– ಇರ್ಷಾದ್ ಉಪ್ಪಿನಂಗಡಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುವುದನ್ನು ಫಲಿತಾಂಶ ನಿರ್ಧಾರ ಮಾಡುತ್ತದೆ. ಆದರೆ, ಈ ಚುನಾವಣೆಯಲ್ಲಿ ಅವರು ಸೋತರೂ ಗೆದ್ದರೂ ಕ್ಷೇತ್ರದ ಒಕ್ಕಲಿಗರು ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯ ಹಳಸುವ ರೀತಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಎಚ್ಡಿ ಕುಮಾರಸ್ವಾಮಿ ವಿರುದ್ಧ ನೀಡಿರುವ “ಕರಿಯ” “ಖರೀದಿ” ಹೇಳಿಕೆಗಳು ಬಳಕೆಯಾಗುವುದರಲ್ಲಿ ಸಂಶಯವಿಲ್ಲ.
ಮುಸ್ಲಿಮರ ಮಾಸ್ ಲೀಡರ್ ಆಗಲು ಹವಣಿಸುತ್ತಿರುವ ಜಮೀರ್ ಅಹ್ಮದ್ ಖಾನ್ ಅವರು ನೀಡುತ್ತಿರುವ ಹೇಳಿಕೆಗಳು ಹಾಗೂ ಅಪ್ರಬುದ್ಧ ನಡೆಗಳು ಮುಸ್ಲಿಮ್ ಸಮುದಾಯಕ್ಕೆ ನಷ್ಟ ಉಂಟು ಮಾಡಿದೆಯೇ ಹೊರತು ಲಾಭವಂತೂ ಅಲ್ಲ. ನನಗೆ ತಿಳಿದಿರುವಂತೆ ವೈಯಕ್ತಿಕವಾಗಿ ಜಮೀರ್ ಅವರು ಮತೀಯವಾದಿ ಅಲ್ಲದಿದ್ದರೂ ಅವರ ಚುನಾವಣಾ ರಾಜಕೀಯ ಶೈಲಿ ಸಮಸ್ಯಾತ್ಮಕವಾಗಿದೆ. ಅಭದ್ರತೆಯಲ್ಲಿ ಬಳಲುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಇಂತಹ ನಾಯಕತ್ವ ಅಪಾಯಕಾರಿಯಾಗಬಲ್ಲದು.
ಮುಸ್ಲಿಮರ ಇಂದಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಖ್ಯಾತ ಚಿಂತಕರಾದ ಯೋಗೇಂದ್ರ ಯಾದವ್ ವಿಶ್ಲೇಷಣೆ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮುಸ್ಲಿಮರು ಓದಲೇ ಬೇಕಿದೆ. ಮುಸ್ಲಿಮರು ಬದುಕುಳಿಯಲು ಮತ ಹಾಕುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ ಎಂಬ ವಾಸ್ತವ ಅಂಶವನ್ನು ಅವರು ತಮ್ಮ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಮುಸ್ಲಿಮ್ ನಾಯಕತ್ವದ ಕೊಡುಗೆ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ : ಟಿಕೇಟ್ ಡೀಲ್ ಆರೋಪ : ಜಮೀರ್ ಆತ್ಮಾವಲೋಕನ ಮಾಡಿಕೊಳ್ಳಲಿ – ಕುಮಾರಸ್ವಾಮಿ
ಮುಸ್ಲಿಮ್ ಸಮುದಾಯದ ದೊಡ್ಡ ಕೊರತೆಯೇ ರಾಜಕೀಯ ನಾಯಕತ್ವ. ಅಬ್ದುಲ್ ನಜೀರ್ ಸಾಬ್, ಜಾಫರ್ ಶರೀಫ್, ಅಜೀಝ್ ಸೇಠ್ ಅವರಂತಹ ನಾಯಕತ್ವವೂ ಇವಾಗ ಇಲ್ಲದಂತಾಗಿದೆ. ಅಬ್ದುಲ್ ನಜೀರ್ ಸಾಬ್ ಅವರನ್ನು ಇಂದಿಗೂ ನೆನಪಿಸಿಕೊಳ್ಳುವುದು ಅವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಗೆ ಕೊಟ್ಟ ಕೊಡುಗೆಗಳಿಂದ. ಅಧಿಕಾರ ವಿಕೇಂದ್ರೀಕರಣ ಹಾಗೂ ಪಂಚಾಯತ್ ರಾಜ್ ಪುನಶ್ಚೇತನಕ್ಕೆ ಅವರು ಹೊಂದಿದ್ದ ಬದ್ಧತೆ, ನಿಲುವು ಇತಿಹಾಸದಲ್ಲಿ ದಾಖಲೆಯಾಗಿದೆ. ಎಲ್ಲಾ ಸಮುದಾಯದ ಜನರು ನೆನಪಿನಲ್ಲಿ ಇಡುವಂತಹ ಶುದ್ಧ ಕುಡಿಯುವ ನೀರು, ಜನತಾ ವಸತಿ ಯೋಜನೆಗಳು, ಅಂತ್ಯೋದಯ ಕಾರ್ಯಕ್ರಮಗಳು ಅವರ ಕಾಲದಲ್ಲಿ ಅನುಷ್ಠಾನಗೊಂಡಿದ್ದವು. ಅದಕ್ಕಾಗಿಯೇ ಅವರು ನೀರ್ ಸಾಬ್ ಆದರು.
ಆದರೆ ಜಮೀರ್ ಅವರಂತಹ ನಾಯಕತ್ವ ಇಂತಹ ಚಿಲ್ಲರೆ ಹೇಳಿಕೆಗಳು, ಗಂಭೀರತೆ ಇಲ್ಲದ ಹಾಗೂ ಸಮುದಾಯಕ್ಕೆ ಮತ್ತಷ್ಟು ಹಾನಿ ಉಂಟು ಮಾಡುವಂತಹ ನಡವಳಿಕೆಗಳಿಂದಲೇ ಗುರುತಿಸಿಕೊಳ್ಳುತ್ತಿದೆ. ಇದನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಮೇಲೆ ಮತ್ತಷ್ಟು ಜರಿಯಲು ಕಾತುರರಾಗಿರುವವರಿಗೂ ಜಮೀರ್ ಪದೇ ಪದೇ ಆಹಾರವನ್ನು ಒದಗಿಸುತ್ತಿದ್ದಾರೆ.
ಯೋಗೇಂದ್ರ ಯಾದವ್ ಅವರು ತಮ್ಮ ಲೇಖನದಲ್ಲಿ ಅವರ ಸಹೋದ್ಯೋಗಿ ಹಿಲಾಲ್ ಅಹ್ಮದ್ ಅವರ ಚಿಂತನೆ, ನಿಲುವುಗಳ ಬಗ್ಗೆ ಉಲ್ಲೇಖಿಸುತ್ತಾರೆ. ಮುಸ್ಲಿಮರ ಇಂದಿನ ಸವಾಲುಗಳನ್ನು ಎದುರಿಸಲು ಹಿಲಾಲ್ ಅಹ್ಮದ್ ಕಂಡುಕೊಂಡ ದಾರಿಗೆ ಸಂಕೇತ ಎಂಬಂತೆ ಅವರ ಕಚೇರಿಯಲ್ಲಿದ್ದ ಪವಿತ್ರ ಕಾಬಾ, ಮಹಾತ್ಮ ಗಾಂಧಿ ಮತ್ತು ಚೆ ಗುವೆರಾ ಚಿತ್ರಗಳ ಬಗ್ಗೆಯೂ ಗಮನ ಸೆಳೆಯುತ್ತಾರೆ. ಇದು ನಿಜಕ್ಕೂ ಚಿಂತನಾರ್ಹ ವಿಚಾರ.
ಹೀಗಾಗಿ, ಧರ್ಮಾಚರಣೆಯ ಜೊತೆ ಜೊತೆಗೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಆದರ್ಶ, ಆಶಯಗಳನ್ನು ಮುಂದಿಟ್ಟುಕೊಂಡು ಜಾತ್ಯತೀತ ರಾಜಕಾರಣದ ನೆಲೆಯನ್ನು ಮುಸ್ಲಿಮರು ಕಂಡು ಕೊಳ್ಳಬೇಕಾಗಿರುವುದು ಇಂದಿನ ಅಗತ್ಯತೆ.