ಕಾಂಗ್ರೆಸ್‌ ಆತ್ಮಾವಲೋಕನದ ಸಮಯ ಮೀರುತ್ತಿದೆ

– ನಾ ದಿವಾಕರ

“ ಹರಿಯಾಣ ಚುನಾವಣೆಗಳು ಕಾಂಗ್ರೆಸ್‌ ಪಕ್ಷದ ದೌರ್ಬಲ್ಯ-ನಿಷ್ಕ್ರಿಯತೆ ಎರಡನ್ನೂ ತೆರೆದಿಟ್ಟಿದೆ”

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕಾಗಿ ಹಂಬಲಿಸುವ ರಾಜಕೀಯ ಪಕ್ಷಗಳಲ್ಲಿ ಮುಖ್ಯವಾಗಿ ಎರಡು ಲಕ್ಷಣಗಳು ಇರಬೇಕು. ಮೊದಲನೆಯದು ತಮ್ಮ ಪ್ರತಿಯೊಂದು ಸೋಲು-ಗೆಲುವು-ಹಿನ್ನಡೆಗಳನ್ನೂ ಕಾಲಕಾಲಕ್ಕೆ ಪರಾಮರ್ಶಿಸುವ ಮೂಲಕ ಎಡವಿದ ಹಾದಿಯನ್ನು ಗುರುತಿಸಿ ಮತ್ತೊಮ್ಮೆ ಎಡವದಂತೆ ಜಾಗ್ರತೆ ವಹಿಸುವುದು. ಎರಡನೆಯದು ವೈವಿಧ್ಯಮಯ ರಾಜಕೀಯ ನೆಲೆಗಳಲ್ಲಿ ವಿಸ್ತರಿಸಿಕೊಳ್ಳುವ ಭಾರತದಂತಹ ದೇಶದಲ್ಲಿ ತಮ್ಮ ಗೆಲುವಿನ ಕಾರಣಗಳನ್ನು ವೈಭವೀಕರಿಸುವುದಕ್ಕಿಂತಲೂ, ಆಗಾಗ್ಗೆ ಸಂಭವಿಸುವ ಸೋಲಿನ ಕಾರಣಗಳನ್ನು ಕುರಿತು ಪರಾಮರ್ಶೆ ನಡೆಸುವುದು ತನ್ಮೂಲಕ ಆತ್ಮಾವಲೋಕನ ಮಾಡಿಕೊಳ್ಳುವುದು. ಈ ಎರಡೂ ಪ್ರಧಾನ ಲಕ್ಷಣಗಳನ್ನು ರೂಢಿಸಿಕೊಳ್ಳದ ಯಾವುದೇ ಪಕ್ಷವಾದರೂ ಯಶಸ್ಸಿನ ಮೆಟ್ಟಿಲೇರುವಾಗ ಎಡವುವುದೇ ಹೆಚ್ಚು. ನೂರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಇದಕ್ಕೊಂದು ಜ್ವಲಂತ ನಿದರ್ಶನ.

ಸ್ವಾತಂತ್ರ್ಯೋತ್ತರ ಭಾರತದ ಮೊದಲೆರಡು ದಶಕಗಳಲ್ಲಿ ಅವಿರೋಧವಾಗಿ ತನ್ನ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷ ತದನಂತರದಲ್ಲಿ ಸಾಕಷ್ಟು ವಿಘಟನೆಗೊಳಗಾಗಿ, ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದ್ದರೂ, ಆರಂಭಿಕ ಅಂತಃಸತ್ವವನ್ನು ಕಳೆದುಕೊಂಡಿರುವುದು ಸ್ಪಷ್ಟ. ಆದಾಗ್ಯೂ ಪಕ್ಷದ ತಳಮಟ್ಟದ ಜನಬೆಂಬಲ ಇಂದಿಗೂ ಉಳಿದುಕೊಂಡುಬಂದಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ ಪಕ್ಷದ ಉದಾತ್ತ ಅಥವಾ ಉನ್ನತ ತಾತ್ವಿಕ ನೆಲೆಗಳಲ್ಲ, ಬದಲಾಗಿ ಭಾರತದ ತಳಸಮಾಜದ ಜನತೆಗೆ ದೇಶವನ್ನು ಸಂವಿಧಾನದ ಚೌಕಟ್ಟಿನೊಳಗೇ ಮುನ್ನಡೆಸುವಂತಹ ಒಂದು Pan Indian ಅಂದರೆ ಇಡೀ ಭಾರತವನ್ನು ವ್ಯಾಪಿಸುವಂತಹ ಒಂದು ರಾಜಕೀಯ ಶಕ್ತಿ ಅವಶ್ಯವಾಗಿ ಬೇಕಿದೆ. ಇಂದು ದೇಶದ ರಾಜಕಾರಣವನ್ನು ಹಿಡಿದಿಟ್ಟುಕೊಂಡಿರುವ ಹಿಂದುತ್ವವಾದಿ ಬಿಜೆಪಿ ಇಲ್ಲಿ ಪ್ರಧಾನ ಶಕ್ತಿಯಾಗಿ ಕಾಣುವುದಿಲ್ಲ. ಈ ಎರಡೂ ಪಕ್ಷಗಳ ಹೊರತಾಗಿ ಇತರ ಯಾವುದೇ ಪಕ್ಷಗಳೂ ಸಹ ದೇಶವ್ಯಾಪಿ ಪ್ರಭಾವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ.

ಹಾಗಾಗಿ ಬಿಜೆಪಿಯ ʼಕಾಂಗ್ರೆಸ್‌ ಮುಕ್ತ ಭಾರತʼ ದ ಮಹತ್ವಾಕಾಂಕ್ಷೆಯ ಯೋಜನೆಯೂ ಕೈಗೂಡುತ್ತಿಲ್ಲ. 2014-24ರ ಹತ್ತು ವರ್ಷಗಳ ಆಳ್ವಿಕೆಯ ನಂತರ ಭಾರತದ ರಾಜಕೀಯ ಭೂಪಟದಿಂದ ಕಾಂಗ್ರೆಸ್‌ ಪಕ್ಷವನ್ನು ಅಳಿಸಿಹಾಕುವ ಬಿಜೆಪಿಯ ಬೃಹದಾಶಯಕ್ಕೆ 2023ರ ಕರ್ನಾಟಕ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಗಳು ಕಡಿವಾಣ ಹಾಕಿವೆ. ಆದಾಗ್ಯೂ 1980-90ರಲ್ಲಿ ತಾನೇ ಮಾಡಿದ ಚಾರಿತ್ರಿಕ ಪ್ರಮಾದಗಳಿಂದ ದೇಶದ ರಾಜಕಾರಣದಲ್ಲಿ ತನ್ನ ಪ್ರಸ್ತುತತೆಯನ್ನೇ ಪ್ರಶ್ನಾರ್ಹವಾಗಿ ಮಾಡಿಕೊಂಡಿರುವ ಕಾಂಗ್ರೆಸ್‌ ಸೋಲಿನ ಹತಾಶೆಯಿಂದ ಮೇಲೆದ್ದು ಮತ್ತೆ ಮತ್ತೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡುಬಂದಿದೆ. ಆದರೆ ಕೆಲವು ನಿರ್ಣಾಯಕ ಚುನಾವಣೆಗಳನ್ನು ತನ್ನ ಅಂತಃಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದೆ ಪರಾಭವವನ್ನು ಎದುರಿಸುತ್ತಿದೆ.

ಚುನಾವಣಾ ರಾಜಕಾರಣ ಏಳು-ಬೀಳು

ಇತ್ತೀಚೆಗೆ ಮುಗಿದ ಹರಿಯಾಣ ಚುನಾವಣೆಗಳು ಈ ನಿಟ್ಟಿನಲ್ಲಿ ಒಂದು ನಿದರ್ಶನ. ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಹರಿಯಾಣ ಕೆಲವು ವಲಯಗಳಲ್ಲಿ ಅಭಿವೃದ್ಧಿಯನ್ನು ಕಂಡಿರುವುದು ವಾಸ್ತವ. ಆದರೆ ಕೃಷಿ ಬಿಕ್ಕಟ್ಟು, ರೈತರ ಸುದೀರ್ಘ ಹೋರಾಟ, ನೂಹ್‌ ಮುಂತಾದೆಡೆ ನಡೆದ ಕೋಮು ಸಂಘರ್ಷಗಳು, ಅಗ್ನಿವೀರ್‌ ವಿರುದ್ಧ ನಡೆದ ಯುವ ಸಮೂಹದ ಪ್ರತಿಭಟನೆಗಳು, ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಯ ಕೊರತೆ, ನಿರುದ್ಯೋಗದ ಬವಣೆ, ಕುಸ್ತಿಪಟುಗಳ ನಿರಂತರ ಹೋರಾಟ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಸರ್ಕಾರ ಅನುಸರಿಸಿದ ಕೋಮು ದ್ವೇಷದ ರಾಜಕಾರಣ, ಕಾಂಗ್ರೆಸ್‌ ಪಕ್ಷದ ದೃಷ್ಟಿಯಲ್ಲಿ ಬದಲಾವಣೆಗೆ ಪ್ರಶಸ್ತ ಬೆಳವಣಿಗೆಗಳಾಗಿದ್ದವು. ಬಿಜೆಪಿ ಆಳ್ವಿಕೆಯ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಬೇಕಿದ್ದ ಈ ರಾಜಕೀಯ ಬೆಳವಣಿಗೆಗಳನ್ನು Encash ಮಾಡಿಕೊಳ್ಳುವ ರಾಜಕೀಯ ಚಾಣಾಕ್ಷತೆ ಮತ್ತು ಚಾಕಚಕ್ಯತೆಯನ್ನು ಕಾಂಗ್ರೆಸ್‌ ಪ್ರದರ್ಶಿಸಲಾಗಿಲ್ಲ.

