ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ!

ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ! ಎಂದು  ಶೈಲಜಾ ಟೀಚರ್ ಅವರ ಆತ್ಮಕತೆಯ ಕನ್ನಡ ಅನುವಾದ “ಕಾಮ್ರೇಡ್ ಆಗಿ ನನ್ನ ಬದುಕು” ಪ್ರಕಾಶಕರಾದ ಕ್ರಿಯಾ ಮಾಧ್ಯಮ ಸಂಸ್ಥೆಯವರು ಆಹ್ವಾನಿಸಿದ್ದಾರೆ.   ಡಾ ವಸುಂಧರಾ ಭೂಪತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಅನುವಾದಕರಾದ ಡಾ.ಎಚ್.ಎಸ್.ಅನುಪಮ ಅವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಪುಸ್ತಕ ಬಿಡುಗಡೆಯ ಜತೆಗೆ “ಸಾರ್ವಜನಿಕ ಆರೋಗ್ಯ ವ್ಯವಸ್ಥೆ : ಸವಾಲುಗಳು, ಸಾಧ್ಯತೆಗಳು” ಎಂಬ ವಿಚಾರ ಸಂಕಿರಣವೂ ನಡೆಯಲಿದೆ.

ಶೈಲಜಾ ಟೀಚರ್ ಈ ವಿಚಾರ ಸಂಕಿರಣದ ಆಶಯ ಭಾಷಣ ಮಾಡಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೋವಿದ್ ಮಹಾಸಾಂಕ್ರಾಮಿಕದ ವಿರುದ್ಧ ತಳಮಟ್ಟದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ಧ ಖ್ಯಾತ ಜನತಾ ವೈದ್ಯರಾದ ಡಾ ಅನಿಲ್ ಕುಮಾರ್ ಎ ಮತ್ತು ಸಾರ್ವತ್ರಿಕ ಆರೋಗ್ಯ ಆಂದೋಲನ -ಕರ್ನಾಟಕದ ಪ್ರಮುಖರಾದ ಪ್ರಸನ್ನ ಸಾಲಿಗ್ರಾಮ ವಿಷಯ ಮಂಡನೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಕ್ರಿಯಾ ಮಾಧ್ಯಮ, ಪುಸ್ತಕ ಪ್ರೀತಿ ಆಯೋಜಿಸಿದ್ದು ಸಾರ್ವತ್ರಿಕ ಆರೋಗ್ಯ ಆಂದೋಲನ -ಕರ್ನಾಟಕ ಸಹಯೋಗ ನೀಡುತ್ತಿದೆ. ಈ ಕೆಳಗೆ ಪುಸ್ತಕದ ಕೆಲವು ಆಯ್ದ ಭಾಗಗಳು ಇವೆ.

ನಾಳೆ ಶೈಲಜಾ ಟೀಚರ್ ಪುಸ್ತಕ ಬಿಡುಗಡೆ : ಟೀಚರ್ ಬರ್ತಾರೆ! ನೀವೂ ಬನ್ನಿ!

ಪುಸ್ತಕದ ಆಯ್ದ ಭಾಗಗಳು

ಕೊವಿಡ್ ಜಗತ್ತು ಹಿಂದೆಂದೂ ಕಂಡರಿಯದ ಒಂದು ಅಸಾಮಾನ್ಯ ಸಾಂಕ್ರಾಮಿಕ ರೋಗವಾಗಿತ್ತು. ಇದು ಸುಭದ್ರ ಆರೋಗ್ಯ ಸವಲತ್ತುಗಳೂ, ವ್ಯವಸ್ಥೆಯೂ ಇಲ್ಲದ ಭಾರತದಂತಹ ದೇಶಗಳಿಗೆ ಮಾತ್ರವಲ್ಲ, ಅತ್ಯಾಧುನಿಕ ಆರೋಗ್ಯ ಸವಲತ್ತುಗಳಿರುವ ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವ ಶ್ರೀಮಂತ ದೇಶಗಳಿಗೂ ಅಸಾಮಾನ್ಯ ಸವಾಲಾಗಿತ್ತು. ಅಸಾಮಾನ್ಯ ಸವಾಲುಗಳು ಬಂದಾಗ ಅಸಾಮಾನ್ಯ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ ಎನ್ನಲಾಗುತ್ತದೆ. ಭಾರತದಲ್ಲಿ ಮೊದಲ ಕೊವಿಡ್ ರೋಗಿಯನ್ನು ಪಡೆದ ಕೇರಳದಲ್ಲಿ ಅದನ್ನು ಎದುರಿಸಲು ಬೆಳಕಿಗೆ ಬಂದ ಅಂತಹ ವ್ಯಕ್ತಿ ಆರೋಗ್ಯ ಮಂತ್ರಿ ಶೈಲಜಾ ಟೀಚರ್. ಇದು ಅವರ ಆತ್ಮಕತೆ.

ಇದೊಂದು ವಿಶಿಷ್ಟ ಆತ್ಮಕತೆ. ಅದನ್ನು ಬರೆದ ವಿಧಾನ ಸಹ ವಿಶಿಷ್ಟ. ತಮ್ಮ ಜೀವನವನ್ನು ಗಾಢವಾಗಿ ಪ್ರಭಾವಿಸಿದ ತಮ್ಮ ಅಜ್ಜಿಯ ಬಗ್ಗೆ ಒಂದು ಪುಸ್ತಕ ಬರೆಯಬೇಕು ಅಂತ ಶೈಲಜಾ ಟೀಚರ್ ಯೋಚಿಸುತ್ತಿದ್ದರಂತೆ. ಆದರೆ ಅದು ಅವರ ಅಜ್ಜಿಯ ಕತೆಯನ್ನೂ ಒಳಗೊಂಡ ಆತ್ಮಕತೆಯಾಗಿ ಬೆಳೆದು ಬರಲು ಒಂದು ರೀತಿಯಲ್ಲಿ ಕೊವಿಡ್ ಕಾರಣವಾಯಿತು. ಅವರ ಕೊವಿಡ್ ನಿರ್ವಹಣೆಯ ವೈಖರಿ ಮಾಧ್ಯಮಗಳಲ್ಲಿ ಸಾಕಷ್ಟು ಆಸಕ್ತಿ, ಮೆಚ್ಚಿಗೆ ಹುಟ್ಟಿಸಿತ್ತು. ‘ವೋಗ್’ ನ ಸಂಪಾದಕರಲ್ಲಿ ಒಬ್ಬರಾದ ಮಂಜು ಸಾರಾ ರಾಜನ್ ಈ ಕುರಿತು ಅವರ ಜತೆ ಹಲವಾರು ಬಾರಿ ಮಾತನಾಡಿ ತಮ್ಮ ಪತ್ರಿಕೆಯಲ್ಲಿ ವಿವರವಾಗಿ ಬರೆದರು. ಶೈಲಜಾ ಟೀಚರ್ ಅವರನ್ನು ‘ವೋಗ್’ ನ ನವೆಂಬರ್ 2020 ರ ಸಂಚಿಕೆಯಲ್ಲಿ “ವರ್ಷದ ನಾಯಕಿ” ಎಂದು ಗುರುತಿಸಲಾಯಿತು.

ಶೈಲಜಾ ಟೀಚರ್ ಅವರ ಬದುಕಿನ ಪಯಣದ ಬಗ್ಗೆ ಹಲವು ವಿವರಗಳನ್ನು ತಿಳಿದಿದ್ದ ಮಂಜು ಅವರನ್ನು ತಮ್ಮ ಆತ್ಮಕತೆಯನ್ನು ಬರೆಯಬೇಕು ಅಂತ ಪ್ರೆರೇಪಿಸುತ್ತಾರೆ, ಒತ್ತಾಯಿಸುತ್ತಾರೆ, ತಾವು ಬರವಣಿಗೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾರೆ. ಯಾವುದೇ ಡೈರಿ, ಟಿಪ್ಪಣಿಯಿಲ್ಲದೆ ಶೈಲಜಾ ಟೀಚರ್ ತಮ್ಮ ನೆನಪುಗಳನ್ನು, ಅನುಭವ ಕಥನಗಳನ್ನು ಹೇಳುತ್ತಾ ಹೋಗುತ್ತಾರೆ. ಮಂಜು ‘ಎಲ್ಲವನ್ನು ಇಂಗ್ಲೀಷಿನಲ್ಲಿ ಚಂದವಾಗಿ ಸಂಘಟಿಸಿ, ಜೋಡಿಸಿ, ಕೌಶಲ್ಯಪೂರ್ಣವಾಗಿ ಹರಿತಗೊಳಿಸಿ’ ಬರೆಯುತ್ತಾರೆ. ಶೈಲಜಾ ಕರಡು ನೋಡಿ ತಿದ್ದುತ್ತಾರೆ, ಸೇರಿಸುತ್ತಾರೆ. ಕೊವಿಡ್ ತಂದಿಟ್ಟ ಹಲವು ಸವಾಲುಗಳು ಮತ್ತು ಸಕ್ರಿಯ ರಾಜಕಾರಣಿ ಹಾಗೂ ಸಚಿವರಾಗಿದ್ದ ಶೈಲಜಾ ಅವರ ನೂರು ಕೆಲಸಗಳ ನಡುವೆ ಪುಸ್ತಕದ ಬರವಣಿಗೆ ಕುಂಟುತ್ತಾ ಸಾಗಿದರೂ ಇದನ್ನು ಮುಗಿಸಲೇಬೇಕೆಂಬ ಇಬ್ಬರ ಬದ್ಧತೆಯಿಂದಾಗಿ 2023ರಲ್ಲಿ ಪುಸ್ತಕ ಪ್ರಕಟವಾಗುತ್ತದೆ.

