ಸಂತ್ರಸ್ತೆ ಅಪಹರಣ ಪ್ರಕರಣ: ಶಾಸಕ ರೇವಣ್ಣ ಜಾಮೀನು ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಆರು ಆರೋಪಿಗಳಿಗೂ ಜಾಮೀನು ಮಂಜೂರು

ಬೆಂಗಳೂರು : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣರಿಂದ ಲೈಂಗಿಕ ದೌರ್ಜನ್ಯಕ್ಕೆ ಹೊಳಗಾದ ಸಂತ್ರಸ್ತೆ ಅಪಹರಣದ ಪ್ರಕರಣದಲ್ಲಿನ ಮೊದಲನೇ ಆರೋಪಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

ವಿಚಾರಣಾಧೀನ ನ್ಯಾಯಾಲಯವು ಜೆಡಿಎಸ್‌ ಮುಖಂಡ ಎಚ್‌ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾ ಮಾಡಿದೆ. ಆಗಸ್ಟ್‌ 1ರಂದು ವಾದ ಆಲಿಸಿ, ಕಾಯ್ದಿರಿಸಿದ್ದ ಆದೇಶವನ್ನು ಇಂದು ನ್ಯಾಯಾಲಯ ಪ್ರಕಟಿಸಿತು.

ಈ ನಡುವೆ ಪೀಠವು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 364ಎ ಅಡಿ ಸಂಜ್ಞೇ ಪರಿಗಣಿಸಿಲ್ಲವೇ? ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರನ್ನು ಪ್ರಶ್ನಿಸಿತು. ಅದಕ್ಕೆ ಜಗದೀಶ್‌ ಅವರು “ಇಲ್ಲ. ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಅಧೀನ ನ್ಯಾಯಾಲಯದ ಆ ಆದೇಶವು ಆರೋಪ ಮುಕ್ತ ಆದೇಶದಿಂತಿದೆ” ಎಂದರು. ಆಗ ಪೀಠವು ನೋಡೋಣ ಬಿಡಿ ಎಂದಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಇದನ್ನು ಓದಿ : ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆಜೆ ಜಾರ್ಜ್ ಗೆ ಸುಪ್ರೀಂ ಕ್ಲೀನ್ ಚಿಟ್!

ಎಸ್‌ಐಟಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ರೇವಣ್ಣಗೆ ಜಾಮೀನು ನೀಡುವಾಗ ವಿಚಾರಣಾಧೀನ ನ್ಯಾಯಾಲಯ ಪ್ರಮಾದ ಎಸಗಿದೆ. ಸಂತ್ರಸ್ತೆ ಮಹಿಳೆಯರನ್ನು ಅಪಹರಿಸಿ ಏಳನೇ ಆರೋಪಿಯ ಮನೆಯಲ್ಲಿ ಇಡಲಾಗಿತ್ತು. ಆಕೆಗೂ ಆತನಿಗೂ ಯಾವುದೇ ಸಂಬಂಧ ಇರಲಿಲ್ಲ. ಆ ಸ್ಥಳದಲ್ಲಿ ಮಹಜರ್‌ ನಡೆಸಿದಾಗ, ಆಕೆಯ ಕೂದಲು ದೊರೆತಿದೆ” ಎಂದಿದ್ದರು.

ಮುಂದುವರಿದು, “ಸಂತ್ರಸ್ತ ಮಹಿಳೆಯನ್ನು ಒತ್ತೆ ಇಟ್ಟಿದ್ದ ಏಳನೇ ಆರೋಪಿಯು ಈ ಹಿಂದೆ ರೇವಣ್ಣಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು ಎಂಬುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ಅವರ ಜಾಮೀನು ರದ್ದುಪಡಿಸಬೇಕು” ಎಂದು ಕೋರಿದ್ದರು.

“ಸಂತ್ರಸ್ತೆಯು ಕೈಮುಗಿದು ಮಾಜಿ ಸಂಸದ ಪ್ರಜ್ವಲ್‌ ಅನ್ನು ಅತ್ಯಾಚಾರ ಮಾಡದಂತೆ ಕೋರಿದ್ದಾರೆ. ಇಂಥ ಆರೋಪಿಯನ್ನು ರಕ್ಷಿಸಲು ರೇವಣ್ಣ ಅವರು ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರೆ. ಇದು ಅತ್ಯಂತ ಘೋರ ಕೃತ್ಯವಾಗಿದೆ” ಎಂದು ಆಪಾದಿಸಿದ್ದರು.

ರೇವಣ್ಣ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಇಡೀ ಘಟನೆ ನೋಡಿದರೆ ಇಲ್ಲಿ ಐಪಿಸಿ ಸೆಕ್ಷನ್‌ 364ಎ ಅನ್ವಯಿಸುವುದಿಲ್ಲ. ಪ್ರಕರಣದಲ್ಲಿ ಯಾವುದೇ ಆರೋಪಿಯು ಸಂತ್ರಸ್ತೆಗೆ ಯಾವುದೇ ಹಾನಿ ಮಾಡಿಲ್ಲ. ಬೆದರಿಕೆ ಹಾಕಿಲ್ಲ ಎಂಬುದು ವಿಚಾರಣಾಧೀನ ನ್ಯಾಯಾಲಯ ಸ್ಪಷ್ಟವಾಗಿ ಆದೇಶದಲ್ಲಿ ದಾಖಲಿಸಿದೆ” ಎಂದಿದ್ದರು. ರೇವಣ್ಣ ಪರವಾಗಿ ವಕೀಲ ಜಿ ಅರುಣ್‌ ವಕಾಲತ್ತು ಹಾಕಿದ್ದರು.

ಇದನ್ನು ನೋಡಿ : ಆಗಸ್ಟ್ 31ರಂದು ರಾಜಭವನ ಚಲೋ – ಡಿಕೆ ಶಿವಕುಮಾರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *