ಕಾರ್ಪೊರೇಟ್ ನಾಯಿ ಮತ್ತು ಬೀದಿನಾಯಿಗಳ ಕಾಳಗ

ಎಚ್.ಆರ್. ನವೀನ್ ಕುಮಾರ್, ಹಾಸನ

ಎಂದಿನಂತೆ ಬೆಳಿಗ್ಗೆ ವಾಕ್ ಹೋಗುವಾಗ ನಮ್ಮ ಮನೆಯಿಂದು ಸ್ವಲ್ಪ ದೂರದಲ್ಲಿ ಟಾರು ರಸ್ತೆಯ ಮೇಲೆ ಒಂದು ನಾಯಿ ಬೆಚ್ಚನೆ ಮಲಗಿತ್ತು. ನನಗೆ ಕಣ್ಣಳತೆ ದೂರದಲ್ಲಿ ಮಲಗಿದ್ದ ಈ ಬೀದಿ ನಾಯಿಯನ್ನು ನೋಡುತ್ತಲೇ ಹೆಜ್ಜೆಹಾಕಿದೆ. ಯಾಕೆಂದರೆ ಇವುಗಳಿಂದ ಹಲವು ಅವಗಡಗಳು ಸಂಬವಿಸಿದ್ದರ ಬಗ್ಗೆ ನೋಡಿದ್ದೆ, ಕೇಳಿದ್ದೆ, ಓದಿದ್ದೆ. ಹಾಗಾಗಿ ಬೀದಿ ನಾಯಿಗಳ ಬಗ್ಗೆ ನನಗೆ ಯಾವಾಗಲೂ ಒಂದು ರೀತಿಯ ಭಯ. ಅದರಲ್ಲೂ ರಾತ್ರಿ 10 ಗಂಟೆಯ ನಂತರ ಬೈಕ್ ಗಳಲ್ಲಿ ಓಡಾಡುವುದೆಂದರೆ ಅದು ಸಾಹಸದ ಕೆಲಸವೇ ಸರಿ.

ವಾಕ್ ಮಾಡುತ್ತಾ ಮಾಡುತ್ತಾ ನನ್ನ ಹೆಜ್ಜೆಗಳು ಮಲಗಿದ್ದ ನಾಯಿಯ ಸಮೀಪವಾಗುತ್ತಿದ್ದಂತೆ ಅದು ತನ್ನ ಕತ್ತನ್ನ ನಿಧಾನವಾಗಿ ಮೇಲೆತ್ತುತ್ತಾ ನನ್ನಕಡೆ ಮುಖಮಾಡಿ ಗುರ್ ಎಂದಿತು. ಇದರ ಸೂಕ್ಷ್ಮ ತಿಳಿದಿದ್ದ ನನ್ನ ಹೆಜ್ಜೆಗಳು ಅಲ್ಲಿಯೇ ನಿಂತವು‌. ಏನು ಮಾಡಬೇಕೆಂದು ತೋಚಲಿಲ್ಲ ಒಂದು ಅರೆಕ್ಷಣ ಜೀವವನ್ನು ಕೈಯಲ್ಲಿಡಿದು ಧೈರ್ಯ ಮಾಡಿ ಸುಮ್ಮನೆ ನಿಂತೆ. ಆದರೆ ಆರಂಭದಲ್ಲಿ ಗುರ್ ಎಂದಿದ್ದ ಈ ನಾಯಿ ಈಗ ಬೊಗಳಲು ಆರಂಭಿಸಿತು. ಅದು ಬೊಗಳುವ ರೀತಿ ಸ್ವಲ್ಪ ವಿಶೇಷವಾಗಿತ್ತು. ಅದರ ಮೂಲಕ ಯಾರಿಗೋ ಏನೋ ಸಂದೇಶ ಕೊಡುತ್ತಿರುವಂತೆ ನನಗೆ ಭಾಸವಾಯಿತು. ನನ್ನ ಹೆಜ್ಜೆಗಳು ನಿಂತಲ್ಲೇ ನಿಂತಿದ್ದರೂ ನಾಯಿ ಮಾತ್ರ ತನ್ನ ಹೆಜ್ಜೆಗಳನ್ನು ಒಂದೊಂದಾಗಿ ನನ್ನಕಡೆಗೆ ಇಡಲು ಆರಂಭಿಸಿತು. ಇದರೊಂದಿಗೆ ಬೊಗೊಳೋದು ಹೆಚ್ಚಾಗುತ್ತಾ ಹೋಯಿತು.

ಇದನ್ನೂ ಓದಿಬೆಲೆ ಏರಿಕೆ; ಬೆಳ್ಳುಳ್ಳಿ ಹಾಗೂ ಈರುಳ್ಳಿ ಬೆಲೆ ಗಗನಕ್ಕೆ

ನನ್ನ ಆತಂಕ ದುಗುಡ ಎರಡೂ ಹೆಚ್ಚಾಯಿತು. ಆದರೂ ಬೇರೆ ದಾರಿ ಇಲ್ಲದೆ ಮೂಕ ಪ್ರೇಕ್ಷಕನಂತೆ ನಿಂತಿದ್ದೆ. ಅಷ್ಟರಲ್ಲಿ ಇನ್ನೆರಡು ನಾಯಿಗಳು ಪಕ್ಕದ ರಸ್ತೆಯಿಂದ ಬೊಗಳುತ್ತಲೇ ಬಂದವು. ಆಗ ಈ ನಾಯಿಯ ಬೊಗುಳುವಿಕೆಯ ಶೈಲಿ ಮತ್ತಷ್ಟು ಬದಲಾಯಿತು. ತೀವ್ರತೆ ಹೆಚ್ಚಾಯಿತು. ಅದರ ಹೆಜ್ಜೆಗಳು ನನ್ನನ್ನು ದಾಟಿ ಮುಂದೆ ಹೋದವು ಆಗ ನನಗೆ ಆಶ್ಚರ್ಯವಾಗಿ ಹಿಂತಿರುಗಿ ನೋಡಿದರೆ ಕುತ್ತಿಗೆಯಲ್ಲಿ ಬೆಲ್ಟ್ ಹಾಕಿದ್ದ ಕಟ್ಟುಮಸ್ತಾಗಿದ್ದ ಸಾಕಿದ ನಾಯಿಯೊಂದು ಮಾಲೀಕನೊಂದಿಗೆ ವಾಕ್ ಬಂದು ತಪ್ಪಿಸಿಕೊಂಡು ಇತ್ತಕಡೆ ಬಂದಂತಿತ್ತು. ಈ ಕಾರ್ಪೊರೇಟ್ ಸಾಕು ನಾಯಿಯನ್ನು ಕಂಡ ದೇಸಿ ಬೀದಿ ನಾಯಿ ತನ್ನ ಬಳಗಕ್ಕೆ ಸಂದೇಶ ಕಳುಹಿಸಿತೆಂದು ಆಗ ನನಗೆ ಅರ್ಥವಾಯಿತು. ಅಷ್ಟರಲ್ಲಿ ಇದರ ಕೂಗಿಗೆ ಓಗೊಟ್ಟು ಇನ್ನೂ ಮೂರು ನಾಯಿಗಳು ಬಿರುಸಿನಲ್ಲೇ ಅತ್ತಕಡೆ ಬಂದವು. ಇದರ ಜೊತೆಗೆ ಈಗ ಒಟ್ಟು ಆರು ಬೀದಿ ನಾಯಿಗಳು ಸೇರಿ, ಇವರ ಏರಿಯಾಗೆ ಅತಿಕ್ರಮ ಪ್ರವೇಶ ಮಾಡಿದ್ದ ಸಾಕು ನಾಯಿಯ ವಿರುದ್ದ ಸಮರವನ್ನೇ ಹೂಡಿದ್ದವು.

