`ಗೃಹಲಕ್ಷ್ಮೀ’ ಹಣದಿಂದ ವಿದ್ಯಾರ್ಥಿಗಳಿಗೆ `ಗ್ರಂಥಾಲಯ’ ಕಟ್ಟಿಸಿದ `ಮಹಾ ತಾಯಿ’

ಬೆಳಗಾವಿ :ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಲ್ಲವ್ವ ಮೇಟಿ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಡೆವಲಪ್‌ಮೆಂಟ್‌ ಕಮೀಷನರ್‌ ಉಮಾ ಮಹದೇವನ್‌ ದಾಸ್‌ಗುಪ್ತ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್‌ ಮಾಡಿದ್ದಾರೆ. ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

13 ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ತಿಳಿಸಿದ್ದಾರೆ.

ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್‌ ಖರೀದಿಸಿದ್ದರು. ಅಜ್ಜಿಯೊಬ್ಬರು ಊರಿಗೆಲ್ಲಾ ಹೋಳಿಗೆ ಊಟ ಹಾಕಿ ಗಮನ ಸೆಳೆದಿದ್ದರು. ಮತ್ತೊಬ್ಬರು ಮಗನಿಗೆ ಬೈಕ್‌ ಕೊಡಿಸಲು ಮುಂಗಡ ಹಣ ಪಾವತಿಸಿದ್ದರು. ಅದೇ ರೀತಿ ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಬಡ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಮಹಿಳೆಯೊಬ್ಬರು, ಗ್ರಂಥಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *