ಗಣಿತ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ
ವಾಡಿ: ಕಳೆದ ಮೂರು ವರ್ಷಗಳಿಂದ ಗಣಿತ ಶಿಕ್ಷಕರಿಲ್ಲದೆ ಕಷ್ಟಕರ ಕಲಿಕೆಯಲ್ಲಿ ತೊಡಗಿದ್ದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ವಿರುದ್ಧ ದಿಡೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ(ನ.12) ಬೆಳಿಗ್ಗೆ ಏಕಾಏಕಿ ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಶಾಲೆ ಅಂಗಳದಲ್ಲಿ ಕುಳಿತು ಧಿಕ್ಕಾರದ ಘೋಷಣೆ ಮೊಳಗಿಸಿದರು. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಇಳಿದ ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಿಬಣ್ಣ ಗುಡುಬಾ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ ಒ) ಅಧ್ಯಕ್ಷ ವೆಂಕಟೇಶ್ ದೇವದುರ್ಗ ಅವರು ವಿದ್ಯಾರ್ಥಿಗಳ ಹೋರಾಟಕ್ಕೆ  ಬೆಂಬಲ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ 10ನೇ ತರಗತಿಯ ವಿದ್ಯಾರ್ಥಿಗಳು, ಕಳೆದ ಮೂರು ವರ್ಷಗಳ ಹಿಂದೆ ಶಾಲೆಯ ಗಣಿತ ಶಿಕ್ಷಕರು ಹೆರಿಗೆ ಮೇಲೆ ಹೋಗಿದ್ದಾರೆ. ಕೆಲ ತಿಂಗಳ ಹಿಂದೆ ಶಾಲೆಗೆ ಹಾಜರಾಗಿದ್ದ ಗಣಿತ ಶಿಕ್ಷಕಿ ಪುನಹ ಮತ್ತೊಂದು ನೆಪ ಹೇಳಿ ಶಾಲೆಗೆ ರಜೆ ಹಾಕಿದ್ದಾರೆ. ನಾವು ಎಂಟನೇ ತರಗತಿಯಿಂದ 10ನೇ ತರಗತಿವರೆಗೆ ಗಣಿತ ಶಿಕ್ಷಣದಿಂದ ವಂಚಿತರಾಗಿದ್ದೇವೆ. ಹತ್ತನೇ ಪರೀಕ್ಷೆ ಸಮೀಪಿಸುತ್ತಿದೆ. ಗಣಿತ ಶಿಕ್ಷಣ ಪಾಠ ಮಾತ್ರ ನಡೆಯುತ್ತಿಲ್ಲ.ಹೀಗಾದರೆ ನಾವು ಹತ್ತನೇ ತರಗತಿ ಪಾಸ್ ಆಗುವುದು ಕಷ್ಟಕರವಾಗಿದೆ. ಯಾವ ತಪ್ಪಿಗಾಗಿ ನಮಗೆ ಗಣಿತ ಶಿಕ್ಷಕರನ್ನು ಕೊಡುತ್ತಿಲ್ಲ. ನಮ್ಮ ಶೈಕ್ಷಣಿಕ ಭವಿಷ್ಯದ ಕಾಳಜಿ ಸರ್ಕಾರಕ್ಕೆ ಇಲ್ಲ. ಅಲ್ಲದೆ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲಾ ಕಟ್ಟಡ ದುಸ್ಥಿತಿಯಲ್ಲಿದ್ದು ರಿಪೇರಿ ಮಾಡಿಲ್ಲ. ಒಟ್ಟಾರೆ ಇಂಗಳಗಿ ಸರ್ಕಾರಿ ಪ್ರೌಢಶಾಲೆಯ ಸಮಸ್ಯೆಗಳಿಗೆ ಸರ್ಕಾರ ಕಿವಿಗೊಡುತ್ತಿಲ್ಲ. ನಾವು ಮಾಡಿದ ತಪ್ಪಾದರೂ ಏನು? ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಪ್ರತಿಭಟನೆ

ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗಣಿತ ಶಿಕ್ಷಕರನ್ನು ನೀಡುವುದಾಗಿ ಭರವಸೆ ನೀಡುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *