ಹಾಸನ: ರಾಮನ್ ಮತ್ತು ನೆಹರು ಭಾರತವನ್ನು ಕಂದಾಚಾರದಿಂದ ಮುಕ್ತಗೊಳಿಸಿ ವಿಜ್ಞಾನ ಸಶಕ್ತಭಾರತವನ್ನಾಗಿ ಮರುಕಟ್ಟಲಿಕ್ಕೆ ಭದ್ರಬುನಾದಿ ಹಾಕಿಕೊಟ್ಟ ಭಾರತರತ್ನಗಳು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ವಿವರಿಸಿದರು. ಮಗು
ಅವರು ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಬೇಲೂರು ತಾಲ್ಲೂಕು ಸಮಿತಿಯು ತಾಲ್ಲೂಕುನಾದ್ಯಂತ ನಡೆಸುತ್ತಿರುವ ರಾಮನ್-ನೆಹರು ಸಪ್ತಾಹದ ಅಂಗವಾಗಿ ಹಗರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಏಕೆ? ಹೇಗೆ ಪಿಪಿಟಿ ಸಂವಾದ ಮಾಡುತ್ತಾ ಮಾತನಾಡಿದರು.
ಪ್ರತಿಯೊಂದು ಮಗುವು ಹುಟ್ಟುತ್ತಾ ವಿಶ್ವಮಾನವನಾಗೇ ಹುಟ್ಟುವುದೆ, ಹುಟ್ಟಿದ ಗಳಿಗೆಯಿಂದಲೇ ಜಾತಿ, ಮತ, ವರ್ಣಗಳ ಗಳನ್ನು ಆ ಮಗುವಿಗೆ ತುರುಕಿ ಅಲ್ಪಮಾನವನನ್ನಾಗಿಸುತ್ತೇವೆ ಮತ್ತೆ ಆ ಮಗುವನ್ನು ವಿಶ್ವಮಾನವನ್ನಾಗಿ ರೂಪಿಸುವುದು ಶಿಕ್ಷಣದ ಕರ್ತವ್ಯವಾಗಬೇಕು ಎನ್ನುವ ಕುವೆಂಪುರವರ ಮಾತನ್ನು ಅಡಿಯಾಗಿಟ್ಟುಕೊಂಡು ಹೊಸಕಾಲದ ಮಕ್ಕಳನಡುವೆ ಶಾಲೆಗಳಲ್ಲೇ ಜಾತಿತರತಮ ಬಿತ್ತಲಾಗುತ್ತಿರುವುದು ಎಂದರು.
ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ : ಅತೀ ಭ್ರಷ್ಟ ಚುನಾವಣೆಗೆ ಸಾಕ್ಷಿ
ಗಾಂಧಿ, ನೆಹರು, ಅಂಬೇಡ್ಕರರನ್ನು ವಿಲನ್‌ಗಳಾಗಿಸುವಜೊತೆಯಲ್ಲೇ ಮೌಢ್ಯಾಲಿಂಗನ ನಡೆಸುವ ಪ್ರಕ್ರಿಯ ಹೆಚ್ಚಾಗುತ್ತಿರುವುದನ್ನು ಹಲವಾರು ಪತ್ರಿಕಾ ವಿವರಗಳ ದೃಷ್ಠಾಂತಗಳನ್ನು ವಿವರಿಸಿ ಭಾರತದ ಸಾಂಸ್ಕೃತಿಕ ನೆಲೆಯನ್ನು ವಿಜ್ಞಾನಾಧಾರಿತ ನೆಲೆಯನ್ನಾಗಿ ರೂಪಿಸಿ ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಲು ವಿಜ್ಞಾನದ ಮಂತ್ರ ಆಧ್ಯತೆಯಾಗಬೇಕು. ಅದಕ್ಕೆ ಎಲ್ಲರಲ್ಲೂ ವೈಜ್ಞಾನಿಕ ಮನೋವೃತ್ತಿ ರೂಢಿಗೊಳ್ಳಲೇ ಬೇಕು ಎಂದು ನಮ್ಮ ಸಂವಿಧಾನವೇ ಭಾರತೀಯನ ಕರ್ತವ್ಯವೆಂದು ಹೇಳಿದೆ ಎಂದು ವಿವರಿಸಿದರು.
