ಪಶ್ಚಿಮ ಬಂಗಾಳ | ಕಿರಿಯ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಮತ್ತೆ ಆರಂಭ; ಕರ್ತವ್ಯಕ್ಕೆ ಬಹಿಷ್ಕಾರ

ಕೋಲ್ಕತ್ತಾ: ವೈದ್ಯಕೀಯ ಸಂಸ್ಥೆಗಳಲ್ಲಿ ತಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮೇಲೆ ರಾಜ್ಯ ಸರ್ಕಾರವನ್ನು ಇನ್ನಷ್ಟು ಒತ್ತಾಯಿಸಲು ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಧರಣಿ ನಿರತ ಕಿರಿಯ ವೈದ್ಯರು ಇಂದು ಮಂಗಳವಾರ ಕೆಲಸಕ್ಕೆ ಬಹಿಷ್ಕಾರ ಹಾಕಿ ತಮ್ಮ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಕಳೆದ ಆಗಸ್ಟ್ 9ರಂದು ಕೋಲ್ಕತ್ತಾದ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ 42 ದಿನಗಳ ಪ್ರತಿಭಟನೆಯ ನಂತರ ಕಿರಿಯ ವೈದ್ಯರು ಸೆಪ್ಟೆಂಬರ್ 21 ರಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಭಾಗಶಃ ತಮ್ಮ ಕರ್ತವ್ಯಕ್ಕೆ ಮರಳಿದ್ದರು.

‘ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಪಟ್ಟಂತೆ ನಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರತಿಭಟನೆ ಪ್ರಾರಂಭವಾಗಿ ಇಂದಿಗೆ 52 ದಿನ ಕಳೆದಿದೆ. ಆದರೂ ನಮ್ಮ ಮೇಲಿನ ದಾಳಿ ನಿಂತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ನಡೆದ ಸಭೆಯಲ್ಲಿ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿಲ್ಲ. ಪ್ರತಿಭಟನೆ ಮುಂದುರಿಸುವುದು ಬಿಟ್ಟರೆ ನಮಗೆ ಬೇರೆ ಆಯ್ಕೆಯಿಲ್ಲ’ ಎಂದು ಕಿರಿಯ ವೈದ್ಯರಲ್ಲಿ ಒಬ್ಬರಾದ ಅನಿಕೇತ್ ಮಹಾತೊ ಪಿಟಿಐಗೆ ಹೇಳಿದ್ದಾರೆ.

‘ನಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ’ ಎಂದರು.

ಏತನ್ಮಧ್ಯೆ, ಅಕ್ಟೋಬರ್ 2ರಂದು ಪಾದಯಾತ್ರೆಗೆ ಕರೆ ನೀಡಿರುವ ಕಿರಿಯ ವೈದ್ಯರು, ಕಾಲೇಜು ಚೌಕದಿಂದ ಧರ್ಮತಾಳದವರೆಗೆ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *