ನಮ್ಮ ಮುಖ್ಯ ಬೇಡಿಕೆ ಯೂನಿಯನನ್ನು ಮಾನ್ಯ ಮಾಡಬೇಕು ಎನ್ನುವುದು : ಎ.ಸೌಂದರರಾಜನ್ (ಸಿಐಟಿಯು ನಾಯಕರ ಸಂದರ್ಶನ)

ಮೂಲ : ಸಿದ್ದಾರ್ಥ ಮುರಲೀಧರನ್  ಅನು : ಟಿ ಸುರೇಂದ್ರ ರಾವ್

(ಕೃಪೆ: ಪ್ರಂಟ್ ಲೈನ್)

ಸ್ಯಾಮ್ ಸಂಗ್ ಕಂಪನಿಯು ತಮ್ಮ ಆಕ್ರಮಣಕಾರಿ ವಿಧಾನಗಳಿಂದ ಸಂಘಗಳನ್ನು ತಡೆಯಲು ತೀರ್ಮಾನಿಸಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸೌಂದರರಾಜನ್ ಹೇಳುತ್ತಾರೆ. ದಿ ಸ್ಯಾಮ್‌ಸಂಗ್‌ ಇಂಡಿಯಾ ವರ್ಕರ್ಸ್ ಯುನಿಯನ್ (ಎಸ್.ಐ.ಡಬ್ಲ್ಯು.ಯು.) ಅಡಿಯಲ್ಲಿರುವ ದಿ ಸ್ಯಾಮ್‌ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ವರ್ಕರ್ಸ್ ಮುಷ್ಕರ ಪ್ರಾರಂಭ ಮಾಡಿ ಅಕ್ಟೋಬರ್ 8 ಕ್ಕೆ 30 ದಿನಗಳಾದವು. ಸಂಘವನ್ನು ರಿಜಿಸ್ಟರ್ ಮಾಡಿ ಮಾನ್ಯತೆ ನೀಡಬೇಕು ಎನ್ನುವುದು ಅವರ ಪ್ರಮುಖ ಹಕ್ಕೊತ್ತಾಯವಾಗಿದೆ.

ಅಕ್ಟೋಬರ್ 7 ರಂದು ಸಚಿವರುಗಳಾದ ಟಿ.ಆರ್.ಬಿ.ರಾಜಾ – ತಮಿಳುನಾಡು ಕೈಗಾರಿಕಾ ಸಚಿವರು, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಚಿವ ಟಿ.ಎಂ.ಅಂಬರಸನ್ ಮತ್ತು ಕಾರ್ಮಿಕ ಸಚಿವ ಸಿ ವಿ ಗಣೇಶನ್ ಅವರು ಒಂದು ಹೇಳಿಕೆ ನೀಡಿ ಸ್ಯಾಮ್‌ಸಂಗ್‌ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಒಪ್ಪಂದವಾಗಿದೆ ಎಂದು ಪ್ರಕಟಿಸಿದರು.

ಕುತೂಹಲಕರ ಸಂಗತಿಯೆಂದರೆ ರಾಜ್ಯ ಸರ್ಕಾರದ ಒಪ್ಪಂದದ ಜ್ಞಾಪಕ ಪತ್ರದಲ್ಲಿ ಮುಷ್ಕರವನ್ನು “ಕಾನೂನುಬಾಹಿರ” ಎಂದು ಹೇಳಲಾಗಿದೆ. ನಿಜ ಸ್ಥಿತಿ ಏನೆಂದರೆ ಆಗಸ್ಟ್ 19 ರಂದೇ ಎಸ್.ಐ.ಡಬ್ಲ್ಯು.ಯು. ಮುಷ್ಕರದ ನೋಟೀಸನ್ನು ಸ್ಯಾಮ್‌ಸಂಗ್‌ ಇಂಡಿಯಾ ಎಲೆಕ್ಟ್ರಾನಿಕ್ಸ್ ಕಾರ್ಯಕಾರಿ ನಿರ್ವಾಹಕ ಹಾಗೂ ಆಡಳಿತ ಮಂಡಳಿಗೆ ಕಳಿಸಿದೆ, ಕಾನೂನು ತೀತ್ಯ ಮುಷ್ಕರದ 14 ದಿನಗಳ ಮುಂಚೆ ನೋಟಿಸ್ ನೀಡಬೇಕೆಂಬ ನಿಯಮಕ್ಕೆ ಅನುಸಾರವಾಗಿ ನೋಟೀಸ್ ನೀಡಿದೆ.

