ಮಹಾರಾಷ್ಟ್ರ ಚುನಾವಣೆ | ಚಲಾವಣೆಯಾದ ಮತ್ತು ಎಣಿಕೆ ಮಾಡಿದ ಮತಗಳ ನಡುವೆ ಭಾರೀ ಅಂತರ

ಹೊಸದಿಲ್ಲಿ: ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಿಗೂ ಎಣಿಕೆಯಾದ ಮತಗಳಿಗೂ ಭಾರೀ ಅಂತರವಿರುವುದು ಬೆಳಕಿಗೆ ಬಂದಿದೆ. ಎರಡು ಡೇಟಾಗಳು ಹೊಂದಾಣಿಕೆಯಾಗದೆ, 5,04,313 ಹೆಚ್ಚುವರಿ ಮತಗಳು ಕಾಣಿಸುತ್ತಿರುವ ಬಗ್ಗೆ, The Wire ವರದಿ ಮಾಡಿದೆ. ವಿಧಾನಸಭೆ 

ಶನಿವಾರ ಹೊರಬಿದ್ದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿನ ಈ ವ್ಯತ್ಯಾಸಗಳ ಬಗ್ಗೆ ಚುನಾವಣಾ ಆಯೋಗ ಇನ್ನೂ ಪ್ರತಿಕ್ರಿಯಿಸಿಲ್ಲ. ಚುನಾವಣಾ ಆಯೋಗದ ಪ್ರಕಾರ, ಅಂತಿಮ ಮತದಾನದ ಪ್ರಮಾಣ ಶೇ.66.05 ಎಂದಿತ್ತು. ಅಂದರೆ, ಚಲಾವಣೆಯಾದ ಒಟ್ಟು ಮತಗಳು 6,40,88,195.ಇದರಲ್ಲಿ 3,06,49,318 ಮಹಿಳೆಯರು, 3,34,37,057 ಪುರುಷರು ಹಾಗೂ 1,820 ಇತರರು ಇದ್ದಾರೆ.

ಆದರೆ ಎಣಿಕೆಯಾದ ಒಟ್ಟು ಮತಗಳು 6,45,92,508. ಒಟ್ಟು ಚಲಾವಣೆಯಾದ ಮತಗಳಿಗಿಂತ 5,04,313 ಹೆಚ್ಚು ಮತಗಳು ಎಣಿಕೆಗೆ ಸಿಕ್ಕಿವೆ. 5,04,313 ಮತಗಳ ಈ ವ್ಯತ್ಯಾಸ ರಾಜ್ಯದಾದ್ಯಂತ ಎಣಿಕೆಯಾದ ನಿವ್ವಳ ಹೆಚ್ಚುವರಿ ಮತಗಳಾಗಿವೆ. ಎಂಟು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಕಡಿಮೆ ಮತ ಎಣಿಕೆಯಾಗಿದ್ದರೆ, ಉಳಿದ 280 ಕ್ಷೇತ್ರಗಳಲ್ಲಿ ಎಣಿಕೆಯಾದ ಮತಗಳು ಚಲಾವಣೆಯಾದ ಮತಗಳಿಗಿಂತ ಹೆಚ್ಚಿವೆ. ಅಷ್ಟಿ ಕ್ಷೇತ್ರದಲ್ಲಿ ಚಲಾವಣೆಯಾದುದಕ್ಕಿಂತ 4,538 ಹೆಚ್ಚು ಮತಗಳು ಎಣಿಕೆಗೆ ಸಿಕ್ಕಿವೆ. ಉಸ್ಮಾನಾಬಾದ್ ಕ್ಷೇತ್ರದಲ್ಲಿ 4,155 ಹೆಚ್ಚುವರಿ ಮತಗಳ ವ್ಯತ್ಯಾಸ ಕಂಡುಬಂದಿದೆ ಎಂದು The Wire ವರದಿ
ಮಾಡಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಕೂಡ ಮತದಾರರ ಮತದಾನದ ಪ್ರಮಾಣ ಮತ್ತು ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ದಾಖಲಿಸುವ ನಮೂನೆ 17C ಯಲ್ಲಿನ ಪ್ರಮಾಣದಲ್ಲಿ ವ್ಯತ್ಯಾಸ ಕಂಡಿತ್ತು.

ಇದನ್ನೂ ಓದಿ : ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ : ಇವಿಎಂನಲ್ಲಿ ಅಕ್ರಮ ಮರುಚುನಾವಣೆಗೆ ಆಗ್ರಹಿಸಿದ ಸಂಸದ ಸಂಜಯ್ ರಾವತ್‌

ಆ ಸಮಯದಲ್ಲಿ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ADR) ಪ್ರತಿ ಮತದಾನದ ಹಂತದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಆರಂಭಿಕ ಮತ್ತು ಅಂತಿಮ ಮತದಾನದ ಅಂಕಿಅಂಶಗಳ ನಡುವೆ ಶೇ5ರಿಂದ ಶೇ.6ರಷ್ಟು ವ್ಯತ್ಯಾಸ ಕಂಡಿತ್ತು. ಆದರೆ ಆಗ ಆಯೋಗದ ವಾದಗಳ ಆಧಾರದ ಮೇಲೆ ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಫಾರ್ಮ್ 17C ಡೇಟಾ ಅಭ್ಯರ್ಥಿಗಳ ಏಜೆಂಟ್‌ ಮಾಹಿತಿಗಾಗಿಯೇ ಹೊರತು ಸಾರ್ವಜನಿಕಗೊಳಿಸಲು ಅಲ್ಲ ಎಂದು ಆಯೋಗ ಹೇಳಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿನ ಈಗಿನ ಮತ ವ್ಯತ್ಯಾಸಗಳು ಚುನಾವಣಾ ಪ್ರಕ್ರಿಯೆಯಲ್ಲಿನ ಡೇಟಾ ಪಾರದರ್ಶಕತೆ ಮತ್ತು ನಿಖರತೆಯ ಬಗ್ಗೆ ಮತ್ತೊಮ್ಮೆ ಅನುಮಾನ ಹುಟ್ಟುಹಾಕಿವೆ.

ಈ ಹೆಚ್ಚುವರಿ ಮತಗಳು ಚುನಾವಣಾ ಫಲಿತಾಂಶಗಳ ಮೇಲೆ ಬೀರಬಹುದಾದ ಸಂಭಾವ್ಯ ಪರಿಣಾಮ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅದರಲ್ಲೂ ತೀರಾ ನಿಕಟ ಸ್ಪರ್ಧೆ ಇರುವಲ್ಲಿ ಫಲಿತಾಂಶದ ಮೇಲೆ ಈ ಹೆಚ್ಚುವರಿ ಮತಗಳು ಪರಿಣಾಮ ಬೀರಬಹುದಾದ ಸಾಧ್ಯತೆ ಖಂಡಿತ ಇರುತ್ತದೆ.

ಅಲ್ಲಿ ಅಂತಿಮವಾಗಿ ಅಭ್ಯರ್ಥಿಗೆ ಎಷ್ಟು ಮತಗಳು ಬಂದಿವೆ ಎಂಬುದನ್ನು ಮಾತ್ರ ಹೇಳಲಾಗುತ್ತದೆಯೇ ಹೊರತು, ಚಲಾವಣೆಯಾದ ಮತ್ತು ಎಣಿಕೆಯಾದ ಮತಗಳಲ್ಲಿನ ವ್ಯತ್ಯಾಸಗಳ ಬಗ್ಗೆ ಮಾಹಿತಿ ಬಹಿರಂಗವಾಗುವುದಿಲ್ಲ, ಹೆಚ್ಚುವರಿ ಮತಗಳ ವ್ಯತ್ಯಾಸ ನೂರರಷ್ಟು ಅಥವಾ ಸಾವಿರದಷ್ಟು ಇದ್ದಾಗ ಫಲಿತಾಂಶದಲ್ಲಿ ಆ ವ್ಯತ್ಯಾಸ ನಿರ್ಣಾಯಕವಾಗಬಹುದು.

ಮತದಾನಕ್ಕಿಂತ ಹೆಚ್ಚು ಮತಗಳನ್ನು ಎಣಿಸಿದ ಕ್ಷೇತ್ರದ ಒಂದು ಉದಾಹರಣೆಯನ್ನು ಪರಿಗಣಿಸಿದರೆ ನವಾಪು‌ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,95,786 ಮತ್ತು ಮತದಾನದ ಪ್ರಮಾಣ ಶೇ.81.15 ಎಂದು ಆಯೋಗ ಹೇಳಿದೆ, ಅಂದರೆ ಚಲಾವಣೆಯಾದ ಮತಗಳು 2,40,022. ಆದರೆ ಆಯೋಗ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಎಣಿಕೆಯಾದ ಒಟ್ಟು ಮತಗಳು 2,41,193. ಚಲಾವಣೆಯಾದ ಮತಗಳಿಗಿಂತ 1,171 ಹೆಚ್ಚು ಮತಗಳು ಎಣಿಕೆಗೆ ಸಿಕ್ಕಿವೆ. ಇಲ್ಲಿ ಗೆಲುವಿನ ಅಂತರ ತೀರಾ ಕಡಿಮೆಯಿದ್ದು, 1,122 ಮತಗಳಾಗಿವೆ.

ಇನ್ನು ಮತದಾನವಾದುದಕ್ಕಿಂತ ಕಡಿಮೆ ಮತಗಳು ಎಣಿಕೆಗೆ ಸಿಕ್ಕಿರುವ ಒಂದು ಕ್ಷೇತ್ರದ ಉದಾಹರಣೆ ನೋಡವುದಾದರೆ, ಮಾವಲ್‌ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ: 3,86,172, ಮತ್ತು ಮತದಾನದ ಪ್ರಮಾಣ ಶೇ.72.59 ಇತ್ತು. ಅಂದರೆ ಚಲಾವಣೆಯಾದ ಒಟ್ಟು ಮತಗಳು 2,80,319, ಆದರೆ ಆಯೋಗ ಪ್ರಕಟಿಸಿದ ಡೇಟಾ ಪುಕಾರ, ಎಣಿಕೆಯಾದ ಒಟ್ಟು ಮತಗಳು 2,79,081. ಚಲಾವಣೆಯಾದದ್ದಕ್ಕಿಂತ 1,238 ಮತಗಳು ಕಡಿಮೆಯಾಗಿವೆ. ವಿಧಾನಸಭೆ 

ಇದ್ನನೂ ನೋಡಿ : ನವೆಂಬರ್ 26 ಭಾರತದ ಸಂವಿಧಾನ ದಿನ | ಈ ದಿನದ ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ Janashakthi Media

Donate Janashakthi Media

Leave a Reply

Your email address will not be published. Required fields are marked *