ನವದೆಹಲಿ : ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿಯವರ ಭಯೋತ್ಪಾದಕ ಬುಲ್ಡೋಜರನ್ನು ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, ಅದಕ್ಕಾಗಿಯೇ ಅವರು “ಬಂಟೋಗೆ ತೋ ಕಟೋಗೆ” ಎಂಬ ಹೊಸ ಘೋಷಣೆಯನ್ನು ಹುಟ್ಟುಹಾಕಿದ್ದಾರೆ ಎಂದು ಸಿಪಿಐ(ಎಂ)ನ ಹಿರಿಯ ಮಖಂಡರಾದ ಬೃಂದಾ ಕಾರಟ್ ಹೇಳಿದ್ದಾರೆ.
ಅವರು ಝರ್ಖಂಡಿನ ದೇವಘರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಆದರೆ ಝಾರ್ಖಂಡ್‌ನ ಮತದಾರರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ, ಇಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪ್ರಕಾಶ್ ವಿಪ್ಲವ್, ಝಾರ್ಖಂಡಿನ ಸಂತಾಲ್ ಪರಗಣ ವಿಭಾಗದ 18 ವಿಧಾನಸಭಾ ಸ್ಥಾನಗಳ ಪೈಕಿ ಸಿಪಿಐ(ಎಂ) ಜಾಮ್‍ತಾಡಾ, ಜಾಮಾ, ಪಾಕುಡ್ ಮತ್ತು ಮಹೇಶ್‌ಪುರ ಎಂಬ 4 ವಿಧಾನಸಭಾ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇಲ್ಲಿ ಜನ ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುತ್ತಿದ್ದಾರೆ, ಆದರೆ ಇನ್ನೊಂದೆಡೆಯಲ್ಲಿ ಇಲ್ಲಿನ ಚುನಾಯಿತ ಜನ ಪ್ರತಿನಿಧಿಗಳ ಸೇವಕರಿಂದ ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇಡೀ ಭಾಗದಲ್ಲಿ ವಿದ್ಯುತ್ ಕೊರತೆ ಹಾಗೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಎಂದರು.
ಇಲ್ಲಿ ಭೂಮಿಯ ಪ್ರಶ್ನೆ ಪ್ರಮುಖ ಪ್ರಶ್ನೆಯಾಗಿದೆ, ಏಕೆಂದರೆ ದೇಶೀ- ವಿದೇಶಿ ಕಂಪನಿಗಳು ಮತ್ತು ಕಾರ್ಪೊರೇಟ್ ಗಳು ಇಲ್ಲಿನ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಕಲ್ಲಿದ್ದಲು ಗಣಿಗಾರಿಕೆಗಾಗಿ ಖಾಸಗಿ ಕಂಪನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿದೆ. ಖಾಸಗಿ ಕಂಪನಿಗಳು ಆದಿವಾಸಿಗಳು ಮತ್ತು ಇತರ ಬಡವರ ಭೂಮಿಯನ್ನು ರಕ್ಷಿಸಲು ಉದ್ದೇಶಿಸಿರುವ ಪರಗಣ ಗೇಣೀದಾರ ಕಾಯಿದೆಯನ್ನು ಹಾಡುಹಗಲೇ ಉಲ್ಲಂಘಿಸುತ್ತ, ಸ್ಥಳೀಯ ದಲ್ಲಾಳಿಗಳ ಮೂಲಕ ರೈತರ ಭೂಮಿಯ ಲೂಟಿಯನ್ನು ಮುಂದುವರೆಸುತ್ತಿದ್ದಾರೆ ಎಂದು ಪ್ರಕಾಶ್ ವಿಪ್ಲವ್ ಹೇಳುತ್ತಾರೆ.
ಝಾರ್ಖಂಡ್ ಲೂಟ್‍ಖಂಡ್ ಆಗಲು ಬಿಡಬೇಡಿ
ಇದರ ಹಿಂದಿನ ದಿನ ಮಹೇಶ್‍ಪುರದಲ್ಲಿ ಚುನಾವಣಾ ಸಭೆಯಲ್ಲಿ ಮಾತಾಡುತ್ತ, ಝಾರ್ಖಂಡ್ ಲೂಟ್‍ಖಂಡ್ ಆಗಲು ಬಿಡಬೇಡಿ ಎಂದು ಕರೆ ನೀಡಿದರು. ಇಂದು ಯಾವುದೇ ಬಡ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ, ಏಕೆಂದರೆ ಚುನಾವಣಾ ಬಾಂಡಿನಿಂದ ಹಣ ಪಡೆದಿರುವ ಪಕ್ಷದವರು ಹಣವನ್ನು ನೀರಿನಂತೆ ಖರ್ಚು ಮಾಡಿ ವೋಟುಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಬಳಿ ಚುನಾವಣಾ ಬಾಂಡಿನ 8000 ಕೋಟಿ ರೂ. ಜಮಾ ಆಗಿದೆ. ಇದನ್ನು ಅದು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಳಸುತ್ತಿದೆ ಎಂದ ಅವರು ‘ಬಾಂಗ್ಲಾದೇಶೀ ನುಸುಳುಕೋರರು’ ಎಂಬ ಸುಳ್ಳು ಪ್ರಚಾರದ ಬಗ್ಗೆ ಎಚ್ಚರದಿಂದಿರಿ ಎಂದು ಮತದಾರರಿಗೆ ಕರೆ ನೀಡಿದರು.