ಇದನ್ನೂ ಓದಿ: ಟ್ರಂಪ್ ವಿಜಯ ಮತ್ತು ನವ-ಉದಾರವಾದದ ಬಿಕ್ಕಟ್ಟು

ಈ ಆತ್ಮಕತೆಯು ಹೂರಣದಲ್ಲೂ ವಿಶಿಷ್ಟವಾಗಿದೆ. ಲೇಖಕರೇ ಹೇಳುವಂತೆ ‘ಇದು ನನ್ನ ಕತೆ. ಅದರ ಜೊತೆಜೊತೆಗೇ ಮಲಬಾರಿನ ಕತೆ. ಕೇರಳದಲ್ಲಿ ಕಮ್ಯುನಿಸಂ ಬೆಳೆದ ಕಥನವೂ ಹೌದು.’ ಅವರ ಕುಟುಂಬ, ಅದು ನೆಲೆಸಿದ ಮಲಬಾರಿನ ಹಳ್ಳಿಯ ನೂರಾರು ವರ್ಷಗಳಿಂದ ‘ರೂಪುಗೊಂಡ ಭೌಗೋಳಿಕತೆ ಮತ್ತು ಸಾಮಾಜಿಕ-ರಾಜಕೀಯ ರಚನೆಗಳು ಒಬ್ಬ ಮಾನವಳಾಗಿ ಮತ್ತು ರಾಜಕಾರಣಿಯಾಗಿ ನನ್ನನ್ನು, ನನ್ನ ಬದುಕನ್ನು ರೂಪಿಸಿವೆ. ನನ್ನ ಬಾಳಕಥನವನ್ನು ಬರೆಯುವುದು ಎಂದರೆ ಆ ಎಲ್ಲ ಸ್ಫೂರ್ತಿಗಳ ಬಗೆಗೆ ಹಿಂತಿರುಗಿ ನೋಡುವ ಅವಕಾಶ.’ ಎನ್ನುತ್ತಾರೆ ಶೈಲಜಾ. ಅವರ ಕುಟುಂಬ ಕಮ್ಯುನಿಸ್ಟ್ ಚಳುವಳಿಯ ಆರಂಭದಿಂದಲೇ ಅದರ ಜತೆ ಹೆಣೆದುಕೊಂಡಿದ್ದರಿಂದ ಮತ್ತು ಅವರು ಪೂರ್ಣಕಾಲದ ಕಾರ್ಯಕರ್ತರಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ತೊಡಗಿಸಿಕೊಂಡದ್ದರಿಂದ ಅವರ ಬಾಳಕತೆ ಕೇರಳದಲ್ಲಿ ಕಮ್ಯುನಿಸ್ಟ್ ಚಳುವಳಿಯ ಕಥನದ ಜತೆಗೂ ಹೆಣೆದುಕೊಳ್ಳುತ್ತದೆ. ಅಸಾಮಾನ್ಯ ಸಾಧನೆ ಮಾಡಿದ ರಾಜಕಾರಣಿಯಾಗಿ ಮತ್ತು ಆರೋಗ್ಯ ಮಂತ್ರಿಯಾಗಿ ಅವರನ್ನು ರೂಪಿಸಿದ ವ್ಯಕ್ತಿಗಳು, ವಿದ್ಯಮಾನಗಳು, ಸಂಘಟನೆಗಳು, ಚಿಂತನೆಗಳ ಕಥನ ಸಹ ಇಲ್ಲಿದೆ. ಈ ಪುಸ್ತಕದಲ್ಲೊಂದು ಕಾಲಾನುಕ್ರಮಣಿಕೆ (ಟೈಮ್ ಲೈನ್) ಇದೆ. ಇದು ಆತ್ಮಕತೆಯಾಗಿರುವುದರಿಂದ ಶೈಲಜಾ ಅವರ ಜೀವನದ ಟೈಮ್ ಲೈನ್ ನ್ನು ಯಾರಾದರೂ ಸಾಮಾನ್ಯವಾಗಿ ನಿರೀಕ್ಷಿಸುತ್ತಾರೆ. ಆದರೆ ಇಲ್ಲಿರುವುದು ಅಪರೂಪದ ಮಾಹಿತಿ ನೀಡುವ ‘ಕೇರಳ ಟೈಮ್ ಲೈನ್’!

