ಮಂಗಳೂರು : ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಪ್ಯಾಲೆಸ್ತೀನ್ ನಾಗರೀಕರ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಸಿಪಿಎಂ-ಸಿಪಿಐ ಮತ್ತು ಸಮಾನ ಮನಸ್ಕ ಸಂಘಟನೆಗಳ ಸದಸ್ಯರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿಭಟನೆಗೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಗೆ ಮಂಗಳೂರು ನಗರ ಪೊಲೀಸ್ ನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ, ಅನುಮತಿ ನಿರಾಕರಿಸಿದ್ದರು. ಧ್ವನಿ ವರ್ಧಕ ಬಳಕೆಗೂ ಅನುಮತಿ ನಿರಾಕರಿಸಿದ್ದರು. ಇದರಿಂದ ಪ್ರತಿಭಟನೆಕಾರರು ಧ್ವನಿವರ್ಧಕ ಬಳಸದೆ ಪ್ರತಿಭಟನೆ ನಡೆಸಿದ್ದರು ಎಂದು ಕಾರಣಗಳನ್ನು ತಿಳಿಸಲಾಗಿದೆ.
ಪ್ರತಿಭಟನೆಗೆ ನಿಷೇಧವಿದ್ದರೂ ಘೋಷಣೆಗಳನ್ನುಕೂಗಿ, ಭಾಷಣ ಮಾಡಿದ್ದಾರೆ ಎಂದು ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾಧವ ಶೆಟ್ಟಿ, ಸಂತೋಷ್ ಬಜಾಲ್, ಸುಕುಮಾರ್ ರಾವ್, ಇಮ್ತಿಯಾಝ್, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಹಯವದನ ರಾವ್, ಸೀತಾರಾಮ ಬೆರಿಂಜ ಎಂಬವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಕ್ರಮಕ್ಕೆ ಆಕ್ರೋಶ
ಪ್ರತಿಭಟನೆ ನಡೆಸಿದ ಎಡಪಕ್ಷಗಳ ನಾಯಕರ ಮೇಲೆ ದೂರು ದಾಖಲಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರತಿಭಟನೆ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಆದರೆ ಮಂಗಳೂರು ಪೊಲೀಸರ ಈ ನಡೆ ಖಂಡನೀಯ. ಇದರಿಂದ ಪ್ರಜಾಪ್ರಭುತ್ವಕ್ಕೆ ಅರ್ಥ ಇಲ್ಲ ಎಂಬಂತಾಗಿದೆ. ಕ್ರೌರ್ಯ ಎಲ್ಲೇ ನಡೆಯಲಿ, ಅದರ ವಿರುದ್ಧ ಪ್ರತಿಭಟಿಸುವುದು ಜೀವಪರ ಇರುವವರ ಕರ್ತವ್ಯವಾಗಿದೆ ಎಂದು ಎಡಪಕ್ಷಗಳ ನಾಯಕರು ತಿಳಿಸಿದ್ದಾರೆ.
ಸಿಪಿಐಎಂ ಹಿರಿಯ ನಾಯಕ ವಸಂತ ಆಚಾರಿ ಪ್ರತಿಕ್ರಿಯಿಸಿದ್ದು, ಇಂತಹ ವಿಷಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತಪ್ಪು ಮಾಡುತ್ತಿದೆ. ಇಸ್ರೇಲ್ ಪರ ಬಿಜೆಪಿಯವರು ಬಹಿರಂಗವಾಗಿ ಬೆಂಬಲಿಸಿದರೆ, ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ಸಾರುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆಯೋ ಎಂಬ ಅನುಮಾನ ನಮಗೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.