ಫ್ಯಾಸಿಸಂ ಅನ್ನು ತಡೆಯಲು ಟ್ರಂಪ್ ಸೋಲಿಸಬೇಕು: ಸ್ಯಾಂಡರ್ಸ್

ವಸಂತರಾಜ ಎನ್.ಕೆ

ನವೆಂಬರ್ ನಲ್ಲಿ ಯು.ಎಸ್ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಅಲ್ಲಿನ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಯ ಘೋಷಣೆಯಾಗಿದೆ. ಮೊದಲು ಸ್ಪರ್ಧೆಯಲ್ಲಿದ್ದ ಪ್ರಸ್ತುತ ಅಧ್ಯಕ್ಷ ಜೊ ಬಿಡೆನ್ ವಯಸ್ಸಿನ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದ ಮೇಲೆ, ಪ್ರಸ್ತುತ ಉಪಾಧ್ಯಕ್ಷರಾದ ಕಮಲಾ ಹ್ಯಾರೀಸ್ ಡೆಮೊಕ್ರಾಟಿಕ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಜೊ ಬಿಡೆನ್ ಸ್ಪರ್ಧಿಯಾಗಿದ್ದಾಗ (ಅದರಲ್ಲೂ ಟ್ರಂಪ್ ಹತ್ಯೆಯ ಯತ್ನದ ಘಟನೆಯ ನಂತರ) ಟ್ರಂಪ್ ಹೆಚ್ಚಿನ ಸಮೀಕ್ಷೆಗಳಲ್ಲಿ ಮುಂದಿದ್ದರು. ಆದರೆ ಕಮಲಾ ಹ್ಯಾರಿಸ್ ಸ್ಪರ್ಧೆಯ ಘೋಷಣೆಯ ನಂತರ ಅಂತರ ಕಡಿಮೆಯಾಗಿ ಈಗ ಕಮಲಾ ಸ್ವಲ್ಪ ಮುನ್ನಡೆಯನ್ನು ಸಾಧಿಸಿದ್ದಾರೆ. ಫ್ಯಾಸಿಸಂ
ಈ ಬಾರಿಯ ಯು.ಎಸ್ ಅಧ್ಯಕ್ಷೀಯ ಚುನಾವಣೆಗಳು ಆ ದೇಶದ ಮಾತ್ರವಲ್ಲ ಜಾಗತಿಕವಾಗಿಯೂ ನಿರ್ಣಾಯಕವೆನಿಸಿದೆ. ಹಿಂದೆ (2016ರಲ್ಲಿ) ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿಗೆ ಸ್ಪರ್ಧೇಯಲ್ಲಿ ಹಿಲೆರಿ ಕ್ಲಿಂಟನ್ ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಸ್ವತಂತ್ರ ಪ್ರಗತಿಪರ-ಎಡಪಂಥೀಯ ಸೆನೆಟರ್ ಬರ್ನಿ ಸ್ಯಾಂಡರ್ಸ್, ಈ ಬಾರಿ ಟ್ರಂಪ್ ಯು.ಎಸ್ ನಲ್ಲಿ ಫ್ಯಾಸಿಸಂ ನತ್ತ ನಡೆಯನ್ನು ಪ್ರತಿನಿಧಿಸುತ್ತಿದ್ದು ಅವರನ್ನು ಸೋಲಿಸಲು ಕರೆಯಿತ್ತಿದ್ದಾರೆ. ಅವರು ಅದಕ್ಕೆ ಕೊಡುವ ವಿವರವಾದ ಕಾರಣಗಳು ಇಲ್ಲಿವೆ ನೋಡಿ.

ನವೆಂಬರ್ 2024 ರ ಚುನಾವಣೆಯಲ್ಲಿ ಫ್ಯಾಸಿಸಂ ಅನ್ನು ತಡೆಯಲು ಟ್ರಂಪ್ ಅವರನ್ನು ಸೋಲಿಸುವುದು, ಜನರ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳ ಮುಂದಿರುವ ಸ್ಪಷ್ಟ ಸವಾಲಾಗಿದೆ. ಅದರ ನಂತರ, ಯು.ಎಸ್ ನ್ನು ನಿಯಂತ್ರಿಸುವ “uber ಕ್ಯಾಪಿಟಲಿಸಂ” ಮತ್ತು ದೈತ್ಯ ಶ್ರೀಮಂತಿಕೆಯ ಮಿತಜನ ಸರ್ವಾಧಿಕಾರಕ್ಕೆ (ಒಲಿಗಾರ್ಕಿ) ಮುಖಾಮುಖಿಯಾಗುವ ಸಮಯ ಎಂದು ಸೆನೆಟರ್ ಬರ್ನಿ ಸ್ಯಾಂಡರ್ಸ್ ಹೇಳಿದ್ದಾರೆ.

ಇದನ್ನೂ ಓದಿ: ಎಂಎಲ್ ಸಿಗಳ ಲಕ್ಷಗಟ್ಟಲೆ ಚಿಕಿತ್ಸಾ ವೆಚ್ಚ ಭರ್ತಿ: ಬಿಜೆಪಿ ಭಾರತಿ ಶೆಟ್ಟಿಗೆ ಮೊದಲ ಸ್ಥಾನ!

ವರ್ಮೊಂಟ್ ನ ಸ್ವತಂತ್ರ ಸಮಾಜವಾದಿ ಸೆನೆಟರ್ ಆ ಸಂದೇಶವನ್ನು ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದ ಸಮಯದಲ್ಲಿ ಚಿಕಾಗೋದಲ್ಲಿ ಪ್ರಗತಿಪರ ಮತ್ತು ಕಾರ್ಮಿಕ ಚಳವಳಿಯ ಕಾರ್ಯಕರ್ತರ ಸಭೆಗೆ ಕೊಟ್ಟರು. ಚಿಕಾಗೋ ಟೀಚರ್ಸ್ ಯೂನಿಯನ್ ಕಟ್ಟಡದಲ್ಲಿ ಅಮೆರಿಕದ ಪ್ರಗತಿಪರ ಪ್ರಜಾಪ್ರಭುತ್ವವಾದಿಗಳು ಆಯೋಜಿಸಿದ್ದ ಎಡಪಂಥೀಯ ಕೇಂದ್ರವಾದ ‘ಪ್ರೋಗ್ರೆಸ್ಸಿವ್ ಸೆಂಟರ್’ ನಲ್ಲಿ ಸ್ಯಾಂಡರ್ಸ್ ಮುಖ್ಯ ಭಾಷಣಕಾರರಾಗಿದ್ದರು.

MAGA (Make America Great Again – ಟ್ರಂಪ್ ನ ಮುಖ್ಯ ಘೋಷಣೆ ಮತ್ತು ಅದನ್ನು ಪ್ರಸಾರ ಮಾಡುವ ಉಗ್ರ ಸಂಘಟನೆಯ ಹೆಸರು) ಬಣವು ರಿಪಬ್ಲಿಕನ್ ಪಕ್ಷವನ್ನು ವಶಪಡಿಸಿಕೊಂಡ ಬೆದರಿಕೆಯನ್ನು ನಿರ್ಲಕ್ಷಿಸುವುದು ತುಂಬಾ ಅಪಾಯಕಾರಿ. ಪ್ರಗತಿಪರರು ಮುನ್ನಡೆ ಸಾಧಿಸುವ ಬಗ್ಗೆ ಗಂಭೀರವಾಗಿದ್ದರೆ, ಅವರು ಈ ಚುನಾವಣೆಯಲ್ಲಿ ಸುಮ್ಮನಿರಲು ಅಥವಾ ಮೂರನೇ ವ್ಯಕ್ತಿಯ ಸ್ವತಂತ್ರ ಪ್ರಚಾರಗಳಲ್ಲಿ ತೊಡಗಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಸ್ಯಾಂಡರ್ಸ್ ಪ್ರಕಾರ, ಟ್ರಂಪ್ ರಿಪಬ್ಲಿಕನ್ ಪಾರ್ಟಿಯನ್ನು ವಶಪಡಿಸಿಕೊಂಡು ಫ್ಯಾಸಿಸ್ಟ್ ಪಕ್ಷವಾಗಿ ಬದಲಾಯಿಸಿದ್ದಾರೆ. ಭಾರೀ ಜನಸಂದಣಿ ಕಂಡ ಕಮಲಾ ಹ್ಯಾರಿಸ್ ರ್ಯಾಲಿಯು ಕೃತಕ ಬುದ್ಧಿಮತ್ತೆ (AI) ಬಳಸಿ ಮಾಡಿದ ಚಿತ್ರ ವಿಡಿಯೊಗಳಾಗಿತ್ತು ಎಂಬ ಟ್ರಂಪ್ ನ ಇತ್ತೀಚಿನ ಅಸಂಬದ್ಧ ಹೇಳಿಕೆಯನ್ನು ಉಲ್ಲೇಖಿಸುತ್ತಾ, “ಲೈವ್ ಟಿವಿಯಲ್ಲಿ ತಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದನ್ನು ಸುಳ್ಳು ಎಂದು ಜನರಿಗೆ ತಿಳಿಸಲು ಒಂದು ನಿರ್ದಿಷ್ಟ ದಾಷ್ಟ್ಯ ಬೇಕಾಗುತ್ತದೆ ಎಂದು ಹೇಳಿದರು.

ಟ್ರಂಪ್ ನ ಈ ಅಸಂಬದ್ಧ ಆರೋಪದ ಅಪಾಯದತ್ತ ಗಮನ ಸೆಳೆಯುತ್ತಾ “ರ್ಯಾಲಿಯಲ್ಲಿ 15,000 ಜನರು ಅಸ್ತಿತ್ವದಲ್ಲಿಲ್ಲ ಎಂದು ನೀವು ಒಂದು ಅಮೇರಿಕನ್ ಜನವಿಭಾಗಕ್ಕೆ ಮನವರಿಕೆ ಮಾಡಿದರೆ, ಟ್ರಂಪ್ ಚುನಾವಣೆಯಲ್ಲಿ ವಾಸ್ತವವಾಗಿ ಸೋಲಾದಾಗಲೂ ಸೋಲು ಅಲ್ಲವೇ ಅಲ್ಲ ಎಂದು ಅವರಿಗೆ ಮನವರಿಕೆ ಮಾಡುವುದು ಕಷ್ಟವೇನಲ್ಲ.. ..ತಮ್ಮ ನಾಯಕನ ಬಾಯಿಂದ ಬಂದವೆಲ್ಲ ಸತ್ಯ ಎಂದು ನಂಬುವ ಗಮನಾರ್ಹ ದೊಡ್ಡ ಜನವಿಭಾಗ ಇರುವುದೆಂದರೆ, ಅದೇ ಫ್ಯಾಸಿಸಂ ನ ಮುಖ್ಯ ಸೂತ್ರ.” ಎಂದರು.

ಹಾಗಾಗಿ ಟ್ರಂಪ್ ಅನ್ನು ತಡೆದು ನಿಲ್ಲಿಸುವುದು ಪ್ರಗತಿಪರರು ಮತ್ತು ಕಾರ್ಮಿಕರ ತಕ್ಷಣದ ಗುರಿಯಾಗಿರಬೇಕು, ಆದರೆ ಅದನ್ನು ಸಾಧಿಸಿದಾಗ, ಎಡ ಪಡೆಗಳ ಅಣಿ ನೆರೆಸುವಿಕೆಯನ್ನು ನಿಲ್ಲಿಸಬಾರದು ಎಂದರು.

“ಹ್ಯಾರಿಸ್ ಮತ್ತು ವಾಲ್ಜ್ ಚುನಾಯಿತರಾದ ನಂತರ, ನಾವು ನಮ್ಮ ಚಳುವಳಿಗಳನ್ನು ಬಲಪಡಿಸುವುದನ್ನು ಮತ್ತು ಕಟ್ಟುವುದನ್ನು ಮುಂದುವರಿಸಬೇಕು. ಏಕೆಂದರೆ ಎರಡೂ ಪಕ್ಷಗಳು ದೊಡ್ಡ ಹಣದ ಹಿತಾಸಕ್ತಿಗಳಿಂದ ನಿಯಂತ್ರಿಸಲ್ಪಡುತ್ತವೆ. ..ಮುಂದಿನ ದೊಡ್ಡ ಸವಾಲು ಸೂಪರ್-ಶ್ರೀಮಂತ ಗಣ್ಯರಲ್ಲಿ ಆರ್ಥಿಕ ಮತ್ತು ರಾಜಕೀಯ ಅಧಿಕಾರದ ಕೇಂದ್ರೀಕರಣ” ಎಂದು ಸ್ಯಾಂಡರ್ಸ್ ಒತ್ತಿ ಹೇಳಿದರು.

ಟ್ರಂಪ್ ಅಥವಾ ರಿಪಬ್ಲಿಕನರು ಹೇಳಿದಂತೆ ಸ್ಯಾಂಡರ್ಸ್ ಹೇಳುತ್ತಿರುವುದು “ಕಮ್ಯುನಿಸಂ” ಅಥವಾ “ಮಾರ್ಕ್ಸ್ ವಾಧ” ಖಂಡಿತ ಅಲ್ಲ, ಆದರೆ ಅದು ಖಂಡಿತವಾಗಿಯೂ ಗಟ್ಟಿಯಾದ ಬಂಡವಾಳಶಾಹಿ ವಿರೋಧವನ್ನು ಧ್ವನಿಸುತ್ತದೆ.

“ಇತ್ತೀಚಿನ ದಶಕಗಳಲ್ಲಿ ನಾವು ಕೆಲವು ಕ್ಷೇತ್ರಗಳಲ್ಲಿ – ಉದಾಹರಣೆಗೆ ವರ್ಣಭೇದ ನೀತಿ, ಲಿಂಗಭೇದಭಾವ ಮತ್ತು ಸಲಿಂಗಕಾಮಿ-ಭೀತಿ, ಅವು ಅಸಮಾನ ಮತ್ತು ಅಪೂರ್ಣವಾಗಿದ್ದರೂ ಸಹ, ಪ್ರಮುಖ ಮುನ್ನಡೆ ಸಾಧಿಸಿದ್ದೇವೆ.. ..ಆದರೆ ನಾವು ಒಂದು ಕ್ಷೇತ್ರವನ್ನುನಿಜವಾಗಿಯೂ ಕಳೆದುಕೊಳ್ಳುತ್ತಿದ್ದೇವೆ ಮತ್ತು ಅದು ಆರ್ಥಿಕ ಹೋರಾಟವಾಗಿದೆ.” ಎಂದು ಸ್ಯಾಂಡರ್ಸ್ ಎಚ್ಚರಿಸಿದರು.

“ನಾವು ಮಿತಜನ ಸರ್ವಾಧಿಕಾರದ (ಒಲಿಗಾರ್ಕಿಕ್) ಸಮಾಜದ ಕಡೆಗೆ ವೇಗವಾಗಿ ಚಲಿಸುತ್ತಿದ್ದೇವೆ. ಆದರೆ ನಾವು ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಪಾರ್ಲಿಮೆಂಟನ್ನು ನಿಯಂತ್ರಿಸುವ ಹಣವು ನಮ್ಮ ಮಾಧ್ಯಮವನ್ನು ನಿಯಂತ್ರಿಸುವ ಅದೇ ಹಣವಾಗಿದೆ” ಎಂದು ಅವರು ಘೋಷಿಸಿದರು.

ಟ್ರಂಪ್ ನ ಬಲಪಂಥೀಯತೆಯ ನಕಲಿ ಜನಪ್ರಿಯತೆಯ ಮುನ್ನಡೆ ಮತ್ತು ಬಂಡವಾಳಶಾಹಿ ಆಡಳಿತ ವರ್ಗದ ನಿರಂತರವಾಗಿ ಹೆಚ್ಚುತ್ತಿರುವ ಶಕ್ತಿಯು ನಿಕಟವಾಗಿ ಹೆಣೆದುಕೊಂಡಿದೆ ಎಂದು ಸ್ಯಾಂಡರ್ಸ್ ವಾದಿಸಿದರು. “ಟ್ರಂಪ್ ಗೆ ದೇಶಾದ್ಯಂತ ಬಹಳಷ್ಟು ಕಾರ್ಮಿಕ ವರ್ಗದ ಜನರ ಬೆಂಬಲ ಏಕೆ ಇದೆ ಎಂದು ನೀವು ತಿಳಿದುಕೊಳ್ಳಲು ಬಯಸುವಿರಾ?” ಅವರು ಕೇಳಿದರು.

“ಉತ್ತರಕ್ಕಾಗಿ, ಯುಎಸ್ ನಲ್ಲಿ ಕಳೆದ ಹಲವಾರು ದಶಕಗಳ ಆರ್ಥಿಕ ನೀತಿಯನ್ನು ಸಮೀಕ್ಷೆ ಮಾಡಿದರೆ ಸಾಕು. ಅಪ- ಕೈಗಾರಿಕೀಕರಣ, ಶ್ರೀಮಂತರಿಗೆ ತೆರಿಗೆ ಕಡಿತ, ಕುಗ್ಗುತ್ತಿರುವ ಸಾಮಾಜಿಕ ಕಾರ್ಯಕ್ರಮಗಳು ಮತ್ತು ಪ್ರಯೋಜನಗಳು ಮತ್ತು ಕಾರ್ಪೊರೇಟ್ ಆಕ್ರಮಣದ ಮುಖಾಂತರ ಕಾರ್ಮಿಕರ ಹಕ್ಕುಗಳು ಅಂತ್ಯವಿಲ್ಲದ ದುರ್ಬಲಗೊಳ್ಳುವಿಕೆ- ಗಳ ಹಲವು ಸುತ್ತುಗಳು ಈ ಅವಧಿಯಲ್ಲಿ ನಡೆದಿವೆ” ಎಂದು ಸ್ಯಾಂಡರ್ಸ್ ನೆನಪಿಸಿದರು.

“ಇಂದು, ನೀವು ಹಣದುಬ್ಬರವನ್ನು ಸರಿಹೊಂದಿಸಿದ ನಂತರ, ಸರಾಸರಿ ಕೆಲಸಗಾರನು 50 ವರ್ಷಗಳ ಹಿಂದೆ ಗಳಿಸಿದ್ದಕ್ಕಿಂತ ಕಡಿಮೆ ಗಳಿಸುತ್ತಿದ್ದಾನೆ. ಮಾಲಿಕರು ಕಡಿಮೆ ವೇತನವನ್ನು ಬೆನ್ನಟ್ಟುವುದರಿಂದ ಉದ್ಯೋಗಗಳು ವಿದೇಶಕ್ಕೆ ಹೋಗುತ್ತವೆ, ಕಂಪನಿಗಳು ಯೂನಿಯನ್ ಗಳನ್ನು ಒಡೆಯುತ್ತವೆ ಮತ್ತು ಕಾರ್ಪೊರೇಟ್-ನಿಯಂತ್ರಿತ ಮಾಧ್ಯಮವು ಅಸಮಾನತೆಯ ಬಗ್ಗೆ ಆಕ್ರೋಶಗೊಳ್ಳಬಾರದು ಎಂದು ಹೇಳುತ್ತದೆ; ಈ ದೇಶದಲ್ಲಿ 60% ಕಾರ್ಮಿಕರು ಒಂದು ಸಂಬಳದಿಂದ ಇನ್ನೊಂದು ಸಂಬಳದ ವರೆಗೆ ಜೀವಿಸುತ್ತಿದ್ದಾರೆ ಎಂಬ ಅಂಶದ ಬಗ್ಗೆ ನಾವು ಕೋಪಗೊಳ್ಳಬಾರದು ಎಂದು ಹೇಳುತ್ತದೆ.”