ನಂಬಲು ಸಾಧ್ಯವಿಲ್ಲದಂತೆ ಸತತ 20 ನಿಮಿಷಗಳ ಕಾಲ ದಷ್ಟಪುಷ್ಟವಾಗಿದ್ದ ಕಾರ್ಪೊರೇಟ್ ನಾಯಿ ಮತ್ತು ಒಣಕಲಾಗಿದ್ದ ಈ ಬೀದಿನಾಯಿಗಳ ನಡುವೆ ಕಾಳಗ ನಡೆಯಿತು. ಇವು ನೋಡಲು ಸಣಕಲಾಗಿದ್ದರು ಅವುಗಳ ಆಕ್ರೋಶ, ಮತ್ತು ಬೊಗಳುವಿಕೆಗೆ ಎಂತಹವರೂ ಹೆದರಲೇ ಬೇಕಾಗಿತ್ತು. ಬೆಲ್ಟ್ ಕಟ್ಟಿದ್ದ ನಾಯಿಯನ್ನು ಸುತ್ತುವರೆದ ಈ ನಾಯಿಗಳು ಅದಕ್ಕೆ ಯಾವ ಅವಕಾಶವನ್ನೂ ಕೊಡದಂತೆ ದಾಳಿ ನಡೆಸಿದ್ದವು. ಅದು ಏನು ಕಡಿಮೆ ನಾಯಿಯಲ್ಲ, ಈ ಕಾಳಗದ ನಡುವೆಯೇ ಯಾರನ್ನಾದರೂ ಸ್ನೇಹಿತರನ್ನಾಗಿಸಿಕೊಳ್ಳಬಹುದು ಎಂದು ಕೆಲವು ನಾಯಿಗಳ ಹಿಂದೆ ಮುಂದೆ ಎಲ್ಲವನ್ನು ಮೂಸಿನೋಡಲು ಪ್ರಯತ್ನಿಸಿದರೂ ಈ ನಾಯಿಗಳು ನಮಗೂ ನಿನಗೂ ಯಾವರೀತಿಯಲ್ಲೂ ಹೊಂದಾಣಿಕೆ ಯಾಗುವುದಿಲ್ಲ. ನೀನು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗುವುದೊಂದೇ ಮಾರ್ಗ ಎಂಬಂತೆ ಪ್ರತಿಕ್ರಿಯಿಸಿದವು.

ಎಲ್ಲಾ ರೀತಿಯ ಪ್ರಹಸನಗಳು ನಡೆದ ಮೇಲೆ ಅಂತಿಮವಾಗಿ ನಾನು ನನ್ನದಲ್ಲದ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದೇನೆ. ಇಲ್ಲಿಂದ ಜಾಗ ಖಾಲಿಮಾಡುವುದೊಂದು ನನ್ನ ಉಳಿವಿಗಿರುವ ಪರಿಹಾರ ಎಂಬಂತೆ ದಷ್ಟಪುಷ್ಟವಾಗಿದ್ದ ಆ ನಾಯಿ ಸುತ್ತಲೂ ನಿಂತಿದ್ದ ನರಪೇತಲ ನಾರಾಯಣರಿಗೆ ಹೆದರಿ ಬಂದ ದಾರಿಯನ್ನು ಹಿಡಿಯಿತು. ಆದರೂ ನಂಬಿಕೆಯಿಲ್ಲದ ಈ ಬೀದಿನಾಯಿಗಳು ಸ್ಪಲ್ಪದೂರ ತಮ್ಮ ಏರಿಯಾದ ಸರಹದ್ದು‌ ಮುಗಿಯುವವರೆಗೂ ಬೊಗುಳುತ್ತಲೇ ಬೀಳ್ಕೊಟ್ಟು ವಾಪಸಾದವು. ಆಗ ಅವುಗಳಲ್ಲಿ ಏನೋ ಸಾಧಿಸಿದ ವಿಶ್ವಾಸದ ಕಳೆ ಕಾಣುತ್ತಿತ್ತು. ಪರಸ್ಪರ ಮೂಸಿಕೊಳ್ಳುತ್ತ ಒಬ್ಬೊರನ್ನೊಬ್ಬರು ಅಭಿನಂದಿಸಿಕೊಳ್ಳುತ್ತಾ, ಅವರವರು ಬಂದಿದ್ದ ರಸ್ತೆಗಳಿಗೆ ವಾಪಸ್ಸಾದರು.

 

Donate Janashakthi Media

Leave a Reply

Your email address will not be published. Required fields are marked *