ಸರ್ಕಾರದ ಎದುರು ಸ್ಯಾಮ್‌ಸಂಗ್‌ ಆಡಳಿತ ಮಂಡಳಿ ಮತ್ತು ‘ಕಾರ್ಮಿಕರ ಪ್ರತಿನಿಧಿಗಳು’ ಸಹಿ ಮಾಡಲಾಗಿದೆ ಎಂಬ ಪತ್ರದಲ್ಲಿ ಸಹಿಮಾಡಿರುವವರು ಮುಷ್ಕರದಲ್ಲಿ ಭಾಗವಹಿಸದ ಮತ್ತು ಸಂಘದ ಸದಸ್ಯರಲ್ಲದ ಕಾರ್ಮಿಕರಾಗಿದ್ದಾರೆ ಎಂದು ತಮಿಳುನಾಡು ಸಿಐಟಿಯುನ ಕಾರ್ಯದರ್ಶಿ ಎ.ಸೌಂದರರಾಜನ್ ಹೇಳುತ್ತಾರೆ. ಆ ಒಪ್ಪಂದ ಕುರಿತು ಮಾತನಾಡಿದ ಸಚಿವರು ತಾವೇ ಸ್ಯಾಮ್‌ಸಂಗ್‌ ಕಂಪನಿಯ ವಕ್ತಾರರಂತೆ ವರ್ತಿಸಿದರು ಎಂದು ಸೌಂದರರಾಜನ್ ತಿಲಿಸಿದರು.

ಸಂದರ್ಶನದ ವಿವರ ಹೀಗಿದೆ:

ಸ್ಯಾಮ್‌ಸಂಗ್‌ ಕಂಪನಿಯಲ್ಲಿ ಸಂಘವನ್ನು ಹೇಗೆ ರಚಿಸಲಾಯಿತು?

ಸಿಐಟಿಯುನವರು ಪ್ರಚೋದನೆ ನೀಡಿ ಸಂಘವನ್ನು ಕಟ್ಟಿ ತಮ್ಮ ನಾಯಕತ್ವವನ್ನು ಕಾರ್ಮಿಕರ ಮೇಲೆ ಹೇರಿದರು ಎಂದು ಹೇಳುಲಾಗುತ್ತಿದೆ. ಅದರೆ ಸತ್ಯ ಸಂಗತಿಯೆಂದರೆ, ಸಂಘದ ಅಗತ್ಯವಿದೆಯೆಂದು ಕಾರ್ಮಿಕರು ಬಯಸಬೇಕು. ಕಾರ್ಮಿಕರು ಸಂಘ ರಚಿಸಿದರು, ಸಿಐಟಿಯುಗೆ ನೋಂದಾವಣೆ ಮಾಡಿಕೊಂಡು ನಮ್ಮನ್ನು ನಾಯಕತ್ವಕ್ಕೆ ಆಹ್ವಾನಿಸಿದರು. ಆ ರೀತಿಯಲ್ಲಿ ನಾವು ಅವರ ಚಟುವಟಿಕೆಯಲ್ಲಿ ತೊಡಗಿಕೊಂಡೆವು. ಆದರೆ ರಾಜ್ಯ ಸರ್ಕಾರವು ಇದನ್ನು ತಪ್ಪಾಗಿ ಅರ್ಥೈಸುತ್ತಿದೆ. ಕಾರ್ಮಿಕರು ಕುರಿಗಳಲ್ಲ. ಮುಷ್ಕರ ಮಾಡಿದರೆ ತಮ್ಮ ಸಂಬಳ ಕಡಿತ ಮಾಡುತ್ತಾರೆ ಎನ್ನುವುದು ಅವರಿಗೆ ಗೊತ್ತಿದೆ. ಪೋಲಿಸರನ್ನು ಎದುರಿಸಬೇಕಾಗುತ್ತದೆ ಮತ್ತು ಕೆಲಸದಿಂದ ವಜಾ ಕೂಡ ಮಾಡಿಯಾರು ಎನ್ನುವ ವಾಸ್ತವ ಅವರ ಅರಿವಿಗಿದೆ.

ಸಿರಿಪೆರಂಬುದೂರಿನಲ್ಲಿ ಸ್ಯಾಮ್‌ಸಂಗ್‌ ಕಾರ್ಖಾನೆ ಸುತ್ತಮುತ್ತ ಹಲವು ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳಿವೆ. ಈ ಸಂಘವನ್ನು ರಚಿಸುವಾಗ ಯಾವ ಹೊಸ ಸವಾಲುಗಳು ಎದುರಾದವು? ಕಾರ್ಮಿಕರ ಮುಷ್ಕರಕ್ಕೆ ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ?

ಉಳಿದೆಡೆಯಂತೆ ಇಲ್ಲೂ ಕೂಡ ನಾವು ಅವೇ ಸಮಸ್ಯೆಗಳನ್ನು ಎದುರಿಸಿದೆವು; ಸಿಐಟಿಯು, ‘ಹೊರಗಿನವರು’ ಎಂದು ಸಂಘಗಳನ್ನು ಕಟ್ಟಲು ಅವಕಾಶ ನೀಡಲಿಲ್ಲ. ‘ಸಂಘಗಳು ಬೇಡ ಎನ್ನುವ ನೀತಿ’ ಸ್ಯಾಮ್‌ಸಂಗ್‌ ಕಂಪನಿಯದು ಎಂಬ ಸಂಗತಿ ಜಗತ್ತಿನೆಲ್ಲಡೆ ಗೊತ್ತಿರುವುದೇ ಆಗಿದೆ. ಅವರು ದಕ್ಷಿಣ  ಕೊರಿಯಾದಲ್ಲಿ ಒಂದು ಮುಷ್ಕರವನ್ನು ಮುರಿಯಲು ಯತ್ನಿಸಿದರು, ಆದರೆ ಕಾರ್ಮಿಕರು ಮೇಲುಗೈ ಸಾಧಿಸಿದರು ಮತ್ತು ಸಂಘವನ್ನು ಕಟ್ಟಿದರು. ಸ್ಯಾಮ್‌ಸಂಗ್‌ ಭಾರತದಲ್ಲಿ ನೋಯ್ಡಾ ಮತ್ತು ಚನ್ನೈನಲ್ಲಿ ತಮ್ಮ ಘಟಕಗಳನ್ನು ಹೊಂದಿದೆ. ಅವರು ಇಲ್ಲಿ ಸಂಘವನ್ನು ತಡೆಯಲು ನಿರ್ಧರಿಸಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಆಕ್ರಮಣಕಾರಿ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

 

ಸಂಘದಲ್ಲಿ ತಮ್ಮ ಕಂಪನಿಯ ಹೆಸರು ಇರಬಾರದು ಮತ್ತು ಎಸ್.ಐ.ಡಬ್ಲ್ಯು.ಯು. ಅಧ್ಯಕ್ಷರು ಕಾರ್ಮಿಕರಲ್ಲ ಎಂದು ಸ್ಯಾಮ್‌ಸಂಗ್‌ ಕಂಪನಿಯವರು ತಕರಾರೆತ್ತಿದ್ದಾರಲ್ಲ?

ಕೆಲವನ್ನು ಹೊರತುಪಡಿಸಿ, ದೇಶಾದ್ಯಂತ ಬಹುತೇಕ ಸಂಘಗಳು ಕಂಪನಿಯ ಹೆಸರನ್ನು ಬಳಸುತ್ತವೆ. ಕಂಪನಿಗಳು ಹೊಚ್ಚ ಮಾಲೀಕತ್ವದ ಹಕ್ಕು ಸಾಧಿಸಬಹುದು, ಆದರೆ ಪೂರ್ವನಿದರ್ಶನಗಳಿವೆ. ಕರ್ನಾಟಕದಲ್ಲಿ, ತಮ್ಮ ನೌಕರರು ಎಸ್.ಬಿ.ಐ. ಹೆಸರು ಬಳಸುವುದಕ್ಕೆ ಆಕ್ಷೇಪವೆತ್ತಿದರು, ಆದರೆ ನ್ಯಾಯಾಲಯ ಅವರ ತಕರಾರನ್ನು ತಳ್ಳಿಹಾಕಿ ನೌಕರರ ಪರವಾಗಿ ತೀರ್ಪು ನೀಡಿದೆ, ನೌಕರರೇನು ನಿಮ್ಮ ಜತೆ ಪೈಪೋಟಿ ನಡೆಸುತ್ತಾರೆಯೇ ಎಂದು ಪ್ರಶ್ನಿಸಿತು. ನಾವು ಈ ಪ್ರಕರಣವನ್ನು ಉದಾಹರಿಸಿದೆವು. ಅದೇ ಬಹು ಮುಖ್ಯ ವಿಷಯ ಎನ್ನುವುದಾದರೆ, ನಾವು ‘ಸಿರಿಪೆರಂಬುದೂರು ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್‌ ಯೂನಿಯನ್’ ಎಂದು ಬದಲಾಯಿಸಲು ಸಿದ್ಧರಿದ್ದೇವೆ. ಅದು ನಮಗೆ ಪ್ರತಿಷ್ಠೆಯ ವಿಷಯವಲ್ಲ.

ಇನ್ನು , ಸಂಘಗಳಲ್ಲಿ ‘ಹೊರಗಿನವರು’ ಎನ್ನುವ ಕುರಿತು 98 ವರ್ಷಗಳ ಹಿಂದಿನಿಂದ ಟ್ರೇಡ್ ಯೂನಿಯನ್ ಆಕ್ಟ್ (ಕಾರ್ಮಿಕ ಸಂಘ ಕಾಯಿದೆ) ಜಾರಿಯಾದಾಗಿನಿಂದ ಚರ್ಚೆ ನಡೆಯುತ್ತಾ ಬಂದಿದೆ.  ಕಂಪನಿಗಳು ವೃತ್ತಿಪರರನ್ನು / ಕಾನೂನುಗಳಲ್ಲಿ ಪರಿಣಿತರಾದವರನ್ನು ಸಂಧಾನ ಮಾತುಕತೆಗಳ ಸಂದರ್ಭದಲ್ಲಿ ಬಳಸುತ್ತವೆ. ಅವರಿಗೆ ಸರಿಸಮನಾಗಿ ಹೆಚ್ಚು ವಿದ್ಯಾವಂತರಲ್ಲದ ಕಾರ್ಮಿಕರು ವಾದ ಮಂಡಿಸಲು ಸಾಧ್ಯವೆ? ಕಾರ್ಮಿಕ ವ್ಯವಹಾರಗಳಲ್ಲಿ ಹೆಚ್ಚು ತಿಳುವಳಿಕೆ ಇರುವವರನ್ನು ಕಾರ್ಮಿಕರು ಬಯಸಿದರೆ, ಕಂಪನಿಯವರು ಅವಕಾಶ ನೀಡಬೇಕಲ್ಲವೆ? ಹೊರಗಡೆಯವರು ಸಂಘದ ಪದಾಧಿಕಾರಿಗಳಾಗಿ ಮಾತುಕತೆಗಳಲ್ಲಿ ಉಪಸ್ಥಿತರಿರಬಹುದೆಂದು ಕಾರ್ಮಿಕ ಸಂಘಗಳ ಕಾಯಿದೆಯು ಅವಕಾಶ ನೀಡಿದೆ. (ಸಂಘದ ಪದಾಧಿಕಾರಿಗಳಲ್ಲಿ ಹೊರಗಿನವರು ಅರ್ಧದಷ್ಟಿರಬಹುದೆಂದು ಕಾಯಿದೆ ಹೇಳುತ್ತದೆ.) ಹಾಗಾಗಿ, ಕಾರ್ಮಿಕರು ಬಯಸುವಷ್ಟು ಕಾಲ ನಾವು ಅವರ ಸಂಘದಲ್ಲಿ ಇರುತ್ತೇವೆ.

ಒಕ್ಕೂಟ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿ ಕ್ರೋಢೀಕರಿಸಿದೆ. ಇದು “ಹಕ್ಕುಗಳ ಬಗ್ಗೆ ಇರುವ ರಕ್ಷಣಾತ್ಮಕ ಅಂಶಗಳನ್ನು ತೆಗೆದುಹಾಕುತ್ತದೆ” ಎಂದು ಸಿಐಟಿಯು ಅಭಿಪ್ರಾಯಪಡುತ್ತದೆ. ಇದು ಕಾರ್ಮಿಕ ಚಳವಳಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?

ಒಂದು ಉದಾಹರಣೆ ತೆಗೆದುಕೊಳ್ಳೋಣ. ಪ್ರಸ್ತುತ 100 ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳು ಮುಚ್ಚಬೇಕೆಂದರೆ, ಲೇಆಫ್ ಮಾಡಬೇಕೆಂದರೆ, ಅಥವಾ ಕೆಲಸದಿಂದ ತೆಗೆದುಹಾಕಬೇಕೆಂದರೆ ಕಾರ್ಮಿಕ ಇಲಾಖೆಯ ಅನುಮತಿ ಪಡೆಯಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕೈಗಾರಿಕಾ ಸಂಬಂಧಗಳ ಸಂಹಿತೆಯು ಈ ಮಿತಿಯನ್ನು 300 ಕಾರ್ಮಿಕರಿಗೆ ಹೆಚ್ಚಿಸಿದೆ. ಸಿರಿಪೆರಂಬುದೂರಿನಲ್ಲಿ ಕೇವಲ 100 ಕಂಪನಿಗಳು ಮಾತ್ರ ಈ ಮಿತಿಯನ್ನು ಮೀರುತ್ತವೆ. ಸಣ್ಣ ಪೂರೈಕೆದಾರರು ಕಾನೂನಿನ ಈ ಮಿತಿಯಿಂದ ಹೊರಗಿದ್ದು, ಮಾಲೀಕರನ್ನು ಯಾರೂ ತಡೆಯದಂತಾಗಿದೆ. 400 ಕಾರ್ಮಿಕರಿರುವ ಕಂಪನಿಯು 200 ರ ಎರಡು ಕಂಪನಿಗಳಾಗಿ ಇಬ್ಭಾಗವಾಗಿ ಕಾನೂನಿನ ಚೌಕಟ್ಟಿನಿಂದ ಹೊರಗುಳಿಯಲು ಅವಕಾಶವಿದೆ. ಇದು ಅನ್ಯಾಯ.

ಹೌದಪ್ಪಗಳ ಸಮಿತಿಯೊಂದನ್ನು ರಚಿಸಲು ಸ್ಯಾಮ್‌ಸಂಗ್‌ ಆಡಳಿತ ಮಂಡಳಿಗೆ ಸರ್ಕಾರವು ಅವಕಾಶ ಮಾಡಿಕೊಡುವ ಮೂಲಕ, ಮಾಧ್ಯಮಗಳ ಮುಂದೆ ಸಂಧಾನದ ಒಪ್ಪಂದ ಎಂಬ ಭ್ರಮೆಗಳನ್ನು ಸೃಷ್ಟಿಸುತ್ತಿದೆ ಎಂದು ಎ.ಸೌಂದರರಾಜನ್ ಹೇಳುತ್ತಾರೆ.

ಸ್ಯಾಮ್‌ಸಂಗ್‌ ಕಾರ್ಮಿಕರ ಪ್ರತಿಭಟನೆಯು ತಮಿಳುನಾಡಿನ ಕಾರ್ಮಿಕರ ಚಳವಳಿಯಲ್ಲಿ ಯಾವ ಪಾತ್ರ ವಹಿಸುತ್ತದೆ ?

ಸಂಘಗಳನ್ನು ಕಟ್ಟಿಕೊಳ್ಳಲು ಇರುವ ಸಾಂವಿಧಾನಿಕ ಹಕ್ಕುಗಳ ವಿಧಿ 19(1) ರ ಕುರಿತು ಈ ಮುಷ್ಕರ ನಡೆಯುತ್ತಿದೆ. ಅದು ಕೇವಲ ಸಂಬಳಕ್ಕಾಗಿ ಅಲ್ಲ, ಬದಲು ಸಾಮೂಹಿಕ ಚೌಕಾಶಿ ಹಕ್ಕುಗಳ ಬಗ್ಗೆ. ಮಾತುಕತೆ ನಡೆಸುವಾಗ ಸರ್ಕಾರದ ಮೂರು ಸಚಿವರು ಸ್ಯಾಮ್‌ಸಂಗ್‌ ಕಂಪನಿಯ ವಕ್ತಾರರಂತೆ ವರ್ತಿಸಿರುವುದು ನಮಗೆ ಆಘಾತ ಉಂಟುಮಾಡಿದೆ.

ಸಂಘಗಳ ನೋಂದಾವಣಿಯು ದಿನನಿತ್ಯದ ಕೆಲಸ, ಕಳೆದ ತಿಂಗಳು 25 ಸಂಘಗಳು ನೋಂದಾವಣೆಯಾಗಿವೆ. ಆದರೆ, ತಮಿಳು ನಾಡು ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ಮೇಲಿನ ಸ್ಯಾಮ್‌ಸಂಗ್‌ ಕಂಪನಿಯ ಒತ್ತಡವು, ಎಸ್.ಐ.ಡಬ್ಲ್ಯು.ಯು. ನೋಂದಾವಣೆಯನ್ನು ತಡೆಯುತ್ತಿದೆ. ನೋಂದಾವಣೆಯನ್ನು 45 ದಿನಗಳೊಳಗೆ ಮಾಡಬೇಕೆಂಬುದು ಕಡ್ಡಾಯ, ಆದರೆ ಅವರು ವಿಳಂಬ ಮಾಡುತ್ತಿದ್ದಾರೆ. 60 ದಿನಗಳ ನಂತರ ಆಕ್ಷೇಪಣೆ ಎತ್ತಲು ಸ್ಯಾಮ್‌ಸಂಗ್‌ ಕಂಪನಿಗೆ ಸರ್ಕಾರ ಹೇಳುತ್ತಿದೆ ಎಂಬುದು ನಮ್ಮ ಅನುಮಾನ, ಅದರೆ ಹಾಗೆ ಮಾಡಲು ಬಿಡಬಾರದು.