ನಂಬಿಕೆ, ಮೂಢನಂಬಿಕೆ, ಮೂಢಾಚಾರದ ಅಪಾಯಗಳು, ವಿಜ್ಞಾನ, ವಿಜ್ಞಾನದ ಹಾದಿ ಹಾಗೂ ವೈಜ್ಞಾನಿಕ ಮನೋವೃತ್ತಿಗಳ ನಡುವಿನ ವ್ಯತ್ಯಾಸ ಗುರುತಿಸುವ ನಂತರ ಅವುಗಳಲ್ಲಿ ಸಂವಿಧಾನ ಬಾಹೀರ ಹಾಗೂ ಮಾನವಾಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಮೂಢಾಚಾರಗಳನ್ನು ಪಟ್ಟಿ ಮಾಡಿಸಿ ಅವುಗಳಿಂದ ವಿಮುಕ್ತಿಪಡೆದು ವೈಜ್ಞಾನಿಕ ಹಾದಿ ಗುರುತಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹೇಗೆ ಎನ್ನುವ ವಿನೂತನ ಚಟುವಟಿಕೆಯನ್ನು ಎರೆಡುಗಂಟೆಗೂ ಅದಿಕಕಾಲ ಆಕರ್ಷಕವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕ ಗಂಗಾಧರ್ ಮಾತನಾಡಿ. 5ನೆ ತರಗತಿಗೆ ಬರುತ್ತಿದ್ದಂತೆ ಒಂದೊಂದಾಗಿ ವಿಶ್ವ ನಿಯಮಗಳ(ಲಾ ಆಫ್ ಯೂನಿವರ್ಸ್) ಪರಿಚಯವಾಗುತ್ತಾ ಹೋಗುತ್ತದೆ ಚಲನಾ ನಿಯಮ, ಗುರುತ್ವ ನಿಯಮ, ತೇಲುವ ನಿಯಮ, ಪರಿವರ್ತನೀಯ ನಿಯಮ, ರಾಸಾಯನಿಕ ನಿಯಮ ಹೀಗೆ ಈ ನಿಯಮಗಳ ಆಧಾರದಲ್ಲಿ ಕೋಟ್ಯಾಂತರ ಪ್ರಯೋಗಗಳು ನಡೆದು ಗೋಚರದಿಂದ ಅಘೋಚರ ವಿಶ್ವವನ್ನು ಹುಡುಕಿದ್ದೇವೆ ಎಂದರು.
ಶೂನ್ಯದಿಂದ ಅನಂತದವರೆಗೆ ಜಿಗಿದಿದ್ದೇವೆ, ಸೂಕ್ಷ್ಮಾಣುವಿನಿಂದ ಬೃಹದಾಕಾರದ ಜಗತ್ತನ್ನು ಕಂಡಿದ್ದೇವೆ ಇವೆಲ್ಲವನ್ನೂ ಪ್ರಕೃತಿ ನಿಯಮ ಎನ್ನುತ್ತೇವೆ. ಈ ವಿಶ್ವ, ಈ ಪ್ರಕೃತಿ ನಿಯಮಕ್ಕೆ ಒಳಪಟ್ಟು ನಡೆಯುತ್ತಿದೆ ಈ ವಿಶ್ವದ ಸೃಷ್ಠಿಯನ್ನ ಶಕ್ತಿ ನಿತ್ಯತೆಯ ನಿಯಮದ ಪ್ರಕಾರ “ಯಾವುದೇ ವಸ್ತುವನ್ನು ಶೂನ್ಯದಿಂದ ಸೃಷ್ಠಿಸಲೂ ಸಾಧ್ಯವಿಲ್ಲ ಹಾಗೆಯೇ ನಾಶಮಾಡಲೂ ಸಾಧ್ಯವಿಲ್ಲ. ಆದರೆ ಶಕ್ತಿ ಮತ್ತು ದ್ರವ್ಯ ಪರಸ್ಪರ ಪರಿವರ್ತನೆ ಹೊಂದುತ್ತದೆ” ಎಂಬ ಸರಳ ಸತ್ಯವನ್ನ ಒಪ್ಪಿಕೊಂಡರೆ ಯಾವ ಬ್ರಹ್ಮಾಂಡ ಗುರೂಜಿಯ ಭೀಭತ್ವ ಧ್ವನಿಯೂ ನಮ್ಮನ್ನು ಕಂಗೆಡಿಸದು ಬದಲಾಗಿ ಪ್ರತಿಯೊಂದು ಪವಾಡಗಳ ಹಿಂದೆ ಈ ವಿಶ್ವ ನಿಯಮ ಅವಿತು ಕುಳಿತಿದೆ ಎಂದು ಅರಿವಿಗೆ ಸರಳವಾಗಿ ಬರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿವಿಎಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಅಂತೋಣಿಸ್ವಾಮಿ ವಹಿಸಿದ್ದರು, ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಉಪಪ್ರಾಂಶುಪಾಲ ಜೆ.ವೆಂಕಟೇಶ್ ಸ್ವಾಗತಿಸಿದರು, ಕಾರ್ಯಕ್ರಮದ ಸಂಚಾಲಕಿ ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿ ರಸಪ್ರಶ್ನೆ ನಡೆಸಿಕೊಟ್ಟರು. ಶಿಕ್ಷಕಿ ಸೌಮ್ಯ ವಂದಿಸಿದರು. ವಿದ್ಯಾರ್ಥಿಗಳು ವಿಜ್ಞಾನಗೀತೆ ಹಾಡಿದರು.
ಇದನ್ನೂ ನೋಡಿ: ಯುದ್ಧ : ವಿಶ್ವ ಕಾರ್ಪೊರೇಟ್‌ಗಳ ಸಂಚು – ಡಾ. ಅಮರ್ ಕುಮಾರ್ Janashakthi Media