ದುಃಖದ ಕಡಲ ದಾಟಿಸುವ ನಾವಿಕ

-ಯಮುನಾ ಗಾಂವ್ಕರ್

ದುಃಖದ ಕಡಲ ದಾಟಿಸುವ ನಾವಿಕ ನೀ ನಮಗೆ
ಅದ್ಹೇಗೆ ಹಠ ಮಾಡಿದವರಂತೆ ಎದ್ದು ನಡೆದೆ?
ಉಸಿರು ಕಸಿವ ದುರುಳರ
ತೆರೆಯಬ್ಬರ ಏಳುತ್ತಿರುವಾಗಲೇ
ಕಣ್ಮುಚ್ಚಿದ್ದು ಮಾತ್ರ ಅನ್ಯಾಯ
-ಎಂದು ಧಿಕ್ಕಾರ ಕೂಗಲೇ?

ವಿಕೋಪಗಳ ನೆರೆಹಾವಳಿ ಸುತ್ತೆಲ್ಲ
ದಡದಲ್ಲಿ ಕೂಡ ಕಡಲ್ಕೊರೆತ ಈಗ
ಬುಸುಗುಡುವ ವಿಷಸರ್ಪಗಳ ಸೀಳುನಾಲಿಗೆ
ನಮ್ಮವರ ಸುತ್ತ,
ಇಷ್ಟಿದ್ದರೂ
ಅಪ್ಪಳಿಸಿ ಬರುವ ತೆರೆಗಳ ತೆಕ್ಕೆಗೆ
ಸಿಕ್ಕಿಬೀಳದ ಅಪರೂಪದ ನಾವಿಕನಾಗಿದ್ದೆ
ಅದೇಕೆ ಹುಟ್ಟು ಕೈಬಿಟ್ಟು ಹೋದೆ?

ಇದನ್ನೂ ಓದಿ: ತೆಲಂಗಾಣ ಚುನಾವಣೆಗೂ ಮುನ್ನವೇ ಸರಪಂಚ್‌ ಆಯ್ಕೆ, ವಿರೋಧಿಸಿ ಚುನಾವಣೆಗೆ ಸ್ಪರ್ಧಿಸಿದರೆ 50 ಲಕ್ಷ ದಂಡ

ಮಿಗುತಾಯ ಹೂತಿಟ್ಟ ಖಜಾನೆಯ ಒಡೆಯರ ಚಾವಿ ಕಸಿದು,
ಕೊಳ್ಳುಬಾಕರ ಹೊರಗೆಳೆದು
ಕಡಲ್ಗಳ್ಳರು ಬಲುಗಳ್ಳರುಗಳನೆಲ್ಲ ಛೇಡಿಸಿ,
ಛೇದಿಸಿ, ಝಾಡಿಸಿ,
ನಿರ್ಭೀತಿಯಿಂದ ಅಟ್ಟಾಡಿಸುತ್ತಿದ್ದೆಯಲ್ಲ
ಹತಾಶನಾದೆ ಯಾಕೆ ಹೇಳು?

ಭಾವ-ಭೌತವಾದಗಳ ಜಿಜ್ಞಾಸೆಯಲ್ಲಿ
ಭಂಡ ಬಂಡವಾಳಕ್ಕೆ ಘರ್ಷಿಸಿದವರ ಬೆವರಿಂದ ಅರಳಿದ ಪಕ್ವಫಲ ನೀನಾಗಿದ್ದೆ.
ಧರ್ಮ ಗರಿಮೆಯ ಭ್ರಮೆಯನೊಡೆದು
ನಾಝಿನರಕದ, ವೈರುಧ್ಯಗಳ
ಸೀಮೋಲ್ಲಂಘನ ಗೈದಿದ್ದೆ.
ಆ ಸೇತು ಹಿಮಾಚಲದ
ಗಡಿಯಾಚೆ ಪರದೆಯ ಸರಿಸಿ
ಬ್ರಹ್ಮಾಂಡದಗಲ ಪಸರಿಸಿದ್ದೆ, ಅನ್ವಯಿಸಿದ್ದೆ,
ಸಂಧಿಸಿದ್ದೆ ಮಾರ್ಕ್ಸನ ಎಲ್ಲಾ ಸಂಬಂಧಿಗಳ …
ಇಷ್ಟಿದ್ದೂ ಅರಿವು ಇರವುಗಳಿಂದ ಸರಿದೆಯೇಕೆ?

ಭಾವಂ ರಾಗಂ ತಾಲಂ ಭಾರತದ ಚಂದ್ರಚಾಪ
ವರ್ಣಿಸುವ ವ್ಯಾಖ್ಯಾನದಲ್ಲಿ
ನಿನಗಾರು ಸಮನಿರಲಿಲ್ಲ, ಆದರೂ
ಹೇಳದೇ ಕೇಳದೇ ಎಲ್ಲಿ ಲೀನವಾದೆ ಹೇಳು?

ಇರಲಿ, ಪ್ರಶ್ನೆಗಳಿಗೆಲ್ಲ ಉತ್ತರ ನಿನ್ನ ಕರೆದೊಯ್ದ ಆ ಸಾವು! ಗೊತ್ತು ನನಗೆ ನೀ ಪಲಾಯನವಾದಿಯಲ್ಲ; ಗೊಬೆಲ್ಸನ ಸಂತತಿಗೆ ಸಿಂಹಸ್ವಪ್ನ !
ನಿನ್ನ ಜೀವಿತದಲ್ಲೇ ಕೊಟ್ಟ ಎಚ್ಚರಿಕೆ
ಮರೆಯಲಾರೆವು
ಮೈಮರೆಯುವ ಸಮಯವಲ್ಲವಿದು,
ನಾವೆಗೆ ನೀ ಕಟ್ಟಿದ ರಕ್ತಗೆಂಪಿನ ವಸ್ತ್ರ ಜೊತೆಗಿದೆ ಅಸ್ತ್ರದಂತೆ ಕಾಪಿಡುವೆವು,
ಒಳಗೂ ಹೊರಗೂ ದಾರಿ ತಪ್ಪದಂತೆ ಕಾಯ್ವ ದಿಕ್ಸೂಚಿಯದು…

ಇದನ್ನೂ ನೋಡಿ: ಕರ್ನಾಟಕದ ಜನ ಚಳುವಳಿಯಲ್ಲಿ ಸೀತಾರಾಂ ಯೆಚೂರಿ Janashakthi Media

Donate Janashakthi Media

Leave a Reply

Your email address will not be published. Required fields are marked *