ಒಂದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಯುನಿಫೈಡ್ ವಿಮಾ ಯೋಜನೆ ಘೋಷಿಸಿದೆ.
ಹೊಸ ಪಿಂಚಣಿ ಯೋಜನೆ ವಿರೋಧಿಸಿ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ವಿಮಾ ಯೋಜನೆ ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ವಿಮಾ ಯೋಜನೆಗೆ ಅನುಮೋದನೆ ದೊರೆತಿದ್ದು, ಹೊಸ ವಿಮಾ ಯೋಜನೆಯಿಂದ ದೇಶದ 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ನೆರವಾಗಲಿದೆ.
ಕೇಂದ್ರ ಸಚಿವ ಅಶ್ವಿನಿ ವೈಭವ್ ಈ ಯೋಜನೆ ಪ್ರಕಟಿಸಿದ್ದು, ಕನಿಷ್ಠ 25 ವರ್ಷ ಸೇವೆ ಸಲ್ಲಿಸಿದ ಕೇಂದ್ರ ಸರ್ಕಾರಿ ನೌಕರರು ನಿವೃತ್ತಿ ಆಗುವ ಮುನ್ನದ 12 ತಿಂಗಳ ಮೂಲವೇತನದ ಶೇ.50ರಷ್ಟು ಖಚಿತ ವಿಮೆ ಮೊತ್ತ ಖಚಿತಪಡಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ವಿಮಾ ಯೋಜನೆ ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರಿ ನೌಕರರು ಎನ್ ಪಿಎಸ್ ಅಥವಾ ಯುಪಿಎಸ್ ಎರಡು ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ವಿಮಾ ಯೋಜನೆ ಮುಖ್ಯಾಂಶಗಳು
ಖಚಿತವಾದ ಪಿಂಚಣಿ: ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ಯೋಜನೆಯು ಭರವಸೆ ನೀಡುತ್ತದೆ.
ಕುಟುಂಬ ಪಿಂಚಣಿ: ಸಾವಿನ ಸಂದರ್ಭದಲ್ಲಿ, ಪಿಂಚಣಿದಾರರ ಕುಟುಂಬವು ಅವರ ಮರಣದ ಸಮಯದಲ್ಲಿ ಪಡೆದ ಪಿಂಚಣಿಯಲ್ಲಿ 60 ಪ್ರತಿಶತವನ್ನು ಪಡೆಯುತ್ತದೆ.
ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆಯ ನಂತರ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂ. ಭರವಸೆ ನೀಡುತ್ತದೆ.
ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇಕಡಾ 10 ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರವು ಶೇಕಡಾ 14ರಷ್ಟು ಕೊಡುಗೆ ನೀಡುತ್ತದೆ, ಇದನ್ನು ಯುಪಿಎಸ್‌ನೊಂದಿಗೆ ಶೇಕಡಾ 18 ಕ್ಕೆ ಹೆಚ್ಚಿಸಲಾಗುವುದು.