ಶ್ರೀನಗರ: ಸುದೀರ್ಘ ಅವಧಿಯ ಬಳಿಕ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಿರ್ಧರಿಸಿವೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ಸುಲ್ಲಾ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಇದಾದ ಬಳಿಕ ಪ್ರತಿಕ್ರಿಯೆ ನೀಡಿರುವ ಅಬ್ದುಲ್ಲಾ, “ಎರಡೂ ಪಕ್ಷಗಳ ನಡುವಿನ ಚುನಾವಣಾ ಪೂರ್ವ ಮೈತ್ರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ,” ಎಂದು ಹೇಳಿದ್ದಾರೆ.
“ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಭೇಟಿ ನಡೆಯಿತು. ಮೈತ್ರಿಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ದೇವರ ದಯೆಯಿಂದ ಭವಿಷ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ… ಇದೇ ಅಂತಿಮ, ಇಂದು ಸಂಜೆಯೊಳಗೆ ಇದನ್ನು ಅಂಗೀಕರಿಸಲಾಗುವುದು,” ಎಂದು ಫಾರೂಕ್ ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸೀಟು ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥರು, ಎಲ್ಲಾ 90 ಸ್ಥಾನಗಳಿಗೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮೆಹಬೂಬಾ ಮುಫ್ತಿಯವರ ಪಿಡಿಪಿ ಕೂಡ ಕೈ ಜೋಡಿಸುತ್ತಾ ಎಂಬ ಪ್ರಶ್ನೆಗೆ, “ನಾವು ಮತ್ತು ಕಾಂಗ್ರೆಸ್ ಒಟ್ಟಾಗಿದ್ದೇವೆ, ಸಿಪಿಐ-ಎಂ ಕೂಡ ನಮ್ಮ ಜೊತೆಗೆ ಇದೆ. ಜನರು ಕೂಡ ನಮ್ಮ ಜೊತೆಗೆ ಇದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಕಾಶ್ಮೀರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರೀನಗರದಲ್ಲಿ ಬೀಡುಬಿಟ್ಟಿದ್ದಾರೆ.
ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಮೂರು ಹಂತದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಸಭೆಗಳಿಗಾಗಿ ಉಭಯ ನಾಯಕರು ಕಣಿವೆಗೆ ಭೇಟಿ ನೀಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.ಉಭಯ ನಾಯಕರು ಇಂದು ಕಾಶೀರ ಕಣಿವೆಯ 10 ಜಿಲ್ಲೆಗಳ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ವ್ಯಾಪಕ ಚರ್ಚೆಯಲ್ಲಿ ತೊಡಗಿದ್ದಾರೆ.
ಹತ್ತು ವರ್ಷಗಳ ನಂತರ ಕಣಿವೆಯಲ್ಲಿ ನಡೆಯಲಿರುವ ಚುನಾವಣೆಗೆ ತಳಮಟ್ಟದ ಸಿದ್ಧತೆಗಳ ಬಗ್ಗೆ ಇಬ್ಬರು ನಾಯಕರು ಪಕ್ಷದ ಕಾರ್ಯಕರ್ತರಿಂದ ಪ್ರತಿಕ್ರಿಯೆ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.