ರಾಜ್ಯಪಾಲ ರವಿಯವರು ವಿದಾನಸಭೆ ಮಸೂದೆಗಳ ಬಗ್ಗೆ  ನಡೆದುಕೊಂಡಂತೆ ಅಂದರೆ ಸಹಿಯನ್ನೂ ಮಾಡದೆ ಅತ್ತ ಹಿಂತಿರುಗಿಸದೆ ವಿಳಂಬ ಮಾಡಿದಂತೆ ಈ ವಿಷಯದಲ್ಲಿ ಸರ್ಕಾರದ ವರ್ತನೆಯು ಹಾಗೆಯೇ ಆಗಿದೆ. ಸ್ಯಾಮ್‌ಸಂಗ್‌ ಕಂಪನಿಗೆ ಹೌದಪ್ಪಗಳ ಸಮಿತಿ ರಚಿಸಲು ಸಮಯ ನೀಡಿ, ಸಂಧಾನದ ಭ್ರಮೆಯನ್ನು ಮಾಧ್ಯಮ ಗಳ ಮೂಲಕ ಸೃಷ್ಟಿಸುತ್ತಿದೆ. 14 ಬೇಡಿಕೆಗಳನ್ನು ಒಪ್ಪಲಾಗಿದೆ ಎಂದು ಸಾಧಿಸುತ್ತಿದ್ದಾರೆ, ಆದರೆ ಅದು ಬರೀ ನಾಟಕವಷ್ಟೆ. ನೊಂದಾವಣೆ ವಿಷಯವು ನ್ಯಾಯಾಲಯದಲ್ಲಿದೆ, ಆದ್ದರಿಂದ ಅದರ ಬಗ್ಗೆ ವ್ಯಾಖ್ಯಾನ ಮಾಡಲಾಗದು ಎಂದು ಸರ್ಕಾರ ಹೇಳುತ್ತಿದೆ.

ಮಾತುಕತೆಯ ನಂತರ, ನಮ್ಮನ್ನು ಮತ್ತೆ ಕರೆಯಲಾಗುವುದು ಎಂದು ಹೇಳುತ್ತಿದ್ದಾರೆ. ಬದಲಿಗೆ,  ಕಾರ್ಮಿಕರನ್ನು “ಪ್ರತಿನಿಧಿಸುತ್ತಿದ್ದಾರೆ” ಎಂದು ಅವರೊಡನೆ ಫೋಟೋಗಳನ್ನು ತೆಗೆಸಿಕೊಂಡರು, ಮತ್ತು ಸಹಿಗಳನ್ನು ಹಾಕಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಪಾರದರ್ಶಕತೆ ಇಲ್ಲ ಮತ್ತು ನಮ್ಮನ್ನು ಮೋಸ ಮಾಡುವ ಕುತಂತ್ರವದು.

ನಮ್ಮ ಮುಖ್ಯ ಬೇಡಿಕೆ ಸಂಘವನ್ನು ಮಾನ್ಯಮಾಡಬೇಕೆಂಬುದು. ಆ ಬೇಡಿಕೆ ಈಡೇರಿದರೆ ನಾವು ತಕ್ಷಣವೇ ಮುಷ್ಕರ ನಿಲ್ಲಿಸುತ್ತೇವೆ. ಇತರ ವಿಷಯಗಳನ್ನು ನಂತರದಲ್ಲಿ ಚರ್ಚೆ ಮಾಡಬಹುದು. ರೂ.5000/- ದ ಆಶ್ವಾಸನೆ ಕೇವಲ ಪ್ರೋತ್ಸಾಹ ಧನ ಅಷ್ಟೆ, ಅದು ಸಂಬಳ ಹೆಚ್ಚಳವಲ್ಲ. ಹವಾನಿಯಂತ್ರಿತ ಬಸ್ಸುಗಳು ಮತ್ತು ಲಾಕರುಗಳ ರಿಪೇರಿಯಂತಹ 14 ಬೇಡಿಕೆಗಳನ್ನು ಒಪ್ಪಿರುವುದೇ ತೋರಿಸುತ್ತದೆ ಅದಕ್ಕೂ ಮುಂಚೆ ಕಾರ್ಮಿಕರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು.

ಬಾಧಿತ ಕಾರ್ಖಾನೆ ನೌಕರರು 516 ಎಂದು ಸಚಿವರು ಒಪ್ಪಿಕೊಂಡಿರುವುದೇ ಹೇಳುತ್ತದೆ ಹೊರಗಡೆ 1300 ಕಾರ್ಮಿಕರು ಪ್ರತಿಭಟಿಸಯತ್ತಿದ್ದಾರೆ ಎನ್ನುವುದನ್ನು. ಪ್ರಜಾಪ್ರಭುತ್ವದಲ್ಲಿ, ಈ ಬಹುಮತವನ್ನು ಗೌರವಿಸಬೇಕಾಗುತ್ತದೆ.

ಡಿಎಂಕೆ ಸರ್ಕಾರದ ಕಾರ್ಮಿಕ ಪ್ರಗತಿಪರ ರಂಗವು ಸ್ಯಾಮ್‌ಸಂಗ್‌ ಕಾರ್ಮಿಕರನ್ನು ಮತ್ತು ಸಿಐಟಿಯುವನ್ನು ಬೆಂಬಲಿಸುತ್ತದೆ. ಹಾಗಿದ್ದ ಮೇಲೆ, ಸಂಘವನ್ನು ನೋಂದಾಯಿಸಲು ಸರ್ಕಾರವನ್ನು ಯಾರು ತಡೆಹಿಡಿದಿದ್ದಾರೆ?

ಹೌದು, ಕಾರ್ಮಿಕ ಪ್ರಗತಿಪರ ರಂಗವು ನಮ್ಮನ್ನು ಬೆಂಬಲಿಸುತ್ತದೆ ಮತ್ತು ಕಾರ್ಮಿಕ ವರ್ಗದ ವಿಷಯಗಳನ್ನು ಒಪ್ಪಿಕೊಳ್ಳುತ್ತದೆ. ಆದರೆ ರಾಜಕೀಯ ಕಾರಣಗಳಿಗಾಗಿ, ಅವರು ಬಹಿರಂಗವಾಗಿ ತಮ್ಮ ಪಕ್ಷವನ್ನು ಪ್ರಶ್ನಿಸುವುದಿಲ್ಲ.

ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಮೆರಿಕಾ ಪ್ರವಾಸವು ರೂ.7,000 ಕೋಟಿಗಿಂತಲೂ ಹೆಚ್ಚು ಮೌಲ್ಯದ ಹಣ ಹೂಡಿಕೆಯ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಸ್ಯಾಮ್‌ಸಂಗ್‌ ಕಾರ್ಮಿಕರ ಪ್ರತಿಭಟನೆಯು ಅಂತಹ ಹಣ ಹೂಡಿಕೆಯನ್ನು ತಡೆಗಟ್ಟುತ್ತದೆ ಎಂದು ಕೆಲವು ಟೀಕಾಕಾರರು ವಾದಿಸುತ್ತಿದ್ದಾರೆ.

