ಯಲಬುರ್ಗಾ :ವಜ್ರಬಂಡಿ ಹಾಗೂ ಹಿರೇ ಅರಳಿಹಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ತಲ್ಲೂರು ಗ್ರಾಮದಲ್ಲಿ ಆಗಸ್ಟ್ 20 ರಂದು ನಡೆಯಲಿದೆ.
ಖೋಖೊ, ಕಬಡ್ಡಿ, ಎತ್ತರ ಜಿಗಿತ, ಓಟ, ಗುಂಡು ಎಸೆತ, ಚಕ್ರ ಎಸೆತ, ರಿಲೆ, ಉದ್ದ ಜಿಗಿತ ಸೇರಿದಂತೆ ಆನೇಕ ಆಟಗಳು ಮಕ್ಕಳಿಗಾಗಿ ನಡೆಯಲಿವೆ.
ಮಕ್ಕಳ ಕ್ರೀಡಾಕೂಟಕ್ಕೆ ತಲ್ಲೂರು ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ ಸಂಪೂರ್ಣವಾಗಿ ತೊಡಗಿಕೊಂಡಿದೆ. ಗ್ರಾಮದ ಯುವ ಸಂಘಗಳು, ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಸರ್ಕಾರಿ, ಖಾಸಗಿ ನೌಕರರು ಕ್ರೀಡಾಕೂಟದ ಯಶಸ್ಸಿಗೆ ಕಳೆದೊಂದು ವಾರದಿಂದ ಮನೆಯ ಹಬ್ಬದಂತೆ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿದ್ದಾರೆ.
ಗ್ರಾಮದೇವತೆ ದ್ಯಾಮಮ್ಮ ಗುಡಿಯಿಂದ ಹೊರಡುವ ಕ್ರೀಡಾ ಜ್ಯೋತಿಯು, ಕಾಶಿ ವಿಶ್ವನಾಥ, ಹನುಮಂತ, ದುರ್ಗಮ್ಮ ಗುಡಿಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡಲಿದೆ. ಕ್ರೀಡಾ ಜ್ಯೋತಿಯ ಮೆರವಣಿಗೆಯಲ್ಲಿ ಬೈಕ್ ರ್ಯಾಲಿ ಮೂಲಕ ಇನ್ನಷ್ಟು ಮೆರಗು ಪಡೆಯಲಿದೆ.
ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸಲಿದ್ದು, ಮಕ್ಕಳಲ್ಲಿ ಸೃಜನಶೀಲತೆ, ಐಕ್ಯತೆಯನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇಂತಹ ಸೇವೆ ನಮ್ಮ ಗ್ರಾಮಕ್ಕೆ ಸಿಕ್ಕಿರುವುದು ಖುಷಿಯ ಸಂಗತಿ ಎಂದು ತಲ್ಲೂರು ಗ್ರಾಮಸ್ಥರು ಜನಶಕ್ತಿ ಮೀಡಿಯಾಜೊತೆ ಸಂಭ್ರಮ ಹಂಚಿಕೊಂಡಿದ್ದಾರೆ.