ಆನ್ಲೈನ್ ಗೇಮ್ ಹುಚ್ಚಿಗೆ ಮೈತುಂಬ ಸಾಲ: ಸಾಲಗಾರರ ಕಾಟಕ್ಕೆ ಹೆದರಿ ಪತ್ನಿ, ಮಗಳೊಂದಿಗೆ ಆತ್ಮಹತ್ಯೆ

ಹಾಸನ: ಆನ್ಲೈನ್ ಗೇಮ್ ಹುಚ್ಚಿಗೆ ಚನ್ನರಾಯಪಟ್ಟಣದ ಶ್ರೀನಿವಾಸ್ (43) ಬಿದ್ದು, ಇದ್ದ ಬದ್ದ ಆಸ್ತಿ ಮಾರಾಟ ಮಾಡಿ, ಮೈತುಂಬ ಸಾಲಮಾಡಿಕೊಂಡು ಕಡೆಗೆ ಸಾಲ ತೀರಿಸಲಾಗದೆ ಪತ್ನಿ ಶ್ವೇತಾ(36) ಹಾಗೂ ಮಗಳು ನಾಗಶ್ರೀ(13) ಜೊತೆಗೆ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಶನಿವಾರದಿಂದಲೇ ಶ್ರೀನಿವಾಸ್ ಪತ್ನಿ ಮಗಳ ಜೊತೆಗೆ ಕಾಣೆಯಾಗಿದ್ದರು. ಕುಟುಂಬ ಸದಸ್ಯರ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೊಟ್ಟಿದ್ದಾರೆ. ಕೇಸ್ ದಾಖಲಿಸಿಕೊಂಡು ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ನಿನ್ನೆ(ಆ.14) ಸಂಜೆ ನುಗ್ಗೆಹಳ್ಳೀ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ಲಾಪುರ ಹೇಮಾವತಿ ನಾಲೆಯಲ್ಲಿ ಗಂಡ-ಹೆಂಡತಿ ಶವ ಪತ್ತೆಯಾಗಿದ್ದು, ಇಂದು ಪುತ್ರಿ ಶವ ಕೂಡ ಪತ್ತೆಯಾಗಿದೆ.

ಆನ್ಲೈನ್ ರಮ್ಮಿ ಗೇಮ್ ಗೀಳಿಗೆ ಬಿದ್ದಿದ್ದ ಮನೆ ಯಜಮಾನ

ಎರಡು ಸ್ವಂತದ ಕಾರ್ ಇಟ್ಟುಕೊಂಡು ಚಾಲಕನಾಗಿ ಚೆನ್ನಾಗಿಯೇ ಜೀವನ ಸಾಗಿಸುತ್ತಾ ಬೆಂಗಳೂರಿನಲ್ಲಿದ್ದ ಶ್ರೀನಿವಾಸ್​ಗೆ ಶಿಕ್ಷಕಿಯಾಗಿದ್ದ ಪತ್ನಿ ಕೂಡ ದುಡಿಮೆಗೆ ಸಾಥ್ ಕೊಟ್ಟಿದ್ದರು. ವಾಸಕ್ಕೆ ಚನ್ನರಾಯಪಟ್ಟಣದಲ್ಲಿ ಒಂದು ಸ್ವಂತ ಮನೆ ಕೂಡ ಇತ್ತು. ಆದ್ರೆ, ಮೊಬೈಲ್ ಜಾಹೀರಾತು ನೋಡಿ ಆನ್ಲೈನ್ ರಮ್ಮಿ ಗೇಮ್ ಗೀಳಿಗೆ ಬಿದ್ದ ಶ್ರೀನಿವಾಸ್, ಕಾರು ಮತ್ತು ಮನೆ ಎಲ್ಲವನ್ನು ಮಾರಿಕೊಂಡು ಬೀದಿಪಾಲಾಗಿದ್ದ, ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿ ಆಟ ಆಡುವುದಕ್ಕೆ ಶುರುಮಾಡಿದ್ದ. ಕೆಲಸಬಿಟ್ಟು ಆನ್ಲೈನ್ ಗೇಮ್​ಗೆ ಸೀಮಿತವಾಗಿ ಸಾಲ ಹೆಚ್ಚಾದಾಗ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಹೆರಿಗೆ ರಜೆ ಮಹಿಳಾ ನೌಕರರ ಹಕ್ಕು : ಕರ್ನಾಟಕ ಹೈಕೋರ್ಟ್ ಪೀಠ ಮಹತ್ವದ ತೀರ್ಪು