ಸಂಭಾವ್ಯ ಲಾಭಗಳು, ಪ್ರೋತ್ಸಾಹ ಧನ (ಸಬ್ಸಿಡಿಗಳು), ಮತ್ತು ಕಾರ್ಮಿಕರ ಶಿಸ್ತುಗಳ ಬಗ್ಗೆ ಮಾಲೀಕರು ಲೆಕ್ಕಹಾಕುತ್ತಾರೆ. ತಮಿಳುನಾಡು ಈ ಎಲ್ಲವನ್ನೂ ಒದಗಿಸುತ್ತದೆ. ಕೈಗಾರಿಕೆಗಳು ಬರಬೇಕು, ಆದರೆ ಕಾರ್ಮಿಕರ ಹಕ್ಕುಗಳನ್ನೂ ಖಾತರಿಪಡಿಸಬೇಕು. ಮುಷ್ಕರಗಳು ಕಂಪನಿಗಳನ್ನು ಹೆದರಿಸುತ್ತವೆ ಎಂದು ಟೀಕೆಮಾಡುವವರಿಗೆ ನಾನು ಕೇಳುತ್ತೇನೆ: ಈ ಕಂಪನಿಗಳ ಮೂಲ ದೇಶದಲ್ಲಿ ಕಾರ್ಮಿಕ ಸಂಘಗಳಿಲ್ಲವೆ? ಫ್ರಾನ್ಸ್ ಮತ್ತು ಯುಕೆಯಲ್ಲಿ ಶಕ್ತಿಯುತ ಕಾರ್ಮಿಕ ಸಂಘಗಳಿವೆ‌. ಕಾರ್ಮಿಕ ಸಂಘಗಳಿಲ್ಲದ ದೇಶಗಳಿವೆಯೆ? ಇಲಿಗಳಿಗೆ ಹೆದರಿ ಯಾರೂ ತಮ್ಮ ಮನೆಯನ್ನು ಸುಟ್ಟುಹಾಕುವುದಿಲ್ಲ. ಕಂಒನಿಗಳನ್ನು ಆಕರ್ಷಿಸಲು ಸಂಘಗಳನ್ನು ತಡೆಯುವುದೊಂದೇ ದಾರಿಯಾದರೆ, ಅವರ ಮೇಲೆ ತೆರಿಗೆ ವಿಧಿಸುವುದನ್ನೂ ಏಕೆ ತಡೆಯಬಾರದು? ಅದು ಸಾಧ್ಯವೇ? ತೆರಿಗೆ ಬೇಡಿಕೆಗಳ ವಿಷಯದಲ್ಲೇ ನೋಕಿಯಾ ಚನ್ನೈನನ್ನು ಬಿಟ್ಟು ಹೊರಗೆ ಹೋಯಿತು, 15,000 ಉದ್ಯೋಗ ನಷ್ಟವಾಯಿತು. ಸರ್ಕಾರ ಕಾನೂನನ್ನು ಜಾರಿ ಮಾಡಬೇಕು – ಅದು ತೆರಿಗೆ ಇರಲಿ ಅಥವಾ ಸಂಘ ನೋಂದಾವಣೆ ಇರಲಿ.

ಸ್ಯಾಮ್‌ಸಂಗ್‌ ಮುಷ್ಕರದ ವಿಚಾರದಲ್ಲಿ ಸಿಐಟಿಯು ಮುಂದಿನ ಕಾರ್ಯಾಚರಣೆಯ ಯೋಜನೆಗಳೇನು?

ಸಂಘವನ್ನು ಸ್ಥಾಪಿಸುವ ತನಕ ನಾವು ನಿಲ್ಲುವುದಿಲ್ಲ. ಸಂಘ ಕಟ್ಟುವುದು ನಮ್ಮ ಹಕ್ಕು. ಕಾರ್ಮಿಕರು ಎರಡಕ್ಕಿಂತ ಹೆಚ್ಚು ತಿಂಗಳು ಗಟ್ಟುಯಾಗಿ ನಿಂತರೆ,ನೆನಪಿಡಿ: ಯಮಾಹಾ ಕಾರ್ಮಿಕರು 63 ದಿನಗಳ ಕಾಲ ಮುಷ್ಕರ ಮಾಡಿದರು, ತಮ್ಮ ಸಂಘ ಕಟ್ಟುದರು. ಸ್ಯಾಮ್‌ಸಂಗ್‌ ಕಂಪನಿ ಕೂಡ ಬಗ್ಗಲೇಬೇಕು. ಉತ್ಪಾದನೆ ಇಲ್ಲದೆ ಅವರು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸ್ಪರ್ಧಿಗಳು ಸನ್ನಿವೇಶದ ಉಪಯೋಗ ಪಡೆಯುತ್ತಾರೆ, ನಷ್ಟ ಉಂಟುಮಾಡುತ್ತಾರೆ. ನಮಗೇನೂ ಇದರಿಂದ ಸಂತೋಷವಾಗುತ್ತಿಲ್ಲ‌ ಈ ಮುಷ್ಕರವು ಕಾರ್ಮಿಕರ ತೀವ್ರ ಮಾನಸಿಕ ಒತ್ತಡವನ್ನು ಮತ್ತಿತರ ಸಮಸ್ಯೆಗಳನ್ನು ಪ್ರತಿಫಲಿಸುತ್ತದೆ. ಸರ್ಜಾರವು ಇದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

 

 

Donate Janashakthi Media

Leave a Reply

Your email address will not be published. Required fields are marked *