ಚನ್ನಪಟ್ಟಣ :ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿ ಹಲವರು ಯೋಗೇಶ್ವರಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದರು. ಆದರೆ, ಇಲ್ಲಿ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಕ್ಯೂ ನಿಂತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಳಿಗ್ಗೆಯಿಂದ ಸಿಎಂ, ಡಿಸಿಎಂ ಆದಿಯಾಗಿ ಎಲ್ಲಾ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತದ ಕುರಿತು ಸಾಲು ಸಾಲಾಗಿ ಹೇಳಿಕೆ ಕೊಡುತ್ತಿದ್ದಾರೆ. ಯೋಗೇಶ್ವರ್ ಅವರು ಮೊದಲು ಯಾವ ಪಕ್ಷದಿಂದಾದರೂ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಹೇಳುತ್ತಿದ್ದರು. ಆ ಮೇಲೆ ವರಸೆ ಬದಲಿಸಿದರು. ಈಗ ಬಿಎಸ್ಪಿಯಿಂದ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ನಾನು ಏನು ಮಾಡೋದು? ಎಂದು ಕುಮಾರಸ್ವಾಮಿ ಕೇಳಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಈ ರಾಜ್ಯದಲ್ಲಿ ನನ್ನಷ್ಟು ಉಪ ಚುನಾವಣೆಗಳನ್ನು ಎದುರಿಸಿದ, ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಎಂತೆಂಥ ಚುನಾವಣೆ, ಅಗ್ನಿ ಪರೀಕ್ಷೆಗಳನ್ನೇ ಎದುರಿಸಿದ್ದೇನೆ. ಇನ್ನು ಚನ್ನಪಟ್ಟಣ ಉಪ ಚುನಾವಣೆ ಎದುರಿಸಲು ಭಯವೇ ಎಂದು ಹೇಳಿದರು.