ಇತ್ತೀಚಿನವರೆಗೂ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದ ಶ್ರೀನಿವಾಸ್ ಕುಟುಂಬ ಚನ್ನಾಗಿಯೇ ಇತ್ತು. ಕೈತುಂಬ ದುಡಿದು ಸಂಸಾರ ಸಾಗಿಸುತ್ತಿದ್ದ ಶ್ರೀನಿವಾಸ್, ಇತ್ತೀಚೆಗೆ ಆನ್ಲೈನ್ ರಮ್ಮಿ ಗೀಳಿಗೆ ಬಿದ್ದಿದ್ದ. ಅಲ್ಪ ಅವಧಿಯಲ್ಲಿ ಲಕ್ಷ ಲಕ್ಷ ಹಣ ಗಳಿಸುವ ದುರಾಸೆಯ ಜಾಹೀರಾತಿನ ಕರಾಮತ್ತಿಗೆ ಮರುಳಾಗಿ ಇದ್ದಿದೆಲ್ಲವನ್ನು ಕಳೆದುಕೊಂಡು ಬರಿಗೈ ಆಗಿದ್ದ. ಕಾರು, ಮನೆ ಎಲ್ಲವನ್ನು ಮಾರಾಟ ಮಾಡಿ ದುಡಿಯೋದನ್ನೆ ನಿಲ್ಲಿಸಿಬಿಟ್ಟಿದ್ದರು.

ಬೆಂಗಳೂರು ಬಿಟ್ಟು ಚನ್ನರಾಯಪಟ್ಟಣಕ್ಕೆ ಬಂದು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಿದ್ದ ಪತ್ನಿ ಶ್ವೇತಾ, ದುಡಿದು ಸಂಸಾರ ಸಾಗಿಸುತ್ತಿದ್ದರು. ಆದ್ರೆ, ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿ ಆನ್ಲೈನ್ ಗೇಮ್ ಆಡಿ ಸಾಲಗಾರನಾದ ಶ್ರೀನಿವಾಸ್, ಸಾಲಗಾರರ ಕಾಟ ಹೆಚ್ಚಾದಾಗ ನೆಮ್ಮದಿ ಕಳೆದುಕೊಂಡಿದ್ದ. ಮಾಡಿದ ಸಾಲ ತೀರಿಸಲಾಗದೆ ಮಡದಿ ಹಾಗೂ ಮಗಳ ಜೊತೆಗೆ ಮನೆಬಿಟ್ಟು ಹೋಗಿ ಹೇಮಾವತಿ ಕಾಲುವೆಗೆ ಬಿದ್ದಿದ್ದಾರೆ.

ಶನಿವಾರದಿಂದಲೇ ಶ್ರೀನಿವಾಸ್ ಕುಟುಂಬ ಕಾಣುತ್ತಿಲ್ಲ ಎನ್ನುವುದನ್ನ ತಿಳಿದಾಗ ಮನೆಯವರು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಮೃತದೇಹಗಳು ಪತ್ತೆಯಾಗಿದ್ದು, ಮೊದಲು ಮಿಸ್ಸಿಂಗ್ ದೂರು ಕೊಟ್ಟಿದ್ದ ಸಂಬಂಧಿಕರು ಇದೀಗ ಸಾಲ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ದೂರು ನೀಡಿದ್ದಾರೆ.

ಸಾಲ ಕೊಟ್ಟವರು ಯಾರಾದರೂ ಕಿರುಕುಳ ಕೊಟ್ಟಿದ್ದರಾ?, ಅಥವಾ ಬೇರೆ ಏನಾದರೂ ಒತ್ತಡ ಇತ್ತೇ ಎನ್ನುವುದು ಸೇರಿ ಎಲ್ಲ ಆ್ಯಂಗಲ್​ನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹಗಳನ್ನ ಹೊರ ತೆಗೆದು ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.

ಒಟ್ಟಿನಲ್ಲಿ ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಮರುಳಾಗಿ ಕಷ್ಟಪಟ್ಡು ದುಡಿಯೋದು ಬಿಟ್ಟು, ಮೊಬೈಲ್ ಹಿಡಿದು ಆಟಕ್ಕೆ ಕುಂತ ಮನೆ ಯಜಮಾನ ಎಲ್ಲವನ್ನು ಕಳೆದುಕೊಂಡು ಬರಿಗೈ ಆಗಿದ್ದ. ಮಾಡಿದ ಸಾಲಕ್ಕೆ ಇದ್ದದ್ದನ್ನೆಲ್ಲಾ ಮಾರಾಟ ಮಾಡಿದವನು ಕುಟುಂಬ ಸಮೇತವಾಗಿ ಜೀವವನ್ನು ಕಳೆದುಕೊಂಡಿದ್ದಾನೆ. ಆನ್ಲೈನ್ ಗೇಮ್​ಗಳ ಹಾವಳಿಗೆ ಹಲವು ಕುಟುಂಬಗಳು ಬೀದಿಪಾಲಾಗ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಕನ್ನಡ ಚಿತ್ರರಂಗದ ಸಂಕಷ್ಟವನ್ನು ಹೋಮ ಹವನ ನಿವಾರಿಸಬಹುದೆ? – ಬಿ.ಸುರೇಶ್ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *