ಅಂತರ್ಜಾತಿ ವಿವಾಹ : ವಿಷವುಣಿಸಿ ಯುವತಿಯ ಕೊಲೆ

ಗಂಗಾವತಿ : ಅಂರ್ತಜಾತಿ ವಿವಾಹವಾಗಿದ್ದ ದಲಿತ ಯುವತಿಗೆ ವಿಷವುಣಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ(21) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.

ಈ ಕುರಿತು ಯುವತಿಯ ತಂದೆ ದೂರು ನೀಡಿದ್ದು, ನನ್ನ ಮಗಳನ್ನು ಯುವಕನ ಮನೆಯವರು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆಗೈದಿರುವುದಾಗಿ ಆರೋಪಿಸಿದ್ದಾರೆ.

ಮರಿಯಮ್ಮ ಹಾಗೂ ಹನುಮಯ್ಯ ಇಬ್ಬರು ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮರಿಯಮ್ಮ ಮೂಲತ ಅಗೋಲಿ ಗ್ರಾಮದವರು. ವಿಠಲಾಪುರ ಗ್ರಾಮದಲ್ಲಿ ಅಜ್ಜಿ ಮನೆ ಇರುವುದರಿಂದ ಆಗಾಗ ಮನೆಗೆ ಬಂದು ಹೋಗುತ್ತಿದ್ದಳು. ಈ ವೇಳೆ ಗ್ರಾಮದ ಯುವಕ ಹನುಮಯ್ಯ ಪರಿಚಯವಾಗಿತ್ತು.‌ಈ ಪರಿಚಯ ಪ್ರೀತಿಗೆ ತಿರುಗಿತ್ತು ಎಂದು ಹೇಳಲಾಗುತ್ತಿದೆ.

ಹನುಮಯ್ಯ ನಾಯಕ (ಎಸ್ ಟಿ) ಸಮುದಾಯಕ್ಕೆ ಸೇರಿದ ಯುವಕ. ಅಂತರ್ಜಾತಿಯ ಕಾರಣದಿಂದಾಗಿ ಮದುವೆಗೆ ಆರಂಭದಲ್ಲಿ ಯುವಕನ ಮನೆಯವರು ಒಪ್ಪಿರಲಿಲ್ಲ. ಅಂತಿಮವಾಗಿ ಮರಿಯಮ್ಮ ಹಾಗೂ ಹನುಮಯ್ಯ 2023ರ ಏಪ್ರಿಲ್‌ನಲ್ಲಿ ತಮ್ಮ ಕುಟುಂಬದವರನ್ನು ಒಪ್ಪಿಸಿ, ಬಳಿಕ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.

ಮದುವೆಯಾದ ನಂತರ ಯುವಕನ ಮನೆಯಲ್ಲಿ ಜಾತಿ ಸಂಬಂಧ ಯುವತಿಗೆ ಹಿಂಸೆ ನೀಡುತ್ತಿದ್ದರು, ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು ಯುವತಿಯ ಕುಟುಂಬ ಆರೋಪಿಸಿದೆ.

ಯುವತಿ ಮಾದಿಗ ಸಮುದಾಯಕ್ಕೆ ಸೇರಿದವಳು ಎಂಬ ಕಾರಣಕ್ಕೆ ಮನೆಯ ಸಮೀಪವೇ ಬೇರೆಯೇ ಶೆಡ್ ಹಾಕಿ ಅಡುಗೆ ಮಾಡುವಂತೆ ಸೂಚಿಸಿದ್ದರಂತೆ. “ನೀನು ಹೊಲೆಯ ಜಾತಿಗೆ ಸೇರಿದವಳು ನಾವು ಯಾರೂ ನೀನು ಮಾಡಿದ ಅಡುಗೆ ತಿನ್ನವುದಿಲ್ಲ, ನೀನು ನಮ್ಮ ಮನೆಯಲ್ಲಿ ಇರಬೇಡ ಶೆಡ್ಡಿನಲ್ಲಿ ಇರು ಎಂದು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ಯುವತಿಯ ತಂದೆ ದೂರಿದ್ದಾರೆ. ತಿಳಿದು ಬಂದಿದೆ. ಅಲ್ಲದೇ, ಎಲ್ಲದಕ್ಕೂ ಜಾತಿಯ ಕಾರಣವೊಡ್ಡಿ ಕುಟುಂಬದಿಂದ ದೂರವಿಟ್ಟು, ಹಿಂಸೆ ನೀಡುತ್ತಿದ್ದರು ಎಂದು ಯುವತಿ ಮರಿಯಮ್ಮ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.

ಅಸ್ಪೃಶ್ಯತೆ ಆಚರಣೆಯನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮನೆಯವರು ಯುವತಿಗೆ ಬರ್ಬರವಾಗಿ ಹಲ್ಲೆ ನಡೆಸಿದ್ದು, ಈ ವೇಳೆ ಯುವತಿಯ ಸಾವಾಗಿದೆ. ಕೊಲೆ ಮಾಡಿದ ಬಳಿಕ ಯಾವುದೇ ಅನುಮಾನ ಬಾರದಿರಲು ವಿಷವುಣಿಸಿ ಕೊಲೆ ಮಾಡಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

ಆ ಬಳಿಕ ಯುವಕನ ಕುಟುಂಬದವರು ಯುವತಿಯ ಕುಟುಂಬಕ್ಕೆ ಕರೆ ಮಾಡಿ, ‘ನಿಮ್ಮ ಮಗಳು ಜಮೀನಿನಲ್ಲಿ ವಿಷ ಕುಡಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಆಕೆಯ ಸಾವಾಗಿದೆ’ ಎಂದು ನಾಟಕವಾಡಿದ್ದಾರೆ ಎಂದು ಯುವತಿಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.

ದೂರಿನ ನಂತರ ವಿಠಲಾಪುರ ಗ್ರಾಮಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿದ್ದು, ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.‌

ಯುವತಿಯ ತಂದೆ ಗಾಳೆಪ್ಪ ಹಾಗೂ ಯುವಕನ ಕುಟುಂಬದ 13 ಮಂದಿಯ ಮೇಲೆ ಕೊಲೆ ಆರೋಪ ಹೊರಿಸಿದ್ದರಿಂದ ಪೊಲೀಸರು ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದರೆಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಅಸ್ಪೃಷ್ಯತೆ ಆಚರಣೆ ಇನ್ನೂ ಜೀವಂತವಾಗಿಯೇ ಇದೆ. ರಾಜ್ಯದ ಕೆಲವು ಗ್ರಾಮಗಳಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸುವುದು, ಮರ್ಯಾದೆಗೇಡು ಹತ್ಯೆ, ಮಾತ್ರವಲ್ಲದೆ ಕುಡಿಯುವ ನೀರು, ಅಂಗನವಾಡಿ ಪ್ರವೇಶ ಹಾಗೂ ಪಡಿತರ ಪಡೆಯಲು ಅಡ್ಡಿ ಉಂಟು ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಅಸ್ಪೃಶ್ಯತೆ ಆಚರಣೆ ಮಾಡುವವರನ್ನು ಶಿಕ್ಷಿಸಲು ಪ್ರಭಲ ಕಾನೂನು ಇದ್ದರೂ ಬಲಾಢ್ಯ ಜಾತಿಗಳ ಪ್ರಭಾದಿಂದ ಹಲ್ಲುಕಿತ್ತ ಹಾವಿನಂತಗಿವೆ. ಇಂತಹ ಪ್ರಕರಣಗಳನ್ನು ತಡೆಯಲು ಸಮಜ ಕಲ್ಯಾಣ ಇಲಾಖೆ ಮುಂದಗಾಬೇಕು. ಬಲಾಢ್ಯ ಜಾತಿಯವರು ಅಸ್ಪೃಶ್ಯತೆ ಆಚರಣೆ ನಿಲ್ಲಿಸಿ ಮಾನವೀಯತೆಯಂದೆ ವರ್ತಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *