ಬೆಂಗಳೂರು: ನ್ಯಾಯಾಲಯಗಳು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸ್ಥಳ ಎಂದು ಭಾವಿಸಲಾಗುತ್ತಿದೆ. ಆದರೆ ಇತ್ತೀಚಿನ ಹಲವು ವಿದ್ಯಮಾನಗಳು ಈ ನಂಬಿಕೆಯನ್ನು ಹುಸಿಗೊಳಿಸುತ್ತಿವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಮತ್ತು ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ನೀಡಿದ್ದಾರೆ. ನ್ಯಾಯಾಧೀಶ
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ, ವಾದ ಪ್ರತಿವಾದಗಳ ಸಂದರ್ಭದಲ್ಲಿ ಮಾನ್ಯ ನ್ಯಾಯಾಧೀಶರು ವ್ಯಕ್ತ ಪಡಿಸಿದ ಅಭಿಪ್ರಾಯಗಳು ತೀರ ಆಕ್ಷೇಪಾರ್ಹವಾಗಿದೆ. ನ್ಯಾಯಾಧೀಶರು ಸಾಂವಿಧಾನಿಕ ಘನತೆ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವ ಪರಿಭಾಷೆ ಬಳಸಬೇಕು. ವಿಶ್ವಮಟ್ಟದಲ್ಲಿ ಭಾರತದ ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆಗೆ ಬಹು ದೊಡ್ಡ ಸ್ಥಾನವಿದೆ ಎಂದರು.
ನಮ್ಮ ಕಾನೂನಿನ ಪರಿಪಾಲಕರು ಅಂದರೆ ನ್ಯಾಯಾಧೀಶರು, ವಕೀಲರು ಆದಿಯಾಗಿ ಎಲ್ಲರೂ ಅತ್ಯಂತ ಗೌರವಯುತ ಭಾಷೆ ಪರಿಭಾಷೆ ಬಳಸುತ್ತ ನಿಷ್ಪಕ್ಷಪಾತ ನ್ಯಾಯ ನೀಡುವ ಪರಂಪರೆ ಇತ್ತು. ಹೀಗಾಗಿ ದೇಶದ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ವಿಶ್ವಾಸವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಘನವೆತ್ತ ನ್ಯಾಯಾಧೀಶರು ಅದೆಷ್ಟು ಹಗುರವಾಗಿ ಮಾತಾಡಿದ್ದಾರೆಂದರೆ ಇಡೀ ದೇಶವೆ ತಲೆ ತಗ್ಗಿಸುವಂತಾಗಿದೆ.
ಇದನ್ನೂ ಓದಿ: ಒಂದೇ ಸೆಕೆಂಡಿನಲ್ಲಿ ಮಾಯವಾದ ಪುಣೆ ಕಾರ್ಪೋರೇಶನ್ ನೀರಿನ ಟ್ರಕ್!
ಬೆಂಗಳೂರು ಮೇಲ್ಸೇತುವೆಗೆ ಸಂಬಂಧಪಟ್ಟ ವ್ಯಾಜ್ಯವೊಂದರಲ್ಲಿ ಗೋರಿಪಾಳ್ಯ ಏರಿಯಾವನ್ನು ಕುರಿತು ಅದು ಪಾಕಿಸ್ತಾನದಲ್ಲಿದೆ ಹೊರತು ಭಾರತದಲ್ಲಿ ಇಲ್ಲ ಎಂದು ನೀಡಿದ ಹೇಳಿಕೆ, ಮತ್ತು ಇನ್ನೊಂದು ಪ್ರಕರಣದಲ್ಲಿ ಮಹಿಳಾ ವಕೀಲರೊಬ್ಬರನ್ನು ಮಾತಿನ ಮಧ್ಯೆ ತಡೆದು ‘ಸುಮ್ಮನಿರಮ್ಮ ನಿನಗೆ ಎಲ್ಲವೂ ಗೊತ್ತಿರುವಂತೆ ಮಾತಾಡುತ್ತಿರುವೆ. ನಾಳೆ ನೀನು ಅವನ ಒಳ ಉಡುಪಿನ ಬಣ್ಣವನ್ನು ಹೇಳುತ್ತಿ ಏನು? ಎಂದು ಮಾತನಾಡಿದ್ದಾರೆ.
ಇಂಥ ಲಿಂಗ ಅಸೂಕ್ಷ್ಮ ಭಾಷೆಯನ್ನು ಘನತೆವೆತ್ತ ನ್ಯಾಯಾಧೀಶರೊಬ್ಬರು ಬಳಸಿದ್ದು ಆಘಾತವನ್ನುಂಟು ಮಾಡಿದೆ. ಇಂತಹ ಘಟನೆಗಳಿಂದಾಗಿ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೋಗುತ್ತಿದೆ.
ಜನಾಂಗೀಯ ದ್ವೇಷ, ಮಹಿಳಾ ವಿರೋಧಿ ನಿಲುವು ನ್ಯಾಯಪೀಠಗಳಿಂದಲೇ ಬರುತ್ತವೆಯಾದರೆ ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳು, ಧಾರ್ಮಿಕ ನೆಲೆಯ ಅಸಹನೆಗಳು, ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದ ಜನರನ್ನೇ ಗುರಿಯಾಗಿಸಿ ನಡೆಸುವ ದುರ್ದಾಳಿಗಳು, ದೌರ್ಜನ್ಯ ಗಳು ಇದೇ ಪೀಠದ ಮುಂದೆ ಬಂದರೆ ಅದಕ್ಕೆ ನ್ಯಾಯ ಸಿಗಬಹುದೆ? ಉಚ್ಚ ನ್ಯಾಯಾಲಯದ ಪೀಠದಿಂದ ಬಂದ ಈ ಹೇಳಿಕೆಯನ್ನು ಅಖಿಲ ಭಾರತ ಜನವಾದಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಇದನ್ನೂ ಓದಿ: ‘ಸುಪ್ರೀಂ’ ಕೋರ್ಟ್ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್; ಖಾತೆಯನ್ನೇ ತೆಗೆದು ಹಾಕಿದ ನ್ಯಾಯಾಲಯ, ಶೀಘ್ರವೇ ಹೊಸ ಸೇವೆ ಆರಂಭ
ಕೆಲವು ಸ್ಥಾನಗಳಲ್ಲಿ ಇರುವವರಿಗೆ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಇಮ್ಯುನಿಟಿ ಅಥವಾ ವಿಶೇಷ ರಕ್ಷಣಾ ವಲಯದ ಅವಕಾಶವಿರುತ್ತದೆ. ಆದರೆ ಅದು ಹೀಗೆ ಮಹಿಳೆಯರ ಘನತೆಗೆ ಚ್ಯುತಿ ಬರುವ ರೀತಿ, ದೇಶದ ಬಹುತ್ವ ಕ್ಕೆ ಧಕ್ಕೆ ತರುವ ರೀತಿಯ ಮಾತುಗಳಿಗೆ ಎಡೆ ಕೊಡುವಂತೆ ಆಗಬಾರದು.
ನ್ಯಾಯಾಲಯದ ಕುರಿತು ಟೀಕೆ ವಿಮರ್ಶೆ ಮಾಡಿದರೆ ಕಂಟೆಪ್ಟ್ ಆಫ್ ಕೋರ್ಟ್ ಎಂಬ ಆಯುಧದ ಭಯವನ್ನು ಜನರ ತಲೆಯ ಮೇಲೆ ತೂಗುಬಿಟ್ಟು ಪೀಠದಿಂದ ಇಂತಹ ಆಕ್ಷೇಪಕಾರಕ ಮಾತುಗಳು ಬರತೊಡಗುವುದನ್ನು ಒಪ್ಪಲಾಗದು.
ಈ ಮೇಲಿನ ಘಟನೆಗಳನ್ನು ಆಧರಿಸಿ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಗಣನೆಗೆ ತೆಗೆದುಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ.
ಆದರೆ ಅದೇ ವೇಳೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸಿದ ಸೂಚನೆಗಳು,
ಮತ್ತು ವಕೀಲರ ಸಂಘ ನೇರ ಪ್ರಸಾರವನ್ನೇ ನಿಲ್ಲಿಸಬೇಕೆಂದು ಬೇಡಿಕೆ ಇಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಕೂಡಾ ಉಚ್ಚ ನ್ಯಾಯಾಲಯ ವು ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಇನ್ನೊಬ್ಬ ನ್ಯಾಯಮೂರ್ತಿ ಗಳು ದಂಪತಿಗಳ ವಿಚ್ಛೇದನ ಪ್ರಕರಣವೊಂದರಲ್ಲಿ ಆt ದಂಪತಿಗಳ ವಾಸ್ತವ ಸಮಸ್ಯೆ ಏನು? ಅವರ ನಡುವಿನ ಸಂಬಂಧ ಹಳಸಲು ಕಾರಣವಾದ ಸಮಾಜೋ ಆರ್ಥಿಕ,ಸಾಂಸ್ಕೃತಿಕ, ಕಾರಣಗಳೇನು ಎಂಬುದನ್ನು ವಿಶ್ಲೇಷಿಸದೆ ಮಠಾಧೀಶರ ಬಳಿಗೆ ಹೋಗಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ. ವಿವಾಹವೇ ಆಗದಿರುವ ಮಠಾಧೀಶರು ದಾಂಪತ್ಯ ಸಮಸ್ಯೆಗಳನ್ನು ಬಗೆ ಹರಿಸಲು ಸಮರ್ಥವಾಗುವುದಾದರೆ ನ್ಯಾಯಾಲಯಗಳಿಗೆ ಕೆಲಸವೇ ಇರುವುದಿಲ್ಲ.
ಹೀಗೆ ನ್ಯಾಯ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ಸ್ಥಿತಿಯನ್ನು ಹೇಗೆ ಒಪ್ಪಲು ಸಾಧ್ಯ. ಒಟ್ಟಾರೆ ನ್ಯಾಯಾಂಗ ವ್ಯವಸ್ಥೆ ತನ್ನ ಮೂಲದ ತಾತ್ವಿಕತೆ ಕಳೆದುಕೊಳ್ಳುತ್ತಿರುವುದು ಬಹು ದೊಡ್ಡ ದುರಂತವಾಗಿದೆ. ನ್ಯಾಯಾಧೀಶರುಗಳೇ ಪ್ರಜಾತಾಂತ್ರಿಕ ಮೌಲ್ಯಗಳನ್ನು ಧ್ವಂಸ ಮಾಡುತ್ತಿರುವುದಕ್ಕೆ ಜನವಾದಿ ಮಹಿಳಾ ಸಂಘಟನೆ ಕಳವಳ ವ್ಯಕ್ತಪಡಿಸುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆ ಯಲ್ಲಿಯೂ ಲಿಂಗ ಸಂವೇದನೆ ಮತ್ತು ಜಾತ್ಯಾತೀತ ಸಂವಿಧಾನವನ್ನು ಎತ್ತಿ ಹಿಡಿಯಲು ಅಗತ್ಯವಾದ ಅರಿವು ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – ವೈದ್ಯರು ಹೇಳುವುದೇನು?Janashakthi Media