ಉಪಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ; ಅಭ್ಯರ್ಥಿಗಳಿಗೆ ಬಂಡಾಯ ಭೀತಿ

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಾಡು ಇಲ್ಲವೇ ಮಡಿ ಎಂಬಂತಾಗಿರುವ ರಾಜ್ಯದ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯ ಭೀತಿ ಎದುರಾಗಿದೆ. ಆಡಳಿತಾರೂಢ ಕಾಂಗ್ರೆಸ್‌‍, ಬಿಜೆಪಿ ಹಾಗೂ ಜೆಡಿಎಸ್‌‍ನ ಅಭ್ಯರ್ಥಿಗಳಿಗೆ ಭಿನ್ನಮತ ಎದುರಾಗಿದ್ದು, ಬಂಡಾಯವನ್ನು ಶಮನಗೊಳಿಸುವುದೇ ಮೂರು ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ.

ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಹಿನ್ನಲೆಯಲ್ಲಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಭಾರೀ ಶಕ್ತಿಪ್ರದರ್ಶನ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದರು. ಇದೇ ತಿಂಗಳ 28ರಂದು ನಾಮಪತ್ರ ಪರಿಶೀಲನೆ ನಡೆಯುತ್ತಿದ್ದು, ಬುಧವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನ.13ರಂದು ಮತದಾನ ನಡೆದು 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕಾಂಗ್ರೆಸ್‌‍ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್‌‍ಗೆ ಅಂತಹ ದೊಡ್ಡ ಮಟ್ಟದ ಭಿನ್ನಮತವೇನೂ ಕಾಡುತ್ತಿಲ್ಲ. ಆದರೆ ಪಕ್ಷದ ಕಾರ್ಯಕರ್ತರು ಆಮಿಷಗಳಿಗೆ ಬಲಿಯಾಗಿ ಕೈ ಕೊಡಬಹುದೇ ಎಂಬ ಆತಂಕ ಕಾಡುತ್ತಿದೆ.

ಇದನ್ನೂ ಓದಿ: 7 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿ ಬಂಧನ

ಬಂಡಾಯದ ಭೀತಿ:
ಮೂರು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಗಿದಿರುವ ಬೆನ್ನಲ್ಲೇ ಎಲ್ಲಾ ಪಕ್ಷಗಳಲ್ಲೂ ಬಂಡಾಯ ಬಾವುಟ ಹಾರಿದೆ. ಟಿಕೆಟ್‌ ಸಿಗದೆ ಅಸಮಧಾನಗೊಂಡಿರುವವರು ಬಂಡಾಯದ ಕಹಳೆ ಊದಿದ್ದಾರೆ. ಶಿಗ್ಗಾವಿಯಲ್ಲಿ ಬಸವರಾಜ್‌ ಬೊಮಾಯಿ ಅವರ ಆಪ್ತ ಹಾಗೂ ಟಿಕೆಟ್‌ ಆಕಾಂಕ್ಷಿ ಶ್ರೀಕಾಂತ್‌ ದುಂಡಿಗೌಡರ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌‍ನಲ್ಲು ಪರಿಸ್ಥಿತಿ ಭಿನ್ನವಾಗಿಲ್ಲ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಜಂಪಿರ್‌ ಖಾದ್ರಿ ಬಂಡಾಯದ ಕಹಳೆ ಊದಿದ್ದಾರೆ. ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರೆದಿದೆ.

ಪ್ರತಿಷ್ಠಿತ ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ವಿರುದ್ಧ ಸ್ಪರ್ಧಿಸಿದ್ದ ನಿಖಿಲ್‌ ಸೋಲು ಕಂಡಿದ್ದರು. ತನ್ನ ತಾಯಿಯ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ನಿಖಿಲ್‌ಗೆ ರಾಮನಗರದಲ್ಲೂ ಸೋಲಾಗಿತ್ತು.

ಕಾಂಗ್ರೆಸ್‌‍ ಅಭ್ಯರ್ಥಿ ಇಕ್ವಾಲ್‌ ಹುಸೇನ್‌ ವಿರುದ್ಧ ನಿಖಿಲ್‌ ಸೋಲನ್ನು ಕಂಡಿದ್ದರು. ಈ ಸೋಲು ನಿಖಿಲ್‌ ಕುಮಾರಸ್ವಾಮಿಗೆ ರಾಜಕೀಯವಾಗಿ ಭಾರೀ ಹಿನ್ನಡೆಯನ್ನು ಉಂಟು ಮಾಡಿತ್ತು. ತನ್ನ ತಾಯಿ ಶಾಸಕರಾಗಿದ್ದ ಕ್ಷೇತ್ರದಲ್ಲೂ ಅವರಿಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮತ್ತೊಮೆ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ನಿಖಿಲ್‌ಗೆ ಟಿಕೆಟ್‌ ನೀಡಲಾಗಿದೆ. ನಿಖಿಲ್‌ ಗೆಲುವಿಗಾಗಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಶ್ರಮಿಸುವಂತೆ ಎಚ್‌ಡಿ ದೇವೇಗೌಡರು ಸೂಚನೆ ನೀಡಿದ್ದಾರೆ. ಅಲ್ಲದೆ, ತಾನೇ ಸ್ವತಃ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಆದರೂ ಕ್ಷೇತ್ರ ಅಂದುಕೊಂಡಷ್ಟು ಸುಲಭವಿಲ್ಲ. ಎಚ್‌ಡಿಕೆ ವಿರೋಧಿಗಳೆಲ್ಲರೂ ಒಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಿಖಿಲ್‌ ಗೆಲುವು ಸುಲಭ ಸಾಧ್ಯವೇ ಎಂಬುವುದು ಪ್ರಶ್ನೆಯಾಗಿದೆ.

ಇದನ್ನೂ ನೋಡಿ: ಮರಕುಂಬಿ ಪ್ರಕರಣ| ಚಾರಿತ್ರಿಕ ತೀರ್ಪು – ದಲಿತರಿಗೆ ದಕ್ಕಿದ ನ್ಯಾಯ Janashakthi Media

Donate Janashakthi Media

Leave a Reply

Your email address will not be published. Required fields are marked *