ಇತ್ತೀಚೆಗೆ ದೇಶವನ್ನು ವ್ಯಾಪಿಸಿರುವ ಮುಷ್ಕರದ ಅಲೆಗಳನ್ನು ಮತ್ತು ಸಂಘಟನೆಯ ಪ್ರಯತ್ನಗಳನ್ನು ಸೂಚಿಸುತ್ತಾ “ಆದಾಗ್ಯೂ, ಒಂದು ಆಶಾಕಿರಣವೆಂದರೆ ಟ್ರೇಡ್ ಯೂನಿಯನ್ ಚಳುವಳಿಯ ಪುನರ್ಜನ್ಮ ಮತ್ತು ಪುನರುಜ್ಜೀವನ.. ..ಇದು ದೊಡ್ಡ ವಿಷಯ.” ಎಂದು ಸ್ಯಾಂಡರ್ಸ್ ಹೇಳಿದರು. ಯುನೈಟೆಡ್ ಆಟೋ ವರ್ಕರ್ಸ್ ನಾಯಕ ಶಾನ್ ಫೈನ್ ಜನರಲ್ ಮೋಟಾರ್ಸ್ ಮೇಲಧಿಕಾರಿಗಳೊಂದಿಗೆ ಚೌಕಾಸಿಯ ಸಭೆಗೆ “ಈಟ್ ದಿ ರಿಚ್” (ಶ್ರೀಮಂತರನ್ನು ತಿಂದು ಹಾಕಿ) ಎಂಬ ಘೋಷಣೆಯಿರುವ ಟೀ ಶರ್ಟ್ ಧರಿಸಿ ಹೋಗುತ್ತಾರೆ ಎಂಬ ಚಿತ್ರ ಕಾರ್ಮಿಕರ ಬೆಳೆಯುತ್ತಿರುವ ವರ್ಗ ಪ್ರಜ್ಞೆಯ ಉತ್ತಮ ಸಂಕೇತ.. ಹೆಚ್ಚು ಹೆಚ್ಚು ಕೆಲಸಗಾರರು, , ಆರ್ಥಿಕತೆಯಲ್ಲಿ ತಮ್ಮ ಸ್ಥಾನವನ್ನು ವರ್ಗ ಆಧಾರದ ಮೇಲೆ ಅರ್ಥಮಾಡಿಕೊಳ್ಳುತ್ತಿದ್ದಾರೆ” ಎಂದು ಸ್ಯಾಂಡರ್ಸ್ ಹೇಳಿದರು.

“ಟ್ರಂಪ್ ನ್ನು ಸೋಲಿಸಿ ಮತ್ತು MAGA ಅನ್ನು ಮನೆಗೆ ಕಳಿಸಿದ ಮೇಲೆ, ಕಾರ್ಮಿಕರು, ಕರಿಯರು, ವಲಸಿಗರು ಮತ್ತು ಅವರ ಮಿತ್ರರು ಹ್ಯಾರಿಸ್ ಆಡಳಿತದ ಅವಧಿಯಲ್ಲಿ ಬರಬಹುದಾದ ಅವಕಾಶಗಳನ್ನು ಬಳಸಿಕೊಳ್ಳಬೇಕು” ಎಂದು ಅವರು ಹೇಳಿದರು. ತಮ್ಮತಂಡ ಮಾಡಿದ ಇತ್ತೀಚಿನ ಸಮೀಕ್ಷೆಯನ್ನು ಉಲ್ಲೇಖಿಸಿ, ಬಹುಪಾಲು ಅಮೆರಿಕನ್ನರು (ಅವರು ಡೆಮೊಕ್ರಾಟ್ ಆಗಿರಲಿ, ಅಥವಾ ರಿಪಬ್ಲಿಕನ್ನರಾಗಿರಲಿ ಅಥವಾ ಸ್ವತಂತ್ರರಾಗಿರಲಿ) ಸಮಾನವಾಗಿ – ಪ್ರತಿ ವ್ಯಕ್ತಿಗೆ ಆರೋಗ್ಯ ರಕ್ಷಣೆ, ಅತಿ ಶ್ರೀಮಂತರ ಮೇಲೆ ತೆರಿಗೆಗಳನ್ನು ಹೆಚ್ಚಿಸುವುದು, ಕನಿಷ್ಠ ವೇತನವನ್ನು ಹೆಚ್ಚಿಸುವುದು ಇತ್ಯಾದಿ – ಜನಪರ ನೀತಿಗಳನ್ನು ಬೆಂಬಲಿಸುತ್ತಾರೆ ಎಂದು ಸ್ಯಾಂಡರ್ಸ್ ಹೇಳಿದರು. ಚುನಾವಣಾ ಸಮಯದಲ್ಲೂ ಆ ನಂತರವೂ ಕೆಲಸ ಮಾಡಿ ಅವುಗಳನ್ನು ಸಾಧಿಸಬೇಕಾಗಿದೆ ಅವರು ಕರೆ ನೀಡಿದರು.

“ಎಲ್ಲರಿಗೂ ಮೆಡಿಕೇರ್ ನಂತಹ ವಿಷಯಗಳಿಗೆ ಅಮೇರಿಕನ್ ಜನರ ಪೂರ್ಣ ಬೆಂಬಲವಿದೆ. ಆದರೆ 70% ಅಥವಾ ಅದಕ್ಕಿಂತ ಹೆಚ್ಚಿನ ಜನ ಅದನ್ನು ಬಯಸಿದ್ದರೂ ನಾನು ಆ ಮಸೂದೆಯನ್ನು ಡೆಮಾಕ್ರಟಿಕ್-ನಿಯಂತ್ರಿತ ಸೆನೆಟ್ ಗೆ ಒಯ್ಯಲು ಸಾಧ್ಯವಿಲ್ಲ. ಏಕೆಂದರೆ ಡೆಮೊಕ್ರಾಟಿಕ್ ಪಕ್ಷದ ನಾಯಕರು ಸಹ ಇದು ತುಂಬಾ ರ್ಯಾಡಿಕಲ್ ಕ್ರಮ ಎಂದು ಭಾವಿಸುತ್ತಾರೆ. ಹಾಗಾಗಿ ಮೆಡಿಕೇರ್ ಬಗ್ಗೆ ಮುಂದಿನ ದಿನಗಳಲ್ಲಿ (ಅಧ್ಯಕ್ಷೀಯ ಪ್ರಚಾರ ಭಾಷಣಗಳಲ್ಲಿ) ನೀವು ಹೆಚ್ಚು ಕೇಳುವುದಿಲ್ಲ” ಎಂದು ಅವರು ಭವಿಷ್ಯ ನುಡಿದರು.

“ಕಾರ್ಪೊರೇಟ್ ವರ್ಗದ ವಿರುದ್ಧ, ಒಲಿಗಾರ್ಕಿ ವಿರುದ್ಧ, ಮಾಧ್ಯಮ ಏಕಸ್ವಾಮ್ಯದ ವಿರುದ್ಧ, ರಿಪಬ್ಲಿಕನ್ ಪಕ್ಷದ ವಿರುದ್ಧ, ಮತ್ತು ಹೌದು, ಡೆಮಾಕ್ರಟಿಕ್ ನಾಯಕತ್ವದ ವಿರುದ್ಧವೂ ಸಹ – ಇದು ನಮ್ಮ ಹೋರಾಟ,” ಎಂದು ಸ್ಯಾಂಡರ್ಸ್ ಹೇಳಿದರು.

ಅನೇಕ ಯುರೋಪಿಯನ್ ರಾಷ್ಟ್ರಗಳ ಬಹುಪಕ್ಷೀಯ ವ್ಯವಸ್ಥೆಗಳನ್ನು ಉಲ್ಲೇಖಿಸುತ್ತಾ ಅವರು ಹೇಳಿದರು, “ಅವರು ವಿಭಿನ್ನವಾದ ವ್ಯವಸ್ಥೆಯನ್ನು ಪಡೆದುಕೊಂಡಿದ್ದಾರೆ, ಅದರಿಂದ ಪ್ರಗತಿಪರರು ಮುನ್ನಡೆಗಳನ್ನು ಸಾಧಿಸುವುದು ಸುಲಭವಾಗಬಹುದು. ಆದರೆ ಇಲ್ಲಿ, ಎರಡು-ಪಕ್ಷ ವ್ಯವಸ್ಥೆ ನಮ್ಮ ವಾಸ್ತವವಾಗಿದೆ, ಆದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಚುನಾವಣಾ ಹೋರಾಟದಲ್ಲಿ “ಡೆಮಾಕ್ರಟಿಕ್ ಪಕ್ಷವನ್ನು ಸಾಧ್ಯವಾದಷ್ಟು ತೆರೆಯುವುದು ಮತ್ತು ಅದನ್ನು ಹೆಚ್ಚು ಪ್ರಗತಿಪರಗೊಳಿಸುವುದು ನಮ್ಮ ಕರ್ತವ್ಯವಾಗಿದೆ” ಎಂದರು ಸ್ಯಾಂಡರ್ಸ್.

ಸದ್ಯಕ್ಕೆ ಕಾರ್ಮಿಕ ಕಾರ್ಯಕರ್ತರು ಎದುರಿಸುತ್ತಿರುವ ಪ್ರಶ್ನೆಯೆಂದರೆ, “ನಮ್ಮಲ್ಲಿ ಮೇಲಿನಿಂದ ಕೆಳಗೆ ಕಟ್ಟಲ್ಪಟ್ಟ ಡೆಮಾಕ್ರಟಿಕ್ ಪಕ್ಷವಿದೆಯೇ ಅಥವಾ ಜನರ ಜತೆ ಕೆಲಸ ಮಾಡುತ್ತಾ ಸಮ್ಮಿಶ್ರ ರಾಜಕೀಯ ಮಾಡುವ ತಳಮಟ್ಟದ ಪಕ್ಷವನ್ನು ಹೊಂದಿದ್ದೇವೆಯೇ ಎಂಬುದು” ಎಂದು ಅವರು ಹೇಳಿದರು.

ರಾಜಕೀಯ ಸ್ವಾತಂತ್ರ್ಯವನ್ನು ಕಟ್ಟುವುದರ ಜತೆಗೆ, ಚಳುವಳಿಗಳಿಗೆ ಒಂದು ದಾರಿಯಿದೆ ಎಂದು ಸ್ಯಾಂಡರ್ಸ್ ಹೇಳಿದರು. ಅಸಮಾನತೆ ಮತ್ತು ಬಂಡವಾಳಶಾಹಿ ಮಿತಜನ ಸರ್ವಾಧೀಕಾರದ (ಒಲಿಗಾರ್ಕಿ) ವಿರುದ್ಧ ಹೋರಾಡಲು ಬದ್ಧರಾಗಿರುವುದು ಗೆಲುವಿನ ತಂತ್ರವಾಗಿದೆ ಎಂದು ಅವರು ಪ್ರತಿಪಾದಿಸಿದರು ಮತ್ತು ಹ್ಯಾರಿಸ್-ವಾಲ್ಜ್ ಅಭಿಯಾನವು ಆ ಹೋರಾಟವನ್ನು ಸ್ವೀಕರಿಸಲು ಹೆದರಬಾರದು.

“ಅಮೆರಿಕದ ದೈತ್ಯ ಶ್ರೀಮಂತರು ಎಂದೂ ಇಷ್ಟು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಅವರು ನಮ್ಮ ಕೆಲಸದ ಸ್ಥಳಗಳ ಮಾಲಿಕರು. ಅವರು ಮಾಧ್ಯಮವನ್ನು ಹೊಂದಿದ್ದಾರೆ ಮತ್ತು ಎರಡೂ ಪಕ್ಷಗಳನ್ನು ನಿಯಂತ್ರಿಸುತ್ತಾರೆ. ಅಮೇರಿಕನ್ ಜನರು ಮಿತಜನ ಸರ್ವಾಧೀಕಾರದ (ಒಲಿಗಾರ್ಕಿ) ದುರಾಶೆಗೆ ಸವಾಲು ಹಾಕುವ ನಾಯಕರು ಮತ್ತು ನೀತಿಗಳನ್ನು ಬಯಸುತ್ತಿದ್ದಾರೆ.”

“ಟ್ರಂಪ್‌ನ ಫ್ಯಾಸಿಸಂ ಅನ್ನು ತಡೆಯುವ ಮತ್ತು ಬಂಡವಾಳಶಾಹಿ ದುರಾಶೆಗೆ ಸವಾಲು ಹಾಕುವ ಸಾಮರ್ಥ್ಯವಿರುವ ಚಳುವಳಿಗಳು ಒಂದೇ ಆಗಿವೆ. ನಾವು ಅವುಗಳನ್ನು ಕಟ್ಟುತ್ತಾ ಬೆಳೆಸುತ್ತಲೇ ಇರಬೇಕು.” ಎಂದು ಸ್ಯಾಂಡರ್ಸ್ ವಾದಿಸಿದರು.

ಇದನ್ನೂ ನೋಡಿ: ಯು ಟರ್ನ್ ಮೋದಿಜೀ — ಮಸೂದೆಗಳನ್ನು ಹಿಂಪಡೆದ ಸರ್ಕಾರ… Janashakthi Media

Donate Janashakthi Media

Leave a Reply

Your email address will not be published. Required fields are marked *