ಇದರ ಪರಿಣಾಮ ಈಗಿನ ಸೋಲು. ತನ್ನ ಸೋಲನ್ನು EVM ಅಥವಾ ಮತಯಂತ್ರಗಳ ಹೆಗಲಿಗೆ ಹೊರಿಸುವ ಅಪ್ರಬುದ್ಧತೆ ರಾಜಕೀಯವಾಗಿ ಸಂಚಲನ ಮೂಡಿಸಬಹುದೇ ಹೊರತು, ಅದರಿಂದ ಅಂತಿಮ ಫಲಿತಾಂಶಗಳೇನೂ ಬದಲಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್‌ ಗೆಲುವು ಸಾಧಿಸಿದಾಗ, ಹೆಚ್ಚಿನ ಸ್ಥಾನಗಳನ್ನು ಗಳಿಸಿದಾಗ (ಉದಾಹರಣೆಗೆ ಕರ್ನಾಟಕದ ವಿಧಾನಸಭೆ, ಕೇರಳದ ಲೋಕಸಭೆ ಚುನಾವಣೆಗಳು) ಮತಯಂತ್ರಗಳ ಬಗ್ಗೆ ಚಕಾರ ಎತ್ತದ ಪಕ್ಷದ ಹೈಕಮಾಂಡ್‌, ಸೋಲಿನ ಹೊಣೆಯನ್ನು ಇದರ ಮೇಲೆ ಹೊರಿಸುವುದು ರಾಜಕೀಯವಾಗಿ ಅಪ್ರಬುದ್ಧ ಲಕ್ಷಣವಾಗಿ ಕಾಣುತ್ತದೆ. ಯಾವುದೇ ಚುನಾವಣೆಯಾದರೂ ಸೋಲಿನ ಹೊಣೆಯನ್ನು ಹೊರಬೇಕಿರುವುದು ಸ್ಥಳೀಯ ನಾಯಕತ್ವ ಮತ್ತು ಅದರ ಬೆನ್ನೆಲುಬಾಗಿ ನಿಲ್ಲುವ ಹೈಕಮಾಂಡ್.

ನಾಯಕತ್ವದ ಬೌದ್ಧಿಕ ಕೊರತೆ

ಕಾಂಗ್ರೆಸ್‌ ಪಕ್ಷದ ಒಂದು ಸಮಸ್ಯೆ ಎಂದರೆ ಒಂದು ಸಣ್ಣ ಗೆಲುವು ಅಥವಾ ಮುನ್ನಡೆಯಿಂದ ಪಕ್ಷದ ನಾಯಕರು ಪಿತ್ತ ನೆತ್ತಿಗೇರಿದವರಂತೆ ವರ್ತಿಸಲಾರಂಭಿಸುತ್ತಾರೆ. ಪ್ರತಿಯೊಂದು ಗೆಲುವಿನ ಹಿಂದೆಯೂ ಭವಿಷ್ಯದ ಸಂಭಾವ್ಯ ಸೋಲು ಇದ್ದೇ ಇರುತ್ತದೆ ಎಂಬ ಸರಳ ವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್‌ ಸದಾ ಸೋಲುತ್ತಲೇ ಬಂದಿದೆ. ಕರ್ನಾಟಕದ ಗೆಲುವು ಇದಕ್ಕೊಂದು ನಿದರ್ಶನ. ಕಳೆದ ಒಂದೂವರೆ ವರ್ಷದ ಕಾಂಗ್ರೆಸ್‌ ಪಕ್ಷದ ಆಳ್ವಿಕೆಯನ್ನು ಗಮನಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಆಳ್ವಿಕೆಯೇ ಶಾಶ್ವತ ಎನ್ನುವ ರೀತಿಯಲ್ಲಿ ಸಿದ್ಧರಾಮಯ್ಯ ಸರ್ಕಾರ ವರ್ತಿಸುತ್ತಿರುವುದು ಕಾಣುತ್ತದೆ. ಹಾಗಾಗಿಯೇ ಹಿಂದಿನ ಸರ್ಕಾರದಂತೆಯೇ ಕುರ್ಚಿಗಾಗಿ ಕಿತ್ತಾಟ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆ, ಜಾತಿ-ಬಣ-ಗುಂಪು ರಾಜಕಾರಣ, ಜಾತಿ ಕೇಂದ್ರಿತ ಆಡಳಿತ ನೀತಿಗಳು, ಹಣಕಾಸು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರಶಾಹಿಯ ದರ್ಪ ಮತ್ತು ಸಮಾಜಘಾತುಕ ಶಕ್ತಿಗಳ ಮೇಲಾಟ ಎಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ತನ್ನ ಸಾಂಸ್ಕೃತಿಕ, ಭಾಷಾ ನೀತಿಗಳಲ್ಲೂ ಕಾಂಗ್ರೆಸ್ ಸರ್ಕಾರ ಸಕಾರಾತ್ಮಕವಾದ ಆಳ್ವಿಕೆಯನ್ನು ನೀಡಲು ವಿಫಲವಾಗಿದೆ.

ಹರಿಯಾಣ ಚುನಾವಣೆಗಳು ಕಾಂಗ್ರೆಸ್‌ ಪಕ್ಷದ ರಾಜಕೀಯ ಪುನಶ್ಚೇತನಕ್ಕೆ ಪ್ರಶಸ್ತವಾದ ಭೂಮಿಕೆಯನ್ನು ಒದಗಿಸಿತ್ತು. ತಳಮಟ್ಟದ ಸಮಾಜದಲ್ಲಿದ್ದ ಅಸಮಾಧಾನಗಳು ಮತ್ತು ಆಕ್ರೋಶಗಳನ್ನು ಸೂಕ್ತ ರೀತಿಯಲ್ಲಿ ಸಂಪರ್ಕಿಸಿ, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ರೈತರು ಎದುರಿಸುತ್ತಿದ್ದ ನಿತ್ಯಜೀವನದ ಸಮಸ್ಯೆಗಳ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಿ, ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರದ ವಿರುದ್ಧ ಪ್ರಬಲವಾದ ಜನಾಭಿಪ್ರಾಯವನ್ನು ಮೂಡಿಸುವ ಸಾಧ್ಯತೆಗಳಿದ್ದವು. ಕೇಂದ್ರ ಸರ್ಕಾರ ಅಥವಾ ಬಿಜೆಪಿ ಬೆಂಬಲಿತ ಮಾಧ್ಯಮಗಳು ಒದಗಿಸುವ ಆಕರ್ಷಕ ದತ್ತಾಂಶ-ಅಂಕಿಅಂಶಗಳಿಂದಾಚೆಗೆ, ಹರಿಯಾಣದ ತಳಸಮಾಜದಲ್ಲಿ ಜನಸಾಮಾನ್ಯರ ನಿತ್ಯ ಬದುಕು ಹಲವಾರು ಸಿಕ್ಕುಗಳನ್ನು ಎದುರಿಸುತ್ತಿದ್ದುದು ವಾಸ್ತವ. ಆದರೆ ಇದಕ್ಕೆ ಪೂರಕವಾದ ತಳಮಟ್ಟದ ಸಂಶೋಧನೆ, ಜನಸಂಪರ್ಕ ಮತ್ತು ಸಮರ್ಥನೀಯ ಅಂಕಿಅಂಶಗಳನ್ನು ಹೊರತೆಗೆಯುವ ಯಾವುದೇ ಪ್ರಯತ್ನಗಳನ್ನು ಕಾಂಗ್ರೆಸ್‌ ಹೈಕಮಾಂಡ್‌ ಮಾಡಲಿಲ್ಲ. ಇದರ ನೇರ ಪರಿಣಾಮ ಹೀನಾಯ ಸೋಲು.

ಇದನ್ನು ಓದಿ : ಅನರ್ಹ ಎಂಬ ಹೆಸರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡುಗಳ ರದ್ದು; ಬಿಪಿಎಲ್ ಗೆ ಇರುವ ಮಾನದಂಡ ಬದಲಾಗಬೇಕಿದೆ

ಚುನಾವಣಾ ಸೋಲಿನ ಕಾರಣಗಳು

ಈ ಸೋಲಿಗೆ ಹಲವು ಕಾರಣಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಹರಿಯಾಣದ ಯುವ ಸಮೂಹವನ್ನು ಕಾಡುತ್ತಿದ್ದ ನಿರುದ್ಯೋಗ, ಗಿಗ್‌ ಕಾರ್ಮಿಕರು ( ಓಲಾ, ಊಬರ್‌, ಜಮೋಟೋ, ಸ್ವಿಗಿ ಇತ್ಯಾದಿ) ಎದುರಿಸುತ್ತಿದ್ದ ಅನಿಶ್ಚಿತತೆ, ಅಗ್ನಿವೀರ್‌ ಯೋಜನೆ ಸೃಷ್ಟಿಸಿದ್ದ ಅಭದ್ರತೆ, ರೈತ ಹೋರಾಟವು ಪ್ರತಿನಿಧಿಸುತ್ತಿದ್ದ ಕೃಷಿ ಸಮಸ್ಯೆಗಳು ಮತ್ತು ಮಹಿಳೆಯರು-ದಲಿತರು-ಅಲ್ಪಸಂಖ್ಯಾತರು ಎದುರಿಸುತ್ತಿದ್ದ ದೌರ್ಜನ್ಯಗಳು ಈ ಎಲ್ಲ ಜ್ವಲಂತ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ ಅಗತ್ಯವಿದ್ದಷ್ಟು ಗಮನಹರಿಸಲಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಯೇ ಪ್ರಧಾನವಾಗಿ, ಹತ್ತು ವರ್ಷದ ಬಿಜೆಪಿ ಆಳ್ವಿಕೆಗೆ ಪರ್ಯಾಯವಾಗಿ ಕಾಂಗ್ರೆಸ್‌ ಏನನ್ನು ನೀಡುತ್ತದೆ ಎಂಬ ಸ್ಪಷ್ಟ ನಿರೂಪಣೆ ಕಾಣಲೇ ಇಲ್ಲ. ಹಾಗೆಯೇ ದೇಶವ್ಯಾಪಿಯಾಗಿ ಚರ್ಚೆಗೊಳಗಾಗಿರುವ ಜಾತಿ ಗಣತಿ ಮತ್ತು ಒಳಮೀಸಲಾತಿಯ ಆಗ್ರಹದಲ್ಲಿ ತಳಸಮಾಜದ ಧ್ವನಿಯೊಡನೆ ದನಿಗೂಡಿಸುವ ಪ್ರಯತ್ನಗಳೂ ನಡೆಯಲಿಲ್ಲ. ಹಾಗಾಗಿ ಹರಿಯಾಣದ ರೈತರನ್ನು ಪ್ರತಿನಿಧಿಸುವ ಜಾಟ್‌ ಸಮುದಾಯ, ಮಹಿಳೆಯರು ಮತ್ತು ದಲಿತರು ಕಾಂಗ್ರೆಸ್‌ ಪಕ್ಷದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ.

ಎರಡನೆಯ ಕಾರಣ ಬಹುಮುಖ್ಯವಾದದ್ದು. ಕಾಂಗ್ರೆಸ್‌ ಕಳೆದ ಮೂರು ದಶಕಗಳ ರಾಜಕಾರಣದಲ್ಲಿ ಅರ್ಥಮಾಡಿಕೊಳ್ಳಬೇಕಾದ ಒಂದು ವಾಸ್ತವ ಎಂದರೆ ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ಮತ್ತು ಜನಪ್ರಿಯತೆ. ತಳಮಟ್ಟದಲ್ಲಿ ಜನಸಂಪರ್ಕವನ್ನು ಕಳೆದುಕೊಳ್ಳುತ್ತಲೇ ಇರುವ ಕಾಂಗ್ರೆಸ್‌ ಪಕ್ಷಕ್ಕೆ ನಗರ ಪ್ರದೇಶಗಳ ಮತದಾರರೂ ವಿಮುಖರಾಗಿರಲು ಕಾರಣ ಅಲ್ಲಿನ ಹಿತವಲಯದ ಮಧ್ಯಮ ವರ್ಗಗಳು ಮತ್ತು ಅವರನ್ನು ಪ್ರತಿನಿಧಿಸುವ ಪ್ರಾದೇಶಿಕ, ಜಾತಿವಾರು ಪಕ್ಷಗಳು. ಇತ್ತೀಚಿನ ವರ್ಷಗಳಲ್ಲಿ ಆಮ್‌ ಆದ್ಮಿ ಪಕ್ಷ (ಆಪ್) ತನ್ನದೇ ಆದ ಜನಕಲ್ಯಾಣ ಯೋಜನೆಗಳ ಮೂಲಕ ಈ ವರ್ಗಗಳನ್ನು ಆಕರ್ಷಿಸುತ್ತಿದೆ. ಬಿಜೆಪಿ ಆಳ್ವಿಕೆಯನ್ನು ಕೊನೆಗೊಳಿಸುವ ಉದ್ದೇಶವೇ ಪ್ರಧಾನವಾಗಿದ್ದರೆ ಕಾಂಗ್ರೆಸ್‌ ನಾಯಕತ್ವಕ್ಕೆ ಈ ಪ್ರಾದೇಶಿಕ ಪಕ್ಷಗಳೊಡನೆ ಚುನಾವಣಾ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ.
ಈ ಪ್ರಕ್ರಿಯೆಯಲ್ಲಿ ಕೊಡು ಕೊಳ್ಳುವಿಕೆಯ ಧೋರಣೆಯೊಂದೇ ಸಾಲದು. ಕಾಂಗ್ರೆಸ್‌ ತಾನು ನಿಂತ ನೆಲ ಕುಸಿಯುತ್ತಿರುವುದನ್ನು ಅರಿತು, ಬಿಟ್ಟುಕೊಡಲು ತಯಾರಾಗಿರಬೇಕು. ತನ್ನ ಮತಗಳಿಕೆ ಶೇಕಡಾ 40ನ್ನು ದಾಟದು ಎಂಬ ಅಂಶವನ್ನು ಕಾಂಗ್ರೆಸ್‌ ಅರಿತಿರಬೇಕು. ಹರಿಯಾಣದಲ್ಲಿ ಆಮ್‌ ಆದ್ಮಿ ಪಕ್ಷದ ಸಾಧನೆ ಶೂನ್ಯವಾಗಿದ್ದರೂ, ಕೇವಲ ಶೇಕಡಾ 1.79ರಷ್ಟು ಮತ ಗಳಿಸಿದ್ದರೂ, ಈ ಪಕ್ಷ ಮತ್ತಿತರ ಪ್ರಾದೇಶಿಕ ಪಕ್ಷಗಳೊಡನೆ ಚುನಾವಣಾ ಮೈತ್ರಿ ಸಾಧಿಸಿದ್ದರೆ, ಮತವಿಭಜನೆಯನ್ನು ತಪ್ಪಿಸುವ ಸಾಧ್ಯತೆಗಳಿದ್ದವು. ಈ ದೃಷ್ಟಿಯಿಂದ ನೋಡಿದಾಗ ಕಾಂಗ್ರೆಸ್‌ ಇನ್ನೂ ಸಹ ತನ್ನ ಸಾಂಪ್ರದಾಯಿಕ ಪೊರೆಯನ್ನು ಕಳಚಿಕೊಂಡಂತೆ ಕಾಣುವುದಿಲ್ಲ. ಪ್ರಾದೇಶಿಕ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಔದಾರ್ಯ ಅಥವಾ ಸಾಂದರ್ಭಿಕ ತಂತ್ರಗಾರಿಕೆಯನ್ನು ಅನುಸರಿಸುವಲ್ಲಿ ಕಾಂಗ್ರೆಸ್‌ ಪದೇಪದೇ ಸೋಲುತ್ತಲೇ ಇದೆ. ಮುಂಬರುವ ಮಹಾರಾಷ್ಟ್ರ, ಜಾರ್ಖಂಡ್‌, ಉತ್ತರಪ್ರದೇಶ ಮತ್ತಿತರ ರಾಜ್ಯಗಳ ಚುನಾವಣೆಗಳ ಹೊತ್ತಿಗಾದರೂ ಕಾಂಗ್ರೆಸ್‌ ಹೈಕಮಾಂಡ್‌ ನೆಲದ ಮೇಲೆ ನಿಂತು ಯೋಚಿಸಿ, ನೆಲದ ವಾಸ್ತವಗಳನ್ನು ಅರಿತು ಈ ಬಗ್ಗೆ ಪರಾಮರ್ಶೆ ಮಾಡಬೇಕಿದೆ.

ಮೂರನೆಯ ಕಾರಣ ಎಂದರೆ ಕಾಂಗ್ರೆಸ್‌ ಬಹುತೇಕ ಎಲ್ಲ ರಾಜ್ಯಗಳಲ್ಲೂ ಅತಿಯಾಗಿ ಅವಲಂಬಿಸಿರುವುದು ಇಂದಿರಾಗಾಂಧಿ ಕಾಲದ ಹಿರಿಯ ತಲೆಮಾರಿನ ನಾಯಕರನ್ನು. ರಾಜಸ್ಥಾನದ ಗೆಹ್ಲೋಟ್‌, ಮಧ್ಯಪ್ರದೇಶದ ಕಮಲ್‌ ನಾಥ್‌, ಹರಿಯಾಣದ ಭೂಪೇಂದ್ರ ಹೂಡಾ ಕೆಲವು ಉದಾಹರಣೆಗಳು. ಈ ನಾಯಕರ ಮಹತ್ವಾಕಾಂಕ್ಷೆ ಮತ್ತು ಪೀಠದಾಹವೇ ಪಕ್ಷದ ಸೋಲಿಗೆ ಕಾರಣವಾಗಿರುವುದನ್ನು ಇತ್ತೀಚಿನ ಚುನಾವಣೆಗಳಲ್ಲಿ ಗಮನಿಸಿದ್ದೇವೆ. ಹಿರಿಯರಿಗೆ ಪ್ರಾಧಾನ್ಯತೆ ನೀಡುವುದರ ಪರಿಣಾಮ ಯುವ ನಾಯಕತ್ವ ಹಂತಹಂತವಾಗಿ ಹಿಂದೆ ಸರಿಯುತ್ತದೆ. ಈ ವರ್ಗವನ್ನು ಬಿಜೆಪಿ ಅಥವಾ ಆಮ್‌ ಆದ್ಮಿ ಆಕರ್ಷಿಸುತ್ತದೆ. ಕರ್ನಾಟಕದಲ್ಲೂ ಇದೇ ಸಮಸ್ಯೆ ಇದೆ. ರಾಜ್ಯ ಕಾಂಗ್ರೆಸ್‌ ನಾಯಕತ್ವದ ಸರಾಸರಿ ವಯೋಮಾನ ಕನಿಷ್ಠ 60 ಇರಬಹುದು. ಇನ್ನು ಯುವತಲೆಮಾರಿನ ರಾಜಕೀಯ ಆಕಾಂಕ್ಷಿಗಳಿಗೆ ಇರುವ ಪರ್ಯಾಯವೇನು ? ಪ್ರಾದೇಶಿಕ ಪಕ್ಷ ಅಥವಾ ಬಿಜೆಪಿ ಮಾತ್ರ.

ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಅನಿಶ್ಚಿತತೆ ಮತ್ತು ಬಿಜೆಪಿಯ ಬಹುಸಂಖ್ಯಾವಾದದ ರಾಜಕಾರಣ ಯುವ ಜನತೆಯಲ್ಲಿ ಭ್ರಮನಿರಸನ ಉಂಟುಮಾಡಿರುವುದನ್ನು 2024ರ ಲೋಕಸಭಾ ಚುನಾವಣೆಗಳು ನಿರೂಪಿಸಿವೆ. ಇಲ್ಲಿ ಯುವ ತಲೆಮಾರಿಗೆ ಬೇಕಿರುವುದು ಕೇವಲ ಬದಲಾವಣೆಯಲ್ಲ, ಒಂದು ಪರ್ಯಾಯ ಆಳ್ವಿಕೆ. ರಾಜಕೀಯ ಬೇಲಿ ಜಿಗಿತ (ಸಾಂಪ್ರದಾಯಿಕ ಅರ್ಥದಲ್ಲಿ ಪಕ್ಷಾಂತರ) ಸಾಮಾನ್ಯವಾಗಿರುವ ಭಾರತದ ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳು ಕೇವಲ ಸಾಂದರ್ಭಿಕ ಬಳಕೆಯ ಸರಕುಗಳಾಗಿರುವ ಹೊತ್ತಿನಲ್ಲಿ, ಒಂದು ಸಂವಿಧಾನಬದ್ಧ, ಸಮಾನತಾವಾದಿ, ಸಮನ್ವಯ ಸಮಾಜವನ್ನು ಬಯಸುವ ಯುವ ಸಮೂಹಕ್ಕೆ ಈ ಸದಾಶಯಗಳನ್ನು ಈಡೇರಿಸುವ ಪರ್ಯಾಯ ಆಳ್ವಿಕೆಯ ನೀತಿಗಳನ್ನು ಮುಂದಿಡದಿದ್ದರೆ, ಇಡೀ ಸಮೂಹ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಏಕೆಂದರೆ ಅಲ್ಲಿ ಏನಿಲ್ಲವೆಂದರೂ ಭ್ರಮಾಲೋಕವನ್ನು ಸೃಷ್ಟಿಸಲಾಗಿರುತ್ತದೆ.

ಮಿಲೆನಿಯಂ ಜನಸಂಖ್ಯೆಯ ಆಶಯಗಳು

ಮಿಲೆನಿಯಂ ಜನಸಂಖ್ಯೆ ಎನ್ನಲಾಗುವ 21ನೆಯ ಶತಮಾನದ ಯುವಸಮೂಹಕ್ಕೆ ಈ ಭ್ರಮಾಲೋಕ ಅದ್ಭುತಗಳನ್ನು ತೋರಿಸುತ್ತದೆ. ಹಸಿವು, ಬಡತನ, ನಿರುದ್ಯೋಗ, ಅನಿಶ್ಚಿತ ಬದುಕು, ಅಭದ್ರ ಉದ್ಯೋಗ ಮತ್ತು ಕರಾಳ ಭವಿಷ್ಯವನ್ನು ಎದುರಿಸುತ್ತಿರುವ ಈ ಯುವತಲೆಮಾರು ಮಾರುಕಟ್ಟೆಯಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದರೂ ಅದನ್ನೇ ಸಹಿಸಿಕೊಂಡಿರುತ್ತವೆ. ಏಕೆಂದರೆ ಭವಿಷ್ಯದ ಚಿಂತೆ ಮಾಡುವ ವ್ಯವಧಾನ ಇರುವುದಿಲ್ಲ. ಈ ಚಿಂತನೆಯನ್ನು ಅವರ ನಡುವೆ ಹುಟ್ಟುಹಾಕುವ ಯಾವುದೇ ರಾಜಕೀಯ ಉಪಕ್ರಮಗಳನ್ನು ಯಾವುದೇ ರಾಜಕೀಯ ಪಕ್ಷದಿಂದಲೂ ನಿರೀಕ್ಷಿಸಲಾಗುತ್ತಿಲ್ಲ. ಎಡಪಕ್ಷಗಳು ನಿರಂತರ ಹೋರಾಟಗಳ ಮೂಲಕ ನವ ಉದಾರವಾದ, ಕಾರ್ಪೋರೇಟ್‌ ಆರ್ಥಿಕತೆ ಮತ್ತು ದ್ವೇಷ ರಾಜಕಾರಣದ ವಿರುದ್ಧ ದನಿ ಎತ್ತುತ್ತಿದ್ದರೂ, ಇದರಿಂದ ಮುಕ್ತವಾಗುವುದು ಹೇಗೆ ಎಂಬ ರಾಜಕೀಯ ಚಿಂತನಾ ಧಾರೆಯನ್ನು ಸೃಷ್ಟಿಸಲಾಗುತ್ತಿಲ್ಲ. ಈ ಧಾರೆಯನ್ನು ಯುವ ಸಮೂಹದ ನಡುವೆ ಪ್ರವಹಿಸುವಂತೆ ಮಾಡಲಾಗುತ್ತಿಲ್ಲ. ಬಹುಶಃ ಎಡಪಕ್ಷಗಳ ಅನೈಕ್ಯತೆ ಅಥವಾ ಐಕ್ಯತೆಯ ಬಗ್ಗೆ ನಿರ್ಲಕ್ಷ್ಯ ಇದಕ್ಕೆ ಕಾರಣವಿರಬಹುದು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ತನ್ನ ಶತಮಾನದ ಇತಿಹಾಸದೊಂದಿಗೆ ದೇಶದ ಪರ್ಯಾಯ ರಾಜಕೀಯ ಶಕ್ತಿಯಾಗಿ ನಿಂತಿದೆ. ಮತ್ತೆಮತ್ತೆ ಪುಟಿದೇಳುತ್ತಿದೆ. ಆದರೆ ಪ್ರತಿಯೊಮ್ಮೆ ಪುಟಿಯುವಾಗಲೂ ಮತ್ತೆ ಭೂಮಿಗಪ್ಪಳಿಸಿದಾಗ ನೆಲ ಸ್ವಲ್ಪವಾದರೂ ಕುಸಿಯುತ್ತದೆ ಎಂಬ ರಾಜಕೀಯ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಲು ಕಾಂಗ್ರೆಸ್‌ ನಾಯಕತ್ವಕ್ಕೆ ಸಾಧ್ಯವಾಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ನೀತಿ-ಯೋಜನೆಗಳನ್ನು ರದ್ದುಪಡಿಸುತ್ತೇವೆ ಅಥವಾ ಬದಲಿಸುತ್ತೇವೆ ಎನ್ನುವುದು ಕೇವಲ ಘೋಷಣೆಯಾಗುತ್ತದೆ. ತನ್ನ ಸರ್ಕಾರ ಆಯ್ಕೆಯಾದರೆ ಯಾವ ರೀತಿಯ ನೀತಿ-ಯೋಜನೆಗಳನ್ನು, ಯಾವ ದಿಕ್ಕಿನಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳುವುದು ಕಾರ್ಯಯೋಜನೆಯಾಗುತ್ತದೆ. ಈ ಕಾರ್ಯಯೋಜನೆಯನ್ನು ಜನತೆಯ ಮುಂದಿಡುವಲ್ಲಿ ಕಾಂಗ್ರೆಸ್‌ ಸೋಲುತ್ತಿದೆ.

ಇದಕ್ಕೆ ಕಾರಣ ಕರ್ನಾಟಕವನ್ನೂ ಸೇರಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ, ಒಂದು ಚಿಂತನಾ ಮಂಡಲಿ (Think Tank) ಇಲ್ಲ. ಇದ್ದರೂ ಅದನ್ನು ಪ್ರತಿನಿಧಿಸುವವರಿಗೆ ಯುವ ಸಮೂಹವನ್ನು ತಲ್ಲಣಗೊಳಿಸುತ್ತಿರುವ ನೆಲದ ವಾಸ್ತವಗಳ ಅರಿವಿಲ್ಲ. ಏಕೆಂದರೆ ಈ Think Tank ಗಳಲ್ಲಿ ತುಂಬಿರುವುದು ಅದೇ ಹಳೆಯ ನೀರು. ಹೊಸ ನೀರು ಹರಿಯುವ ಅವಕಾಶವನ್ನೇ ಪಕ್ಷದ ಹೈಕಮಾಂಡ್‌ ನೀಡುತ್ತಿಲ್ಲ. ಹಾಗಾಗಿ ಅಲ್ಲಿ ಮೂಡುವ ಚಿಂತನೆಗಳೆಲ್ಲವೂ ಜಡಗಟ್ಟಿರುತ್ತವೆ, ಚಲನಶೀಲತೆಯನ್ನು ಕಳೆದುಕೊಂಡಿರುತ್ತವೆ ಹಾಗಾಗಿ ಚಿಂತನೆಯ ಹೊರಹರಿವನ್ನು ದಿಕ್ಕುತಪ್ಪಿಸುತ್ತವೆ. ಕಾಂಗ್ರೆಸ್‌ 2029ರ ಲೋಕಸಭೆಯತ್ತ ಗಮನ ನೀಡುವುದೇ ಆದರೆ ಈ ಯುವಚೇತನಕ್ಕೆ ಕಾಯಕಲ್ಪ ನೀಡುವ ಕಾರ್ಯಯೋಜನೆಗಳನ್ನು ಕೂಡಲೇ ಹಮ್ಮಿಕೊಳ್ಳಬೇಕಿದೆ. ಹಳೆಯ ತಲೆಗಳ ಬೇಲಿ ಜಿಗಿತವನ್ನೂ ಲೆಕ್ಕಿಸದೆ, ಮುನ್ನುಗ್ಗಿದರೂ ಚಿಂತೆಯಿಲ್ಲ.. ಇದು ದೇಶಕ್ಕೆ ಒಂದು ಸ್ಪಷ್ಟ ಪರ್ಯಾಯವನ್ನು ಮುಂದಿಡುತ್ತದೆ.

ಇದು ಸಾಧ್ಯವಾಗಬೇಕಾದರೆ ಕಾಂಗ್ರೆಸ್‌ ಆತ್ಮಾವಲೋಕನಕ್ಕೆ ತೆರೆದುಕೊಳ್ಳಬೇಕಿದೆ. ಮುಚ್ಚಿದ ಕಿಟಕಿ ಬಾಗಿಲುಗಳು ಸುರಕ್ಷತೆಯನ್ನು ನೀಡಬಹುದು ಆದರೆ ಹೊಸ ಗಾಳಿಯನ್ನೂ ತಡೆಯುತ್ತದೆ , ತನ್ಮೂಲಕ ಹೊಸ ಅಲೆಯನ್ನೂ ತಪ್ಪಿಸುತ್ತದೆ ಎನ್ನುವ ಪರಿಜ್ಞಾನ ಇರಬೇಕು ದೇಶದ ಯುವ ಸಮೂಹದ ನಡುವೆ ಈ ಹೊಸ ಅಲೆಯ ಆಕಾಂಕ್ಷೆಗಳಿವೆ. ಇದಕ್ಕೆ ಸ್ಪಂದಿಸಬೇಕಾದ ನೈತಿಕ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿರುವಷ್ಟೇ ಕಾಂಗ್ರೆಸ್‌ ಪಕ್ಷದ ಮೇಲೂ ಇದೆ. ಕಾಂಗ್ರೆಸ್‌ ನಾಯಕರಿಗೆ ದೂರಗಾಮಿ ಆಲೋಚನೆಗಳೇನಾದರೂ ಇದ್ದರೆ ಈ ನಿಟ್ಟಿನಲ್ಲಿ ಆತ್ಮಾವಲೋಕನಕ್ಕೆ ಮುಂದಾಗಬೇಕಿದೆ. ಇದು ಪಕ್ಷದ ಭವಿಷ್ಯಕ್ಕೂ ಒಳ್ಳೆಯದು, ದೇಶದ ಭವಿಷ್ಯಕ್ಕೂ ಅಗತ್ಯ.

ಇದನ್ನು ನೋಡಿ : ಜಾತಿಗಣತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ : Janashakthi Media

Donate Janashakthi Media

Leave a Reply

Your email address will not be published. Required fields are marked *