(ಪ್ರಕಾಶಕರ ಮಾತಿನಿಂದ)

ಈ ಹೊತ್ತಗೆಯನ್ನು ಒಂದು ಯಶಸ್ವೀ ಮಹಿಳಾ ಕಥನವಾಗಿ; ಯಶಸ್ವಿ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಕಥನವಾಗಿ; ಕಮ್ಯುನಿಸ್ಟ್ ಕೇರಳದ ಸಮಾಜ-ರಾಜಕಾರಣವನ್ನು ತಿಳಿಸಿಕೊಡುವ ಕಥನವಾಗಿ; ಪಕ್ಷ, ಸಂಘಟನೆಯ ಬೆಂಬಲಗಳು ಎಂತಹ ದೊಡ್ಡ ಶಕ್ತಿಯಾಗಬಲ್ಲವು ಎಂದು ತಿಳಿಸುವ ಉದಾಹರಣೆಯಾಗಿ ನೋಡಬಹುದು. `ಎಡಪಂಥೀಯ’ ಎನ್ನುವುದೊಂದು ಮಾನವವಿರೋಧಿ ವಿಚಾರಧಾರೆಯೆಂಬಂತೆ ಬಿಂಬಿಸಲು ಬಲಪಂಥೀಯ ರಾಜಕಾರಣ ಯಶಸ್ವಿಯಾಗಿರುವ ದಿನಗಳಲ್ಲಿ ಪುಸ್ತಕದ ಶೀರ್ಷಿಕೆಯ ಹೆಸರಿನಲ್ಲೇ ಎಡ ಚಿಂತನೆಗಳ ಬಗೆಗೆ ತನಗಿರುವ ಬದ್ಧತೆಯನ್ನು ತಿಳಿಸಿರುವ ಶೈಲಜಾರ ಕೆಂಪುತನ ಪ್ರಾಮಾಣಿಕವಾಗಿದೆ. ಈ ಅನುವಾದ ಕ್ರಿಯೆಯು ನನ್ನಲ್ಲಿದ್ದ ಹಲವು ಒಳತೋಟಿಗಳಿಗೆ, ಆತಂಕಗಳಿಗೆ ನಿರಾಳದ ಮದ್ದೆರೆದಿದೆ.

ಡಾ.ಎಚ್.ಎಸ್.ಅನುಪಮಾ

ಪುಸ್ತಕದ ವಿವರಗಳು ಹೀಗಿವೆ

ಕಾಮ್ರೇಡ್ ಆಗಿ ನನ್ನ ಬದುಕು – ನೆಚ್ಚಿನ ಟೀಚರ್ ಜಗಮೆಚ್ಚಿದ ಆರೋಗ್ಯ ಸಚಿವೆಯಾದ ಕಥನ;

ಲೇಖಕರು : ಕೆ.ಕೆ.ಶೈಲಜಾ ಸಹ ಲೇಖಕರು : ಮಂಜು ಸಾರಾ ರಾಜನ್;

ಅನುವಾದಕರು : ಡಾ. ಎಚ್.ಎಸ್.ಅನುಪಮಾ;

ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ.ಲಿ.;

ಪುಟಗಳು : 298; ಬೆಲೆ : ರೂ.350/-;

ಪುಸ್ತಕದ ಖರೀದಿ ಆಸಕ್ತಿ ಉಳ್ಳವರು ವಿವರಗಳಿಗೆ ಈ ಕೆಳಗಿನ ಪೋಸ್ಟರ್ ನೋಡಿ

 

ಇದನ್ನೂ ನೋಡಿ : ಆರ್‌.ಬಿ. ಮೋರೆ | ಈ ಪುಸ್ತಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರಿಂದ ಸರಳವಾಗಿ ಅನುವಾದಿಸಿದೆ – ಅಬ್ದುಲ್ ರೆಹಮಾನ ಪಾಷಾ

Donate Janashakthi Media

Leave a Reply

Your email address will not be published. Required fields are marked *