು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಛೇರಿ ವೇಳೆಯಲ್ಲಿ ಸಾರ್ವಜನಿಕರು ಅನಧಿಕೃತವಾಗಿ ಫೋಟೋ/ ವಿಡಿಯೋ ಮಾಡದಂತೆ ನಿರ್ಬಂಧಿಸುವುದು ಅವಶ್ಯಕವಾಗಿರುತ್ತದೆಂದು ಅಭಿಪ್ರಾಯಪಟ್ಟಿರುತ್ತದೆ.
ಅದರಂತೆ, ಸರ್ಕಾರದ 15-07-2022ರ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಛೇರಿ ವೇಳೆಯಲ್ಲಿ ಅನುಮತಿಯಿಲ್ಲದ ಸಾರ್ವಜನಿಕರು ಅನಧಿಕೃತವಾಗಿ ಫೋಟೋ/ ವಿಡಿಯೋ ಮಾಡದಂತೆ ನಿಷೇಧಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿತ್ತು.
ಇದನ್ನೂ ನೋಡಿ : ಪರಿಸರ ಅರಿವು ಅಭಿಯಾನ ಉಪನ್ಯಾಸ|ಹವಾಮಾನ ಬದಲಾವಣೆ : ಕೃಷಿ ಮತ್ತು ಆಹಾರ ಭದ್ರತೆ Janashakthi Media